
ಮಹಾನಟಿಯ ಮೊದಲ ಸೀಸನ್ ಮೂಲಕ ಮನೆಮಾತಾದವರು ಚಿತ್ರದುರ್ಗದ ಗಗನಾ. ಇದೀಗ ಅವರಿಗೆ ರಿಯಾಲಿಟಿ ಷೋಗಳಲ್ಲಿ ಭಾರಿ ಬೇಡಿಕೆ ಇದ್ದು, ಸದ್ಯ ಜೀ ಕನ್ನಡದ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಷೋನಲ್ಲಿ ಡ್ರೋನ್ ಪ್ರತಾಪ್ಗೆ ಜೋಡಿಯಾಗಿದ್ದಾರೆ. ಇದಾಗಲೇ ಈ ಜೋಡಿ ಭಾರಿ ಮೋಡಿ ಮಾಡುತ್ತಲೇ ಇದೆ. ಈ ರಿಯಾಲಿಟಿ ಷೋನಲ್ಲಿ ಪೈಪೋಟಿಗೆ ಬಿದ್ದವರಂತೆ ಸ್ಪರ್ಧಾ ಜೋಡಿಗಳು ರೊಮಾನ್ಸ್ನಲ್ಲಿ ತೊಡಗಿಸಿಕೊಂಡಿವೆ. ಪ್ರಪೋಸಲ್ ರೌಂಡ್, ಆ ರೌಂಡ್, ಈ ರೌಂಡ್ ಎನ್ನುತ್ತಲೇ ರಿಯಲ್ ಪ್ರೇಮಿಗಳನ್ನೂ ನಾಚಿಸುವಂತೆ ಈ ಜೋಡಿಗಳು ಕಾಣಿಸಿಕೊಳ್ಳುತ್ತಿವೆ. ಬಹುತೇಕ ರಿಯಾಲಿಟಿ ಷೋಗಳು ಸ್ಕ್ರಿಪ್ಟೆಡ್ ಆಗಿದ್ದರೂ, ಇಲ್ಲಿ ನಡೆಯುತ್ತಿರುವುದೆಲ್ಲಾ ಸತ್ಯ ಎಂದೇ ನಂಬುವ ದೊಡ್ಡ ವರ್ಗದ ಪ್ರೇಕ್ಷಕರೂ ಇದ್ದಾರೆ.
ಅದೇನೇ ಇರಲಿ, ಸದ್ಯ ಡ್ರೋನ್ ಪ್ರತಾಪ್ ಮತ್ತು ಗಗನಾರ ಹವಾ ಹೆಚ್ಚಿದೆ. ಇಬ್ಬರೂ ಪ್ರೇಮಿಗಳಂತೆ ದಿನದಿಂದ ದಿನಕ್ಕೆ ವರ್ತಿಸುತ್ತಿದ್ದಾರೆ. ಗಗನಾಗಾಗಿ ಮಹಾತ್ಯಾಗಿಯಾದವರಂತೆ ಡ್ರೋನ್ ಪ್ರತಾಪ್ ವರ್ತಿಸುತ್ತಿದ್ದರೆ, ಆ ಪ್ರೀತಿಯನ್ನು ನೋಡಿ, ಜೀವನದಲ್ಲಿ ಪ್ರೀತಿಯನ್ನೇ ಕಾಣದವರಂತೆ ಗಗನಾ ಕಣ್ಣೀರು ಸುರಿಸುತ್ತಿದ್ದಾರೆ. ಇದೇ ವೇಳೆ ಇದಾಗಲೇ ಗಗನಾಳ ಮನೆಗೂ ಡ್ರೋನ್ ಪ್ರತಾಪ್ ಹೋಗಿ ಬಂದಾಗಿದೆ. ಅಲ್ಲಿ ಅಡುಗೆ ಮನೆಯಲ್ಲಿ ತಬ್ಬಿಕೊಳ್ಳುವ ಆಸೆಯಾಗಿತ್ತು ಎಂದೂ ಡ್ರೋನ್ ವೇದಿಕೆ ಮೇಲೆ ಹೇಳಿದ್ದಾರೆ. ಇಂಥ ಹಲವು ಮಾತುಗಳು ಮೊದಲೇ ಅವರಿಗೆ ಬರೆದುಕೊಟ್ಟಿರಲಾಗುತ್ತದೆ ಎನ್ನುವ ಮಾತುಗಳೂ ಇವೆಯಾದರೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಸ್ಪರ್ಧಿಗಳೂ ನಾಟಕ ಮಾಡಬೇಕಾಗುತ್ತದೆ, ಅತ್ತ ಎಲ್ಲವನ್ನೂ ಬಲ್ಲ ತೀರ್ಪುಗಾರರೂ (ಹೇಳಿ ಕೇಳಿ ಆ ಸ್ಥಾನದಲ್ಲಿ ಇರುವವರು ಕೂಡ ನಟ-ನಟಿಯರೇ) ನಾಟಕ ಮಾಡಲೇಬೇಕಾಗುವ ಅನಿವಾರ್ಯತೆ ಬಹುತೇಕ ಎಲ್ಲಾ ಭಾಷೆಗಳ ಎಲ್ಲಾ ರಿಯಾಲಿಟಿ ಷೋಗಳಲ್ಲಿಯೂ ಇದೆ.
ಆದರೆ, ಇದೀಗ ಗಗನಾ ಮತ್ತು ಡ್ರೋನ್ ಪ್ರತಾಪ್ ಒಂದು ಹಂತ ಮೀರಿರುವುದನ್ನು ನೋಡಿ, ಅದರಲ್ಲಿಯೂ ಡ್ರೋನ್ ಬಣ್ಣಬಣ್ಣದ ಮಾತುಗಳಿಂದ ಗಗನಾರನ್ನು ಇಂಪ್ರೆಸ್ ಮಾಡುವುದನ್ನು ನೋಡಿ ಹಲವು ವೀಕ್ಷಕರು ಇದೆಲ್ಲಾ ಸತ್ಯ ಎಂದೇ ನಂಬಿ, ನಮ್ಮೂರ ಹುಡುಗಿಗೆ ಅನ್ಯಾಯ ಆಗ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಡ್ರೋನ್ ಪ್ರತಾಪ್ ಈ ಮಟ್ಟಿಗೆ ಬೆಳೆಯಲು ಕಾರಣ, ಅವರ ಕಾಂಟ್ರವರ್ಸಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ತಾವೊಬ್ಬ ಡ್ರೋನ್ ತಯಾರಕ, ವಿಜ್ಞಾನಿ ಎಂದೆಲ್ಲಾ ಹೇಳಿ ಘಟಾನುಘಟಿಗಳನ್ನೂ ಯಾಮಾರಿಸಿರುವ ಚಾಣಾಕ್ಷ ಅವರು. ತಮ್ಮ ಜೀವನದ ಬಗ್ಗೆ ಸುಳ್ಳಿನ ಕಂತೆಗಳನ್ನೇ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಹೇಳಿ, ಕೊನೆಗೆ ಕುಟುಂಬದವರನ್ನೇ ಒಂದು ಹಂತದಲ್ಲಿ ದೂರ ಮಾಡಿಕೊಂಡವರು ಡ್ರೋನ್. ಇವರ ಸುಳ್ಳಿನ ಕಂತೆ ಬಯಲಾಗುತ್ತಲೇ ಜೈಲುವಾಸ ಕೂಡ ಅನುಭವಿಸಿ ಬಂದವರು. ಇಂಥವರಿಗಾಗಿಯೇ ಬಿಗ್ಬಾಸ್ ಬಾಗಿಲು ತೆರೆದಿರುತ್ತದೆ. ಬಿಗ್ಬಾಸ್ ಮನೆಯೊಳಕ್ಕೆ ಹೋಗುತ್ತಲೇ ಅಪಾರ ಅಭಿಮಾನಿಗಳನ್ನು ಪಡೆದುಕೊಂಡವರು ಅವರು.
ಆದರೆ, ಇವರ ಹಿನ್ನೆಲೆ ಬಲ್ಲವರು ಇಂದಿಗೂ ಡ್ರೋನ್ ಪ್ರತಾಪ್ರ ಆ ಹಿಂದಿನ ಸುಳ್ಳಿನ ಕಂತೆಗಳನ್ನೇ ಪದೇ ಪದೇ ಹೇಳುತ್ತಲೇ ಇರುತ್ತಾರೆ. ಇದಾಗಲೇ ಡ್ರೋನ್ ಪ್ರತಾಪ್ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಲೇ, ಬಿಗ್ಬಾಸ್ ಮನೆಯಲ್ಲಿ ಸೌಮ್ಯವಾದ, ಮೃದುವಾದ ಮಾತುಗಳಿಂದ ಎಲ್ಲರನ್ನೂ ಗೆಲ್ಲುತ್ತಲೇ ಬಂದವರು. ಆದರೂ ಯಾಕೋ ಈ ಹಿಂದೆ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಮೃದುವಾದ ಮಾತುಗಳಿಂದ ಎಲ್ಲರನ್ನೂ ಮರಳು ಮಾಡಿದಂತೆಯೇ ಕಾಣಿಸುತ್ತಿದ್ದಾರೆ ಡ್ರೋನ್. ಇದೇ ಕಾರಣಕ್ಕೆ ಗಗನಾ ಎಲ್ಲಿ ನಿಜವಾಗಿಯೂ ಈ ಮಾತುಗಳಿಗೆ ಮರುಳಾಗಿ ಬಿಡುತ್ತಾರೆಯೋ ಎನ್ನುವ ಆತಂಕ ನೆಟ್ಟಿಗರದ್ದು. ಇದಾಗಲೇ ಹಲವು ಸಲ ಗಗನಾ ಡ್ರೋನ್ ಪ್ರತಾಪ್ರನ್ನು ಹಾಡಿ ಹೊಗಳಿದ್ದು ಇದೆ. ನಿಮ್ಮ ಹೆಂಡತಿಯಾಗುವವಳು ಪುಣ್ಯವಂತೆ ಎಂದೆಲ್ಲಾ ಹೇಳಿದ್ದಾರೆ. ಅದಕ್ಕೇ ಗಗನಾ ಅಭಿಮಾನಿಗಳಿಗೆ ಏನೋ ಆತಂಕ ಇದ್ದಂತಿದೆ. ಅದಕ್ಕಾಗಿಯೇ ನಮ್ಮ ಮನೆ ಮಗಳಂತಿರುವ ಗಗನಾಗೆ ಅನ್ಯಾಯ ಮಾಡಬೇಡ್ರಪ್ಪೋ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.