
ಬೆಂಗಳೂರು: ಹೊಸಕೆರೆಹಳ್ಳಿ ಮೈದಾನದಲ್ಲಿ ನಡೆದ ಡಾ.ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಭಾಗಿಯಾಗಿ ಮಾತನ್ನಾಡಿದರು. ವಿಷ್ಣು ದಾದಾ ಜತೆಗಿನ ಒಡನಾಟವನ್ನು ಹಂಚಿಕೊಂಡು ಇಡೀ ಸಭಾಂಗಣವನ್ನು ಭಾವುಕಗೊಳಿಸಿದರು.
ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ, ಹಿರಿಯ ನಟ ಶ್ರೀನಾಥ್ ಸೇರಿದಂತೆ ಸ್ಯಾಂಡಲ್‌ವುಡ್‌ನ ತಾರಾಗಣ ಒಂದೇ ವೇದಿಕೆಯಲ್ಲಿ ನೆರೆದಿದ್ದ ಈ ಕಾರ್ಯಕ್ರಮದಲ್ಲಿ ಶಿವಣ್ಣನ ಮಾತುಗಳು ಎಲ್ಲರ ಹೃದಯ ತಟ್ಟಿದವು. ವಿಷ್ಣುವರ್ಧನ್ ಅವರೊಂದಿಗಿನ ಬಾಲ್ಯದ ಹಾಗೂ ಯೌವನದ ದಿನಗಳನ್ನು ಮೆಲಕು ಹಾಕಿದ ಶಿವಣ್ಣ.. ನಾನು ಚಿಕ್ಕವನಿದ್ದಾಗ 'ಭೂತಯ್ಯನ ಮಗ ಅಯ್ಯು' ಸಿನಿಮಾದ ಶತದಿನೋತ್ಸವ ಕಾರ್ಯಕ್ರಮಕ್ಕೆ ವಿಷ್ಣು ಅಂಕಲ್ ಕೈಹಿಡಿದುಕೊಂಡೇ ಹೋಗಿದ್ದೆ. ಅಂದಿನಿಂದ ಶುರುವಾದ ನಮ್ಮ ಒಡನಾಟ ಕೊನೆವರೆಗೂ ಹಾಗೇ ಇತ್ತು. ನನ್ನ ಮೊದಲ ಸಿನಿಮಾ 'ಆನಂದ್' ರಿಲೀಸ್ ಆಗುವ ಸಂದರ್ಭದಲ್ಲಿ ಒಂದು ವಾಚ್ ಗಿಫ್ಟ್ ಕೊಟ್ಟಿದ್ದರು. ಅದನ್ನು ನನ್ನ ಕೈಗಿಡುತ್ತಾ, ಈ ವಾಚ್ ಯಾವಾಗಲೂ ನಿನ್ನನ್ನು ವಾಚ್ ಮಾಡುತ್ತಿರುತ್ತದೆ ಎಂದು ಆಶೀರ್ವದಿಸಿದ್ದರು. ಅವರ ಆ ಮಾತುಗಳನ್ನು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾದರು ಶಿವಣ್ಣ.
ಒಂದು ದಿನ ವಿಷ್ಣು ಅಂಕಲ್‌ಗೆ ಸರ್ಪ್ರೈಸ್ ನೀಡಲೆಂದು ಯಾವುದೇ ಫೋನ್ ಕರೆ ಮಾಡದೆ ನೇರವಾಗಿ ಮನೆಗೆ ಹೋಗಿದ್ದ ಘಟನೆ ಹಂಚಿಕೊಂಡರು. ಇಂದು ನಮಗೆ ಅವರಂತಹ ಅದ್ಭುತ ನಟನ ಅಗತ್ಯವಿದೆ. ಅವರು ಕನ್ನಡ ಚಿತ್ರರಂಗದ ಅತ್ಯಂತ ಹ್ಯಾಂಡ್‌ಸಮ್ ಹೀರೋ, ಅವರ ಆ ವ್ಯಕ್ತಿತ್ವ ಅಪ್ರತಿಮವಾದದ್ದು ಅಂತಾ ಕೊಂಡಾಡಿದರು.
ವಿಷ್ಣು ಎಂದರೆ ಅಪ್ಪಾಜಿಗೂ (ಡಾ. ರಾಜ್‌ಕುಮಾರ್) ಎಲ್ಲಿಲ್ಲದ ಇಷ್ಟವಿತ್ತು. ಅಪ್ಪಾಜಿ ಮತ್ತು ವಿಷ್ಣು ಸರ್ ನಡುವಿನ ಬಾಂಧವ್ಯವೇ ಬೇರೆ ರೀತಿಯದ್ದು. ಹೊರಗಡೆ ಯಾರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ಆದರೆ ಅವರ ಒಡನಾಟ ಮತ್ತು ಪರಸ್ಪರ ಗೌರವ ಎಂಥದ್ದು ಎಂಬುದು ಚೆನ್ನಾಗಿ ಗೊತ್ತು. ವಿಷ್ಣು ಸರ್ ಮೇಲೆ ನಮಗಿರುವ ಪ್ರೀತಿ ನಮಗೆ ಗೊತ್ತು, ನಿಮಗೂ ಗೊತ್ತು. ಅದನ್ನು ಬೇರೆ ಯಾರಿಗೋ ತೋರಿಸಿಕೊಳ್ಳಬೇಕಾದ ಅಥವಾ ಪ್ರೂವ್ ಮಾಡಬೇಕಾದ ಅಗತ್ಯ ನಮಗಿಲ್ಲ ಎಂದು ಖಡಕ್ ಆಗಿ ಹೇಳಿದರು.
ಅಭಿಮಾನಿಗಳ ಪ್ರೀತಿಯನ್ನು ಕಂಡು ಪುಳಕಿತರಾದ ಶಿವಣ್ಣ.. ವಿಷ್ಣು ಸರ್ ಅವರ ಯಾವುದೇ ಕಾರ್ಯಕ್ರಮವಿರಲಿ, ಅಭಿಮಾನಿಗಳು ಪ್ರೀತಿಯಿಂದ ಕರೆದರೆ ನಾನು ಖಂಡಿತ ಬರುತ್ತೇನೆ. ಈ ಹಿಂದೆಯೂ ಬಂದಿದ್ದೇನೆ, ಇವತ್ತೂ ಬಂದಿದ್ದೇನೆ. ಮುಂದೆಯೂ ಬರುತ್ತಲೇ ಇರುತ್ತೇನೆ. ನಿಮ್ಮ ಪ್ರೀತಿ ಸದಾ ಹೀಗೇ ಇರಲಿ. ವಿಷ್ಣು ಅಂಕಲ್ ಇವತ್ತು ನಮ್ಮೊಂದಿಗೆ ಇಲ್ಲ ಎಂದು ನಾನು ಅಂದುಕೊಳ್ಳುವುದೇ ಇಲ್ಲ, ಅವರು ಎಲ್ಲೋ ಒಂದು ಕಡೆ ನಮ್ಮ ಜೊತೆಯಲ್ಲೇ ಇದ್ದಾರೆ ಎಂದು ಶಿವಣ್ಣ ಭಾವುಕರಾಗಿ ನುಡಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.