ಕನ್ನಡದ ತಲೆಮಾರುಗಳನ್ನು ರೂಪಿಸಿದ ರಾಜ್‌ ಜೀವನಯಾತ್ರೆಯಲ್ಲೇ ಅದ್ಭುತ ಸಂದೇಶಗಳಿವೆ

Published : Apr 24, 2022, 10:30 AM IST
ಕನ್ನಡದ ತಲೆಮಾರುಗಳನ್ನು ರೂಪಿಸಿದ ರಾಜ್‌ ಜೀವನಯಾತ್ರೆಯಲ್ಲೇ ಅದ್ಭುತ ಸಂದೇಶಗಳಿವೆ

ಸಾರಾಂಶ

ರಾಜ್‌ರನ್ನು ನಿಲ್ಲಿಸಬೇಕೆಂದು ರಾಜ್ಯದಿಂದ ಕೇಂದ್ರದವರೆಗೆ ಪ್ರಯತ್ನ ಜೋರಾಗಿತ್ತು. ಯಾರನ್ನೂ ನೋಯಿಸದ ರಾಜ್‌ ಒತ್ತಡ ಹೆಚ್ಚಾದಾಗ ಪತ್ನಿ ಸಮೇತ ಯಾರ ಕೈಗೂ ಸಿಗದೆ ಅಜ್ಞಾತವಾಸಿಗಳಾಗಿದ್ದರು. ಜಾಡು ಹಿಡಿಯುವವರು ಜೋರಾದಾಗ ನಿರ್ಜನ, ದುರ್ಗಮ ಪ್ರದೇಶ ಸೇರಿಬಿಟ್ಟಿದ್ದರು!

ಬಂದಿತೋ ಬಂದಿತು ಏಪ್ರಿಲ್‌ 24. ಬೆಳಗುತಿಗೆ ಬೆಳಗುತಿದೆ ಅಣ್ಣಾವ್ರ ನೆನಪಿನ ಮಣಿಸಾಲು. ಈ ಸವಿ ಸಂದರ್ಭದಲ್ಲಿ ಒಂದಿಷ್ಟುಮಧುರ ನೆನಪುಗಳು.

ಕನ್ನಡ ಅಸ್ಮಿತೆಯ ಪ್ರತಿರೂಪವಾಗಿದ್ದ ಡಾ. ರಾಜಕುಮಾರ್‌ ಅವರನ್ನು ನೆನೆದಾಕ್ಷಣ ನಮ್ಮಲ್ಲಿ ಮೂಡುವ ಅವರ ಚಿತ್ರವೆಂದರೆ, ಅವರು ಬಹುಸುಂದರವಾಗಿ ನಗುತ್ತಾ ಜನರನ್ನು ಕೈ ಮುಗಿದು ಸ್ವಾಗತಿಸುತ್ತಿದ್ದ ಪರಿ. ಅದು ಅಂತಿಂಥ ನಗುವಲ್ಲ. ಅವರ ಇಡೀ ವ್ಯಕ್ತಿತ್ವ ಆ ನಗುವಿನಲ್ಲಿ ಪ್ರತಿಫಲಿಸುತ್ತಿತ್ತು. ಸರಳತೆ, ಸಜ್ಜನಿಕೆ, ಹೃದಯವಂತಿಕೆ ಏನೆಲ್ಲಾ ಹೇಳಿದರೂ ಕಡಿಮೆಯೇ. ಕೃತ್ರಿಮವಲ್ಲದ ಆ ನಗು ಕನ್ನಡಿಗರು ಪಡೆದುಕೊಂಡಿದ್ದ ರಾಜ ಬಳುವಳಿಯೂ ಆಗಿತ್ತು. ಇತ್ತೀಚೆಗೆ ರಾಕಿಂಗ್‌ ಸ್ಟಾರ್‌ ಯಶ್‌ ಅವರು ‘ನಾವು ರಾಜ್‌ ನಾಡಿನವರು’ ಎಂದು ಹೇಳಿದ್ದು ಈ ದೃಷ್ಟಿಯಿಂದ ಬಹಳ ಅರ್ಥಪೂರ್ಣ, ಅರಿವಿಗೆ ಸಿಹಿ ಹೂರಣ.

ಜೀವನವೇ ಅದ್ಭುತ ಸಂದೇಶ

ಕನ್ನಡದ ತಲೆಮಾರುಗಳನ್ನು ರೂಪಿಸಿದ ರಾಜ್‌ ಜೀವನಯಾತ್ರೆಯಲ್ಲಿ ಅದ್ಭುತ ಸಂದೇಶಗಳಿವೆ. ಕಷ್ಟದ ಬಾಲ್ಯದಲ್ಲಿ ಸಹಿಷ್ಣತೆಯ ಪಾಠಗಳಿವೆ. ರಂಗಭೂಮಿಯ ದುಡಿಮೆಯಲ್ಲಿ ಕಲೆಯ ತಾಲೀಮುಗಳಿವೆ. ಚಿತ್ರರಂಗದಲ್ಲಿ ಸೂರ್ಯನಾಗಿ ಪ್ರಜ್ವಲಿಸಿದರೂ ಉದಯಾಸ್ತಮಾನಗಳ ದಿನಪ್ರಜ್ಞೆಗಳಿವೆ. ಚಂದಿರನ ತಂಪುಗಳಿವೆ. ಯಶಸ್ಸಿನ ಶೃಂಗವನ್ನು ಅಲಂಕರಿಸಿದರೂ ಉದ್ವೇಗಗಳಿಂದ ಮುಕ್ತವಾದ ವಿನಯವಿದೆ. ಈ ನಟಸಾರ್ವಭೌಮನಿಗೆ ರಸಿಕರು ಸೋತರು, ಆಳರಸರು ಒಲಿದರು. ಬಾಹುಬಲಿ ವ್ಯಕ್ತಿತ್ವ, ಪುರುಷರ ಪುರುಷ ಪುರುಷೋತ್ತಮ ಎನ್ನುವುದು ಉತ್ತಮ ಪದಕಿರೀಟವಾಗಬಹುದು.

ಇಂದಿರಾ v/ಠ ರಾಜ್‌ಗೆ ಯತ್ನ

1979ರ ಸಂದರ್ಭ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿನಾಯಕಿ ಇಂದಿರಾಗಾಂಧಿ ಎದುರಾಗಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಡಾ. ರಾಜ್‌ರನ್ನು ಒಪ್ಪಿಸಬೇಕೆಂಬುದು ಮಹತ್ವದ ಹಂಬಲವಾಗಿತ್ತು. ರಾಜ್ಯದಿಂದ ಕೇಂದ್ರದವರೆಗೆ ಪ್ರಯತ್ನ ಜೋರಾಗಿತ್ತು. ಮೂಲತಃ ರಾಜಕೀಯದಿಂದ ದೂರವಿದ್ದ ರಾಜ್‌ ಯಾರನ್ನೂ ನೋಯಿಸದ ವ್ಯಕ್ತಿ. ಒತ್ತಡ ಭಾರವಾಗುತ್ತಿದೆ ಎಂದಾಗ ಪತ್ನಿ ಸಮೇತರಾಗಿ ಯಾರ ಕೈಗೂ ಸಿಗದೆ ಅಜ್ಞಾತವಾಸಿಗಳಾಗಲು ನಿರ್ಧರಿಸಿದರು. ತೀರ್ಥಯಾತ್ರೆ ಹೊರಟುಬಿಟ್ಟರು.

ಆದರೆ ಜಾಡು ಹಿಡಿಯುವವರು ಜೋರಾದಾಗ ಅವರೊಂದು ನಿರ್ಜನ ಪ್ರದೇಶ ಸೇರಿಬಿಟ್ಟರು. ಅದು ಆಂಧ್ರಪ್ರದೇಶದ ಹಾರ್ಸ್‌ಲೀ ಹಿಲ್ಸ್‌ ಎಂಬ ಬೆಟ್ಟದ ಮೇಲಿನ ಪ್ರವಾಸಿಧಾಮ. ಅಲ್ಲಿಗೆ ಯಾರ ಸಂಪರ್ಕವೂ ಇರಲಿಲ್ಲ. ಅದು ದುರ್ಗಮ ಅರಣ್ಯ ಪ್ರದೇಶವೂ ಹೌದು. ರೇಡಿಯೋ ಒಂದೇ ಯಾವುದೇ ಸುದ್ದಿ ತಿಳಿಯಲು ಇದ್ದ ಸಾಧನ. ಪತ್ರಿಕೆಗಳೂ ಸಿಗುತ್ತಿರಲಿಲ್ಲ. ಅದೊಂದು ನಿರ್ಜನ ಪ್ರದೇಶವಾಗಿತ್ತು. ರಾಜ್‌ ಅಲ್ಲಿರುವವರೆಂಬ ಸಂಗತಿ ಯಾರಿಗೂ ತಿಳಿಯುವಂತಿರಲಿಲ್ಲ. ಅಲ್ಲಿ ದಂಪತಿಗಳಿಗೆ ಎರಡು ರಾತ್ರಿಗಳನ್ನು ಕಳೆಯುವ ಹೊತ್ತಿಗೆ ಸಾಕು ಸಾಕಾಗಿತ್ತು.

ನಿರ್ಜನ ಪ್ರದೇಶದಲ್ಲಿ ಅಜ್ಞಾತ

ರಭಸದ ಗಾಳಿ, ಜೀರುಂಡೆಗಳ ಶಬ್ದ, ಇದೆಲ್ಲ ಸಾಲದೆಂಬಂತೆ ರಾಕ್ಷಸ ಗಾತ್ರದ ಸೊಳ್ಳೆಗಳು, ಅವುಗಳಿಂದ ಕಚ್ಚಿಸಿಕೊಂಡವರಿಗಷ್ಟೆಅದರ ವೇದನೆ ಗೊತ್ತು. ಹಾಗೂ ಹೀಗೂ ನಾಮಪತ್ರ ಸಲ್ಲಿಸುವ ಕೊನೆಯ ದಿನ ಬಂದಾಗ ನೆಮ್ಮದಿಯ ನಿಟ್ಟುಸಿರು. ಅಷ್ಟುಹೊತ್ತಿಗೆ ದಿಕ್ಕು ಕಾಣದಾಗಿದ್ದ ವರಿಷ್ಟರು ಇಂದಿರಾಗಾಂಧಿ ಅವರ ವಿರುದ್ಧ ಸ್ಪರ್ಧಿಸಲು ವೀರೇಂದ್ರ ಪಾಟೀಲರನ್ನು ಆಯ್ಕೆ ಮಾಡಿದ್ದರು.

ಆ ಸುದ್ದಿ ರೇಡಿಯೋ ಮೂಲಕ ತಿಳಿದಾಗ ರಾಜ್‌ ಅಲ್ಲಿಂದ ಬೆಂಗಳೂರಿಗೆ ವಾಪಸಾದರು. ಹೀಗೆ ಸುನಾಯಾಸವಾಗಿ ಪದವಿಯ ಅವಕಾಶ ಬಳಿಗೆ ಬಂದರೂ ತಮಗೆ ನೋವಾದರೂ ಸಹಿಸಿ ಅವರು ಅದನ್ನು ತಿರಸ್ಕರಿಸಿದ ಸಂದರ್ಭದಲ್ಲಿ ಅವರಾಡಿದ ಮಾತು ಹೀಗಿತ್ತು ‘ಸಾಂಸ್ಕೃತಿಕವಾಗಿ ಬದುಕುವವರು ರಾಜಕೀಯವಾಗಿ ಬದುಕಬಾರದು’.

ಸನಾದಿ ಅಪ್ಪಣ್ಣ ಚಿತ್ರಕ್ಕಾಗಿ ‘ನಾನೇ ತಾಯಿ, ನಾನೇ ತಂದೆ ನಿನ್ನ ಪಾಲಿಗೆ’ ಗೀತೆ ಸಿದ್ಧವಾಯಿತು. ಗೀತೆಯಲ್ಲಿ ರಾಜ್‌ ಪುಟಾಣಿ ಪುನೀತ್‌ರೊಂದಿಗೆ ಅಭಿನಯಿಸಬೇಕಾಗಿತ್ತು. ಸನ್ನಿವೇಶ ನೋಡಿದ ಕೂಡಲೇ ರಾಜ್‌, ಇದನ್ನು ಪಿ.ಬಿ.ಶ್ರೀನಿವಾಸ್‌ ಅವರ ಬಳಿ ಹಾಡಿಸೋಣ ಎಂದುಬಿಟ್ಟರು. ಉದಯಶಂಕರ್‌ ಸಹಿತ ಎಲ್ಲರಿಗೂ ಆಶ್ಚರ್ಯ. ಏಕೆ ಸರ್‌ ಎಂದು ಕೇಳಿದರೆ ‘ಏಕೆ ಎಂದೆಲ್ಲ ಕೇಳಬೇಡಿ ಅದನ್ನು ವಿವರಿಸಲಾರೆ. ಇದನ್ನು ಶ್ರೀನಿವಾಸ್‌ ಹಾಡಬೇಕು, ನಾನು ಅಭಿನಯಿಸಬೇಕು. ಆಗಲೇ ಅದು ಯಶಸ್ವಿಯಾಗುತ್ತೆ’ ಅಂದುಬಿಟ್ಟರು. ಹಾಗೇ ಆಯಿತು, ಇತಿಹಾಸವಾಯಿತು.

ರಾಜ್‌ ನಿರ್ಧಾರಗಳು

ಜನುಮದ ಜೋಡಿ ಚಿತ್ರದ ಪರಾಕಾಷ್ಟೆಯ ಸನ್ನಿವೇಶ. ‘ದೇಹವೆಂದರೆ ಓ ಮನುಜ ಮೂಳೆ ಮಾಂಸಗಳ ತಡಿಕೆ’ ಸ್ವಯಂ ರಾಜ್‌ ಹಾಡಿದ್ದ ಗೀತೆಗೆ ರಾಜ್‌ ಅಭಿನಯಿಸಬೇಕಿತ್ತು. ಈ ಗೀತೆಗೆ ಉತ್ತರ ಕರ್ನಾಟಕದ ಪ್ರಸಿದ್ಧ ಹಿರಿಯ ರಂಗ ಕಲಾವಿದ ಏಣಗಿ ಬಾಳಪ್ಪ ಅವರು ಅಭಿನಯಿಸಿದರೆ ಚೆನ್ನ ಎಂದರು ರಾಜ್‌. ನಿರ್ದೇಶಕ ನಾಗಾಭರಣ ಸಹಿತ ಎಲ್ಲರಿಗೂ ಅಚ್ಚರಿ. ಆದರೆ ರಾಜ್‌ ಮನಸಿನ ಮಾತು ತೆರೆಯಲ್ಲಿ ಇತಿಹಾಸವಾಯಿತು. ಏಣಗಿ ಬಾಳಪ್ಪ ಅವರು ಚಲನಚಿತ್ರಗಳ ಅಭಿನಯದಿಂದ ದೂರವಿದ್ದವರು. ಅಂಥ ಮಹಾನ್‌ ರಂಗದಿಗ್ಗಜ ಹೇಳಿದ್ದು ನಾನು ದುಡ್ಡಿಗಾಗಿ ಆ ಪಾತ್ರ ಮಾಡಲಿಲ್ಲ. ಡಾ.ರಾಜಕುಮಾರ್‌ ಅವರ ಸ್ನೇಹಕ್ಕಾಗಿ ಮಾಡಿದೆ.

ಪದ್ಮಭೂಷಣದ್ವಯರಾದ ಡಾ. ರಾಜ್‌ ಮತ್ತು ಬಿ.ಸರೋಜಾ ದೇವಿಯವರದು ತೆರೆಯಲ್ಲಿ ಅದ್ಭುತವಾದ ಕಾಂಬಿನೇಷನ್‌. ಸಮಯ ಪಾಲನೆ, ಕರ್ತವ್ಯದಲ್ಲಿ ತಲ್ಲೀನತೆ ಹೀಗೆ ಒಬ್ಬರಿಗೊಬ್ಬರು ಪೂರಕವಾಗಿ ಚಿತ್ರೀಕರಣದಲ್ಲಿ ತೊಡಗುತ್ತಿದ್ದ ಸಮರ್ಪಣಾ ಮನೋಭಾವದವರು. ಅದು ಸರೋಜಾ ದೇವಿಯವರು ತಮ್ಮ ಪ್ರಿಯ ಪತಿ ಶ್ರೀಹರ್ಷ ಅವರನ್ನು ಕಳೆದುಕೊಂಡ ಸಂದರ್ಭ. ಅವರಿಗೆ ಪತಿ ವಿಯೋಗದ ದುಃಖ ಒಂದೆಡೆ, ಸಮಾಜದ ಕಟ್ಟುಪಾಡುಗಳ ವಿಪರೀತಾರ್ಥದವರಿಂದ ಮೂದಲಿಕೆಯ ನೋವು ಮತ್ತೊಂದೆಡೆ ಅಪಾರವಾಗಿ ನೊಂದಿದ್ದರು. ವಿಧವೆಗೆ ಮರು ವಿವಾಹದ ಅವಕಾಶವಿರುವಾಗ ಆಕೆ ಮಂಗಳ ಧಾರಣಿ ಆಗಬಹುದಾದರೆ ವಿವಾಹವಾಗದೇ ಪತಿಯ ನೆನಪಿನಲ್ಲಿರುವಾಕೆ ಮಂಗಳ ಧಾರಣಿ ಆಗಿರಬಹುದಲ್ಲವೇ ಎಂಬುದು ಅವರ ಜಿಜ್ಞಾಸೆಯಾಗಿತ್ತು.

ಸರೋಜಾದೇವಿಗೆ ಸಾಂತ್ವನ

ಒಮ್ಮೆ ಮದ್ರಾಸ್‌ನಿಂದ ಶೂಟಿಂಗ್‌ ಮುಗಿಸಿಕೊಂಡು ಡಾ. ರಾಜ್‌ ದಂಪತಿ ಮತ್ತು ಸರೋಜಾ ದೇವಿಯವರು ಒಟ್ಟಿಗೆ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ವಿಮಾನದಲ್ಲಿ ಡಾ. ರಾಜ್‌ ಅವರು ಮನಸಿನ ಶಾಂತಿ ಗಳಿಸಲು ಸಹಕರಿಸುವಂಥ ಅನೇಕ ಮಾತುಗಳನ್ನು ಹೇಳಿ ಸರೋಜಾ ದೇವಿಯವರಿಗೆ ಸಾಂತ್ವನ ನುಡಿದರು. ‘ನೀವು ಹಣೆಗೆ ಕುಂಕುಮ ಇಟ್ಟುಕೊಳ್ಳಿ ಪ್ರೇರಣೆ ಆಗುತ್ತೆ. ಯಾವ ವಿಚಾರಕ್ಕೂ ಸರಿಯೋ ತಪ್ಪೋ ಎನ್ನುವ ದ್ವಂದ್ವದಲ್ಲಿ ಬಳಲಬೇಡಿ. ಯಾರ ಮಾತನ್ನೂ ಕೇಳದೆ ನಿಮ್ಮದೆ ಒಂದು ಗಟ್ಟಿನಿಲುವು ತೆಗೆದುಕೊಳ್ಳಿ, ನಾವೆಲ್ಲ ಇದ್ದೇವೆ. ನೀವು ಒಂಟಿ ಎನ್ನುವ ಭಾವನೆ ಇಟ್ಟುಕೊಳ್ಳಬೇಡಿ’ ಎಂದು ಧೈರ್ಯ ತುಂಬಿದಾಗ ಸರೋಜಾ ದೇವಿಯವರ ಮನದಂಗಳದ ಕಾರ್ಮೋಡಗಳು ಸರಿದು ಹೋದದ್ದನ್ನು ಅವರು ತಮ್ಮ ಆತ್ಮಕಥನದಲ್ಲಿ ಹೃದಯಂಗಮವಾಗಿ ವಿವರಿಸಿದ್ದಾರೆ.

ರಾಜ್‌ ಸಮಯಪ್ರಜ್ಞೆ

ಚಿತ್ರೀಕರಣ ಇದ್ದರೆ ಎಂತಹ ಪರಿಸ್ಥಿತಿಯಲ್ಲೂ ಬೆಳಗ್ಗೆ 9ಕ್ಕೆ ಸ್ಟುಡಿಯೋದಲ್ಲಿ ಇದ್ದು ಬಿಡುವ ಸಂಪ್ರದಾಯ ರಾಜ್‌ ಅವರದ್ದು. ಒಂದು ದಿನ ಸಮಯಕ್ಕೆ ಸರಿಯಾಗಿ ಕಾರು ಬರದಿದ್ದಾಗ ತುಸು ಸಿಡಿಮಿಡಿಗೊಂಡರು. ಪತಿಯ ಕೋಪವರಿತ ಪಾರ್ವತಮ್ಮನವರು ಮೌನವಾಗಿಯೇ ಕಾರು ತರಿಸಲು ಒಳಗಿಂದಲೇ ಪ್ರಯತ್ನ ಪಡುತ್ತಿದ್ದರು. ಮನೆಯಿಂದ ಹೊರಬಂದ ರಾಜ್‌ ಮನೆ ಮುಂದೆ ಹೋಗುತ್ತಿದ್ದ ಟ್ಯಾಕ್ಸಿಯಲ್ಲಿ ಹತ್ತಿ ಸ್ಟುಡಿಯೋಗೆ ಹೊರಟುಬಿಟ್ಟರು.

ಪಾರ್ವತಮ್ಮನವರು ಹೊರಗೆ ಬಂದು ನೋಡಿದರೆ ಪತಿರಾಯರು ಕಾಣಲಿಲ್ಲ. ಅತ್ತಿಂದಿತ್ತ ಹುಡುಕುತ್ತಾ ಓಡಾಡುತ್ತಿದ್ದಾಗ, ಪಕ್ಕದ ಮನೆಯವರು ರಾಜ್‌ ಟ್ಯಾಕ್ಸ್‌ ಹತ್ತಿ ತೆರಳಿದ್ದನ್ನು ಹೇಳಿದರು. ಪಾರ್ವತಮ್ಮನವರಿಗೆ ಮತ್ತಷ್ಟುಗಾಬರಿಯಾಯಿತು. ಏಕೆಂದರೆ ರಾಜ್‌ ಜೇಬಿನಲ್ಲಿ ಹಣವಿರಲಿಲ್ಲ. ಎಲ್ಲಿ ತಮ್ಮ ವಾಚನ್ನೇ ತೆಗೆದು ಟ್ಯಾಕ್ಸಿಯವನಿಗೆ ಕೊಟ್ಟುಬಿಟ್ಟಾರೆಂಬ ಭೀತಿಯಿಂದ ತಕ್ಷಣ ಸ್ಟುಡಿಯೋಗೆ ಫೋನ್‌ ಮಾಡಿ ಟ್ಯಾಕ್ಸಿ ಬಾಡಿಗೆಗೆ ವ್ಯವಸ್ಥೆ ಮಾಡಿದರು.

ರಾಜ್‌ ನಮ್ಮನ್ನು ಅಗಲಿದ ಹದಿನಾರು ವರ್ಷಗಳ ಸ್ಮರಣೆಯ ಸಂದರ್ಭದಲ್ಲಿ ಅಪ್ಪು ಜೊತೆಯಾಗಿರುವುದು ಎಂಥ ದುರ್ವಿಧಿ ಎಂಬುದು ಈಗಾಗಲೇ ನಾಡಿನ ಜ್ವಲಂತ ದಾಖಲೆಯಾಗಿದೆ.

- ಎಸ್‌.ಜಗನ್ನಾಥರಾವ್‌ ಬಹುಳೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!