ಭರ್ಜರಿ, ಪೈಲ್ವಾನ್ ಮತ್ತು ಯುವರತ್ನ ನಿರ್ದೇಶಕರಿಗೆ ತಳಮಳ ?

By Web DeskFirst Published Apr 11, 2019, 10:22 AM IST
Highlights

ಹ್ಯಾಟ್ರಿಕ್‌ ಗೆಲುವಿನ ಪಟ್ಟಬಹುತೇಕ ಸಂದರ್ಭಗಳಲ್ಲಿ ಆಯಾ ಚಿತ್ರದ ನಾಯಕ ನಟರಿಗೇ ಮೀಸಲವಾಗಿರುತ್ತದೆ. ಆದರೆ, ನಿರ್ದೇಶಕರಿಗೆ ಆ ಪಟ್ಟದೊರೆಯುವುದು ಅಪರೂಪ. ಹೀಗಾಗಿ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೋಗಳನ್ನು ಕಾಣಬಹುದು, ಹ್ಯಾಟ್ರಿಕ್‌ ಡೈರೆಕ್ಟರ್‌ಗಳು ಸಿಗಲ್ಲ. ಈಗ ಕನ್ನಡದಲ್ಲಿ ಮೂವರು ನಿರ್ದೇಶಕರು ಅಂಥ ಹ್ಯಾಟ್ರಿಕ್‌ ಪಟ್ಟಕ್ಕಾಗಿ ಕಾಯುತ್ತಿದ್ದಾರೆ. ಈ ಮೂವರಿಗೂ ಅವರ ಈ ಹಿಂದಿನ ಎರಡೂ ಚಿತ್ರಗಳು ದೊಡ್ಡ ಮಟ್ಟದಲ್ಲೇ ಗೆಲುವು ಕೊಟ್ಟಿವೆ. ಹೀಗಾಗಿ ಮೂರನೇ ಪ್ರಯತ್ನ ಹ್ಯಾಟ್ರಿಕ್‌ ಜಯ ತಂದುಕೊಡಲಿದೆಯೇ? ಆ ಮೂಲಕ ಹ್ಯಾಟ್ರಿಕ್‌ ನಿರ್ದೇಶಕರ ಸಂಖ್ಯೆ ಹೆಚ್ಚಾಗಲಿದೆಯೇ ಎಂಬುದು ಸದ್ಯದ ಕುತೂಹಲ

1. ಪೈಲ್ವಾನ್‌ ಕೃಷ್ಣ: ಸದ್ಯ ಎರಡು ಸಿನಿಮಾಗಳನ್ನು ಕೊಟ್ಟವರು. ಎರಡರಲ್ಲೂ ಸದ್ದು ಮಾಡಿದ ನಿರ್ದೇಶಕ ಕೃಷ್ಣ, ಈಗ ನಟ ಸುದೀಪ್‌ ಅಭಿನಯದ ‘ಪೈಲ್ವಾನ್‌’ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಅಧಿಕೃತವಾಗಿ ಘೋಷಣೆ ಮಾಡಿದಂತೆ ಆಗಸ್ಟ್‌ನಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿನಿಮಾ ತೆರೆ ಬರುತ್ತಿದೆ. ಕನ್ನಡ ಸೇರಿದಂತೆ ಒಟ್ಟು ಏಳು ಭಾಷೆಯಲ್ಲಿ ಬರುತ್ತಿರುವ ಈ ಚಿತ್ರದಲ್ಲಿ ಸುದೀಪ್‌, ಕುಸ್ತಿ ಪಟು ಆಗಿ ಕಾಣಿಸಿಕೊಂಡಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಹೀಗಾಗಿ ‘ಗಜಕೇಸರಿ’ ಹಾಗೂ ‘ಹೆಬ್ಬುಲಿ’ ಚಿತ್ರಗಳ ನಂತರ ‘ಪೈಲ್ವಾನ್‌’ ಕೂಡ ಯಶಸ್ಸು ಕಂಡು ನಿರ್ದೇಶಕ ಕೃಷ್ಣ ಅವರಿಗೆ ಹ್ಯಾಟ್ರಿಕ್‌ ಹೆಗ್ಗಳಿಕೆ ತಂದುಕೊಡಲಿದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ‘ನನ್ನ ಹಿಂದಿನ ಚಿತ್ರಗಳಿಗಿಂತಲೂ ಈ ಸಿನಿಮಾಗೆ ಮತ್ತಷ್ಟುಶ್ರಮ ಹಾಕಿರುವೆ. ಪ್ರತಿ ಚಿತ್ರವನ್ನು ಹೊಸ ಮತ್ತು ಮೊದಲ ಚಿತ್ರವೆಂಬಂತೆಯೇ ಮಾಡಿದ್ದು, ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲುವ ನಂಬಿಕೆ ಇದೆ’ ಎನ್ನುವ ಕೃಷ್ಣ ಅವರು ಹ್ಯಾಟ್ರಿಕ್‌ ಕನಸು ಕಾಣುತ್ತಿದ್ದಾರೆ.

2. ಭರಾಟೆ ಚೇತನ್‌ ಕುಮಾರ್‌: ಈ ಹಿಂದಿನ ಎರಡು ಚಿತ್ರಗಳನ್ನು ಒಬ್ಬರೇ ನಾಯಕನ ಜತೆ ಮಾಡಿ ಗೆದ್ದವರು ನಿರ್ದೇಶಕ ಚೇತನ್‌ ಕುಮಾರ್‌. ಹೌದು, ಧ್ರುವ ಸರ್ಜಾ ಅವರ ನಟನೆಯಲ್ಲಿ ‘ಬಹದ್ದೂರ್‌’ ಹಾಗೂ ‘ಭರ್ಜರಿ’ ಚಿತ್ರಗಳನ್ನು ನಿರ್ದೇಶಿಸಿ ಯಶಸ್ಸು ಕಂಡ ಚೇತನ್‌ ಕುಮಾರ್‌, ಸಾಕಷ್ಟುಸಮಯ ತೆಗೆದುಕೊಂಡು ಶುರು ಮಾಡಿರುವ ಸಿನಿಮಾ ‘ಭರಾಟೆ’. ಈಗಾಗಲೇ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದ್ದು, ಈ ಚಿತ್ರವೂ ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ. ಚಿತ್ರದ ನಾಯಕ ಶ್ರೀಮುರಳಿ ಅವರಿಗೆ ಉಗ್ರಂ, ರಥಾವರ ಹಾಗೂ ಮಫ್ತಿ ಸಿನಿಮಾಗಳು ಯಶಸ್ಸು ಕೊಟ್ಟಮೇಲೆ ಒಪ್ಪಿಕೊಂಡಿರುವ ಚಿತ್ರವಾಗಿರುವ ಕಾರಣ ‘ಭರಾಟೆ’ ಗೆಲುವಿನ ನಂಬಿಕೆ ಮತ್ತು ನಿರೀಕ್ಷೆಗೆ ಕಾರಣವಾಗಿದೆ. ಈಗಾಗಲೇ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆಕಲರ್‌ಫುಲ್ಲಾಗಿರುವುದೆ. ಹಾಗಾದರೆ ಹಿಂದಿನ ಎರಡು ಚಿತ್ರಗಳಂತೆ ಚೇತನ್‌, ಮೂರನೇ ಚಿತ್ರದಲ್ಲೂ ಗೆಲುವು ಕಾಣಲಿದ್ದಾರೆಯೇ?

3. ಯುವರತ್ನ ಸಂತೋಷ್‌ ಆನಂದ್‌ ರಾಮ್‌: ಎರಡು ಬ್ಲಾಕ್‌ ಬಾಸ್ಟರ್‌ ಹಿಟ್‌ ಚಿತ್ರಗಳನ್ನು ಕೊಟ್ಟವರು ಸಂತೋಷ್‌ ಆನಂದ್‌ ರಾಮ್‌. ಯಶ್‌ ನಟನೆಯ ‘ಮಿಸ್ಟರ್‌ ಆಂಡ್‌ ಮಿಸಸ್‌ ರಾಮಾಚಾರಿ’ ಹಾಗೂ ಪುನೀತ್‌ರಾಜ್‌ಕುಮಾರ್‌ ನಟನೆಯ ‘ರಾಜಕುಮಾರ’ ಚಿತ್ರಗಳ ಯಶಸ್ಸಿನ ಬಗ್ಗೆ ಪ್ರೇತ್ಯಕವಾಗಿ ಹೇಳಬೇಕಿಲ್ಲ. ಒಂದು ಲವ್‌ ಕಂ ಆ್ಯಕ್ಷನ್‌ ವಿಚಾರದಲ್ಲಿ ಮೇಲುಗೈ ಸಾಧಿಸಿದರೆ, ಮತ್ತೊಂದು ಪ್ರೇಕ್ಷಕರ ಭಾವುಕತೆಯ ಮನಸ್ಸಿಗೆ ತಟ್ಟಿತು. ಈ ಎರಡು ಚಿತ್ರಗಳ ನಂತರ ಮತ್ತೊಮ್ಮೆ ಪುನೀತ್‌ರಾಜ್‌ಕುಮಾರ್‌ ಜತೆ ‘ಯುವರತ್ನ’ನ ಕತೆ ಹೇಳುವುದಕ್ಕೆ ಹೊರಟಿದ್ದಾರೆ ಸಂತೋಷ್‌ ಆನಂದ್‌ ರಾಮ್‌. ಸದ್ಯಕ್ಕೆ ಇದಕ್ಕೆ ಚಿತ್ರೀಕರಣ ನಡೆಯುತ್ತಿದೆ. ಮೂರನೇ ಹಂತದ ಚಿತ್ರೀಕರಣ ಮುಗಿಸಿರುವ ಸಂತೋಷ್‌ ಆನಂದ್‌ ರಾಮ್‌, ತಮ್ಮ ಹಿಂದಿನ ಚಿತ್ರಗಳ ಗೆಲುವನ್ನು ಮೂರನೇ ಚಿತ್ರದಲ್ಲೂ ರಿಪೀಟ್‌ ಮಾಡಲಿದ್ದಾರೆ? ಎನ್ನುವುದು ಸದ್ಯದ ಕುತೂಹಲ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

 

click me!