ಸ್ಯಾಂಡಲ್‌ವುಡ್‌ಗೆ ರಕ್ಷಿತಾ ಪ್ರೇಮ್‌ ಸೋದರ ರಾಣಾ ಎಂಟ್ರಿ!

By Web DeskFirst Published Apr 2, 2019, 2:34 PM IST
Highlights

ರಕ್ಷಿತಾ ಪ್ರೇಮ್‌ ಸಹೋದರ ಅಭಿಷೇಕ್‌ ಅಭಿನಯದ ಮೊದಲ ಚಿತ್ರಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ‘ಏಕ್‌ ಲವ್‌ ಯಾ’ ಅಥವಾ ‘ಏಕಲವ್ಯ’ ಹೆಸರಿನ ಚಿತ್ರದೊಂದಿಗೆ ಅಭಿಷೇಕ್‌ ಹೀರೋ ಆಗಿ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಜೋಗಿ ಪ್ರೇಮ್‌. ರಕ್ಷಿತಾ ಈ ಸಿನಿಮಾದ ನಿರ್ಮಾಪಕಿ. ಹಾಗೆಯೇ ಸಿನಿಜರ್ನಿಗೆ ಅಭಿಷೇಕ್‌ ಅವರ ಹೆಸರು ರಾಣಾ ಎಂಬುದಾಗಿ ಬದಲಾಗಿದೆ. ಹೊಸ ಹೆಸರಲ್ಲಿ ಸಿನಿ ಜರ್ನಿ ಶುರು ಮಾಡುತ್ತಿರುವ ಅಭಿಷೇಕ್‌ ನಟನಾಗಲು ಸ್ಫೂರ್ತಿ, ನಟನೆಯ ಸಿದ್ಧತೆ, ಏಕ್‌ ಲವ್‌ ಯಾ ಚಿತ್ರದಲ್ಲಿನ ತಮ್ಮ ಪಾತ್ರವೂ ಸೇರಿ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ದೇಶಾದ್ರಿ ಹೊಸ್ಮನೆ

ಸಿನಿಮಾವೇ ನಿಮ್ಮ ಆಯ್ಕೆ ಆಗಿದ್ದು ಯಾಕೆ?

ಅದಕ್ಕಿರುವ ಮೊದಲ ಕಾರಣ ಮನೆಯ ವಾತಾವರಣ. ನಾನು ಹೈಸ್ಕೂಲ್‌ನಲ್ಲಿದ್ದಾಗಲೇ ಅಕ್ಕ ಹೀರೋಯಿನ್‌ ಆಗಿದ್ದರು. ದೊಡ್ಡ ಹೆಸರೂ ಮಾಡಿದ್ದರು. ಜತೆಗೆ ಅಮ್ಮ -ಅಪ್ಪ ಕೂಡ ಸ್ಫೂರ್ತಿ ಆಗಿದ್ದರು. ಮನೆಯಲ್ಲೇ ಸಿನಿಮಾ ಜಗತ್ತಿನ ವಾತಾವರಣವೇ ಇರುವಾಗ ಇನ್ನೇನು ಆಗಲು ಸಾಧ್ಯ? ಬಾಲ್ಯದಲ್ಲೇ ನನಗಿದ್ದ ಕನಸು ನಟನೆ. ಆದ್ರೆ ಓದು ಮುಗಿಸಿ, ಮುಂದಿನ ನಿರ್ಧಾರ ಅಂತ ಅಮ್ಮ ಹೇಳ್ತಿದ್ರು. ಅವರ ಆಶಯದಂತೆಯೇ ಓದು ಮುಗಿಯಿತು. ನನ್ನಿಷ್ಟದಂತೆ ಸಿನಿಮಾಕ್ಕೆ ಬಂದೆ.

ನೀವು ಓದಿದ್ದು ಏನು?

ಇಂಜಿನಿಯರಿಂಗ್‌ ಮುಗಿದಿದೆ. ಆರ್‌ವಿ ಕಾಲೇಜಿನಲ್ಲಿ ಮೆಕಾನಿಕಲ್‌ ಇಂಜಿನಿಯರಿಂಗ್‌ ಓದಿದೆ. ಮತ್ತಷ್ಟುಓದ್ಬೇಕು, ಅದಕ್ಕೆ ವಿದೇಶಕ್ಕೆ ಹೋಗು ಅಂತ ಅಮ್ಮ ಹೇಳ್ತಿದ್ರು. ಆದ್ರೆ ನನಗಿದ್ದಿದ್ದು ಸಿನಿಮಾ ಆಸಕ್ತಿ. ಫೈನಲಿ ಅಮ್ಮನಿಗೆ ನನ್ನಾಸೆ ಏನು ಅಂತ ಹೇಳಿದೆ. ಅಕ್ಕನ ಸಪೋರ್ಟ್‌ ಕೂಡ ಇತ್ತು. ಅದಕ್ಕವರು ಬೇಡ ಎನ್ನುವುದಕ್ಕೆ ಆಗಲಿಲ್ಲ, ಸಿನಿಮಾ ಅಂತ ಆಯ್ಕೆ ಮಾಡಿಕೊಂಡು ಆ್ಯಕ್ಟಿಂಗ್‌ ಟ್ರೈನಿಂಗ್‌ ಶುರು ಮಾಡಿದಾಗ ಅವರೇ ಹಾಗಲ್ಲ, ಹೀಗೆ ಅಂತ ಸಲಹೆ ಕೊಟ್ರು.

ನಿಮಗಿರುವ ನಟನೆಯ ಅನುಭವ ಏನು?

ಯಾವುದನ್ನೇ ಆಯ್ಕೆ ಮಾಡಿಕೊಂಡರೂ ಅದಕ್ಕೆ ತಕ್ಕನಾದ ಸಿದ್ಧತೆ ಬೇಕು ಎನ್ನುವುದರಲ್ಲಿ ನಾನು ಕೂಡ ಒಬ್ಬ. ಹಾಗಾಗಿಯೇ ಸಿನಿಮಾ ಕಡೆ ಮನಸು ಮಾಡಿದಾಗ ಆ್ಯಕ್ಟಿಂಗ್‌ ಟ್ರೈನಿಂಗ್‌ ಶುರು ಮಾಡಿದೆ. ಮೊದಲು ರಂಗ ತರಬೇತಿಗೆ ಹೋದೆ. ಕೃಷ್ಣಮೂರ್ತಿ ಕವಿತಾಳ್‌ ಎನ್ನುವವರ ಬಳಿ ರಂಗ ತರಬೇತಿ ಶುರು ಮಾಡಿದೆ. ಜತೆಗೆ ಕೆಲವು ರಂಗ ಸಂಸ್ಥೆಗಳ ಜತೆಗೂ ಒಡನಾಟ ಬೆಳಸಿಕೊಂಡೆ. ಇಲ್ಲಿ ಒಂದಷ್ಟುಕಲಿತು, ಇನ್ನೇನು ಸಿನಿಮಾದತ್ತ ಕಾಲಿಡುವಾಗ ಬಾವ(ಜೋಗಿ ಪ್ರೇಮ್‌) ಬಳಿ ಸಹಾಯಕ ನಿರ್ದೇಶಕನಾದೆ. ಅಲ್ಲಿಂದ ಆ್ಯಕ್ಟಿಂಗ್‌ ಟ್ರೈನಿಂಗ್‌ ಉದ್ದೇಶಕ್ಕೆ ನ್ಯೂಯಾರ್ಕ್ಗೂ ಹೋಗಿ ಬಂದೆ.

ನ್ಯೂಯಾರ್ಕನಲ್ಲಿ ನೀವು ಕಲಿತಿದ್ದು ಏನು?

ಅದು ಥಿಯೇಟರ್‌ ಟ್ರೈನಿಂಗ್‌ ಸೆಂಟರ್‌. ಬಾಲಿವುಡ್‌ ನಟ ರಣಧೀರ್‌ ಕಪೂರ್‌ ಅಲ್ಲಿ ಆ್ಯಕ್ಟಿಂಗ್‌ ಟ್ರೈನಿಂಗ್‌ ಮುಗಿಸಿಕೊಂಡು ಬಂದಿದ್ದರು. ಆ ವಿಷಯ ಗೊತ್ತಾಗಿ ನಾನು ಆ ಥಿಯೇಟರ್‌ ಟ್ರೈನಿಂಗ್‌ ಸಂಸ್ಥೆಗೆ ಪ್ರವೇಶ ಪಡೆಯಲು ಅರ್ಜಿ ಹಾಕಿದ್ದೆ. ಜಗತ್ತಿನಲ್ಲೇ ಅದಕ್ಕೊಂದು ದೊಡ್ಡ ಹೆಸರು ಇದೆ. ಹೆಸರಾಂತ ನಟರು ಅಲ್ಲಿ ತರಬೇತಿ ಪಡೆದು ಬಂದಿದ್ದರ ಬಗ್ಗೆ ಕೇಳಿ ತಿಳಿದಿದ್ದೆ. ಅವಕಾಶ ಹೋಗೋಣ ಅಂತಲೇ ಅರ್ಜಿ ಹಾಕಿದ್ದಾಗ, ಅವಕಾಶ ಸಿಕ್ಕೇ ಬಿಡ್ತು. ಅಂದುಕೊಂಡಂತೆ ಹೋಗಿ ತರಬೇತಿ ಪಡೆದು ಬಂದೆ.

ಹೀರೋ ಆಗೋದಿಕ್ಕೆ ಅಷ್ಟೇ ಸಾಕಾ?

ನಾನು ಅಲ್ಲಿ ಕಲಿತಿದ್ದು ಆ್ಯಕ್ಟಿಂಗ್‌ ಮಾತ್ರ. ನಟನೆ ಅಂದ್ರೇನು, ಅದರ ಭಾಷೆ ಹೇಗೆ, ನಟನೆಯ ಬಾಡಿ ಲಾಂಗ್ವೇಜ್‌ ಏನು ಅನ್ನೋದೆಲ್ಲ ಅಲ್ಲಿ ಹೇಳಿಕೊಡಲಾಗುತ್ತೆ. ಅಷ್ಟನ್ನು ನಾನು ಅಲ್ಲಿ ಕಲಿತೆ. ಉಳಿದಂತೆ ಡಾನ್ಸ್‌, ಸ್ಟಂಟ್‌ ಎಲ್ಲವೂ ಬೇಕೇ ಬೇಕು. ಅವೆಲ್ಲನ್ನು ನಾನು ಇಲ್ಲೇ ಕಲಿತುಕೊಂಡಿದ್ದೆ. ಇವತ್ತಿಗೂ ನಮ್ದು ಒಂದು ತಂಡವಿದೆ. ಅದರಲ್ಲಿ ಸ್ಟಂಟ್‌ ಮಾಸ್ಟರ್‌ ಮಾಸ್‌ ಮಾದ, ರವಿವರ್ಮ ಇದ್ದಾರೆ. ಅವರ ಬಳಿಯೇ ನಾನು ಸ್ಟಂಟ್‌ ಟ್ರೈನಿಂಗ್‌ ಮಾಡಿದ್ದೇನೆ. ಹಾಗೆಯೇ ಇಮ್ರಾನ್‌ ಸರ್ದಾರಿಯಾ ಅವರ ಬಳಿ ಡಾನ್ಸ್‌ ತರಬೇತಿ ಆಗಿದೆ. ಇಂತಿಷ್ಟೇ ದಿನ, ಹೀಗೆ ಮಾಡ್ಬೇಕು ಅಂತ ನಿಗದಿ ಇಲ್ಲದೆ ಸರಿ ಸುಮಾರು ಆರೇಳು ವರ್ಷದಿಂದ ಇದೆಲ್ಲವನ್ನು ಮಾಡುತ್ತಾ ಬಂದಿದ್ದೆ. ಅದಕ್ಕೀಗ ವೇದಿಕೆ ಸಿಗುತ್ತಿದೆ.

ಆ್ಯಕ್ಟರ್‌ ಆಗ್ಬೇಕು ಅಂದ್ಕೊಂಡು ಸಹಾಯಕ ನಿರ್ದೇಶಕರಾಗಿದ್ದು ಹೇಗೆ?

ಅದಕ್ಕೂ ಕಾರಣ ಬಾವ ಜೋಗಿ ಪ್ರೇಮ್‌. ನಾನು ನ್ಯೂಯಾರ್ಕ್ನಿಂದ ಬಂದು ಸಿನಿಮಾ ಮಾಡ್ಬೇಕು ಅಂತ ಓಡಾಡುತ್ತಿದ್ದಾಗ ‘ವಿಲನ್‌’ ಶುರುವಾಗುತ್ತಿತ್ತು. ಒಮ್ಮೆ ಆಫೀಸ್‌ನಲ್ಲಿ ಹೀಗೆ ಮಾತನಾಡುತ್ತಿದ್ದಾಗ ಪ್ರೇಮ್‌ ಅವರು, ಆ್ಯಕ್ಟಿಂಗ್‌ ಅಂದ್ರೆ ಕಲಿತು ಬಂದು ಮಾಡೋದಲ್ಲ, ಅದಕ್ಕೆ ಫೀಲ್ಡ್‌ ಅನುಭವವೂ ಬೇಕು. ನೀನು ಮೊದಲು ಶೂಟಿಂಗ್‌ ಸೆಟ್‌ ಹೇಗಿರುತ್ತೆ, ಅಲ್ಲಿನ ವರ್ಕ್ ಹೇಗಿರುತ್ತೆ ಅಂತ ಮೊದಲು ನೋಡ್ಕೋ ಅಂದ್ರು. ಆಗಲೇ ನಾನು ಸಹಾಯಕ ನಿರ್ದೇಶಕ ಆಗ್ಬೇಕು ಅನ್ಕೊಂಡೆ. ಅದಕ್ಕೆ ಅವರೇ ಅವಕಾಶ ಕೊಟ್ಟರು. ‘ವಿಲನ್‌’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾದೆ. ಸಿನಿಮಾ ಅಂದ್ರೆ ಏನು ಅಂತ ಗೊತ್ತಾಗಿದ್ದೇ ಅಲ್ಲಿ.

ಅಲ್ಲಿಂದ ಹೀರೋ ಆಗಲು ಹೊರಟಿದ್ದು ಹೇಗೆ?

ನನ್ನೊಳಗಿನ ನಟನಾಗುವ ಬಯಕೆಯನ್ನು ಬಡಿದೆಬ್ಬಿಸಿದ್ದು ಸುದೀಪ್‌ ಸರ್‌. ‘ವಿಲನ್‌’ ಚಿತ್ರದಲ್ಲಿ ನಾನು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವಾಗ ನಾನು ಅವರನ್ನು ತುಂಬಾ ಹತ್ತಿರದಿಂದ ಕಂಡೆ. ನಾನು ಅಲ್ಲಿ ಬರೀ ಸಹಾಯಕ ನಿರ್ದೇಶಕ ಅಲ್ಲ, ಸೆಟ್‌ ಬಾಯ್‌ ಆಗಿಯೂ ಕೆಲಸ ಮಾಡುತ್ತಿದ್ದೆ. ಅದನ್ನು ನೋಡುತ್ತಿದ್ದ ಸುದೀಪ್‌ ಸರ್‌, ಒಂದಿನ, ತಾವು ಅಭಿನಯಿಸ ಬೇಕಿದ್ದ ಸನ್ನಿವೇಶವನ್ನು ಒಂದ್ಸಲ ಮಾನಿಟರ್‌ ಮಾಡಿ ತೋರಿಸು ಅಂದ್ರು. ಮಾಡಿದೆ, ಅವರಿಗೆ ಅದು ತುಂಬಾ ಇಷ್ಟಆಯ್ತು. ನೀನ್ಯಾಕೆ ಹೀರೋ ಆಗಬಾರದು ಅಂದು ಸಲಹೆ ಕೊಟ್ಟರು. ಬಾವ ಕೂಡ ಅದೇ ಆತನ ಟಾರ್ಗೆಟ್‌ ಅಂದ್ರು.

ಅಕ್ಕ ರಕ್ಷಿತಾ ಅವರೇ ನಿಮ್ಮನ್ನು ಹೀರೋ ಆಗಿ ಪರಿಚಯಿಸಲು ಆಸೆ ಪಟ್ಟಿದ್ದು ಯಾಕೆ?

ಬಾಲ್ಯದಿಂದಲೂ ನಾನು ಸಿನಿಮಾ ಬರಬೇಕು ಅಂತ ಹೇಳುತ್ತಿದದ್ದು ಅವರಿಗೂ ಗೊತ್ತಿತ್ತು. ಅವ್ನು ಏನೇ ಓದಿದ್ರು, ಕೊನೆಗೆ ಸಿನಿಮಾಕ್ಕೆ ಬರ್ತಾನೆ ಬಿಡು ಅಂತ ಅಮ್ಮನಿಗೂ ಹೇಳ್ತಿದ್ರು. ನನ್ನೊಳಗಿನ ಸಿನಿಮಾದ ಬಯಕೆ, ಹಂಬಲ, ಆಕಾಂಕ್ಷೆ ಅವರಿಗೆ ಗೊತ್ತಿತ್ತು. ಆದ್ರೆ ಚೆನ್ನಾಗಿ ಓದಬೇಕು ಅನ್ನೋದನ್ನು ಅವರು ಬಯಸಿದ್ರು. ಅದಾದ ನಂತರವೇ ಸಿನಿಮಾಕ್ಕೆ ಬಾ ಅಂತಿಂದ್ರು. ಕೊನೆಗೆ ನಾನು ಅಂದುಕೊಂಡಂತೆ ಸಿನಿಮಾಕ್ಕೆ ಬರಬೇಕೆಂದು ಹೊರಟಾಗ ಅವರೇ ಗುರು ಥರ ಇದ್ದು ತರಬೇತಿಗಳಿಗೆ ಬೆಂಬಲಿಸಿದರು. ಅವರಿಗೆ ನಾನೇನು ಅಂತ ಗೊತ್ತಿದೆ. ನನ್ನ ಆಸೆಯೂ ಗೊತ್ತಿದೆ. ಹಾಗಾಗಿಯೇ ಅವರು ಇವತ್ತು ನಿರ್ಮಾಣಕ್ಕಿಳಿದಿದ್ದಾರೆ. ಆ ಕಾರಣಕ್ಕೆ ನಾನು ಲಕ್ಕಿ.

ಮೊದಲ ಸಿನಿಮಾದಲ್ಲೇ ಪ್ರೇಮ್‌ ನಿರ್ದೇಶನದಲ್ಲಿ ಬೆಳ್ಳಿತೆರೆಗೆ ಬರ್ತೀರಿ ಅಂದ್ಕೊಂಡಿದ್ರಾ?

ಖಂಡಿತಾ ಇಲ್ಲ. ಆದ್ರೂ ಒಂದು ಕಾನ್ಫಿಡೆನ್ಸ್‌ ಇತ್ತು. ಯಾಕಂದ್ರೆ ನಾನು ಅವರ ಪಕ್ಕಾ ಅಭಿಮಾನಿ. ನನ್ನ ನೆಚ್ಚಿನ ನಿರ್ದೇಶಕ ಅವರೇ. ನಾನು ಆ್ಯಕ್ಟರ್‌ ಆಗ್ಬೇಕು ಅಂದಾಗ ಮೊದಲು ಸಿನಿಮಾದ ಅನುಭವ ಪಡೆದುಕೋ ಅಂತ ಅವರೇ ಫೀಲ್ಡ್‌ಗೆ ಹೋಗುವಂತಚೆ ಮಾಡಿದ್ದು. ಹಾಗಲ್ಲ, ಹೀಗೆ ಅಂತ ಸಲಹೆ ಕೊಟ್ಟರು. ಕೊನೆಗೆ ನೀನ್ನ ಮೊದಲ ಸಿನಿಮಾ ನಾನೇ ಡೈರೆಕ್ಟ್ ಮಾಡ್ತೇನೆ ಅಂತ ಕತೆ ಬರೆದಾಗ ಮೊದಲು ಆ ಕತೆ ಓದಿ ಖುಷಿ ಪಟ್ಟಿದ್ದು ಅಕ್ಕ. ಕತೆ ಅಷ್ಟುಚೆನ್ನಾಗಿತ್ತು. ಅವರೇ ನಿರ್ದೇಶಿಸಲು ಅದನ್ನ ಬರೆದಿದ್ರು. ಸ್ಟಾರ್‌ ಸಿನಿಮಾ ಡೈರೆಕ್ಟ್ ಮಾಡುವ ಅವರು, ಒಬ್ಬ ಹೊಸಬನನ್ನು ಪರಿಚಯಿಸಲು ಹೊರಟಿದ್ದು ನನ್ನ ಅದೃಷ್ಟ.

click me!