ಶಿವಣ್ಣ ವಿರುದ್ಧ ಗರಂ ಆಗಿದ್ದಾರಾ ಪ್ರೇಮ್?

Published : Mar 21, 2018, 09:25 AM ISTUpdated : Apr 11, 2018, 12:51 PM IST
ಶಿವಣ್ಣ ವಿರುದ್ಧ ಗರಂ ಆಗಿದ್ದಾರಾ ಪ್ರೇಮ್?

ಸಾರಾಂಶ

ಪ್ರೇಮ್ ಏನು ಮಾಡಿದರೂ ಸುದ್ದಿ. ಏನು ಮಾಡದೇ ಇದ್ದರೂ ಸುದ್ದಿ. ಅವರ ಸಿನಿಮಾದಲ್ಲಿ ಕತೆಯಿಲ್ಲ ಅನ್ನುವುದರಿಂದ ಹಿಡಿದು ಅವರು ಬೇಕಂತಲೇ ಸಿನಿಮಾ ತಡಮಾಡುತ್ತಾರೆ ಅನ್ನುವ ತನಕ ಪ್ರೇಮ್ ಮೋಸ್ಟ್ ಮಿಸ್‌ ಅಂಡರ್‌ಸ್ಟುಡ್  ನಿರ್ದೇಶಕ. ದಿ ವಿಲನ್ ಚಿತ್ರಕ್ಕೆ ಸಂಬಂಧಿಸಿದಂತೆ  ಅವರನ್ನೇ ವಿಲನ್ ಮಾಡಹೊರಟವರಿಗೆ ಅವರಿಲ್ಲಿ ಉತ್ತರ ಕೊಟ್ಟಿದ್ದಾರೆ.

ಬೆಂಗಳೂರು (ಮಾ. 21): ಪ್ರೇಮ್ ಏನು ಮಾಡಿದರೂ ಸುದ್ದಿ. ಏನು ಮಾಡದೇ ಇದ್ದರೂ ಸುದ್ದಿ. ಅವರ ಸಿನಿಮಾದಲ್ಲಿ ಕತೆಯಿಲ್ಲ ಅನ್ನುವುದರಿಂದ ಹಿಡಿದು ಅವರು ಬೇಕಂತಲೇ ಸಿನಿಮಾ ತಡಮಾಡುತ್ತಾರೆ ಅನ್ನುವ ತನಕ ಪ್ರೇಮ್ ಮೋಸ್ಟ್ ಮಿಸ್‌ ಅಂಡರ್‌ಸ್ಟುಡ್  ನಿರ್ದೇಶಕ. ದಿ ವಿಲನ್ ಚಿತ್ರಕ್ಕೆ ಸಂಬಂಧಿಸಿದಂತೆ  ಅವರನ್ನೇ ವಿಲನ್ ಮಾಡಹೊರಟವರಿಗೆ ಅವರಿಲ್ಲಿ ಉತ್ತರ ಕೊಟ್ಟಿದ್ದಾರೆ.

ದಿ ವಿಲನ್ ಸಿನಿಮಾ ಶುರುವಾಗಿ ಎರಡು ವರ್ಷ ಆಯ್ತು. ಮುಗಿಯಲು ಇನ್ನೆಷ್ಟು ವರ್ಷ ಬೇಕು?
ಹೀಗೆ ಪ್ರಶ್ನೆ ಕೇಳೋದು ಸುಲಭ. ಫೀಲ್ಡ್‌ಗಿಳಿದು ಕೆಲಸ ಮಾಡಿದರೆ  ಗೊತ್ತಾಗುತ್ತದೆ. ಎಂಥ ಸಿನಿಮಾ ಮಾಡುತ್ತಿದ್ದೇನೆ, ಎಷ್ಟು ವರ್ಷ ಬೇಕಾಗುತ್ತದೆ, ದಿನಕ್ಕೆ ಎಷ್ಟು ಶೂಟಿಂಗ್ ಆಗುತ್ತದೆ ಎಂಬುದು. ಇರಲಿ, ಚಿತ್ರೀಕರಣ ಬಹುತೇಕ ಮುಗಿಯುವ ಹಂತದಲ್ಲಿದೆ. ಇನ್ನೂ 15 ರಿಂದ 20  ದಿನಗಳಲ್ಲಿ ಚಿತ್ರೀಕರಣ  ಮುಗಿಸುತ್ತೇನೆ. ಇಲ್ಲಿಯವರೆಗೂ ೧೩೦ ದಿನ ಚಿತ್ರೀಕರಣ ಮಾಡಿರುವೆ. ಹೀಗಾಗಿ ವರ್ಷಗಳು ಬೇಕಿಲ್ಲ. ಕೆಲವೇ ದಿನಗಳಲ್ಲಿ ‘ದಿ ವಿಲನ್’ ಚಿತ್ರದ ಚಿತ್ರೀಕರಣ ಮುಗಿಯಲಿದೆ.

ಇಪ್ಪತ್ತು ದಿನ ಅಂದರೆ ಇನ್ನೆಷ್ಟು ಚಿತ್ರೀಕರಣ ಬಾಕಿ ಉಂಟು?

ಎರಡು ಹಾಡು ಹಾಗೂ ಕ್ಲೈಮ್ಯಾಕ್ಸ್‌ನ ಒಂದೆರಡು ದೃಶ್ಯಗಳು ಮಾತ್ರ ಬಾಕಿ  ಇದೆ. ಇಲ್ಲಿಯವರೆಗೂ ನಡೆದ ಚಿತ್ರೀಕರಣ ತುಂಬಾ ಚೆನ್ನಾಗಿ ಬಂದಿದೆ. ಕ್ವಾಲಿಟಿ ವಿಚಾರದಲ್ಲಿ ನಾನು ಎಲ್ಲೂ ರಾಜಿ ಆಗಿಲ್ಲ.ಅದೆಲ್ಲ ಸರಿ, ನಿಮ್ಮ ಸಿನಿಮಾಗಳು

ತಡವಾಗುವುದಕ್ಕೆ  ಕಾರಣಗಳೇನು?
ಅದಕ್ಕೆ ಕಾರಣಗಳು ಬೇರೆ ಬೇರೆ. ಈ ವಿಚಾರದಲ್ಲಿ ನಿರ್ದೇಶಕನನ್ನು ದೂರುವುದು ಕಾಮನ್ ಆಗಿಬಿಟ್ಟಿದೆ. ‘ದಿ ವಿಲನ್’ ನಲ್ಲಿ ದೊಡ್ಡ ದೊಡ್ಡ ಸ್ಟಾರ್  ನಟರು ಇದ್ದಾರೆ. ಮುಖ್ಯವಾಗಿ ಡೇಟ್ಸ್ ಸಮಸ್ಯೆ ಎದುರಾಯಿತು. ಅದರಲ್ಲೂ  ನಾಯಕಿ ಆ್ಯಮಿ ಜಾಕ್ಸನ್‌'ಗೆ ವೀಸಾ ತೊಂದರೆಯೂ ಆಯಿತು. ಜತೆಗೆ ಬೇರೆ ಬೇರೆ ಕಾರಣಗಳಿಗೆ ಅವರು ಅಂದುಕೊಂಡ ಸಮಯಕ್ಕೆ ಶೂಟಿಂಗ್‌ಗೆ ಬರಲಿಲ್ಲ. ಹೀಗಾಗಿ ಎಲ್ಲರ ಡೇಟ್ಸ್ ಹೆಚ್ಚು ಕಮ್ಮಿ ಆಯಿತು. ಜತೆಗೆ ಶಿವಣ್ಣ ಬೇರೆ ಬೇರೆ ಚಿತ್ರಗಳ ಶೂಟಿಂಗ್‌ಗೆ ಹೋಗಿ ಬರುತ್ತಿದ್ದರು. ಗೆಟಪ್‌ಗಾಗಿ ಕಾಯಬೇಕಾಯಿತು. ಕೆಲವು ಕಡೆ ಚಿತ್ರೀಕರಣಕ್ಕೆ ಅನುಮತಿ ಸಿಗಲಿಲ್ಲ. ಸಿಕ್ಕ ಕಡೆ ಅಂದುಕೊಂಡ ಸಮಯಕ್ಕೆ ಮುಗಿಸಲಿಕ್ಕೆ ಆಗಲಿಲ್ಲ. ಇವುಗಳ ಹೊರತಾಗಿ ತಡವಾಗುವುದಕ್ಕೆ ಬೇರೆ ಕಾರಣಗಳೇ ಇಲ್ಲ.
 ಕತೆ ಪೂರ್ತಿ ಮಾಡಿಕೊಂಡಿಲ್ಲ, ಪ್ಲಾನ್ ಇಲ್ಲ ಎನ್ನುವ ಆರೋಪ ನಿಮ್ಮ ಮೇಲಿದೆಯಲ್ಲ?
ಕತೆ ಸಿದ್ಧತೆ ಮಾಡಿಕೊಳ್ಳದೆ ಶೂಟಿಂಗ್‌ಗೆ ಹೋಗುವಷ್ಟು ದಡ್ಡ ಅಲ್ಲ ನಾನು. ಇವೆಲ್ಲ ಸುಮ್ಮನೆ ಕಾಲೆಳೆಯೋರ ಮಾತುಗಳು ಅಷ್ಟೆ. ದೊಡ್ಡ ಸ್ಟಾರ್‌ಗಳ ಸಿನಿಮಾ ಎಂದ ಮೇಲೆ ಪ್ಲಾನ್ ಮಾಡಿಕೊಂಡರೂ ಏರುಪೇರು ಆಗುವುದು  ಸಹಜ. ಆದರೆ, ಪ್ಲಾನ್ ಅಂತೂ ಮಾಡಿಕೊಂಡಿದ್ದೆ. ಇನ್ನೂ ನಾನು ಏನೇ ಪ್ಲಾನ್ ಮಾಡಿದರೂ ಒಂದು ವರ್ಷ ಟೈಮ್ ತೆಗೆದುಕೊಂಡೇ ಸಿನಿಮಾ ಮಡುವುದು. 

ಒಂದು ಚಿತ್ರ ಮಾಡುವುದಕ್ಕೆ ಒಂದು ವರ್ಷ ಬೇಕಾ?
ನಾನು ಮಾಡುತ್ತಿರುವುದು ಕೇವಲ ಕನ್ನಡಿಗರ ಸಿನಿಮಾ ಅಲ್ಲ. ಕನ್ನಡ ನೆಲದಲ್ಲಿ  ನಿಂತು ಸೌತ್ ಇಂಡಿಯನ್ ಸಿನಿಮಾ ಮಾಡುತ್ತಿರುವೆ. ಪಕ್ಕದ ಭಾಷೆಯ ಸಿನಿಮಾಗಳು ಮಾರುಕಟ್ಟೆಯ ಗಡಿ ದಾಟುತ್ತಿವೆ. ಅವರು ಅವರ ಭಾಷೆಗಂತಲೇ ಸಿನಿಮಾ ಮಾಡುತ್ತಿಲ್ಲ. ನನ್ನದು ಅದೇ ದೃಷ್ಟಿ ಕೋನ. ಕನ್ನಡಿಗರ ಜತೆಗೆ ಪರಭಾಷೆಯವರು ತಿರುಗಿ ನೋಡುವಂತಹ ಸಿನಿಮಾ ಮಾಡಬೇಕು. ಸ್ಟಾರ್’ಗಳ ಸಂಗಮ, ತಾಂತ್ರಿಕತೆಯ ಅದ್ಧೂರಿತನ, ಕಲರ್‌ಫುಲ್ ಮೇಕಿಂಗ್... ಇವೆಲ್ಲದಕ್ಕೂ ಟೈಮ್ ಬೇಕಾಗುತ್ತದೆ. ಆ ಕಾರಣಕ್ಕೆ ನಾನು ಒಂದು ವರ್ಷದ ಶೆಡ್ಯೂಲ್ ಹಾಕಿಕೊಳ್ಳುತ್ತೇನೆ. ಹಣಕ್ಕಾಗಿ ವರ್ಷಕ್ಕೆ ಎರಡ್ಮೂರು ಸಿನಿಮಾ  ಮಾಡುವ ಅಗತ್ಯ ನನಗಿಲ್ಲ.

ಇಬ್ಬರು ಸ್ಟಾರ್‌ಗಳನ್ನು ಒಂದೇ ಚಿತ್ರದಲ್ಲಿ ನಿಭಾಯಿಸಿದ ಅನುಭವ ಹೇಗಿತ್ತು?
ನನಗೆ ಸುದೀಪ್ ಹಾಗೂ ಶಿವಣ್ಣ ಸ್ಟಾರ್ ನಟರು ಎನ್ನುವುದಕ್ಕಿಂತ ಫ್ರೆಂಡ್ಸ್. ನಾನು ಶಿವಣ್ಣ ಅವರ ಮನೆ ಮಗ. ಹೀಗಾಗಿ ಇಲ್ಲಿ ನಿಭಾಯಿಸುವ ಪ್ರಶ್ನೆ ಬರಲಿಲ್ಲ. ಶಿವಣ್ಣ ಸ್ಪಾಟ್ ಎನರ್ಜಿ. ಸುದೀಪ್ ಪಕ್ಕಾ ಶಿಸ್ತಿನ ಮನುಷ್ಯ. ಬೆಳಗ್ಗೆ  6 ಗಂಟೆಗೆ ಸೆಟ್‌ಗೆ 6 ಬಂದು ಕೂರುತ್ತಿದ್ದರು. ಬಂದ ಮೇಲೆ ಬೇರೆ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ನಿರ್ದೇಶಕನ ನಟ. ಹೀಗಾಗಿ ಎಲ್ಲರೂ ಗೆಳೆಯರಂತೆ ‘ದಿ ವಿಲನ್’ ಸಿನಿಮಾ ಮಾಡಿದ್ದೇವೆ.

ಆದರೆ, ಸಿನಿಮಾ ತಡವಾಗುತ್ತಿರುವುದಕ್ಕೆ ನಿಮ್ಮ ಮೇಲೆ ಶಿವಣ್ಣ ಸಿಟ್ಟಾಗಿದ್ದಾರೆ ಎನ್ನುವ ಮಾತಿದೆಯಲ್ಲ?
ಅದು ಬರೀ ಗಾಸಿಪ್. ಶಿವಣ್ಣ ಒಳಗೊಂದು, ಹೊರಗೊಂದು ಇಟ್ಟುಕೊಳ್ಳುವ ವ್ಯಕ್ತಿಯಲ್ಲ. ಹಾಗೇನಾದರೂ ಸಿಟ್ಟು, ಬೇಸರ ಇದ್ದಿದ್ದರೆ ನೇರವಾಗಿ ಹೇಳುತ್ತಿದ್ದರು. ಆದರೆ, ದೊಡ್ಡ ಸಿನಿಮಾ ಅಂತ ಅವರಿಗೂ ಗೊತ್ತು. ಹೀಗಾಗಿ ಶಿವಣ್ಣ ಗರಂ ಆಗಿದ್ದಾರೆ ಎನ್ನುವುದು ಆಗದಿರುವವರು ಹಬ್ಬಿಸುತ್ತಿರುವ ಸುದ್ದಿ. ಕಾಲೆಳೆಯುವವರಿಗೆ ನನ್ನ ಸಿನಿಮಾ ಉತ್ತರಿಸುತ್ತದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹೈ-ಬಿಪಿಯಿಂದ ಮದುವೆ ಮರುದಿನವೇ ಪ್ರಖ್ಯಾತ ಹಾಸ್ಯನಟನ ಎರಡೂ ಕಿಡ್ನಿ ಫೇಲ್‌, ತನ್ನ ಕಿಡ್ನಿ ನೀಡಿ ಜೀವ ಉಳಿಸಿದ್ದಳು ಪತ್ನಿ!
ಬಿಗ್ ಬಾಸ್ ಮನೆಗೆ ಪವರ್ ಕಟ್, ಕಗ್ಗಲತ್ತಲ್ಲಿ ಕಂಟೆಸ್ಟೆಂಟ್‌ಗಳು; BESCOM ಕಿತಾಪತಿ ಇರಬಹುದೇ?