Censor Cuts: ಧುರಂಧರ್ 2ಗೆ A ಸರ್ಟಿಫಿಕೇಟ್: 21 ಕಟ್ ಸೂಚಿಸಿದ ಸೆನ್ಸಾರ್ ಬೋರ್ಡ್, ಕಾರಣ ಏನು?

Published : Mar 18, 2026, 04:57 PM IST
dhurandhar 2

ಸಾರಾಂಶ

ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ. ಸೆನ್ಸಾರ್ ಬೋರ್ಡ್ ಈ ಚಿತ್ರಕ್ಕೆ 'A' ಸರ್ಟಿಫಿಕೇಟ್ ನೀಡಿದೆ. ಸಿನಿಮಾದಲ್ಲಿನ ಹಿಂಸಾಚಾರದ ದೃಶ್ಯಗಳಿಂದಾಗಿ ಬರೋಬ್ಬರಿ 21 ಕಟ್‌ಗಳನ್ನು ಸೂಚಿಸಿದ್ದು, ಒಂದು ನಿಮಿಷಕ್ಕೂ ಹೆಚ್ಚು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ.

ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಸಿನಿಮಾ 'ಧುರಂಧರ್'. ಹಂಸ ಪಾತ್ರದಲ್ಲಿ ರಣ್‌ವೀರ್ ಸಿಂಗ್ ಅಕ್ಷರಶಃ ಅಬ್ಬರಿಸಿದ್ದರು. ಈ ಸಿನಿಮಾ ಭಾರತ ಮಾತ್ರವಲ್ಲದೆ, ವಿದೇಶಗಳಲ್ಲೂ ದೊಡ್ಡ ಹಿಟ್ ಆಗಿತ್ತು. 1000 ಕೋಟಿ ಕ್ಲಬ್ ಸೇರಿದ ಈ ಸ್ಪೈ ಆಕ್ಷನ್ ಥ್ರಿಲ್ಲರ್, ಬಾಲಿವುಡ್‌ಗೆ ಹೊಸ ಹುರುಪು ನೀಡಿತ್ತು. ಮೊದಲ ಭಾಗದ ಯಶಸ್ಸಿನ ಬೆನ್ನಲ್ಲೇ ಈಗ 'ಧುರಂಧರ್ 2' ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಸಿನಿಮಾ ಮಾರ್ಚ್ 19, ಅಂದರೆ ನಾಳೆಯೇ ಥಿಯೇಟರ್‌ಗೆ ಎಂಟ್ರಿ ಕೊಡಲಿದೆ. ಈ ಹೊತ್ತಲ್ಲೇ, ಚಿತ್ರದ ಸೆನ್ಸಾರ್ ವಿವರಗಳು ಹೊರಬಿದ್ದಿವೆ.

ಈ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ 'A' ಸರ್ಟಿಫಿಕೇಟ್ ನೀಡಿದೆ. ಅಷ್ಟೇ ಅಲ್ಲ, ಬರೋಬ್ಬರಿ 21 ಕಡೆ ಕತ್ತರಿ ಪ್ರಯೋಗ ಮಾಡಲು ಸೂಚಿಸಿದೆ. ಸಿನಿಮಾದಲ್ಲಿ ಹಿಂಸೆಯ ದೃಶ್ಯಗಳು ಹೆಚ್ಚಾಗಿದ್ದರಿಂದ, ಅವುಗಳನ್ನು ತೆಗೆದುಹಾಕಲು ಬೋರ್ಡ್ ನಿರ್ದೇಶನ ನೀಡಿದೆ. ಒಟ್ಟಾರೆಯಾಗಿ 1 ನಿಮಿಷ 34 ಸೆಕೆಂಡುಗಳ ದೃಶ್ಯಗಳನ್ನು 'ಧುರಂಧರ್ 2' ಸಿನಿಮಾದಿಂದ ಕತ್ತರಿಸಿ ತೆಗೆಯಲಾಗಿದೆ. ಸಿನಿಮಾ ಆರಂಭಕ್ಕೂ ಮುನ್ನ 'ಮನಸ್ಸಿಗೆ ಅಘಾತ ಉಂಟುಮಾಡುವ ದೃಶ್ಯಗಳಿವೆ' ಎಂಬ ಎಚ್ಚರಿಕೆಯ ಸಂದೇಶವನ್ನು ಪ್ರದರ್ಶಿಸಲು ಸಹ ಸೂಚಿಸಲಾಗಿದೆ. ಅಶ್ಲೀಲ ಪದಗಳನ್ನು ಮ್ಯೂಟ್ ಮಾಡಲು ಮತ್ತು ಕೆಲವು ಪದಗಳನ್ನು ಬದಲಾಯಿಸಲು ಸೆನ್ಸಾರ್ ಬೋರ್ಡ್ ಹೇಳಿದೆ.

ತಲೆ ಕಡಿಯುವುದು, ಸುತ್ತಿಗೆ ಮತ್ತು ಸಿಮೆಂಟ್ ಇಟ್ಟಿಗೆಯಿಂದ ದಾಳಿ ಮಾಡುವುದು, ಕಣ್ಣಿಗೆ ಹೊಡೆಯುವಂತಹ ಕ್ರೂರ ಹಿಂಸೆಯ ದೃಶ್ಯಗಳನ್ನು ತೆಗೆದುಹಾಕಲು ನಿರ್ದೇಶನ ನೀಡಲಾಗಿದೆ. ಸಬ್‌ಟೈಟಲ್‌ನಲ್ಲಿ ನೋಟು ಅಮಾನ್ಯೀಕರಣದ ದಿನಾಂಕವನ್ನು ಬದಲಾಯಿಸಬೇಕು ಮತ್ತು ಪ್ರಧಾನ ಮಂತ್ರಿಯವರ ಉಲ್ಲೇಖ ಹಾಗೂ ದೃಶ್ಯಗಳನ್ನು ಬಳಸಲು ಅನುಮತಿ ಪತ್ರವನ್ನು ನೀಡಬೇಕು ಎಂದು ಸೆನ್ಸಾರ್ ಬೋರ್ಡ್ ಕೇಳಿತ್ತು. ಈ ಎಲ್ಲಾ ಬದಲಾವಣೆಗಳ ನಂತರ 'ಧುರಂಧರ್ 2' ಸಿನಿಮಾದ ಅಂತಿಮ ಅವಧಿ 3 ಗಂಟೆ 49 ನಿಮಿಷ 36 ಸೆಕೆಂಡುಗಳು. ಆದರೆ, ವಿದೇಶಿ ವರ್ಷನ್‌ನ ಅವಧಿ 3 ಗಂಟೆ 56 ನಿಮಿಷ ಇದೆ.
 

 

ಅದ್ಭುತ ಪ್ರತಿಕ್ರಿಯೆ

ಶನಿವಾರದಿಂದ 'ಧುರಂಧರ್ 2' ಸಿನಿಮಾದ ಬುಕ್ಕಿಂಗ್ ಆರಂಭವಾಗಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವೇ ಈ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಟ್ರೇಡ್ ವಿಶ್ಲೇಷಕರು ಅಂದಾಜಿಸಿದ್ದಾರೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣ್‌ವೀರ್ ಸಿಂಗ್ ಜೊತೆಗೆ ಅರ್ಜುನ್ ರಾಂಪಾಲ್, ಸಂಜಯ್ ದತ್, ಮಾಧವನ್, ಅಕ್ಷಯ್ ಖನ್ನಾ, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಧುರಂಧರ್' ಮೊದಲ ಭಾಗ ವಿಶ್ವಾದ್ಯಂತ 1,005.91 ಕೋಟಿ ರೂಪಾಯಿ ಗಳಿಸಿತ್ತು ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೆಡಿ ಹಾಡಿನ ವಿವಾದ; ನಿರ್ದೇಶಕ ಪ್ರೇಮ್‌ ಹಾಗೂ ಸಿನಿಮಾ ಟೀಮ್‌ ವಿರುದ್ಧ ಕೆಂಡಕಾರಿದ ನೋರಾ ಫತೇಹಿ!
ಜ್ಯೂಬಿಲಿ ಹಿಲ್ಸ್‌ನಲ್ಲಿ ಮಹಾ ರಾಜವೈಭವ; ನಟ ರಾಮ್ ಚರಣ್ 30 ಕೋಟಿ ರೂಪಾಯಿ ಅರಮನೆ ಹೇಗಿದೆ ನೋಡಿ!