
ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ಬಿಡುಗಡೆಯಾದ ಏಳೇ ದಿನಗಳಲ್ಲಿ 1000 ಕೋಟಿ ಕ್ಲಬ್ ಸೇರಿದೆ. ವಿಶ್ವಾದ್ಯಂತ ಒಟ್ಟು 1006 ಕೋಟಿ ರು.ಗಳಷ್ಟು ಗಳಿಕೆ ಮಾಡಿದೆ. ಕಡಿಮೆ ಅವಧಿಯಲ್ಲಿ ಈ ರೆಕಾರ್ಡ್ ಮಾಡಿದ ಎರಡನೇ ಭಾರತೀಯ ಚಿತ್ರವಾಗಿ ಗುರುತಿಸಿಕೊಂಡಿದೆ. ಆರು ದಿನಗಳಲ್ಲಿ 1000 ಕೋಟಿ ರು.ಗಳ ಗಡಿ ದಾಟಿದ್ದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪಾ 2’ ಮೊದಲ ಸ್ಥಾನದಲ್ಲಿದೆ.
ಎಸ್.ಎಸ್. ರಾಜಮೌಳಿ ಅವರ ‘ಬಾಹುಬಲಿ 2’ ಸಿನಿಮಾ 9 ದಿನಗಳಲ್ಲಿ 1000 ಕೋಟಿಗಳ ಗಡಿ ದಾಟಿದ್ದು, ಮೂರನೇ ಸ್ಥಾನದಲ್ಲಿದೆ. ‘ಆರ್‌ಆರ್‌ಆರ್’, ‘ಕೆಜಿಎಫ್ 2’, ‘ಕಲ್ಕಿ 2898 ಎಡಿ’ ಸಿನಿಮಾಗಳ ದಾಖಲೆಗಳನ್ನು ‘ಧುರಂಧರ್ 2’ ಸಲೀಸಾಗಿ ಮುರಿದುಹಾಕಿದೆ. ಈ ವರ್ಷ ಬಿಡುಗಡೆಯಾದ ಚಿತ್ರಗಳಲ್ಲಿ 1000 ಕೋಟಿಗಳ ಗಡಿ ದಾಟಿದ ಮೊದಲ ಸಿನಿಮಾವಾಗಿಯೂ ಗುರುತಿಸಿಕೊಂಡಿದೆ. ‘ಧುರಂಧರ್’ ಸಿನಿಮಾದ ಮೊದಲ ಭಾಗ ದಾಖಲೆಯ 1300 ಕೋಟಿ ರು. ಕಲೆಕ್ಷನ್ ಮಾಡಿತ್ತು.
ಶಿವಣ್ಣಗೆ ಥ್ಯಾಂಕ್ಸ್ ಹೇಳಿದ ಆದಿತ್ಯ ಧರ್
‘ಧುರಂಧರ್ 2’ ಸಿನಿಮಾ ನೋಡಿ ಹಾಡಿ ಹೊಗಳಿದ್ದ ಶಿವರಾಜ್ ಕುಮಾರ್ ಅವರಿಗೆ ನಿರ್ದೇಶಕ ಆದಿತ್ಯ ಧರ್ ಖುಷಿಯಿಂದ ಥ್ಯಾಂಕ್ಸ್ ಹೇಳಿದ್ದಾರೆ. ‘ನಿಮ್ಮ ಈ ಪ್ರೋತ್ಸಾಹದ ನುಡಿಗಳು ಪ್ರಾಮಾಣಿಕ ಮತ್ತು ಗಟ್ಟಿ ಕಥೆ ಹೇಳಹೊರಟಿರುವ ನಮಗೆ ದೊಡ್ಡ ಶಕ್ತಿ’ ಎಂದಿದ್ದಾರೆ.
ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಚಿತ್ರವು ಎರಡನೇ ಗುರುವಾರ (8ನೇ ದಿನ) ಸುಮಾರು 49.70 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಆರಂಭಿಕ ಪ್ರಿವ್ಯೂ ಶೋಗಳ ಮೂಲಕವೇ 43 ಕೋಟಿ ಬಾಚಿದ್ದ ಈ ಚಿತ್ರ, ಅಧಿಕೃತವಾಗಿ ಬಿಡುಗಡೆಯಾದ ಮೊದಲ ದಿನ (ಮಾರ್ಚ್ 19) 102.55 ಕೋಟಿ ಗಳಿಸಿ ಭರ್ಜರಿ ಓಪನಿಂಗ್ ಪಡೆದಿತ್ತು. ವಾರಾಂತ್ಯದಲ್ಲಂತೂ ಶನಿವಾರ 113 ಕೋಟಿ ಹಾಗೂ ಭಾನುವಾರ 114.85 ಕೋಟಿ ರೂಪಾಯಿಗಳನ್ನು ಲೂಟಿ ಮಾಡುವ ಮೂಲಕ ಬಾಕ್ಸ್ ಆಫೀಸ್ ಸುಲ್ತಾನ ಎನಿಸಿಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.