
ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿಗೆ ದೆಹಲಿ ಹೈಕೋರ್ಟ್‌ನಲ್ಲಿ ಭಾರೀ ಹಿನ್ನಡೆ ಆಗಿದೆ.
ಖ್ಯಾತ ನಿರ್ದೇಶಕ ಅಭಿ ಅಭಿನಯ್ ದೇವ್ ಅವರು 'ದೂಸ್ರಾ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಇದಾಗಿದೆ. ಈ ಸಿನಿಮಾ ನಾಳೆ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಕೋರಿ ಗಂಗೂಲಿ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ್ದ ಕೋರ್ಟ್ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದೆ. ಜೊತೆಗೆ ಗಂಗೂಲಿ ಅವರ ಅರ್ಜಿ ವಿಚಾರಣೆ ನಡೆಸಲು ಒಪ್ಪಿಕೊಂಡಿದ್ದು, ವಿಚಾರಣೆಯನ್ನೂ ನಾಳೆಗೆ ಮುಂದೂಡಿದೆ. ಇತ್ತ ದೂಸ್ರಾ ಸಿನಿಮಾ ಎಂದಿನಂತೆ ನಾಳೆ ತೆರೆಗೆ ಬರಲಿದೆ.
ಚಿತ್ರದಲ್ಲಿ 2022ರ ನ್ಯಾಟ್‌ವೆಸ್ಟ್ ಸರಣಿಯ ಫೈನಲ್ ಪಂದ್ಯ ಮತ್ತು ಲಾರ್ಡ್ಸ್‌ನಲ್ಲಿ ನಡೆದ ಶರ್ಟ್ ಡೌನ್ ಆಚರಣೆಯ ಘಟನೆಯನ್ನು ಬಳಸಿಕೊಳ್ಳಲಾಗಿದೆ. ಆ ಮೂಲಕ ಚಿತ್ರತಂಡವು ತಮ್ಮ ವಾಣಿಜ್ಯ ಮತ್ತು ವ್ಯಕ್ತಿತ್ವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿ ಗಂಗೂಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಹೈಕೋರ್ಟ್‌ನಲ್ಲಿ ಚಿತ್ರವನ್ನು ಪ್ರಶ್ನೆ ಮಾಡಿರುವ ಗಂಗೂಲಿ.. ಅಂತಹ ಅನಧಿಕೃತ ಬಳಕೆಯು ವ್ಯಕ್ತಿತ್ವ ಮತ್ತು ವಾಣಿಜ್ಯ ಹಕ್ಕುಗಳ ನೇರ ಉಲ್ಲಂಘನೆ. 2002 ರ ಐತಿಹಾಸಿಕ ನ್ಯಾಟ್‌ವೆಸ್ಟ್ ಸರಣಿಯ ಫೈನಲ್ ಮತ್ತು ಲಾರ್ಡ್ಸ್ ಬಾಲ್ಕನಿಯಲ್ಲಿ ಅವರ ಕುಖ್ಯಾತ ಶರ್ಟ್‌ಲೆಸ್ ಆಚರಣೆಯನ್ನು ನಿರ್ದಿಷ್ಟವಾಗಿ ಚಿತ್ರದಲ್ಲಿ ಉಲ್ಲೇಖಿಸಿದ್ದಾರೆ. ಚಿತ್ರತಂಡದ ಈ ಕ್ರಮ ಸರಿ ಇಲ್ಲ ಎಂದು ಗಂಗೂಲಿ ತಮ್ಮ ಅರ್ಜಿಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
2002ರ ನ್ಯಾಟ್‌ವೆಸ್ಟ್ ಸರಣಿಯ ಫೈನಲ್ ಪಂದ್ಯ ಮತ್ತು ಲಾರ್ಡ್ಸ್ ಗ್ಯಾಲರಿ ಸೆಲೆಬ್ರೇಷನ್ ಗಂಗೂಲಿ ಮನಸ್ಸಿನಲ್ಲಿ ಇಂದಿಗೂ ಅಚ್ಚ ಹಸಿರಾಗಿ ಉಳಿದಿದೆ. ಇಂಗ್ಲೆಂಡ್ ವಿರುದ್ಧದ ಆ ಕಠಿಣ ಚೇಸ್‌ನಲ್ಲಿ ಭಾರತದ ಗೆಲುವು ಮತ್ತು ನಂತರದ ಗಂಗೂಲಿಯ ಆಕ್ರಮಣಕಾರಿ ಮತ್ತು ಐತಿಹಾಸಿಕ ಆಚರಣೆಯು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸದಾ ಕಾಲ ನೆನಪಿಟ್ಟುಕೊಳ್ಳುವ ದಿನವಾಗಿದೆ. ಹೀಗಾಗಿ ತಮ್ಮ ಅನುಮತಿ ಇಲ್ಲದೇ ಸಿನಿಮಾಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವುದನ್ನ ತಾವು ಒಪ್ಪುವುದಿಲ್ಲ ಅನ್ನೋದು ಗಂಗೂಲಿ ವಾದವಾಗಿದೆ. ತಮ್ಮ ವ್ಯಕ್ತಿತ್ವ ಮತ್ತು ಜೀವನವನ್ನು ಒಳಗೊಂಡ ಇಂತಹ ಅನಧಿಕೃತ ವಾಣಿಜ್ಯ ಚಟುವಟಿಕೆಗಳ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ಗಂಗೂಲಿ ವಾದಿಸಿದ್ದಾರೆ. ಸಿನಿಮಾ ರಿಲೀಸ್‌ಗೆ ನಿರಾಕರಿಸಿರುವ ಕೋರ್ಟ್, ವಿಚಾರಣೆಯನ್ನು ಶುಕ್ರವಾರ ಮತ್ತೆ ಎತ್ತಿಕೊಳ್ಳಲಿದೆ,. ಚಿತ್ರ ತಂಡದ ವಿರುದ್ಧ ಗಂಗೂಲಿ ನಡೆಸ್ತಿರುವ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತ ಇದೆ ಎನ್ನಲಾಗಿದೆ.
ಇನ್ನು ನಾಳೆ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ಪ್ಲಬಿತಾ ಬೋರ್ಥಾಕುರ್, ಅಂಕುರ್ ವಿಕಾಲ್, ಕೃಷ್ಣಾ ಗೋಕಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 1920ರ ಕ್ರಿಕೆಟ್ ಇತಿಹಾಸವನ್ನು ಆಧರಿಸಿದ.. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಹೋರಾಟದ ಕಥೆಯನ್ನು ಒಳಗೊಂಡಿರುವ 78 ನಿಮಿಷಗಳ ಚಲನಚಿತ್ರ ಇದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.