
ದರ್ಶನ್ ‘ಒಡೆಯರ್’ ಹೆಸರಿನಲ್ಲಿ ಸಿನಿಮಾ ಮಾಡಲಿದ್ದಾರೆ. ಇದಕ್ಕೆ ಸಂದೇಶ್ ನಾಗರಾಜ್ ನಿರ್ಮಾಪಕರು ಎಂಬುದು ಹಳೆಯ ಸಮಾಚಾರ. ಆದರೆ, ಸದ್ದಿಲ್ಲದೆ ಈ ಹೆಸರಿನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ.
‘ಒಡೆಯರ್’ ಜಾಗದಲ್ಲಿ ‘ಒಡೆಯ’ ಸೇರಿಕೊಂಡಿದೆ. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಎಂಡಿ ಶ್ರೀಧರ್. ಹೆಸರಿನ ಜತೆಗೆ ಕತೆಯೂ ಬದಲಾಗಿದೆ. ಈಗಾಗಲೇ ದರ್ಶನ್ ಮತ್ತು ಶ್ರೀಧರ್ ಕಾಂಬಿನೇಷನ್‌ನಲ್ಲಿ ಹಿಟ್ ಸಿನಿಮಾ ಬಂದಿದೆ. ಆ ಕಾರಣಕ್ಕೆ ಸಂದೇಶ್ ನಾಗರಾಜ್ ಮತ್ತೊಮ್ಮೆ ಅದೇ ಕಾಂಬಿನೇಷನ್ ಅನ್ನು ‘ಒಡೆಯ’ನಿಗೆ ಜತೆಯಾಗಿಸಿದ್ದಾರೆ.
ಇಷ್ಟಕ್ಕೂ ‘ಒಡೆಯರ್’ ಜಾಗದಲ್ಲಿ ‘ಒಡೆಯ’ ಸೇರಿಕೊಂಡಿದ್ದು ಯಾಕೆ ಎನ್ನುವ ಹಿನ್ನೆಲೆ ಕೆದಕಿದರೆ ಕೆಲ ಸಂಘಟನೆಗಳು ‘ಒಡೆಯರ್ ಎನ್ನುವುದು ಮೈಸೂರು ಮಹಾರಾಜರ ಹೆಸರು. ಹೀಗಾಗಿ ಅವರ ಹೆಸರನ್ನು ದುರುಪಯೋಗ ಮಾಡಿಕೊಳ್ಳಬಾರದು’ ಎಂದು ಹೆಸರಿಗೆ ವಿರೋಧ ವ್ಯಕ್ತಪಡಿಸಿದಾಗ ವಿವಾದ ಮಾಡಿಕೊಳ್ಳುವುದು ಯಾಕೆಂದು ನಿರ್ಮಾಪಕರು ಹೆಸರು ಬದಲಾಯಿಸಿಕೊಂಡಿದ್ದಾರೆ.
ಮುಹೂರ್ತ ಆಹ್ವಾನ ಪತ್ರಿಕೆ ಕೂಡ ಸಿದ್ಧವಾಗಿದೆ. ಆದರೆ ‘ಒಡೆಯ’ ಎನ್ನುವ ಹೆಸರು ಅಂತಿಮಗೊಳ್ಳುವುದು ಕೂಡ ಡೌಟು ಎನ್ನುವುದು ನಿರ್ದೇಶಕರು ಕೊಡುವ ವಿವರಣೆ. ‘ಒಡೆಯ ಹೆಸರು ಬದಲಾದರೂ ಆಗಬಹುದು. ಯಾಕೆಂದರೆ ಒಡೆಯರ್ ಎನ್ನುವ ಹೆಸರಿಗೆ ತಮ್ಮದೇನು ಅಭ್ಯಂತರವಿಲ್ಲ ಎಂದು ರಾಜಮಾತೆ ಪ್ರಮೋದದೇವಿ ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ಹೀಗಾಗಿ ಒಡೆಯ ಟೈಟಲ್ ಅಂತಿಮವಲ್ಲ. ಅಲ್ಲದೆ ಮಾಸ್ ಹೀರೋಗೆ ಬೇಕಾದ ಕಿಕ್ ಒಡೆಯರ್ ಹೆಸರಿನಲ್ಲಿದೆ.
ಈ ಕಾರಣಕ್ಕೆ ಕೊನೆಯ ಕ್ಷಣದಲ್ಲೂ ಒಡೆಯ ಹೆಸರಿಗಿಂತ ಒಡೆಯರ್ ಆದರೂ ಅಚ್ಚರಿ ಇಲ್ಲ. ಆದರೆ, ವಿವಾದ, ಗಲಾಟೆ ಯಾಕೆ ಅಂತ ನಿರ್ಮಾಪಕರೇ ಹೆಸರು ಬದಲಾಯಿಸಿಕೊಂಡಿದ್ದರು. ಅವರನ್ನೂ ಕನ್ವಿನ್ಸ್ ಮಾಡುವ ಅಗತ್ಯವಿದೆ’ ಎಂಬುದು ಎಂಡಿ ಶ್ರೀಧರ್ ಮಾತು. ಆಗಸ್ಟ್ 16 ರಂದು ಮುಹೂರ್ತ: ಆಗಸ್ಟ್ 16 ಕ್ಕೆ ಮೈಸೂರಿನಲ್ಲಿ ‘ಒಡೆಯ’ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ನಡೆಯಲಿದೆ.
ಕಳೆದ ಬಾರಿ ಹುಟ್ಟುಹಬ್ಬಕ್ಕೆ ‘ಯಜಮಾನ’ಕ್ಕೆ ಚಾಲನೆ ಕೊಟ್ಟಿದ್ದ ದರ್ಶನ್, ಈ ಹುಟ್ಟುಹಬ್ಬಕ್ಕೆ ಹೊಸ ಚಿತ್ರಕ್ಕೆ ಚಾಲನೆ ಕೊಡಲಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳಿಗೆ ಈ ವರ್ಷವೂ ಡಬಲ್ ಕಿಕ್. ಈ ಸಂಭ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅಂಬರೀಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ನಿರ್ದೇಶಕ ಎಂಡಿ ಶ್ರೀಧರ್ ಸಂಗೀತಕ್ಕೆ ವಿ ಹರಿಕೃಷ್ಣ, ಕ್ಯಾಮೆರಾ ಕಣ್ಣಿಗೆ ಕೃಷ್ಣ ಕುಮಾರ್, ಕಲಾ ನಿರ್ದೇಶನಕ್ಕೆ ರವಿ ಸಂತೆಹಕ್ಲು ಅವರನ್ನೊಳಗೊಂಡ ತಂಡವನ್ನು ಕಟ್ಟಿಕೊಂಡು ಪೇಪರ್ ವರ್ಕ್ ನಡೆಸಿಕೊಳ್ಳುತ್ತಿದ್ದಾರೆ. ತಮಿಳಿನಲ್ಲಿ ಅಜಿತ್ ಅವರಿಗೆ ದೊಡ್ಡ ಮಟ್ಟದಲ್ಲಿ ಹಿಟ್ ಕೊಟ್ಟ ‘ವೀರಂ’ ಕನ್ನಡದಲ್ಲೂ ಅದೇ ಯಶಸ್ಸು ತಂದುಕೊಡಬೇಕೆಂಬ ಹುರುಪಿನಲ್ಲಿ ಎಂಡಿ ಶ್ರೀಧರ್ ತಂಡ ಕೆಲಸ ಮಾಡುತ್ತಿದೆ. ಸೆಪ್ಟೆಂಬರ್ ತಿಂಗಳಿನಿಂದ ಚಿತ್ರೀಕರಣ ನಡೆಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.