
ಬೆಂಗಳೂರು(ಜೂ.05): ಸಂಭಾವನೆ ವಿಚಾರದಲ್ಲಿ ಯಾವಾಗಲೂ ಪಕ್ಕದ ಭಾಷೆಯ ಸ್ಟಾರ್‌ಗಳೇ ಹೆಚ್ಚು ಸುದ್ದಿ ಮಾಡುತ್ತಾರೆ. ಆದರೆ, ಇದೇ ವಿಚಾರಕ್ಕೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುದ್ದಿಯಾಗುತ್ತಿದ್ದಾರೆ. ಇನ್ನೂ ಸೆಟ್ಟೇರದ, ಪ್ರೀಪ್ರೊಡಕ್ಷನ್ ಹಂತದಲ್ಲಿರುವ ‘ಕುರುಕ್ಷೇತ್ರ' ಚಿತ್ರಕ್ಕೆ ದರ್ಶನ್ ಪಡೆಯಲಿರುವ ಸಂಭಾವನೆ ಬರೋಬ್ಬರಿ 10 ಕೋಟಿ ರುಪಾಯಿ ಎನ್ನುತ್ತಿದೆ ಗಾಂಧಿನಗರ. ಹೌದು, ಈ ಚಿತ್ರದಲ್ಲಿ ದರ್ಶನ್ ದುರ್ಯೋಧನ ಪಾತ್ರದಲ್ಲಿ ನಟಿಸಲಿರುವುದು ಎಲ್ಲರಿಗೂ ಗೊತ್ತಿದೆ. ನಾಗಣ್ಣ ನಿರ್ದೇಶನದ, ಮುನಿರತ್ನ ನಿರ್ಮಾಣದ ಈ ಬಹುಕೋಟಿ ವೆಚ್ಚದ ‘ಕುರುಕ್ಷೇತ್ರ' ಚಿತ್ರದಿಂದ ದರ್ಶನ್ ಬಹು ಕೋಟೆ ಸಂಭಾವನೆ ಪಡೆಯಲಿದ್ದಾರೆಂಬ ಮಾತುಕತೆ ನಡೆದಿರುವ ಸದ್ಯದ ಹಾಟ್ ಟಾಪಿಕ್.
ಹಾಗಾದರೆ ಮುನಿರತ್ನ ಅವರು ಚಿತ್ರದ ಕೇವಲ ಒಂದು ಪಾತ್ರಕ್ಕೆ ಇಷ್ಟುಮೊತ್ತ ಕೊಡಲಿದ್ದಾರೆಯೇ? ಗೊತ್ತಿಲ್ಲ. ಆದರೆ, ದರ್ಶನ್ ಅವರ ಪಾತ್ರಕ್ಕೆ 10 ಕೋಟಿ ಸಂಭಾವನೆ ಎಂಬುದು ಮಾತ್ರ ಜೋರಾಗಿ ಸುದ್ದಿಯಾಗುತ್ತಿದೆ. ಈ ನಡುವೆ ಇದೇ ಚಿತ್ರದಲ್ಲಿ ದರ್ಶನ್, ದ್ವಿ ಪಾತ್ರ ಮಾಡಲಿದ್ದಾರೆಂಬ ಸುದ್ದಿಯೂ ಇದೆ. ಅಂದರೆ ‘ಕುರುಕ್ಷೇತ್ರ' ಚಿತ್ರದ ಕತೆ ಕರ್ಣನ ಮೇಲೆ ಹೆಚ್ಚು ನಿಂತಿದೆ. ಇದು ಬಹು ಮುಖ್ಯ ಪಾತ್ರ. ಈ ಪಾತ್ರಕ್ಕೆ ಯಾರ ಹೆಸರು ಕೇಳಿ ಬಂದಿಲ್ಲ. ಹೀಗಾಗಿ ದುರ್ಯೋಧನ ಹಾಗೂ ಕರ್ಣ ಎರಡೂ ಪಾತ್ರಗಳನ್ನು ದರ್ಶನ್ ಅವರೇ ಮಾಡಲಿದ್ದು, ಎರಡು ಪಾತ್ರ ಎನ್ನುವ ಕಾರಣಕ್ಕೆ 10 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎನ್ನುವುದು ಕೇಳಿಬರುತ್ತಿರುವ ಮತ್ತೊಂದು ವರ್ತಮಾನ.
ವರದಿ: ಕನ್ನಡಪ್ರಭ, ಸಿನಿವಾರ್ತೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.