ಕನ್ನಡ ಚಿತ್ರ ನಿರ್ಮಾಪಕರಾಗಲಿದ್ದಾರೆ ಸೆಹ್ವಾಗ್!

By Web DeskFirst Published Jul 25, 2018, 9:43 AM IST
Highlights

"ನನಗೆ ಕನ್ನಡ ಭಾಷೆಯ ಬಗ್ಗೆ ಗೊತ್ತಿದೆ, ಆದ್ರೆ ಮಾತನಾಡುವುದು ಕಷ್ಟ. ಇಂಡಿಯಾ ಟೀಮ್‌ಗೆ ಸೇರಿದ ದಿನಗಳಿಂದಲೇ ದ್ರಾವಿಡ್, ಕುಂಬ್ಳೆ ಪರಿಚಿತವಾದರು. ಆಗಾಗ ಅವರು ಕನ್ನಡ ಮಾತನಾಡುತ್ತಿದ್ದರು. ಅವರ ಸಂಭಾಷಣೆ ಕೇಳಿದಾಗ ಕನ್ನಡದ ಬಗ್ಗೆ ತಿಳಿಯುತ್ತಿತ್ತು. ಅಲ್ಲಿಂದ ಬೆಂಗಳೂರು ನಂಟು ಬೆಳೆಯಿತು" ಎಂದು ಹೆಮ್ಮೆಯಿಂದ ಹೇಳುತ್ತಾರೆ ಸೆಹ್ವಾಗ್.  

ಬೆಂಗಳೂರು (ಜು. 25): ಭವಿಷ್ಯವನ್ನು ಬಲ್ಲವರಾರು? ಮುಂದೊಮ್ಮೆ  ನಾನೂ ಕೂಡ ಕನ್ನಡ ಸಿನಿಮಾವೊಂದರ ನಿರ್ಮಾಪಕ ಆಗಬಹುದು. - ಈ ಮಾತು ಹೇಳಿದ್ದು ವೀರೇಂದ್ರ ಸೆಹ್ವಾಗ್.

ಅದು ಕೆಸಿಸಿ(ಕನ್ನಡ ಚಲನಚಿತ್ರ ಕ್ರಿಕೆಟ್ ಕಪ್)ಆಟಗಾರರ ಆಯ್ಕೆ ಸಂದರ್ಭ. ವೀರೇಂದ್ರ ಸೆಹ್ವಾಗ್ ಕೆಸಿಸಿ ಕಪ್ ಸೀಸನ್ 2 ರಲ್ಲಿ ಆಡುತ್ತಿರುವ ಆರು ಮಂದಿ  ಅಂತಾರಾಷ್ಟ್ರೀಯ ಆಟಗಾರರಲ್ಲಿ ಒಬ್ಬರು. ಕೆಸಿಸಿ ಆಟಗಾರರ ಆಯ್ಕೆ ಸಮಾರಂಭದಲ್ಲಿ ಭಾಗವಹಿಸಿದ್ದ ಸೆಹ್ವಾಗ್, ಕನ್ನಡದ ನಂಟು- ಕನ್ನಡ ಸಿನಿಮಾ ಬಗ್ಗೆ ಮಾತನಾಡಿದರು.

‘ಇದು ನನ್ನೂರು. ಚಿನ್ನಸ್ವಾಮಿ  ಸ್ಟೇಡಿಯಂಗಿಳಿದು ಬ್ಯಾಟ್ ಹಿಡಿದ್ರೆ  ಫೋರ್, ಸಿಕ್ಸ್ ಸುರಿಮಳೆ ಆಗುತ್ತೆ. ಇದು ಸೆಹ್ವಾಗ್ ಕೋಟೆ ಕಣೋ’ ಎಂದು ಕೆಂಪೇಗೌಡ ಚಿತ್ರದ ಆರ್ಮುಗಂ ಡೈಲಾಗ್ ಶೈಲಿಯಲ್ಲಿ ಸೆಹ್ವಾಗ್  ಹೇಳಿದಾಗ, ಅಲ್ಲಿದವರಿಂದ ಬಾರೀ ಹರ್ಷೋದ್ಗಾರ, ಕರತಾಡನ ಕೇಳಿಬಂತು. ಅಲ್ಲಿಂದ ಸೆಹ್ವಾಗ್ ಮಾತು  ಸಿನಿಮಾ ಮತ್ತು ಕ್ರಿಕೆಟ್ ಬದುಕಿನ ನಂಟಿನ ಕಡೆ ಹೊರಳಿತು.

- ನನ್ನ ಮಕ್ಕಳಿಗೆ ಸೌತ್ ಸಿನಿಮಾಗಳೆಂದ್ರೆ ತುಂಬಾ ಇಷ್ಟ. ಇಲ್ಲಿನ ಸಿನಿಮಾಗಳಲ್ಲಿ ಆ್ಯಕ್ಷನ್, ಸ್ಟಂಟ್ ಹೆಚ್ಚಿರುತ್ತೆ ಅನ್ನೋದು ಅವರ ವಾದ. ಆಗಾಗ ಅವರೊಂದಿಗೆ ಇಲ್ಲಿನ ಸಿನಿಮಾ ನೋಡುವ ಅಭ್ಯಾಸವಿದೆ. ಕನ್ನಡ ಸಿನಿಮಾ ಇನ್ನೂ ನೋಡಿಲ್ಲ. ಆದರೆ ಸುದೀಪ್ ಅಭಿನಯದ ತೆಲುಗಿನ ‘ಈಗ’ ಚಿತ್ರದ ಹಿಂದಿ ವರ್ಷನ್ ‘ಮಕ್ಕಿ’ ನೋಡಿದ್ದೇನೆ. ಅವರೊಬ್ಬ ಸೂಪರ್  ಸ್ಟಾರ್ ಅಂತ ಗೊತ್ತಾಗಿದ್ದೇ ಆಗ. ಅಲ್ಲಿಂದಲೇ ನಮ್ಮಿಬ್ಬರ ಪರಿಚಯವಾಗಿತ್ತು. ಅದೀಗ ಕೆಸಿಸಿ ತನಕ ತಂದು ನಿಲ್ಲಿಸಿದೆ. ಅವರಿಂದಲೇ ಕನ್ನಡ ಕಲಿತುಕೊಳ್ಳುವ ಆಸಕ್ತಿ ಹೆಚ್ಚಾಗಿದೆ.

- ನನಗೆ ಕನ್ನಡ ಭಾಷೆಯ ಬಗ್ಗೆ ಗೊತ್ತಿದೆ, ಆದ್ರೆ ಮಾತನಾಡುವುದು ಕಷ್ಟ. ಇಂಡಿಯಾ ಟೀಮ್‌ಗೆ  ಸೇರಿದ ದಿನಗಳಿಂದಲೇ ದ್ರಾವಿಡ್, ಕುಂಬ್ಳೆ ಪರಿಚಿತವಾದರು. ಆಗಾಗ ಅವರು ಕನ್ನಡ ಮಾತನಾಡುತ್ತಿದ್ದರು. ಅವರ ಸಂಭಾಷಣೆ ಕೇಳಿದಾಗ ಕನ್ನಡದ ಬಗ್ಗೆ ತಿಳಿಯುತ್ತಿತ್ತು. ಅಲ್ಲಿಂದ ಬೆಂಗಳೂರು ನಂಟು ಬೆಳೆಯಿತು. 

click me!