
ಸಾಮಾನ್ಯವಾಗಿ ನವೆಂಬರ್ ತಿಂಗಳು ಟಾಲಿವುಡ್‌ನಲ್ಲಿ ಅನ್‌ಸೀಸನ್ ಎಂದೇ ಪರಿಗಣಿಸಲಾಗುತ್ತದೆ. ಈ ತಿಂಗಳಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವುದು ಕಷ್ಟ ಎಂಬ ಬಲವಾದ ನಂಬಿಕೆ ಚಿತ್ರರಂಗದಲ್ಲಿದೆ. ಹೀಗಾಗಿಯೇ ಸ್ಟಾರ್ ಹೀರೋಗಳು ಕೂಡ ನವೆಂಬರ್‌ನಲ್ಲಿ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಾರೆ. ಸುಮಾರು 14 ವರ್ಷಗಳ ಹಿಂದೆ ನಾಗಾರ್ಜುನ ಅಭಿನಯದ ‘ಡಮರುಕಂ’ ಸಿನಿಮಾ 50 ಕೋಟಿ ರೂಪಾಯಿ ಕಲೆಕ್ಷನ್ ಗಡಿ ತಲುಪಿತ್ತು.
ಆ ಬಳಿಕ ಈ ಮಟ್ಟದ ಗಳಿಕೆ ಮಾಡಿದ ತೆಲುಗು ಸಿನಿಮಾ ನವೆಂಬರ್‌ನಲ್ಲಿ ಬಿಡುಗಡೆಯಾಗಿರಲಿಲ್ಲ ಎನ್ನಲಾಗುತ್ತದೆ. ಆದರೆ, 2026ರ ನವೆಂಬರ್‌ನಲ್ಲಿ ಈ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿವೆ. ನವೆಂಬರ್ ಸೆಂಟಿಮೆಂಟ್‌ಗೆ ಬ್ರೇಕ್ ಹಾಕಿರುವ ಎರಡು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿವೆ. ಸ್ಟಾರ್‌ಗಳ ಹವಾ ಅಥವಾ ಹಬ್ಬದ ಸೀಸನ್‌ಗಿಂತ ಸಿನಿಮಾದಲ್ಲಿರುವ ಕಂಟೆಂಟ್ ಮುಖ್ಯ ಎಂಬುದನ್ನು ಈ ಚಿತ್ರಗಳು ಮತ್ತೊಮ್ಮೆ ಸಾಬೀತುಪಡಿಸುತ್ತಿವೆ.
ಬಾಕ್ಸ್ ಆಫೀಸ್‌ನಲ್ಲೂ ಹಣದ ಹೊಳೆ
ನವೆಂಬರ್ 19ರಂದು ತೆರೆಕಂಡ ‘ENE ರಿಪೀಟ್’ ಸಿನಿಮಾ ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸುವುದರ ಜೊತೆಗೆ ಬಾಕ್ಸ್ ಆಫೀಸ್‌ನಲ್ಲೂ ಹಣದ ಹೊಳೆ ಹರಿಸುತ್ತಿದೆ. ವಿಶ್ವಕ್ ಸೇನ್ ಮತ್ತು ತರುಣ್ ಭಾಸ್ಕರ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಈ ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲೇ ಬರೋಬ್ಬರಿ 51.8 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈ ಮೂಲಕ ಸಿನಿಮಾ ಬ್ಲಾಕ್‌ಬಸ್ಟರ್ ಹಾದಿಯಲ್ಲಿ ಮುನ್ನುಗ್ಗುತ್ತಿದೆ.
ನವೆಂಬರ್ 20ರಂದು ಬಿಡುಗಡೆಯಾದ ದುಲ್ಕರ್ ಸಲ್ಮಾನ್ ಅಭಿನಯದ ‘ಆಕಾಶಮ್ಲೋ ಒಕ ತಾರ’ ಸಿನಿಮಾ ಕೂಡ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಪವನ್ ಸಾಧಿನೇನಿ ನಿರ್ದೇಶನದ ಈ ಫೀಲ್‌ಗುಡ್ ಡ್ರಾಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ, ರಾಜಮೌಳಿ ಮತ್ತು ಜೂನಿಯರ್ ಎನ್‌ಟಿಆರ್ ಅವರಂತಹ ಸ್ಟಾರ್‌ಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಬಿಡುಗಡೆಯಾದ ಮೊದಲ ವಾರದಲ್ಲೇ 40 ಕೋಟಿಗೂ ಅಧಿಕ ಗ್ರಾಸ್ ಗಳಿಸಿರುವ ಈ ಸಿನಿಮಾ, ಎರಡನೇ ವಾರಾಂತ್ಯಕ್ಕೆ 50 ಕೋಟಿ ರೂಪಾಯಿ ಕ್ಲಬ್ ಸೇರಿದೆ ಎನ್ನಲಾಗಿದೆ.
ಇನ್ನು ನವೆಂಬರ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ಕಲೆಕ್ಷನ್ ಕಷ್ಟ ಎಂಬ ಹಳೆಯ ನಂಬಿಕೆಗೆ ಈ ಎರಡು ಚಿತ್ರಗಳು ಬಲವಾದ ಹೊಡೆತ ನೀಡಿವೆ. ಸಿನಿಮಾದಲ್ಲಿ ಒಳ್ಳೆಯ ಕಂಟೆಂಟ್ ಇದ್ದರೆ ಸೀಸನ್ ಇರಲಿ, ಅನ್‌ಸೀಸನ್ ಇರಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ ಎಂಬುದನ್ನು ‘ENE ರಿಪೀಟ್’ ಮತ್ತು ‘ಆಕಾಶಮ್ಲೋ ಒಕ ತಾರ’ ಸಿನಿಮಾಗಳು ಮತ್ತೊಮ್ಮೆ ಸಾಬೀತುಪಡಿಸಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.