
ಬೆಂಗಳೂರು(ಮಾ.04): ರಾಜ್ ಕಪ್, ವಿಷ್ಣು ಕಪ್ ಕ್ರಿಕೆಟ್ ಟೂರ್ನಿಗಳ ನಂತರ ಕರ್ನಾಟಕದಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಟಿ20 ಪಂದ್ಯಾವಳಿ ನಡೆದಿದ್ದಾಯ್ತು. ಅದು ದೇಶವ್ಯಾಪಿ ಸ್ವರೂಪ ಪಡೆದಿದ್ದೂ ಆಯ್ತು. ಇದೀಗ ಚಿತ್ರರಂಗ ಮತ್ತೊಂದು ಮೆಗಾ ಕ್ರಿಕೆಟ್ ಟೂರ್ನಿ ಆಯೋಜಿಸುತ್ತಿದೆ. ಈ ಬಾರಿ ಟಿ10 ಕ್ರಿಕೆಟ್ ಸರದಿ.
‘ಕನ್ನಡ ಚಲನಚಿತ್ರ ಕಪ್ ಸೂಪರ್ ಧಮಾಕಾ’ ಹೆಸರಿನಲ್ಲಿ ಪಂದ್ಯಾವಳಿ ಆಯೋಜನೆಯಾಗಿದ್ದು, ಇದೇ ತಿಂಗಳ 10, 11ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಸೆಲೆಬ್ರಿಟಿ ಕ್ರಿಕೆಟ್‌ನಲ್ಲಿ ಮುಖ್ಯ ಭೂಮಿಕೆ ವಹಿಸಿದ್ದ ಖ್ಯಾತ ನಟ ಕಿಚ್ಚ ಸುದೀಪ್ ಅವರೇ ಕೆಸಿಸಿ ಟಿ10 ಆಯೋಜನೆಯ ಪ್ರಧಾನ ಪಾತ್ರ ವಹಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾ ಮತ್ತು ಕ್ರಿಕೆಟ್ ಎರಡೂ ದೊಡ್ಡ ಮನರಂಜನಾ ತಾಣಗಳು. ಈ ನಿಟ್ಟಿನಲ್ಲಿ ಸಿನಿರಂಗದವರೇ ಸೇರಿಕೊಂಡು ಕ್ರಿಕೆಟ್‌ನಲ್ಲಿ ತೊಡಗುವಂತೆ ಕೆಸಿಸಿ ಟಿ10 ಧಮಾಕ ಆಯೋಜಿಸಲಾಗಿದೆ. ರಾಜ್ಯ ಮಟ್ಟದ ಆಟಗಾರರನ್ನು ಒಳಗೊಂಡು ಮಾ. 10 ಮತ್ತು 11ರಂದು ಟೂರ್ನಿ ನಡೆಯಲಿದೆ ಎಂದರು.
ಮೊದಲು ಕೆಸಿಎಲ್, ರಾಜ್ ಕಪ್, ವಿಷ್ಣು ಕಪ್‌ಗಳಲ್ಲಿ ಚಿತ್ರರಂಗದ ಎಲ್ಲರೂ ಸೇರಿ ಆಟವಾಡುವ ಅವಕಾಶ ಇರಲಿಲ್ಲ. ಈಗ ನಾಯಕ ನಟರು, ಸಹ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ಮಾಧ್ಯಮದವರು ಎಲ್ಲರೂ ನಿಗದಿಪಡಿಸಿರುವ ಅರ್ಹತೆಗಳನ್ನು ಹೊಂದಿದ್ದರೆ ಭಾಗವಹಿಸಬಹುದು ಎಂದರು.
ನಿರ್ದೇಶಕ ನಂದಕಿಶೋರ್ ಮಾತನಾಡಿದರು. ಪಂದ್ಯದಲ್ಲಿ 2 ಗುಂಪಿನಲ್ಲಿ ಒಟ್ಟು 6 ತಂಡ ಭಾಗವಹಿಸಲಿವೆ. ಕೆಸಿಸಿಯ ಆಂತರಿಕ ಸಮಿತಿಯಲ್ಲಿ ಕೃಷ್ಣ ಎಸ್, ಶ್ರೀಕಾಂತ್ ಕೆ.ಪಿ, ಇಂದ್ರಜಿತ್ ಲಂಕೇಶ್, ನಂದ ಕಿಶೋರ್, ಮಂಜುನಾಥ್, ಶೆಣೈ ಇದ್ದಾರೆ. ಪರಾಮರ್ಶೆ ಸಮಿತಿಯಲ್ಲಿ ಸೂರಪ್ಪ ಬಾಬು, ಶೇಖರ್ ಚಂದ್ರು, ನಾಗೇಂದ್ರ ಪ್ರಸಾದ್, ಡಿಫರೆಂಟ್ ಡ್ಯಾನಿ, ಇಮ್ರಾನ್ ಸರ್ದಾರಿಯಾ, ಕೆಂಪರಾಜು, ಅರ್ಜುನ್ ಜನ್ಯ ಇದ್ದಾರೆ. ಶಿಸ್ತಿನ ಸಮಿತಿಯಲ್ಲಿ ರಾಜೇಂದ್ರ ಸಿಂಗ್ ಬಾಬು, ತಂಡದವರಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.