ಬಾಲಿವುಡ್ ಸೆಲೆಬ್ರೆಟಿಗಳ ಬದುಕನ್ನೇ ಬದಲಾಯಿಸಿತು ಕ್ಯಾನ್ಸರ್

By Kannadaprabha NewsFirst Published Sep 10, 2018, 1:31 PM IST
Highlights

ಕ್ಯಾನ್ಸರ್ ಅಂದಕೂಡಲೇ ಕಣ್ಮುಂದೆ ಸಾವಿನ ಚಿತ್ರ. ಆದರೆ ಕ್ಯಾನ್ಸರ್ ಅಂದರೆ ಬದುಕು ಅಂತಾರೆ ಇವೆರೆಲ್ಲ. ಕ್ಯಾನ್ಸರ್ ಕಲಿಸಿದ ಬದುಕಿನ ಪಾಠ

ಇಷ್ಟೊಂದು ಸ್ಟ್ರೆಂಥ್ ನನ್ನಲ್ಲಿದೆ ಅಂತ ಗೊತ್ತಿರಲಿಲ್ಲ : ಸೋನಾಲಿ ಬೇಂದೆ

'ಚಾಲೆಂಜ್ ಮೇಲೆ ಚಾಲೆಂಜ್,ಬದುಕು ಇದೇ ಅಲ್ವಾ' ಸೋನಾಲಿ ಬೇಂದ್ರೆ

‘ಆಗಾಗ ಸಣ್ಣ ನೋವು ಕಾಣಿಸಿಕೊಳ್ಳುತ್ತಿತ್ತು. ಟೆಸ್ಟ್ ಮಾಡಿಸಿದಾಗ ತಿಳಿಯಿತು, ಇದು ಮೆಟಸ್ಟಾಸಿಸ್ ಕ್ಯಾನ್ಸರ್ ಅಂತ. ಅನಿರೀಕ್ಷಿತ ಆಘಾತ! ದೇಹವಿಡೀ ಸಂಚರಿಸುವ ಭಯಾನಕ ಕ್ಯಾನ್ಸರ್ ಇದು. ಒಂದು ಅಂಗದ ಟ್ಯೂಮರ್ ಸೆಲ್‌ಗಳು ರಕ್ತನಾಳಗಳ ಮೂಲಕ ಸಂಚರಿಸುತ್ತದೆ. ರಕ್ತನಾಳದೊಳಗಿಂದ ಹೊರಬಂದು ಇತರ ಭಾಗಕ್ಕೆ ಹೋಗಿ ಅಲ್ಲಿ ಬೆಳೆಯುತ್ತವೆ. ಬಲುವೇಗದಿಂದ ಬೆಳೆಯುವ ಈ ಕ್ಯಾನ್ಸರ್‌ನ ಆರಂಭಿಕ ಸ್ಥಿತಿಯೇ ಬ್ರೆಸ್ಟ್ ಕ್ಯಾನ್ಸರ್‌ನ ನಾಲ್ಕನೇ ಹಂತದ ಹಾಗಿರುತ್ತೆ ಅಂತಾರೆ ತಜ್ಞರು. ಆಘಾತದಿಂದ ಹೊರಬಂದು ವಸ್ತುಸ್ಥಿತಿ ಒಪ್ಪಿಕೊಳ್ಳುವವರೆಗೂ ಒಂದು ಚಾಲೆಂಜ್, ಆಮೇಲಿನದು ಇನ್ನೊಂದು. ಈ ಕ್ಯಾನ್ಸರ್ ನನ್ನೊಳಗೆ ಎಷ್ಟು ಶಕ್ತಿ ತುಂಬಿದೆ ಅಂತ ತೋರಿಸಿಕೊಟ್ಟಿತು. ಇಂಥಾ ಸನ್ನಿವೇಶಗಳು ನಮ್ಮೊಳಗಿನ ಅಗಾಧ ಶಕ್ತಿಯ ಪರಿಚಯ ಮಾಡಿಕೊಡುತ್ತವೆ. ಕಷ್ಟದ ನಡುವೆ ನಗುವುದನ್ನ, ಬದುಕ ಪ್ರೀತಿಸುವುದನ್ನೂ ಇದು ಕಲಿಸಿದೆ.’

ಅವರೆಲ್ಲ ಬದುಕಿದ್ದಾರೆ, ನಾನು ಬದುಕಲ್ವಾ: ಯುವರಾಜ್ ಸಿಂಗ್

'ಕ್ಯಾನ್ಸರ್ ಅಂದರೆ ಸಾವಲ್ಲ, ಸಮಸ್ಯೆ ಅಷ್ಟೇ' ಯುವರಾಜ್ ಸಿಂಗ್

ಎದೆ ಹಾಗೂ ಶ್ವಾಸಕೋಶಗಳ ನಡುವೆ ಬಾಲ್ ಥರ ಕೂತಿತ್ತು 14 ಸೆಂಟಿ ಮೀಟರ್‌ನ ಕ್ಯಾನ್ಸರ್ ಗಡ್ಡೆ. ಭಯದಲ್ಲಿ ಟ್ರೀಟ್‌ಮೆಂಟ್‌ಅನ್ನೇ ಕೆಲ ಕಾಲ ಮುಂದೂಡಿದೆ. ಸೆಮಿನೊಮಾ ಸಾಮಾನ್ಯವಾಗಿ ಗಂಡಸರಲ್ಲಿ ವೀರ‌್ಯದಲ್ಲಿ ಹಾಗೂ ಹೆಂಗಸರಲ್ಲಿ ಅಂಡದಲ್ಲಿ ಬೆಳೆಯುವ ಕ್ಯಾನ್ಸರ್. ಕೆಲವೊಮ್ಮೆ ಮಿದುಳು, ಎದೆ, ಹೊಟ್ಟೆ ಮೊದಲಾದಡೆಯೂ ಬರುತ್ತದೆ. ಬಹಳಕಾಲ ಕೀಮೊ ಥೆರಪಿ, ಆಯುರ್ವೇದ ಚಿಕಿತ್ಸೆ ತೆಗೆದುಕೊಂಡು ಅದರಿಂದ ಹೊರಬರುವುದು ಸಾಧ್ಯವಾಯ್ತು. ಕ್ಯಾನ್ಸರ್ ಅಂದರೆ ಸಾವು ಅಲ್ಲವೇ ಅಲ್ಲ. ಅದು ನಮ್ಮ ದೇಹದೊಳಗೆ ಉದ್ಭವವಾಗುವ ಒಂದು ಸಮಸ್ಯೆ ಅಷ್ಟೇ. ಈ ಸಂದರ್ಭ ಪಾಸಿಟಿವ್ ಆಗಿದ್ದಷ್ಟೂ ಒಳ್ಳೆಯದು. ಚಿಕಿತ್ಸೆಗೆ ಹೋದಾಗ ಮತ್ತೆ ಬ್ಯಾಟ್ ಹಿಡಿಯುವ ಸಣ್ಣ ನಿರೀಕ್ಷೆಯೂ ನನಗಿರಲಿಲ್ಲ. ಅಲ್ಲಿ ನನಗಿಂತ ಚಿಕ್ಕವರು, ದೊಡ್ಡವರು, ವೃದ್ಧರು ಎಲ್ಲರೂ ಇದ್ದರು. ಕೆಲವರು ಚೇತರಿಸಿಕೊಂಡು ಆಚೆ ಬರುತ್ತಿದ್ದರು. ಅದನ್ನು ಕಂಡು ನನ್ನಲ್ಲೂ ಆತ್ಮವಿಶ್ವಾಸ ಬೆಳೆಯಿತು. 

ಆಘಾತಗಳಿಂದ ಬದುಕಿನ ದರ್ಶನ ಸಾಧ್ಯ: ಮನೀಷಾ ಕೊಯಿರಾಲ

'ನನಗದು ಭರವಸೆಯ ಕಿರಣದಂತೆ ತೋರಿತು' ಮನೀಷಾ ಕೊಯಿರಾಲ

ಕ್ಯಾನ್ಸರ್‌ನೊಂದಿಗೆ ನನ್ನದು ಬಹಳ ನೋವಿನ ಹಾಗೂ ಕಷ್ಟದ ಜರ್ನಿ. ನಾನದನ್ನು ಎದುರಿಸಿ ಗೆದ್ದಿದ್ದೇನೆ ಅಂದರೆ ಉಳಿದ ಕ್ಯಾನ್ಸರ್ ಸಮಸ್ಯೆ ಇರುವವರೂ ಗೆಲ್ಲುವುದು ಕಷ್ಟವಲ್ಲ. ಆರಂಭಿಕ ಹಂತದಲ್ಲಿ ಯಾವ ಸೂಚನೆಯನ್ನೂ ಕೊಡದೇ ಬರುವ ಈ ಅರ್ಬುದ ರೋಗ ಪತ್ತೆಯಾಗುವುದು ಅಕ್ಕ ಪಕ್ಕ ಭಾಗಗಳಿಗೆ ಹರಡಿದ ಬಳಿಕವೇ. ಹೊಟ್ಟೆನೋವು, ತೂಕ ಇಳಿತ ಇತ್ಯಾದಿ ಲಕ್ಷಣಗಳಿರುತ್ತವೆ. ನನಗೆ ಜ್ವರ ಬಂದ ಹಾಗೆ, ಫುಡ್ ಪಾಯಿಸನ್ ಥರದ ಅನುಭವಗಳಾಗುತ್ತಿದ್ದವು. ದೇಹ ನಿಂಗೇನೋ ಆಗಿದೆ ಅಂತ ಪದೇ ಪದೇ ಸಿಗ್ನಲ್ ಕೊಡುತ್ತಿತ್ತು. ಕೊನೆಗೂ ಟೆಸ್ಟ್ ಮಾಡಿಸಿದಾಗ ಈ ವಿಷಯ ತಿಳಿಯಿತು.  ಟ್ರೀಟ್ಮೆಂಟ್‌ಗೂ ಬಹಳ ಕಾಲ ಹಿಡಿಯುತ್ತದೆ. ನನಗೆ ಮಲ್ಟಿಪಲ್ ಕೀಮೋ ಥೆರಪಿ, ಸರ್ಜರಿ ಅಂತೆಲ್ಲ ಆಗಿ ಗುಣವಾಗಲು ೬ ತಿಂಗಳು ಬೇಕಾಯ್ತು. ಬದುಕಿನಲ್ಲಿ ಬರುವ ಇಂಥ ಆಘಾತಗಳ ಹಿಂದೆ ವಿಚಾರ ಇರುತ್ತೆ. ಅದನ್ನು ಅರ್ಥ ಮಾಡಿಕೊಳ್ಳಬೇಕು.

ಆಮೇಲಿಂದ ಹೆಂಡ್ತಿ ಜಗಳವನ್ನೇ ನಿಲ್ಲಿಸಿಬಿಟ್ಳು : ಅನುರಾಗ್ ಬಸು

'ನೆಗಡಿ, ಜ್ವರದಂತೆ ಇದೂ ಒಂದು ಸಮಸ್ಯೆ ಅಷ್ಟೇ ' ಅನುರಾಗ್ ಬಸು

‘ತುಮ್ಸಾ ನಹೀ ದೇಖಾ ಸಿನಿಮಾದ ಶೂಟಿಂಗ್ ವೇಳೆಗೇ ನನಗೆ ಕ್ಯಾನ್ಸರ್ ಇರೋದು ಪತ್ತೆಯಾಯ್ತು. ಇನ್ನೆರಡೇ ತಿಂಗಳು ಬದುಕೋದು ಅಂದಿದ್ದರು ಡಾಕ್ಟರ್. ಆ ಹೊತ್ತಿಗೆ ಆಸ್ಪತ್ರೆಯಲ್ಲಿ ಕೂತೇ ‘ಲೈಫ್ ಇನ್ ಮೆಟ್ರೋ’ ಹಾಗೂ ‘ಗ್ಯಾಂಗ್‌ಸ್ಟರ್’ ಸಿನಿಮಾ ಕತೆ ಬರೆದೆ. ನನಗೆ ಬಂದಿದ್ದು ಪ್ರೊಮೆಲೊಸೈಟಿಕ್ ಲುಕ್ಯೇಮಿಯಾ. ಇದು ಬಿಳಿರಕ್ತಕಣಗಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್. ಪ್ರತೀ ನಿಮಿಷಕ್ಕೂ ಕೋಶಗಳು ದುಪ್ಪಟ್ಟಾಗಿ ವೃದ್ಧಿಸುತ್ತಿದ್ದವು. ನನಗೆ ಕ್ಯಾನ್ಸರ್ ಬಂದಿದ್ದನ್ನು ಹೇಳುವ ಧೈರ್ಯ ಫ್ಯಾಮಿಲಿಯಲ್ಲಿ ಯಾರಿಗೂ ಇರಲಿಲ್ಲ. ಸಿನಿಮಾ ನಿರ್ದೇಶಕ ಮಹೇಶ್ ಭಟ್ ಆಸ್ಪತ್ರೆಗೆ ಬಂದಿದ್ದವರು ನನ್ನ ಹಣೆಯ ಮೇಲೆ ಕೈಯಿಟ್ಟರು, ದುಃಖ ತಡೆಯಲಾರದೇ ಬಿಕ್ಕಿಬಿಕ್ಕಿ ಅಳಲಾರಂಭಿಸಿದರು. ನನಗೆ ಆಘಾತ. ‘ನೆಗಡಿ, ಜ್ವರದಂತೆ ಅದೂ ಒಂದು ಖಾಯಿಲೆ, ನಾನು ಖಂಡಿತಾ ಫೇಸ್‌ಮಾಡುತ್ತೇನೆ, ನೀವು ಧೈರ್ಯವಾಗಿರಿ’ ಅಂದೆ. ಒಂದು ಖುಷಿ ಅಂದ್ರೆ ಯಾವತ್ತೂ ಜಗಳ ಆಡುತ್ತಿದ್ದ ಹೆಂಡತಿ ಜಗಳ ಆಡೋದನ್ನೇ ನಿಲ್ಲಿಸಿಬಿಟ್ಟಳು. 

ಬದುಕಿನ ಮೌಲ್ಯ ಗೊತ್ತಾಗಿದ್ದೇ ಆಗ: ಲೀಸಾ ರೇ

'ನನ್ನ ದೇಹದ ಬಗ್ಗೆ ಅಕ್ಕರೆ ಬೆಳೆಯಿತು' ಲೀಸಾ ರೇ

‘ಕ್ಯಾನ್ಸರ್ ಬಂದಮೇಲೆ ನಾನು ಬಹಳ ಬದಲಾದೆ. ನನ್ನ ದೇಹದ ಬಗ್ಗೆ ಅಕ್ಕರೆ ಹುಟ್ಟಿಕೊಂಡಿತು. ನನಗೆ ಬಂದದ್ದು ಮಲ್ಟಿಪಲ್ ಮೈಲೋಮ. ಅಂದರೆ ಬಿಳಿರಕ್ತ ಕಣದಲ್ಲಿ ಅಂದರೆ ಪ್ಲಾಸ್ಮಾ ಕಣಗಳಲ್ಲಿ ಬೆಳೆಯುವ ಕ್ಯಾನ್ಸರ್ ಇದು. ಪ್ಲಾಸ್ಮಾ ಕಣಗಳು ದೇಹಕ್ಕೆ ಪ್ರತಿರೋಧ ಶಕ್ತಿಯನ್ನು ನೀಡುತ್ತವೆ. ನನಗೆ ಬಂದ ಕ್ಯಾನ್ಸರ್‌ಅನ್ನು ಸಂಪೂರ್ಣ ಗುಣಪಡಿಸಲಾಗದು. ಹಾಗೆಂದು ನಾನೇನು ದುಃಖಿಯಲ್ಲ. ಬದುಕನ್ನು ಆಸ್ವಾದಿಸುವುದನ್ನು, ಪ್ರೀತಿಸುವುದನ್ನು ಈ ಸಮಸ್ಯೆ ಕಲಿಸಿಕೊಟ್ಟಿದೆ. ಕ್ಯಾನ್ಸರ್‌ನಿಂದ ನನ್ನ ಬದುಕಿಗೆ ಗ್ರೇಸ್ ಬಂದಿದೆ. ನನ್ನ ಸಮಸ್ಯೆಯನ್ನು ಯಾವತ್ತೂ ಜನರಿಂದ ಮುಚ್ಚಿಡಲಿಲ್ಲ. ಆದರೆ ನನ್ನ ಜನರು ಇದನ್ನು ಹೇಗೆ ಸ್ವೀಕರಿಸುತ್ತಾರೋ, ಸಾರ್ವಜನಿಕ ಸ್ಥಳಗಳಲ್ಲಿ ಅವರ ಪ್ರತಿಕ್ರಿಯೆ ಹೇಗಿರುತ್ತೋ ಎಂಬ ಬಗ್ಗೆ ಭಯವಿತ್ತು. ಥ್ಯಾಂಕ್ಸ್ ಗಾಡ್, ಆ ಹೆದರಿಕೆ ಬಹಳ ಬೇಗ ಹೋಯ್ತು. ಜನರ ಪ್ರೀತಿ, ವಿಶ್ವಾಸ ನನ್ನ ಭಯ ತೊಲಗಿಸಿ ಆತ್ಮವಿಶ್ವಾಸ ಹೆಚ್ಚಿಸಿತು. ನನಗಿವತ್ತಿಗೂ ಕ್ಯಾನ್ಸರ್ ಇದೆ, ಬೇಸರವಿಲ್ಲ. 

ಬದುಕಿನ ಅನಿರೀಕ್ಷಿತತೆ ನಮ್ಮನ್ನು ಬೆಳೆಸುತ್ತದೆ:ಇರ್ಫಾನ್ ಖಾನ್

ಬದುಕಿಗೆ ನನ್ನ ಶರಣಾಗತಿ. ಅದು ನನ್ನ ಗೆಲ್ಲಿಸಲಿ' ಇರ್ಫಾನ್ ಖಾನ್

‘ವೇಗವಾಗಿ ಚಲಿಸುವ ರೈಲಿನಲ್ಲಿ ಹೋಗುತ್ತಿದ್ದೆ. ಸಡನ್ನಾಗಿ ಯಾರೋ ಬಂದು ನೀನು ಇಳಿಯುವ ಸ್ಟೇಶನ್ ಬಂತು ಅಂದರು. ತಬ್ಬಿಬ್ಬು, ಭಯ, ಗೊಂದಲ. ಇನ್ನೂ ನನ್ನ ಸ್ಟೇಶನ್ ಬಂದಿಲ್ಲವಲ್ಲಾ ಅಂದೆ. ಕೆಲವೊಮ್ಮೆ ಹಾಗಾಗುತ್ತೆ ಅಂದರವರು. ನನಗೆ ಬಂದಿರುವುದು ನ್ಯೂರೋ ಎಂಡೋಕ್ರೈನ್ ಕ್ಯಾನ್ಸರ್. ನನ್ನ ಡಿಕ್ಷನರಿಯಲ್ಲಿ ಇದು ಹೊಸ ಶಬ್ದ. ಈಗ ಈ ಬಗ್ಗೆ ಒಂಚೂರು ವಿಷಯ ತಿಳಿದಿದೆ. ಹಾರ್ಮೋನ್ ಉತ್ಪಾದಿಸುವ ನರಕೋಶಗಳಲ್ಲಿ ಅಸಹಜವಾಗಿ ಕೋಶಗಳ ವೃದ್ಧಿಯಾಗುವುದು ಈ ಕ್ಯಾನ್ಸರ್‌ನ ಲಕ್ಷಣ. ಶ್ವಾಸಕೋಶ ಸೇರಿದಂತೆ ದೇಹದ ಯಾವ ಭಾಗಕ್ಕೂ ಈ ಕ್ಯಾನ್ಸರ್ ಹರಡಬಹುದು. ನನಗೆ ಕ್ಯಾನ್ಸರ್ ಇದೆ ಅಂದ ಗೊತ್ತಾದಾಗ ಬಹಳ ಜನ ಪ್ರೀತಿ, ವಿಶ್ವಾಸದಿಂದ ಹಾರೈಸಿದರು. ನನ್ನ ಮೇಲೆ ಜನರಿಗೆ ಅಷ್ಟೊಂದು ಪ್ರೀತಿ ಇರುವುದು ಗೊತ್ತಿರಲಿಲ್ಲ. ನನ್ನೊಳಗೆ ಬದುಕಿನ ಬಗ್ಗೆ ಇಷ್ಟು ಪ್ರೀತಿ ಇರೋದೂ ತಿಳಿದಿರಲಿಲ್ಲ. ನಾನು ಸಂಪೂರ್ಣ ಶರಣಾಗಿದ್ದೇನೆ.ಕ್ಯಾನ್ಸರ್ ನನ್ನ ಬೆಳೆಸಿ ಬದುಕಿಸಿಲಿ. 

click me!