ಸ್ಟಾರ್ ಹೀರೋಗಳ ಜೊತೆ ನಟಿಸಿದ್ದ ನಟನೀಗ ಅಪಾರ್ಟ್‌ಮೆಂಟ್ ವಾಚ್‌ಮ್ಯಾನ್: ಸಾವಿ ಸಿಧು ಕಹಿ ಕಥೆ

Published : Aug 27, 2026, 09:35 PM IST
Savi Sidhu

ಸಾರಾಂಶ

ಸಾವಿ ಸಿಧು ಅವರ ಬದುಕು ಅನಿರೀಕ್ಷಿತ ತಿರುವು ಕಂಡಿದೆ. ವೈಯಕ್ತಿಕ ನಷ್ಟಗಳು, ಆರೋಗ್ಯ ಸಮಸ್ಯೆಗಳು ಮತ್ತು ಆರ್ಥಿಕ ಸಂಕಷ್ಟದ ಬಳಿಕ ಅವರು ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದ ಕಥೆ ಇದೀಗ ಮತ್ತೊಮ್ಮೆ ಗಮನ ಸೆಳೆಯುತ್ತಿದೆ.

ಸಿನಿಮಾ ಲೋಕದಲ್ಲಿ ಯಾವ ಕ್ಷಣದಲ್ಲಿ ಯಾರ ಬದುಕು ಯಾವ ತಿರುವು ಪಡೆಯುತ್ತದೆ ಎಂಬುದನ್ನು ಊಹಿಸುವುದೇ ಕಷ್ಟ. ಬೆಳ್ಳಿತೆರೆಯಲ್ಲಿ ಜನಪ್ರಿಯತೆ, ಸ್ಟಾರ್ ನಟರ ಜೊತೆ ಅವಕಾಶ, ಉತ್ತಮ ಪಾತ್ರಗಳು-ಇವೆಲ್ಲ ಸಿಕ್ಕರೂ ಕೆಲವೊಮ್ಮೆ ಜೀವನ ಅನಿರೀಕ್ಷಿತ ಸವಾಲುಗಳನ್ನು ಎದುರುಹಾಕುತ್ತದೆ. ಅಂತಹ ಕಹಿ ಅನುಭವದ ಮೂಲಕ ಸಾಗಿದ ನಟರಲ್ಲಿ ಬಾಲಿವುಡ್ ಕಲಾವಿದ ಸಾವಿ ಸಿಧು ಕೂಡ ಒಬ್ಬರು.

ಬಾಲಿವುಡ್‌ನಲ್ಲಿ ಭರವಸೆ ಮೂಡಿಸಿದ್ದ ನಟ

ಲಕ್ನೋದಲ್ಲಿ ಜನಿಸಿದ ಸಾವಿ ಸಿಧು, ಚಂಡೀಗಢದಲ್ಲಿ ಮಾಡೆಲಿಂಗ್ ಮಾಡುವ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದರು. ಕಾನೂನು ವಿದ್ಯಾಭ್ಯಾಸದ ಜೊತೆಗೆ ರಂಗಭೂಮಿಯತ್ತವೂ ಆಸಕ್ತಿ ಬೆಳೆಸಿಕೊಂಡ ಅವರು, 1995ರಲ್ಲಿ ಬಿಡುಗಡೆಯಾದ ‘ತಾಕತ್’ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು.

ನಂತರ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಗಮನ ಸೆಳೆದ ಸಾವಿ ಸಿಧು, ‘ಬ್ಲ್ಯಾಕ್ ಫ್ರೈಡೇ’ (2007) ಮತ್ತು ‘ಗುಲಾಲ್’ (2009) ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳಲ್ಲಿ ಕಾಣಿಸಿಕೊಂಡರು. ಬಳಿಕ ಅಕ್ಷಯ್ ಕುಮಾರ್ ಅಭಿನಯದ ‘ಪಾಟಿಯಾಲಾ ಹೌಸ್’ (2011), ‘ಡಿ-ಡೇ’ (2013), ‘ಬೇವಕೂಫಿಯಾನ್’ (2014) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಛಾಪು ಮೂಡಿಸಿದರು.

ಒಂದರ ಹಿಂದೆ ಒಂದರಂತೆ ಕಾಡಿದ ಕಷ್ಟಗಳು

ಆದರೆ 2014ರ ‘ಬೇವಕೂಫಿಯಾನ್’ ಬಳಿಕ ಸಾವಿ ಸಿಧು ಅವರ ಸಿನಿಮಾ ಪಯಣಕ್ಕೆ ಅನಿರೀಕ್ಷಿತ ಬ್ರೇಕ್ ಬಿತ್ತು. ಆರೋಗ್ಯ ಸಮಸ್ಯೆಗಳ ಜೊತೆಗೆ ಕುಟುಂಬದಲ್ಲಿ ಒಂದರ ಹಿಂದೆ ಒಂದರಂತೆ ಸಂಭವಿಸಿದ ಸಾವುಗಳು ಅವರ ಬದುಕನ್ನು ಸಂಪೂರ್ಣವಾಗಿ ಬದಲಿಸಿತು. ಪತ್ನಿ, ತಂದೆ, ತಾಯಿ ಹಾಗೂ ಅತ್ತೆ-ಮಾವರನ್ನು ಕಳೆದುಕೊಂಡ ಅವರು, ಕೊನೆಗೆ ಕುಟುಂಬದಲ್ಲಿ ಬಹುತೇಕ ಒಬ್ಬಂಟಿಯಾಗುವ ಪರಿಸ್ಥಿತಿಗೆ ತಲುಪಿದರು. ಇದರ ಪರಿಣಾಮ ಆರ್ಥಿಕ ಸಂಕಷ್ಟವೂ ಅವರನ್ನು ತೀವ್ರವಾಗಿ ಕಾಡಿತು.

ದಿನಕ್ಕೆ 12 ಗಂಟೆ ಸೆಕ್ಯುರಿಟಿ ಗಾರ್ಡ್ ಕೆಲಸ!

ಒಂದು ಕಾಲದಲ್ಲಿ ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದ ಇದೇ ನಟ, ಜೀವನ ಸಾಗಿಸಲು ಮುಂಬೈನ ಲೋಖಂಡ್ವಾಲಾದ ಅಪಾರ್ಟ್‌ಮೆಂಟ್‌ವೊಂದರಲ್ಲಿ ದಿನಕ್ಕೆ ಸುಮಾರು 12 ಗಂಟೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಪರಿಸ್ಥಿತಿಗೆ ತಲುಪಿದರು. ಅವರ ಆರ್ಥಿಕ ಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿತ್ತೆಂದರೆ, ಬಸ್ ಟಿಕೆಟ್ ಖರೀದಿಸಲು ಅಥವಾ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಲು ಕೂಡ ಹಣವಿಲ್ಲದ ದಿನಗಳನ್ನು ಎದುರಿಸಿದ್ದರು ಎನ್ನಲಾಗಿದೆ.

ಕಷ್ಟದ ಸಮಯದಲ್ಲಿ ಕೈಹಿಡಿದ ಚಿತ್ರರಂಗ

ಸಾವಿ ಸಿಧು ಅವರ ಜೀವನದ ಈ ಕಹಿ ಅಧ್ಯಾಯ ‘ಫಿಲ್ಮ್ ಕಂಪ್ಯಾನಿಯನ್’ ಸಂದರ್ಶನದ ಮೂಲಕ ಬೆಳಕಿಗೆ ಬಂದಾಗ, ಚಿತ್ರರಂಗದ ಹಲವು ಗಣ್ಯರು ಅವರ ಬೆಂಬಲಕ್ಕೆ ನಿಂತರು. ನಟ ರಾಜ್‌ಕುಮಾರ್ ರಾವ್, ನಿರ್ದೇಶಕ ಅನುರಾಗ್ ಕಶ್ಯಪ್ ಹಾಗೂ ಗಾಯಕ ಮಿಕಾ ಸಿಂಗ್ ಸೇರಿದಂತೆ ಹಲವರು ಅವರಿಗೆ ನೆರವಾಗಲು ಮುಂದೆ ಬಂದಿದ್ದರು.

ಒಂದು ಕಾಲದಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಿದ್ದ ನಟ, ನಂತರ ಜೀವನ ನಿರ್ವಹಣೆಗಾಗಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಿಸಿದ ಕಥೆ ನಿಜಕ್ಕೂ ಮನಕಲಕುವಂಥದ್ದು. ಸಿನಿಮಾದ ಯಶಸ್ಸಿಗಿಂತ ಜೀವನದ ಏರಿಳಿತಗಳು ಎಷ್ಟು ದೊಡ್ಡ ಪರೀಕ್ಷೆಯಾಗಬಹುದು ಎಂಬುದಕ್ಕೆ ಸಾವಿ ಸಿಧು ಅವರ ಪಯಣವೇ ಒಂದು ಉದಾಹರಣೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಯನನ್ನು ಕೊಲ್ಲುವುದಷ್ಟೇ ಟಿಕೆಟ್‌ನ ಉದ್ದೇಶವಾಗಿತ್ತಾ? ‘ಟಾಕ್ಸಿಕ್’ ಕ್ಲೈಮ್ಯಾಕ್ಸ್ ಅರ್ಥವೇನು?
Toxic ನಂತರ ಯಶ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ: ರಾಕಿಂಗ್ ಸ್ಟಾರ್ ಮುಂದಿನ ಹೆಜ್ಜೆ ಇದೇ