Aamir Khan and Gauri Spratt Wedding: ಮುಂಬೈ ಮಳೆಯ ನಡುವೆ ಆಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಮದುವೆ; ಆಪ್ತರಿಗಷ್ಟೇ ಆಹ್ವಾನ!

Published : Jul 05, 2026, 01:10 PM IST
Gauri Spratt Aamir Khan Wedding

ಸಾರಾಂಶ

ಮನೆಯಲ್ಲಿ ನಡೆಯುವ ಈ ಸರಳ ವಿವಾಹದಲ್ಲಿ ಆಮೀರ್ ಅವರ ಮಕ್ಕಳಾದ ಜುನೈದ್, ಇರಾ ಮತ್ತು ಆಜಾದ್ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಒಟ್ಟಾರೆಯಾಗಿ, ಬಾಲಿವುಡ್‌ನ ಈ ಪ್ರೇಮಕಥೆ ಈಗ ಮದುವೆಯ ಹಂತಕ್ಕೆ ತಲುಪಿದ್ದು, ಅಭಿಮಾನಿಗಳು ದಂಪತಿಯ ಮೊದಲ ಫೋಟೋಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಬಾಲಿವುಡ್‌ನ ಸ್ಟಾರ್ ನಟ, 'ಮಿಸ್ಟರ್ ಪರ್ಫೆಕ್ಷನಿಸ್ಟ್' ಖ್ಯಾತಿಯ ಆಮೀರ್ ಖಾನ್ (Aamir Khan) ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಜುಲೈ 5 ರಂದು ಅವರು ತಮ್ಮ ದೀರ್ಘಕಾಲದ ಗೆಳತಿ ಗೌರಿ ಸ್ಪ್ರ್ಯಾಟ್ (Gauri Spratt) ಅವರೊಂದಿಗೆ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಈ ಸಂಭ್ರಮದ ಕ್ಷಣಗಳ ಲೈವ್ ಅಪ್‌ಡೇಟ್ಸ್ ಇಲ್ಲಿವೆ ನೋಡಿ...

ಮುಂಬೈ ಮಳೆಯ ನಡುವೆ ಆಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಮದುವೆ

ಬಾಲಿವುಡ್ ನಟ ಆಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಅವರ ವಿವಾಹ ಮಹೋತ್ಸವಕ್ಕೆ ಮುಂಬೈನ ಪಾಲಿ ಹಿಲ್‌ನಲ್ಲಿರುವ ನಟನ ನಿವಾಸ ಸಜ್ಜಾಗಿದೆ. ಕಳೆದ ಎರಡು ದಿನಗಳಿಂದ ಆಮೀರ್ ಅವರ ಮನೆಯ ಸುತ್ತಮುತ್ತಲಿನ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮುಂಬೈನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೂ, ಮದುವೆಯ ಸಿದ್ಧತೆಗಳಿಗೆ ಯಾವುದೇ ಅಡ್ಡಿಯಾಗಿಲ್ಲ. ಕೆಲಸಗಾರರು ರೈನ್‌ಕೋಟ್ ಧರಿಸಿ ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಿದ್ದಾರೆ. ಇಂದು ಮದುವೆಯ ಸಂಭ್ರಮ ಮುಗಿಲು ಮುಟ್ಟಿದೆ.

ಸರಳ-ಖಾಸಗಿ ಸಮಾರಂಭ

ಅದ್ದೂರಿ ಸೆಲೆಬ್ರಿಟಿ ಮದುವೆಗಳಿಗಿಂತ ಭಿನ್ನವಾಗಿ, ಆಮೀರ್ ಮತ್ತು ಗೌರಿ ಅತ್ಯಂತ ಸರಳವಾಗಿ ವಿವಾಹವಾಗಲು ನಿರ್ಧರಿಸಿದ್ದಾರೆ. ಮದುವೆಯಲ್ಲಿ ಕೇವಲ ಕುಟುಂಬದ ಸದಸ್ಯರು ಮತ್ತು ಅತ್ಯಂತ ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಸಿಕ್ಕ ಮಾಹಿತಿಯಂತೆ, ಸುಮಾರು 150 ಆಪ್ತರು ಮಾತ್ರ ಈ ಮದುವೆಯಲ್ಲಿ ಭಾಗಿಯಾಗುತ್ತಿದ್ದಾರೆ. ಈ ಬಗ್ಗೆ ಸ್ವತಃ ಆಮೀರ್ ಖಾನ್ ಮಾಹಿತಿ ನೀಡಿದ್ದು, "ಹೌದು, ಜುಲೈ 5 ರಂದು ನನ್ನ ಮದುವೆ ನಡೆಯುತ್ತಿದೆ. ಇದು ಮನೆಯಲ್ಲೇ ನಡೆಯುವ ಅತ್ಯಂತ ಸಣ್ಣ ಸಮಾರಂಭ. ಜುಲೈ 5 ನಮಗೆ ಬಹಳ ವಿಶೇಷವಾದ ದಿನ," ಎಂದು ಮಾರ್ಧಮುಗಳಿಗೆ ತಿಳಿಸಿದ್ದಾರೆ.

ಯಾರು ಈ ಗೌರಿ ಸ್ಪ್ರ್ಯಾಟ್?

ಗೌರಿ ಸ್ಪ್ರ್ಯಾಟ್ ಮೂಲತಃ ಬೆಂಗಳೂರಿನವರು. ಈ ಸಂಗತಿ ನಮ್ಮ ಕನ್ನಡಿಗರ ಪಾಲಿಗೆ ವಿಶೇಷ. ಬೆಂಗಳೂರಿನ ಬ್ಲೂ ಮೌಂಟೇನ್ಸ್ ಶಾಲೆಯಲ್ಲಿ ಓದಿದ ಗೌರಿ ಅವರು, ನಂತರ ಲಂಡನ್‌ನ ಯೂನಿವರ್ಸಿಟಿ ಆಫ್ ಆರ್ಟ್ಸ್‌ನಲ್ಲಿ ಸ್ಟೈಲಿಂಗ್ ಮತ್ತು ಫೋಟೋಗ್ರಫಿ ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ಮುಂಬೈನಲ್ಲಿ ಪ್ರಸಿದ್ಧ 'ಬಿ ಬ್ಲಂಟ್' (BBlunt) ಸಲೂನ್ ಅನ್ನು ನಿರ್ವಹಿಸುತ್ತಿದ್ದಾರೆ. ಆಮೀರ್ ಮತ್ತು ಗೌರಿ 25 ವರ್ಷಗಳ ಹಿಂದೆಯೇ ಪರಿಚಿತರಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಇವರ ಸ್ನೇಹ ಪ್ರೀತಿಗೆ ತಿರುಗಿದೆ.

ಆಮೀರ್ ಅವರ ಮೂರನೇ ವಿವಾಹ

ಇದು ಆಮೀರ್ ಖಾನ್ ಅವರ ಮೂರನೇ ಮದುವೆಯಾಗಿದೆ. ಅವರು 1986 ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು, ಇವರಿಗೆ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. 2002 ರಲ್ಲಿ ಈ ದಂಪತಿ ವಿಚ್ಛೇದನ ಪಡೆದಿದ್ದರು. ನಂತರ 2005 ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾದ ಆಮೀರ್, 2021 ರಲ್ಲಿ ಅವರಿಂದಲೂ ಬೇರ್ಪಟ್ಟರು. ಕಿರಣ್ ಮತ್ತು ಆಮೀರ್‌ಗೆ ಆಜಾದ್ ರಾವ್ ಎಂಬ ಪುತ್ರನಿದ್ದಾನೆ. ಡಿವೋರ್ಸ್ ಬಳಿಕವೂ ಆಮೀರ್ ತಮ್ಮ ಮಾಜಿ ಪತ್ನಿಯರೊಂದಿಗೆ ಉತ್ತಮ ಬಾಂಧವ್ಯವನ್ನು ಮುಂದುವರಿಸಿದ್ದಾರೆ.

ಶುಭಾಶಯಗಳ ಮಹಾಪೂರ

ನಟಿ ಸೋಮಿ ಅಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ದಂಪತಿಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. "ಪ್ರೀತಿಗೆ ವಯಸ್ಸಿನ ಹಂಗಿಲ್ಲ, ಸಂತೋಷವನ್ನು ಆಯ್ಕೆ ಮಾಡಿಕೊಳ್ಳಲು ಸಮಯದ ಹಂಗಿಲ್ಲ, ಅದು ಎಂದಿಗೂ ತಡವಾಗುವುದಿಲ್ಲ" ಎಂದು ಅವರು ಬರೆದುಕೊಂಡಿದ್ದಾರೆ.

ನಟ ಅಲಿ ಫಜಲ್ ಅವರು ತಮ್ಮ 'ಮಿರ್ಜಾಪುರ' ಪ್ರಚಾರದ ಕೆಲಸಗಳ ನಡುವೆಯೂ ಆಮೀರ್ ಅವರಿಗೆ ಶುಭ ಹಾರೈಕೆಗಳನ್ನು ಕಳುಹಿಸಿದ್ದಾರೆ.

ಮನೆಯಲ್ಲಿ ನಡೆಯುವ ಈ ಸರಳ ವಿವಾಹದಲ್ಲಿ ಆಮೀರ್ ಅವರ ಮಕ್ಕಳಾದ ಜುನೈದ್, ಇರಾ ಮತ್ತು ಆಜಾದ್ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಒಟ್ಟಾರೆಯಾಗಿ, ಬಾಲಿವುಡ್‌ನ ಈ ಪ್ರೇಮಕಥೆ ಈಗ ಮದುವೆಯ ಹಂತಕ್ಕೆ ತಲುಪಿದ್ದು, ಅಭಿಮಾನಿಗಳು ದಂಪತಿಯ ಮೊದಲ ಫೋಟೋಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಸದ್ಯಕ್ಕೆ ಈ ಮದುವೆ ಇಡೀ ಭಾರತದ ಗಮನ ಸೆಳೆದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Kwatle Kitchen: ದೆವ್ವ ಬಿಡಿಸೋಕೆ ಬಂದು, 4 ವಾರದಿಂದ ಸಂಬಳ ಸಿಕ್ಕಿಲ್ಲ ಎಂದ ಹನುಮಂತ
'ಕರ್ಣ'ನ ಹುಟ್ಟುಹಬ್ಬ: ಯುವತಿಯರ ಹೃದಯ ಕದ್ದ ಕಿರಣ್​ ರಾಜ್ ವಯಸ್ಸೆಷ್ಟು? ನಟನ ರೋಚಕ ಲವ್​ ಸ್ಟೋರಿ