
ಬಿಗ್‌ಬಾಸ್ ಮನೆಗೆ ಹೋಗಿ ಬಂದವರು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಜನಪ್ರಿಯತೆ ಪಡೆದ ಪ್ರತಿಯೊಬ್ಬರ ಸುತ್ತ ಈಗ ಸಿನಿಮಾ ಅವಕಾಶಗಳು ಹರಡಿಕೊಂಡಿವೆ. ಅಂತೆಯೇ, ನಟಿ ಅನುಪಮಾ ಗೌಡ ಕೂಡ ಸಿನಿಮಾ ಜಗತ್ತಿನಲ್ಲಿ ಬ್ಯುಸಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಈಗಾಗಲೇ ದಯಾಳ್ ನಿರ್ದೇಶನದ ಹೊಸ ಸಿನಿಮಾ 'ಆ ಕರಾಳ ರಾತ್ರಿ'ಗೆ ಅನುಪಮಾ ನಾಯಕಿ ಆಗಿದ್ದಾರೆ. ಆ ಸಿನಿಮಾಕ್ಕೆ ಫೆ. 19ರಂದು ಮುಹೂರ್ತ ಫಿಕ್ಸ್ ಆಗಿದೆ. ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್ ಇದರ ಹೀರೋ. ಅವರ ಜತೆಗಿಲ್ಲಿ ಡ್ಯುಯೆಟ್ ಹಾಡುವ ರೆಡಿ ಆಗಿದ್ದಾರೆ .ಇದರ ಬೆನ್ನಲೇ ಮತ್ತೊಂದು ಸ್ಟಾರ್ ನಟನ ಚಿತ್ರದಲ್ಲಿ ನಾಯಕಿ ಆಗುವ ಅದೃಷ್ಟ ಒಲಿದು ಬಂದಿದೆಯಂತೆ. ಸದ್ಯಕ್ಕೆ ವಿವರ ನಿಗೂಢ. ಅದರ ಗುಟ್ಟು ಬಿಟ್ಟುಕೊಡಲು ರೆಡಿ ಇಲ್ಲ ಅವರು. ಇನ್ನೊಂದು ವಾರ ಕಾಯಿರಿ, ವಿಷಯ ನಿಮಗೇ ಗೊತ್ತಾಗುತ್ತೆ ಅಂತಾರೆ.
ಅಷ್ಟೇ ಅಲ್ಲ, ಈ ವರ್ಷವೇ ಅವರು ಕಾಲಿವುಡ್ ಕಡೆಗೂ ಕಾಲಿಡುವುದು ಖಾತರಿಯಂತೆ. ಯಾಕಂದ್ರೆ ಅವರಿಗೆ ಒಂದು ತಮಿಳು ಚಿತ್ರದ ಆಫರ್ ಬಂದಿದೆ. ಅದು ಕೂಡ ಸ್ಟಾರ್ ನಟನ ಚಿತ್ರವೇ ಅಂತೆ. ಅದು ಕನಫರ್ಮ್ ಆದ್ರೆ ಸಿನಿಮಾ ಜಗತ್ತಿನಲ್ಲಿ ಒಂದಷ್ಟು ಕಾಲ ತಾವು ಬ್ಯುಸಿ ಆಗುವುದು ಗ್ಯಾರಂಟಿ ಎನ್ನುವ ವಿಶ್ವಾಸದ ಮಾತನಾಡುತ್ತಾರೆ.ಉಳಿದಂತೆ ಅವರ ಮೊದಲ ಚಿತ್ರ 'ಆ ಕರಾಳ ರಾತ್ರಿ'ಯಲ್ಲಿನ ಅವರ ಪಾತ್ರ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಇದೊಂದು ಕಾದಂಬರಿ ಆಧರಿತ ಚಿತ್ರ. ಶೀರ್ಷಿಕೆ ನೋಡಿದಾಕ್ಷಣ ಇದೊಂದು ಹಾರರ್ ಆ್ಯಂಡ್ ಥ್ರಿಲರ್ ಎನ್ನುವ ಅನುಮಾನ ಬಂದೇ ಬರುತ್ತೆ. ಅಲ್ಲಿ ಅನುಪಮಾ ಹೇಗಿರುತ್ತಾರೆ ಅಂತ ಕೇಳಿದ್ರೆ, ನಾನೊಬ್ಬ ನಾರ್ಮಲ್ ಹುಡುಗಿ ಎನ್ನುವ ಮೂಲಕ ಪಾತ್ರದ ಬಗ್ಗೆ ಮಾತನಾಡುತ್ತಾರೆ.
'ಕತೆ ಕೇಳಿದ್ದೇನೆ ನಿಜ, ಆದರೆ ಪಾತ್ರದ ಬಗ್ಗೆ ಈಗಲೇ ಹೆಚ್ಚಿನ ಮಾಹಿತಿ ನೀಡುವಂತಿಲ್ಲ. ಆದರೂ ಒಂದೊಳ್ಳೆ ಪಾತ್ರ ಸಿಕ್ಕ ಖುಷಿ ನನಗಿದೆ. ಆಕೆ ತುಂಬಾನೆ ಆಸೆ ಇರುವಂತಹ ಹುಡುಗಿ. ಮದುವೆ ವಯಸ್ಸಿಗೆ ಬಂದವಳು. ಮದುವೆಯ ಬಗ್ಗೆ ಆಕೆಗೂ ಸಾಕಷ್ಟು ಕನಸುಗಳಿವೆ. ಅಂದು ಕೊಂಡಂತೆ ಮದುವೆ ಆಗುತ್ತಾಳೋ ಇಲ್ಲವೋ ಎನ್ನುವುದು ಆ ಪಾತ್ರದ ಸಸ್ಪೆನ್ಸ್' ಎನ್ನುತ್ತಾ ಮುದ್ದು ಮುಖದ ಮೇಲೆ ನಗು ಚೆಲ್ಲುತ್ತಾರೆ ಅನುಪಮಾ. ಅದಿರಲಿ ಬಿಡಿ, ದಯಾಳ್ ನಿರ್ದೇಶನದ ಮತ್ತೊಂದು ಸಿನಿಮಾ ಕತೆ ಹೇಳ್ತೀವಿ ಕೇಳಿ. 'ಪುಟ 109' ಎನ್ನುವುದು ಆ ಚಿತ್ರದ ಹೆಸರು. ಚಿತ್ರಕ್ಕೆ ಇಬ್ಬರೇ ಕಲಾವಿದರು. ಜೆಕೆ ಮತ್ತು ನವೀನ್ ಕೃಷ್ಣ . ಆದರೂ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬಿಗ್‌ಬಾಸ್ 5ರ ಅಷ್ಟು ಸ್ಪರ್ಧಿಗಳನ್ನು ತೆರೆಯಲ್ಲಿ ತೋರಿಸುವ ದಯಾಳ್ ಅವರಿಗಿದೆ. ಹಿರಿಯ ನಟ ಸಿಹಿ ಕಹಿ ಚಂದ್ರು, ಜೈ ಶ್ರೀನಿವಾಸನ್ ಸೇರಿದಂತೆ ಹಲವರು ಈಗಾಗಲೇ ಒಪ್ಪಿಗೆ ಹೇಳಿದ್ದಾರಂತೆ.
ಅದರಲ್ಲಿ ನಟಿ ಅನುಪಮಾ ಕೂಡ ಬಂದು ಹೋಗುವ ಸಾಧ್ಯತೆ ಇದೆ. ಸಿನಿಮಾವೇ ಬೇಡವೆಂದು ಕುಳಿತ ನಟಿಗೆ ಹೀಗೆ ಅವಕಾಶಗಳು ಮನೆ ಬಾಗಿಲಿಗೆ ಬರುತ್ತಿವೆ. ಅತ್ತ ಕಿರುತೆರೆಯಿಂದಲೇ ಇಷ್ಟೆಲ್ಲ ಸುದ್ದಿಯಾದ ನಟಿ ಸಿನಿಮಾ, ಸಿನಿಮಾ ಎನ್ನುತ್ತಿರುವಾಗ ಮತ್ತೆ ಕಿರುತೆರೆಗೆ ಬರುವುದಿಲ್ಲವೇ?' ಇವತ್ತು ಇಷ್ಟೆಲ್ಲ ಆಗಿದ್ದು ಕಿರುತೆರೆ ಮೂಲಕವೇ. ನಾನು ಎಲ್ಲಿಗೇ ಹೋದರು ಜನರು ನನ್ನನ್ನು ಅಕ್ಕ ಧಾರಾವಾಹಿ ಮೂಲಕವೇ ಗುರುತಿಸುತ್ತಾರೆ. ಅದರಿಂದಲೇ ನನಗೆ ಬಿಗ್‌ಬಾಸ್‌ಗೆ ಹೋಗಲು ಅವಕಾಶ ಸಿಕ್ಕಿದ್ದು. ಒಳ್ಳೆಯ ಪಾತ್ರಗಳುಅಲ್ಲಿಂದಲೂ ಸಿಕ್ಕರೆ, ಅಲ್ಲೂ ನಾನು ಅಭಿನಯಿಸಲು ರೆಡಿ ಅಂತಾರೆ ಅನುಪಮಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.