
ಭಾಗ್ಯ- ತಾಂಡವ್ ಎಂದಾಕ್ಷಣ ಸೀರಿಯಲ್ ಪ್ರೇಮಿಗಳು ಒಂದು ಕ್ಷಣ... ಅಬ್ಬಾ ಇಂಥ ಜೋಡಿ ಬೇಡಪ್ಪಾ ಎನ್ನುವುದು ಉಂಟು. ಪತ್ನಿಯನ್ನು ಹೆಜ್ಜೆ ಹೆಜ್ಜೆಗೂ ಅವಮಾನ ಮಾಡಿ, ಅತ್ಯಂತ ನಿಕೃಷ್ಟವಾಗಿ ಕಂಡು ಬೇರೆಯವಳ ಜೊತೆ ಬಾಳ್ವೆ ಮಾಡ್ತಿರೋದೂ ಅಲ್ಲದೇ, ಅಲ್ಲಿಯೂ ನೆಮ್ಮದಿಯಿಂದ ಇರದೇ ಪತ್ನಿಗೆ ಕಿರುಕುಳ ಕೊಡ್ತಿರೋ ತಾಂಡವ್ನಂಥ ಗಂಡ ಯಾರಿಗೂ ಬೇಡಪ್ಪಾ ಎನ್ನುವುದು ಯುವತಿಯರ ಮಾತು. ಇದು ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಸೀರಿಯಲ್ ಕಥೆ. ಸದ್ಯ ಈ ಸೀರಿಯಲ್ನಲ್ಲಿ, ಭಾಗ್ಯಲಕ್ಷ್ಮಿಯ ತಂಗಿ ಪೂಜಾಳ ಮದುವೆಯ ಮಾತುಕತೆ, ಗೊಂದಲ ನಡೀತಿದೆ. ಇದೀಗ ಪೂಜಾಳನ್ನು ಲವ್ ಮಾಡ್ತಿದ್ದ ಕಿಶನ್ ಜೊತೆ ಮದುವೆಯ ಮಾತುಕತೆ ನಡೆಯುತ್ತಿದೆ. ಅದನ್ನೂ ತಪ್ಪಿಸಲು ತಾಂಡವ್ ನೋಡಿದ್ದ. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಇಲ್ಲೊಂದು ಎಡವಟ್ಟು ಆಗಿದೆ. ಅದೇನೆಂದರೆ ಭಾಗ್ಯಳಿಗೆ ಸದಾ ಟಾರ್ಚರ್ ಕೊಡ್ತಿರೋ ಕನ್ನಿಕಾ ಅಣ್ಣನೇ ಕಿಶನ್. ಇದೀಗ ಅವಳು ಮದುವೆಗೆ ಅಡ್ಡಗಾಲು ಹಾಕಿ ಭಾಗ್ಯಳಿಗೆ ಬಾಯಿಗೆ ಬಂದ ರೀತಿಯಲ್ಲಿ ಬೈದಿದ್ದಾಳೆ. ಇದನ್ನು ಕೇಳಿಸಿಕೊಂಡ ಪೂಜಾ ಉರಿದು ಹೋಗಿ, ನಿಮ್ಮ ಮನೆಗೆ ನಾನು ಸೊಸೆಯಾಗಿ ಬರುವುದಿಲ್ಲ, ಈ ಮದುವೆ ಆಗುವುದಿಲ್ಲ ಎಂದು ಸವಾಲು ಹಾಕಿ ಬಂದಿದ್ದಾಳೆ. ಆದರೆ ಈಗ ಆಗಿರೋದೇ ಬೇರೆ. ಪೂಜಾಳ ಮದುವೆಯನ್ನು ಆಕೆ ಇಷ್ಟಪಟ್ಟಿರುವ ಕಿಶನ್ ಜೊತೆ ಮಾಡಿಸಲು ಆತನ ಅಪ್ಪ ಒಪ್ಪಿಗೆ ನೀಡಿದ್ದಾನೆ. ಆದರೆ ಕನ್ನಿಕಾ ಹೇಗಾದ್ರೂ ಮದುವೆಯನ್ನು ತಪ್ಪಿಸಲು ಮುಂದಾಗಿದ್ದಾಳೆ. ಅದಕ್ಕಾಗಿ ತನ್ನ ಅಣ್ಣ ಆದಿಯ ನೆರವು ಪಡೆದುಕೊಂಡಿದ್ದಾಳೆ.
ಕನ್ನಿಕಾ ಅಣ್ಣನಾಗಿ ನಟ ಹರೀಶ್ ಎಂಟ್ರಿಯಾಗಿದೆ. ಆದರೆ, ಈತ ಕಿಶನ್ ಅಣ್ಣ ಎಂದು ತಿಳಿಯದೇ ಕುಸುಮಾ ಮತ್ತು ಭಾಗ್ಯ ಗಾಡಿಯ ವಿಷಯದಲ್ಲಿ ಆದಿ ಜೊತೆ ಜಗಳವಾಡಿಕೊಂಡಿದ್ದಾರೆ. ಕುಸುಮಾ, ಆದಿಯ ಕಾರನ್ನು ಒಡೆದಿದ್ದಾಳೆ.ಕೊನೆಗೆ ಇವನೇ ಕಿಶನ್ ಅಣ್ಣ ಎಂದು ತಿಳಿದಾಗ ಇಬ್ಬರೂ ಕ್ಷಮೆ ಕೋರಿದ್ದಾರೆ. ಆದರೆ ಇವರಿಬ್ಬರ ಅಬ್ಬರ ನೋಡಿ, ಭಾಗ್ಯ ಮತ್ತು ಕುಸುಮಾ ಸರಿಯಿಲ್ಲ. ತನ್ನ ತಮ್ಮನ ಮದುವೆ ಅವಳ ಜೊತೆ ಸಾಧ್ಯನೇ ಇಲ್ಲ ಎಂದಿದ್ದಾನೆ ಆದಿ. ಆದರೆ ತಂದೆ ಮಾತ್ರ ಅವರು ತುಂಬಾ ಒಳ್ಳೆಯವರು, ನಿನಗೇ ಅರ್ಥ ಆಗುತ್ತದೆ ಎಂದಿದ್ದಾನೆ. ಆದರೆ ಆದಿ ಭಾಗ್ಯ ಸರಿಯಿಲ್ಲ ಎಂದು ನಿಮಗೆ ಪ್ರೂವ್ ಮಾಡಿ ತೋರಿಸುತ್ತೇನೆ. ಆಗ ಗೊತ್ತಾಗತ್ತೆ ಎಂದು ಚಾಲೆಂಜ್ ಮಾಡಿದ್ದಾನೆ.
ಈ ಚಾಲೆಂಜ್ ನಡುವೆಯೇ, ಭಾಗ್ಯ ಮತ್ತು ಆದಿಯ ನಡುವೆ ಲವ್ ಉಂಟಾಗುತ್ತದೆ ಎನ್ನುವುದು ವೀಕ್ಷಕರ ಅಭಿಮತ. ಭಾಗ್ಯಲಕ್ಷ್ಮಿ ಈಗ ಆದಿ ಲಕ್ಷ್ಮಿ ಆಗಲಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ತಾಂಡವ್ ಶ್ರೇಷ್ಠಾಳನ್ನು ಮದುವೆಯಾದ ಮೇಲೆ ಭಾಗ್ಯಳಿಗೆ ಇನ್ನೊಂದು ಮದುವೆ ಮಾಡಿಸುವಂತೆ ನೆಟ್ಟಿಗರ ಒತ್ತಾಯ ಹೆಚ್ಚಾಗಿ ಕೇಳಿಬರುತ್ತಿದೆ. ಇದರ ನಡುವೆಯೇ ಹೊಸ ಪಾತ್ರದ ಎಂಟ್ರಿ ಆಗಿರುವ ಕಾರಣ, ಈತ ಭಾಗ್ಯಳ ಲೈಫ್ಗೂ ಎಂಟ್ರಿ ಕೊಡುತ್ತಾನೆ. ಭಾಗ್ಯಳಿಗೆ ಜೋಡಿ ಆಗುತ್ತಾನೆ, ಹಾಗೆಯೇ ಆಗಬೇಕು. ಭಾಗ್ಯಳಿಗೆ ಇನ್ನೊಂದು ಮದುವೆಯಾಗಬೇಕು ಎನ್ನುವುದು ನೆಟ್ಟಿಗರ ಆಶಯ.
ಇದರ ನಡುವೆಯೇ, ಇದೀಗ ಭಾಗ್ಯ ಮತ್ತು ತಾಂಡವ್ ಒಂದಾಗಿರುವ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಇದೇನೂ ಸೀರಿಯಲ್ ವಿಷ್ಯ ಅಲ್ಲ, ಬದಲಿಗೆ ಕಲರ್ಸ್ ಕನ್ನಡ 10 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನಡೆದ ಆಟೋಟ ಸ್ಪರ್ಧೆ ಅಷ್ಟೇ. ಈ ಒಂದು ಸ್ಪರ್ಧೆಯಲ್ಲಿ ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಹಾಗೂ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ.ರಾವ್ ಭಾಗವಹಿಸಿದ್ದು, ಅವರು ಗೆಲುವು ಸಾಧಿಸಿದ್ದಾರಷ್ಟೇ. ಸೀರಿಯಲ್ನಲ್ಲಿಯೂ ಹೀಗೆಯೇ ಒಂದಾಗಿ ಎಂದು ಕೆಲವರು ಹೇಳುತ್ತಿದ್ದರೆ, ಮತ್ತೆ ಅವನ ಬಳಿ ಹೋಗಬೇಡ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಸೀರಿಯಲ್ನಲ್ಲಿ ಶ್ರೇಷ್ಠಾಳನ್ನು ಎತ್ತಿಕೊಳ್ಳಲು ಹೋಗಿ ತಾಂಡವ್ ಸೊಂಟ ಮುರಿದುಕೊಂಡಿದ್ದ. ಈಗ ಭಾಗ್ಯಳನ್ನು ಹೀಗೆ ಎತ್ಕೋಳೋದು ಸರಿನಾ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.