ಆರನೇ ವಸಂತಕ್ಕೆ ಪ್ರವರ ಆರ್ಟ್‌ ಸ್ಟುಡಿಯೋ!

Published : Aug 24, 2019, 09:15 AM IST
ಆರನೇ ವಸಂತಕ್ಕೆ ಪ್ರವರ ಆರ್ಟ್‌ ಸ್ಟುಡಿಯೋ!

ಸಾರಾಂಶ

ಕನ್ನಡ ರಂಗಭೂಮಿಯನ್ನು ಕಟ್ಟುವಲ್ಲಿ ಹವ್ಯಾಸಿ ರಂಗತಂಡಗಳ ಪಾತ್ರ ದೊಡ್ಡದು. ದೊಡ್ಡ ಮಟ್ಟದ ಪ್ರತಿಫಲಾಪೇಕ್ಷೆಯನ್ನು ಬಯಸದೇ ತಮ್ಮೊಳಗಿನ ಕಲಾವಿದನ ಅನಾವರಣಕ್ಕಾಗಿ, ರಂಗಭೂಮಿಯ ಸೇವೆಗಾಗಿ ಹುಟ್ಟಿಕೊಂಡು ರಂಗತಂಡಗಳು ಇಂದು ನಮ್ಮಲ್ಲಿ ಸಾಕಷ್ಟಿವೆ. ಅವುಗಳಲ್ಲಿ ಒಂದು ಪ್ರವರ ಆರ್ಟ್‌ ಸ್ಟುಡಿಯೋ. ಇದರ ಸ್ಥಾಪಕರು ಹನು ರಾಮಸಂಜೀವ. ಈಗ ಈ ತಂಡ ತನ್ನ ಆರನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.

ಮೂಲತಃ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಹನು ರಾಮಸಂಜೀವ ಅವರಿಗೆ ಶಾಲಾ ದಿನಗಳಿಂದಲೂ ರಂಗಭೂಮಿ ಕಡೆಗೆ ಒಲವಿತ್ತು. ಆಮೇಲೆ ವೃತ್ತಿ ಜೀವನದತ್ತ ಬದುಕು ಹೊರಳಿಕೊಂಡರೂ ತನ್ನ ಆಸಕ್ತಿಯ ರಂಗಭೂಮಿ ಕ್ಷೇತ್ರವನ್ನು ಬಿಡದೇ ಅದರತ್ತ ಒಂದು ಚಿತ್ತವನ್ನು ಸದಾ ನೆಟ್ಟಿಯೇ ಇದ್ದರು. ಇದೇ ಕಾರಣಕ್ಕೆ 2013ರಲ್ಲಿ ಹುಟ್ಟಿಕೊಂಡಿದ್ದು ಪ್ರವರ ಆರ್ಟ್‌ ಸ್ಟುಡಿಯೋ.

ಪ್ರಾರಂಭದಲ್ಲಿ ಬೇರೆ ಬೇರೆ ತಂಡಗಳಲ್ಲಿ ಗುರುತಿಸಿಕೊಂಡು ಹಲವಾರು ನಾಟಕಗಳಲ್ಲಿ ಮುಖ್ಯ ಪಾತ್ರ ಮಾಡಿದ್ದ ಹನು ಅವರು ನಂತರ ತಮ್ಮದೇ ಸ್ವಂತ ತಂಡವನ್ನು ಕಟ್ಟಿಸದಭಿರುಚಿಯ ನಾಟಕಗಳನ್ನು ಮಾಡಬೇಕು ಎಂದುಕೊಂಡು ವೆಂಕಟೇಶ್‌ ಭಾರದ್ವಜ್‌, ಭಟ್‌ ಕಾರ್ತಿಕೇಯ, ಅಕ್ಷಯ್‌ ಬೋನ್‌ಸ್ಲೆ ಅವರೊಂದಿಗೆ ಸೇರಿ ಪ್ರವರ ತಂಡ ಕಟ್ಟುತ್ತಾರೆ. ಇದಕ್ಕೆ ತಾವು ಮಾಡುತ್ತಿರುವ ಕೆಲಸ ಅಡ್ಡಿ ಬರಬಹುದು ಎನ್ನುವ ಕಾರಣಕ್ಕೆ ಮಾಡುತ್ತಿದ್ದ ಕೆಲಸವನ್ನೇ ಬಿಟ್ಟು ಸಂಪೂರ್ಣ ಎರಡು ವರ್ಷಗಳ ಕಾಲ ತಾವು ಪ್ರೀತಿಯಿಂದ ಕಟ್ಟಿದ ತಂಡವನ್ನು ಒಂದು ಹಂತಕ್ಕೆ ತಂದು ನಿಲ್ಲಿಸುವುದಕ್ಕಾಗಿ ಶ್ರಮಿಸುತ್ತಾರೆ ಹನು.

ಹೀಗೆ ನಾಲ್ಕು ಮಂದಿಯಿಂದ ಶುರುವಾದ ತಂಡದಲ್ಲಿ ಈಗ ಸುಮಾರು 80 ಮಂದಿ ಸದಸ್ಯರಿದ್ದಾರೆ. 21 ನಾಟಕಗಳು ರಾಜ್ಯಾದ್ಯಂತ ಪ್ರದರ್ಶನ ಕಂಡಿವೆ. ಇದರಲ್ಲಿ 7 ಖಾಸಗಿ ಪ್ರದರ್ಶನಗಳೂ ಸೇರಿವೆ. ದೆಹಲಿ ಮಟ್ಟದಲ್ಲಿ ಕೇಂದ್ರ ಸಚಿವರಿಗಾಗಿಯೇ ಈ ತಂಡ ನಾಟಕ ಮಾಡಿ ಬಂದಿದೆ ಕೂಡ. ಮೊದಲ ಬಾರಿಗೆ ಎಂ.ಎಸ್‌. ನರಸಿಂಹಮೂರ್ತಿ ಅವರ ‘ಕನ್ಯಾಕಾಪಟ’ ಹಾಸ್ಯ ನಾಟಕದಿಂದ ಶುರುವಾದ ಇವರ ಜರ್ನಿ ಕರಣಂ ಪವನ್‌ ಪ್ರಸಾದ್‌ ಅವರ ‘ಭವ ಎನಗೆ ಹಿಂಗಿತು’ ನಾಟಕದವರೆಗೂ ಬಂದು ಮುಟ್ಟಿದೆ. ಕುದುರೆ ಬಂತು ಕುದುರೆ, ಬೆಗ್‌ ಬಾರೋ ಅಳಿಯ, ಜ್ಯೂಪಿಟರ್‌, ಜತೆಗಿರುವನು ಚಂದಿರ, ಭವ ಎನಗೆ ಹಿಂಗಿತು, ಲಾಕೌಟಲ್ಲ ನಾಕ್‌ಔಟ್‌, ಕಿವುಡು ಸಾರ್‌ ಕಿವುಡು, ಮೀಲ್‌ ಕೂಪನ್‌, ಸಾಲು ಮರಗಳ ತಾಯಿ ತಿಮ್ಮಕ್ಕ, ಕನ್ಯಕಾಪಟ, ಮಾಣಿ ಜಂಕ್ಷನ್‌, ವೋಟು ರಾಂಗ್‌ ರೂಟು, ಜಸ್ಟ್‌ ಅಡ್ಜಸ್ಟ್‌, ಅವನ ಕಥೆ ನಾಟಕಗಳನ್ನು ಮಾಡಿದ್ದಾರೆ.

ನನಗೆ ಮೊದಲಿನಿಂದಲೂ ರಂಗಭೂಮಿಯ ಕಡೆಗೆ ಒಲವಿತ್ತು. ಪ್ರೊಡಕ್ಷನ್‌, ಮೇಕಪ್‌, ಲೈಟಿಂಗ್‌, ಡೈರೆಕ್ಷನ್‌ ಫೀಲ್ಡ್‌ನಲ್ಲಿ ಕೆಲಸ ಮಾಡಿದ್ದೆ. ಆಮೇಲೆ ನಾನೇ ಒಂದು ತಂಡ ಕಟ್ಟಬೇಕು ಎಂದು ಅಂದುಕೊಂಡಿದ್ದರ ಫಲವೇ ಪ್ರವರ ಆರ್ಟ್‌ ಸ್ಟುಡಿಯೋ. ಮೊದಲ ಶೋನಲ್ಲಿ ನನಗೆ ಬಣ್ಣ ಹಚ್ಚಿದ್ದ ಮಾಲ್ತೇಶ್‌ ಬಡಿಗೇರ ಅವರು ಮಾರ್ಗದರ್ಶಕರಾಗಿ ನಿಂತರು. ಮೊದಲ ನಾಟಕವೇ ದೊಡ್ಡ ಯಶ ಕಂಡಿತು. ಇದೇ ಯಶಸ್ಸು ನಮಗೆ ಮತ್ತಷ್ಟುಹುಮ್ಮಸ್ಸು ನೀಡಿತು. ಈಗ ನಮ್ಮ ತಂಡ ಶುರುವಾಗಿ ಆರು ವರ್ಷ ತುಂಬಿದ ಖುಷಿಯಲ್ಲಿ ನಾವಿದ್ದೇವೆ.- ಹನು ರಾಮಸಂಜೀವ

ಪ್ರವರ ಆರ್ಟ್‌ ಸ್ಟುಡಿಯೋ ಆರನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ‘ಭವ ಎನಗೆ ಹಿಂಗಿತು’ ನಾಟಕವನ್ನು ಪ್ರದರ್ಶನ ಮಾಡಲಾಗುತ್ತಿದೆ. ಇದರ ಜೊತೆಗೆ ರಂಗಭೂಮಿಗೆ ಅನುಪಮ ಸೇವೆ ಸಲ್ಲಿಸಿದ ಮೈಸೂರು ರಂಗಾಯಣದ ನಿರ್ದೇಶಕಿ ಭಾಗಿರಥಿ ಬಾಯಿ ಕದಂ ಅವರಿಗೆ ಪ್ರವರ ರಂಗಶ್ರೇಷ್ಠ ಪ್ರಶಸ್ತಿ ಮತ್ತು ರಂಗಸಂಘಟಕ ಮೋಹನ್‌ ಕುಮಾರ್‌ ಅವರಿಗೆ ಪ್ರವರ ರಂಗ ನಿಷ್ಠ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುತ್ತಿದೆ.

ಸಮಯ: ಆ. 24, ಶನಿವಾರ, ಸಂಜೆ 6.30ಕ್ಕೆ ಪ್ರಶಸ್ತಿ ಪ್ರದಾನ, 7.30ಕ್ಕೆ ನಾಟಕ

ಸ್ಥಳ: ಕೆ.ಎಚ್‌. ಕಲಾಸೌಧ, ಹನುಮಂತನ ನಗರ, ಬೆಂಗಳೂರು

ಹೆಚ್ಚಿನ ಮಾಹಿತಿಗಾಗಿ: ದೂ. 9886604420

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ್ದೇಕೆ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?
BBK 12: ಗಿಲ್ಲಿ ನಟನ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇಡು ತೀರಿಸಿಕೊಳ್ಳಲು ರೆಡಿಯಾದ ರಘು; ಪ್ಲ್ಯಾನ್‌ ಏನು?