ಬಂಗಾರ ಸಿನಿಮಾ ವಿಮರ್ಶೆ; ಭೂತಾಯಿಯ ಮಕ್ಕಳತ್ತ ಅಣ್ಣಾವ್ರ ಮಗನ ಚಿತ್ತ

By Suvarna Web DeskFirst Published May 20, 2017, 3:31 PM IST
Highlights

ಚಿತ್ರಕಥೆಯಲ್ಲಿ ಇನ್ನೊಂದಿಷ್ಟು ಬಿಗಿತನ, ರೈತನ ಕುರಿತು ಮಾತನಾಡುವಾಗ ಬಳಸಬೇಕಾದ ಗಟ್ಟಿಮಾತುಗಳಿಗೆ ಅಧ್ಯಯನ ಮಾಡಿಕೊಂಡಿದ್ದರೆ ಒಳ್ಳೆಯ ಸಿನಿಮಾ ಆಗುತ್ತಿತ್ತು. ಜತೆಗೆ ನಾಯಕಿಗೆ ‘ಐ ಲವ್‌ ಯೂ' ಅಂತ ಹೇಳಿಸುವುದನ್ನು ತಪ್ಪಿಸುವುದಕ್ಕಾಗಿ ಕೊನೆಯಲ್ಲಿ ನಾಯಕನಿಗೆ ಕ್ಯಾನ್ಸರ್‌ ಇದೆ ಅನ್ನುವ ಅಂಶದಲ್ಲಿ ಯಾವ ಲಾಜಿಕ್ಕೂ ಇಲ್ಲ. ನೋಡುಗನ ತಾಳ್ಮೆ ಪರೀಕ್ಷಿಸುವ ನಿಧಾನಗತಿಯ ಸಂಕಲನ. ಇಂಥ ಕೆಲವು ಅಂಶಗಳ ಹೊರತಾಗಿ ರೈತನ ಕತೆ, ಶಿವಣ್ಣ, ರಾಜ್‌ ಅವರ ‘ಬಂಗಾರದ ಮನುಷ್ಯ'ನ ನೆರಳು. ಈ ಕಾರಣಗಳಿಗೆ ‘ಬಂಗಾರ ಸನ್‌ ಆಫ್‌ ಬಂಗಾರದ ಮನುಷ್ಯ'ನನ್ನು ಮೆಚ್ಚಿಕೊಳ್ಳುವುದಕ್ಕೆ ಅಡ್ಡಿ ಇಲ್ಲ.

ಚಿತ್ರ: ಬಂಗಾರ ಸನ್‌ ಆಫ್‌ ಬಂಗಾರದ ಮನುಷ್ಯ
ತಾರಾಗಣ: ಶಿವ ರಾಜ್‌'ಕುಮಾರ್‌, ವಿದ್ಯಾ ಪ್ರದೀಪ್‌, ಚಿಕ್ಕಣ್ಣ, ಶರತ್‌ ಲೋಹಿತಾಶ್ವ, ಶ್ರೀನಿವಾಸ ಮೂರ್ತಿ, ಶಿವರಾಂ, ಮೈಕೋನಾಗರಾಜ್‌, ಭಾವನಾ ಅಭಿ, ವಿಶಾಲ್‌, ಅನಿಲ್‌, ಶ್ರೀಧರ್‌
ನಿರ್ದೇಶನ: ಯೋಗಿ ಜಿ ರಾಜ್‌
ನಿರ್ಮಾಣ: ಜಯಣ್ಣ- ಭೋಗೇಂದ್ರ
ಸಂಗೀತ: ವಿ ಹರಿಕೃಷ್ಣ
ಛಾಯಾಗ್ರಾಹಣ: ಜೈ ಆನಂದ್‌

ರೇಟಿಂಗ್‌: ***

ನಲವತ್ತು ವರ್ಷಗಳ ಹಿಂದೆ ಬಂದ ‘ಬಂಗಾರದ ಮನುಷ್ಯ' ಚಿತ್ರದ ರಾಜೀವಪ್ಪ ಈಗ ಮತ್ತೆ ಬಂದರೆ ಹೇಗಿರುತ್ತದೆ? ಸರಿ, ರಾಜೀವಪ್ಪ ಬರಲು ಆಗಲ್ಲ ಅಂದುಕೊಳ್ಳೋಣ. ಅವರ ಮಗ ಬಂದರೆ ಹೇಗೆ? ಇಂಥದ್ದೊಂದು ಕುತೂಹಲದ ಪ್ರಶ್ನೆ ಬಹುಶಃ ನಿರ್ದೇಶಕ ಯೋಗಿ ಜಿ. ರಾಜ್‌ ಅವರನ್ನು ಕಾಡಿರಬೇಕು. ಅದಕ್ಕೇ 40 ವರ್ಷಗಳ ಹಿಂದೆ ಒಬ್ಬ ಬಂಗಾರದ ಮನುಷ್ಯ ಇದ್ದ. ಆತ ರೈತನಾಯಕ. ಆತನ ಮಗ ಮತ್ತೆ ಮಣ್ಣಿನ ಋುಣ ತೀರಿಸುವುದಕ್ಕೆ ಬಂದರೆ ಹೇಗೆಂಬ ಯೋಚನೆಯಲ್ಲೇ ‘ಬಂಗಾರ ಸನ್‌ ಆಫ್‌ ಬಂಗಾರದ ಮನುಷ್ಯ' ಚಿತ್ರ ಮಾಡಿದ್ದಾರೆ. ಹೌದು, 40 ವರ್ಷಗಳ ಹಿಂದೆ ಬಂಗಾರದ ಮನುಷ್ಯನಿಂದ ಬಂದ ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದ ರೈತನ ಬೆನ್ನಿಗೆ ಬಂಗಾರದ ಮನುಷ್ಯನ ಪುತ್ರ ನಿಲ್ಲುತ್ತಾನೆ. ಸಂಬಂಧಗಳಿಗೆ ಬೆಲೆ ಕೊಡದವ, ನಿನ್ನೆಯ ಬಗ್ಗೆ ಯೋಚಿಸದೇ ಈ ದಿನ ಮಾತ್ರ ಬದುಕುವ ಬಂಗಾರದ ಮನುಷ್ಯನ ಮಗನ ಮತ್ತೊಂದು ಮುಖ ಇಲ್ಲಿ ಅನಾವರಣಗೊಳ್ಳುತ್ತದೆ. ‘ಒಂದೆರಡು ಕಡೆ ಕಸ ಹಾಕಿಬಿಟ್ಟು ಮತ್ತೆ ಅದನ್ನು ಗುಡಿಸಿಬಿಟ್ರೆ ಸ್ವಚ್ಛ ಭಾರತ್‌ ಆಗಲ್ಲ. ರೈತನ ಕಣ್ಣೀರು ಒರೆಸಬೇಕು. ಅದೇ ನಿಜವಾದ ಸ್ವಚ್ಛ ಭಾರತ್‌' ಎಂದು ಹೇಳುತ್ತಾನೆ ರಾಜ್‌ ಅಲಿಯಾಸ್‌ ಶಿವರಾಜ್‌.

ಹೀಗೆ ಡೈಲಾಗ್‌ ಹೇಳಿ ಶಿವರಾಜ್‌ ಸುಮ್ಮನಾಗಲ್ಲ. ರೈತ ಇದ್ದ ಕಡೆಗೆ ಸರ್ಕಾರವನ್ನು ಕರೆಸುತ್ತಾನೆ. ರೈತ ಮನಸ್ಸು ಮಾಡಿದರೆ ಇಡೀ ದೇಶವನ್ನು ಹೇಗೆ ಉಪವಾಸ ಕೆಡವಬಹುದು ಎಂಬುದನ್ನು ತೋರಿಸುವ ಮೂಲಕ ರೈತನೇ ದೇಶದ ಬೆನ್ನೆಲುಬು ಅನ್ನುತ್ತಾನೆ. ರೈತ ತಾನು ಬೆಳೆದ ಬೆಳೆಗೆ ತಾನೇ ಬೆಲೆ ನಿಗದಿ ಮಾಡಬೇಕು ಅನ್ನುತ್ತಾನೆ. ಮಣ್ಣಿನ ಋುಣ ಅಂದರೇನು ಅಂತ ಹೇಳಿಕೊಟ್ಟು ಬರಿಗಾಲಲ್ಲಿ ಅದೇ ಮಣ್ಣು ದಾರಿಯಲ್ಲಿ ನಡೆದು ಹೋಗುತ್ತಾನೆ. ‘ಬಂಗಾರ ಸನ್‌ ಆಫ್‌ ಬಂಗಾರದ ಮನುಷ್ಯ' ಚಿತ್ರದ ಕತೆ ಏನು? ಹೌದು, ‘ರಾಜಕುಮಾರ'ನಿಗೂ ಈ ಚಿತ್ರಕ್ಕೂ ಏನಾದರೂ ಸಂಬಂಧ ಇದೆಯೇ? ಈ ಎಲ್ಲಾ ಬಗೆಗಿನ ಕುತೂಹಲಗಳಿಗೆ ಈ ಮೇಲಿನ ವಿವರಣೆ ಸಾಕು ಅನಿಸುತ್ತದೆ. ‘ರಾಜಕುಮಾರ' ಕಸ್ತೂರಿ ನಿವಾಸದಿಂದ ಎದ್ದು ಬಂದರೆ, ‘ಬಂಗಾರ ಸನ್‌ ಆಫ್‌ ಬಂಗಾರದ ಮನುಷ್ಯ' ಯಾವುದರಿಂದ ಎದ್ದು ಬರುತ್ತಾನೆ ಎಂಬುದನ್ನು ಚಿತ್ರದ ಹೆಸರಿನಲ್ಲೇ ಉತ್ತರವಿದೆ. ರಾಜ್‌'ಕುಮಾರ್‌ ಅವರ ಆದರ್ಶಗಳು, ಅವರು ತೋರಿದ ದಾರಿ, ಅವರ ಸಿನಿಮಾಗಳು, ಅವರ ಸಿನಿಮಾ ಕೃಷಿ ಈ ತಲೆಮಾರಿನ ನಿರ್ದೇಶಕರಿಗೂ ಹೇಗೆ ಬಂಡವಾಳ ಆಗುತ್ತಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೀಗಾಗಿ ರಾಜ್‌, ಈಗಿನ ತರುಣ ನಿರ್ದೇಶಕರ ಸಿನಿಮಾಗಳಿಂದ ಮತ್ತೆ ಮತ್ತೆ ಹುಟ್ಟಿಬರುತ್ತಲೇ ಇದ್ದಾರೆ! ಅದು ಕತೆಯಾಗಿ, ಪಾತ್ರವಾಗಿ, ವ್ಯಕ್ತಿಯಾಗಿ, ವ್ಯಕ್ತಿತ್ವವಾಗಿ. 

ಒಬ್ಬ ಸ್ಟಾರ್‌ ನಟನ ಚಿತ್ರದ ಮೂಲಕ ರೈತರ ಸಮಸ್ಯೆಗಳನ್ನು ಮಾತನಾಡುವುದಕ್ಕೆ ಹೊರಡುವುದೇ ಈ ಚಿತ್ರದ ಪ್ಲಸ್‌. ಆ ಕಾರಣಕ್ಕೆ ಯೋಗಿ ಜಿ ರಾಜ್‌ ಅವರ ಕಾಳಜಿಯನ್ನು ಮೆಚ್ಚಲೇಬೇಕು. ಸ್ಟಾರ್‌ ಹೀರೋಗಳು ಅದೇ ಮಾಮೂಲಿ ಆ್ಯಕ್ಷನ್‌ ಸಿನಿಮಾಗಳಿಗೆ, ಕಾಲ್ಪನಿಕ ಕತೆಗಳಿಗೆ ಮೊರೆ ಹೋಗುವುದು ಸಾಮಾನ್ಯ. ಅದನ್ನು ಈ ಚಿತ್ರದಲ್ಲಿ ಬ್ರೇಕ್‌ ಮಾಡಲಾಗಿದೆ. ಆದರೂ ರೈತನ ಕುರಿತ ಮಾತು- ಕಷ್ಟಗಳು- ಹೋರಾಟ ಕೇವಲ ಬೋಧನೆಯಂತೆ ಸಾಗುತ್ತದೆ. ಆದರೆ ರೈತರ ಸಂಕಷ್ಟಗಳು ಸಾಕ್ಷ್ಯ ಚಿತ್ರವಾಗುವ ಅಪಾಯದಿಂದ ಪಾರು ಮಾಡುವುದು ನಟ ಶಿವರಾಜ್‌ಕುಮಾರ್‌. ಚಿತ್ರಕಥೆಯಲ್ಲಿ ಇನ್ನೊಂದಿಷ್ಟು ಬಿಗಿತನ, ರೈತನ ಕುರಿತು ಮಾತನಾಡುವಾಗ ಬಳಸಬೇಕಾದ ಗಟ್ಟಿಮಾತುಗಳಿಗೆ ಅಧ್ಯಯನ ಮಾಡಿಕೊಂಡಿದ್ದರೆ ಒಳ್ಳೆಯ ಸಿನಿಮಾ ಆಗುತ್ತಿತ್ತು. ಜತೆಗೆ ನಾಯಕಿಗೆ ‘ಐ ಲವ್‌ ಯೂ' ಅಂತ ಹೇಳಿಸುವುದನ್ನು ತಪ್ಪಿಸುವುದಕ್ಕಾಗಿ ಕೊನೆಯಲ್ಲಿ ನಾಯಕನಿಗೆ ಕ್ಯಾನ್ಸರ್‌ ಇದೆ ಅನ್ನುವ ಅಂಶದಲ್ಲಿ ಯಾವ ಲಾಜಿಕ್ಕೂ ಇಲ್ಲ. ನೋಡುಗನ ತಾಳ್ಮೆ ಪರೀಕ್ಷಿಸುವ ನಿಧಾನಗತಿಯ ಸಂಕಲನ. ಇಂಥ ಕೆಲವು ಅಂಶಗಳ ಹೊರತಾಗಿ ರೈತನ ಕತೆ, ಶಿವಣ್ಣ, ರಾಜ್‌ ಅವರ ‘ಬಂಗಾರದ ಮನುಷ್ಯ'ನ ನೆರಳು. ಈ ಕಾರಣಗಳಿಗೆ ‘ಬಂಗಾರ ಸನ್‌ ಆಫ್‌ ಬಂಗಾರದ ಮನುಷ್ಯ'ನನ್ನು ಮೆಚ್ಚಿಕೊಳ್ಳುವುದಕ್ಕೆ ಅಡ್ಡಿ ಇಲ್ಲ. ವಿ ಹರಿಕೃಷ್ಣ ಸಂಗೀತ, ಜೈ ಆನಂದ್‌ ಕ್ಯಾಮರಾ ತೀರಾ ಅದ್ಭುತವೇನಲ್ಲ.

- ಆರ್.ಕೇಶವಮೂರ್ತಿ, ಕನ್ನಡಪ್ರಭ
epaper.kannadaprabha.in

click me!