
-ಆರ್ ಕೇಶವಮೂರ್ತಿ
ಬೆಂಗಳೂರು ಕುರಿತ ಸಿನಿಮಾ ಎಂದರೆ ರೌಡಿಯಿಸಂ ಕುರಿತ ಚಿತ್ರವೇ ಆಗಿರುತ್ತದೆ. ಪದೇ ಪದೇ ನಿರ್ದೇಶಕರೂ ಅದನ್ನು ಸಾಬೀತು ಮಾಡಿಕೊಂಡೇ ಬಂದಿದ್ದಾರೆ.
ಬೆಂಗಳೂರಿನ ಭೂಗತ ಜಗತ್ತಿನ ಕತೆಗಳು ತೆರೆ ಮೇಲೆ ಶುರುವಾಗುವುದೇ ಮೆಜೆಸ್ಟಿಕ್‌ನಿಂದ! ಹಾಗೆ ‘ಮೆಜೆಸ್ಟಿಕ್' ಹೆಸರಿನಿಂದಲೇ ಬೆಂಗಳೂರು ಭೂಗತ ಲೋಕಕ್ಕೆ ಕೈ ಹಾಕಿದ ನಿರ್ದೇಶಕ ಸತ್ಯ ಅವರ ಮತ್ತೊಂದು ಕತ್ತಲ ಕತೆಯೇ ‘ಬೆಂಗಳೂರು ಅಂಡರ್‌ವಲ್ಡ್ ರ್'. ಪಿ.ಎನ್. ಸತ್ಯಅವರ ಈ ‘ಬೆಂಗಳೂರು ಭೂಗತ ಜಗತ್ತು ಹೇಗಿದೆ ಎಂದು ಕೇಳಿದರೆ ಉತ್ತರಿಸುವುದು ಕಷ್ಟ. ಯಾಕೆಂದರೆ ಅದನ್ನು ತೆರೆ ಮೇಲೆ ನೋಡಿಯೇ ಆನಂದಿಸಬೇಕು.
ಡೆಡ್ಲಿ ಸೋಮ ಅದಿತ್ಯ, ಮೆಜೆಸ್ಟಿಕ್ ಸತ್ಯ, ಜತೆಗೆ ಅಂಡರ್‌ವಲ್ಡ್ ರ್ ಇದ್ದರೆ ನಿರೀಕ್ಷೆ ಸಹಜವಾಗಿ ಹೆಚ್ಚಾಗುತ್ತದೆ. ಆದರೆ, ಸಿನಿಮಾ ನೋಡಿದಾಗ ಪ್ರೇಕ್ಷಕನ ಊಹೆ, ನಿರೀಕ್ಷೆಗಳು ಹುಸಿಯಾಗುತ್ತವೆ. ಇದು ಪಿ ಎನ್ ಸತ್ಯ ಮಾರ್ಕ್ ಎಂದು ಎಂಡ್ ಕಾರ್ಡ್ ಬರುವ ಮುನ್ನವೇ ನೋಡುಗ ತಲೆಗೆ ಹುಳ ಬಿಟ್ಟುಕೊಂಡು ಕೂರುತ್ತಾನೆ ಹೊರತು, ಚಿತ್ರ ಎತ್ತ ಸಾಗುತ್ತಿದೆ ಎಂಬುದು ಅರ್ಥೈಸಿಕೊಳ್ಳಲಾರ.
ಬಡ ಶಿಕ್ಷಕ ದಂಪತಿಯ ಪುಟ್ಟಕಂದ ಪಕ್ಕದ ಮನೆಯ ನಡು ವಯಸ್ಸಿನ ಮಹಿಳೆಯನ್ನು ತುಂಬಾ ಹಚ್ಚಿಕೊಂಡಿರುತ್ತಾನೆ. ಇದನ್ನು ಕಂಡ ಆತನ ತಾಯಿ ಪದೇ ಪದೇ ಸಿಡುಕುತ್ತಾಳೆ.
ಆ ಸಿಟ್ಟಿಗೆ ಕಾರಣ, ಆ ಮಹಿಳೆಯ ಕತ್ತಲ ವ್ಯವಹಾರ. ಮುಂದೆ ಆ ಬಾಲಕನ ಹೆತ್ತವರು ರೌಡಿಗಳ ಗುಂಡೇಟಿಗೆ ಬಲಿಯಾಗುತ್ತಾರೆ. ಅನಾಥನಾದ ಹುಡುಗನನ್ನು ಅದೇ ಪಕ್ಕದ ಮನೆಯಾಕೆಯೇ ಮಗನಂತೆ ಸಾಕುವ ನಿರ್ಧಾರ ಮಾಡಿ ತನ್ನ ಕತ್ತಲ ವ್ಯವಹಾರಕ್ಕೆ ವಿದಾಯ ಹೇಳುತ್ತಾಳೆ.
ಈ ನಡುವೆ ಆಕೆಯೂ ಪೊಲೀಸರ ಬುಲೆಟ್‌ಗೆ ಪ್ರಾಣ ಬಿಡುತ್ತಾಳೆ. ಹೆತ್ತವರ ಸಾವಿಗೆ ಕಾರಣರಾದ ರೌಡಿಗಳು, ಸಾಕು ತಾಯಿಯನ್ನು ಬಲಿ ಪಡೆದ ಪೊಲೀಸಪ್ಪನ ಮೇಲೆ ಹದಿಹರೆಯದ ಹುಡುಗ ದ್ವೇಷ ಕಟ್ಟಿಕೊಳ್ಳುತ್ತಾನೆ. ಆದರೆ, ಇಡೀ ಚಿತ್ರವನ್ನು ಸಾಧ್ಯವಾದಷ್ಟುಲಿಫ್ಟ್ ಮಾಡುವುದು ಆರ್ಯವರ್ಧನ ಅವರ ಕ್ಯಾಮೆರಾ. ಜತೆಗೆ ಅನೂಪ್ ಸಂಗೀತದಲ್ಲಿ ತೇಲಿ ಬರುವ ಒಂದು ಹಾಡು ಆದರೆ, ಇವರ ಹಿನ್ನೆಲೆ ಸಂಗೀತ ಸೌಂಡು ಮಾಡಿದಾಗಲೆಲ್ಲ ಬೇಡ ಬೇಡ ಅಂದರೂ ನಿರ್ದೇಶಕರ ರಾಮ್‌ಗೋಪಾಲ್ ವರ್ಮಾನ ಚಿತ್ರಗಳ ನೆನಪಾಗುತ್ತವೆ.
ಇದರ ಹೊರತಾಗಿ ನೋಡುವಂತಹುದು ಅದಿತ್ಯ ಅವರ ಬಿಲ್ಡಪ್‌ನಿಂದ ಕೂಡಿ ಎಂಟ್ರಿ ದೃಶ್ಯಗಳು. ಆದರೆ, ಡೈಲಾಗ್ ಡೆಲವರಿಯಿಂದ ಹಿಡಿದು ಪ್ರತಿಯೊಂದರಲ್ಲೂ ಅದಿತ್ಯ ಅವರದ್ದು ಒಂದೇ ರೀತಿಯ ಭಾವನೆ. ಅತ್ತಿತ್ತ ವಾಲದ, ಪ್ಲೆಕ್ಸಿಬಲ್ ಇಲ್ಲದ ಲಾಂಗಿನಂತೆ ಅವರು ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ ಎಂಬುದನ್ನು ಹೇಗೆ ಬೇಕಾದರೂ ಅರ್ಥ ಮಾಡಿಕೊಳ್ಳಬಹುದು! ಹೀಗಾಗಿ ನಟನೆ ವಿಚಾರಕ್ಕೆ ಬರುವುದಾದರೆ ಅದಿತ್ಯ ಬಿಟ್ಟು ಬೇರೊಬ್ಬರಿಗೆ ಹೆಚ್ಚಿನ ಸ್ಕೋಪ್ ಇಲ್ಲ. ಆದರೂ ಭಾವನಾ ಅವರಿಗೆ ತೂಕವಾದ ಪಾತ್ರವಿದೆ. ಆದರೆ, ಸತ್ಯ ಅವರಂತೆಯೇ ಸಿನಿಮಾ ಕೂಡ ಸಾಕಷ್ಟುಸೊರಗಿದೆ. ದೊಡ್ಡ ನಿರೀಕ್ಷೆಯ ಚಿತ್ರವೊಂದು ಸಾಧಾರಣವಾಗಿ ಬಂದು ಹೋಗುತ್ತದೆ.
(ಕನ್ನಡಪ್ರಭ ವಾರ್ತೆ)
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.