ಬಾಹುಬಲಿ ನೋಡಿ ಕೆ.ಜಿ.ಎಫ್ ಒಪ್ಪಿಕೂಂಡ್ರಂತೆ ಯಶ್!

By Kannadaprabha NewsFirst Published Oct 12, 2018, 10:27 AM IST
Highlights

ಡಿ.21ಕ್ಕೆ ಕೆಜಿಎಫ್‌ಗೆ ಬಿಡುಗಡೆ ಪಕ್ಕಾ ಆಗಿದೆ. ಆದರೆ, ಈ ಹಿಂದೆಯೇ ನಿರ್ಧರಿಸಿದಂತೆ ಚಿತ್ರ ತೆರೆ ಕಾಣದಿದ್ದೇಕೆ? ಟ್ರೇಲರ್, ಆಡಿಯೋ ಎಂದು ಬರುತ್ತೆ, ಪೋಸ್ಟರ್‌ಗಳಲ್ಲಿ ಯಶ್ ಬಿಟ್ಟರೆ ಬೇರೆಯವರು ಕಾಣುತ್ತಿಲ್ಲ ಯಾಕೆ, ಬಾಹುಬಲಿಗೂ ಕೆಜಿಎಫ್ ಇರೋ ನಂಟು ಏನು? ಇಲ್ಲಿ ಹೇಳಕ್ಕೊರಟಿರುವ ಕತೆ ಏನು... ಈ ಎಲ್ಲದರ ಬಗ್ಗೆ ನಟ ಯಶ್ ಇಲ್ಲಿ ಮಾತನಾಡಿದ್ದಾರೆ.

ನವೆಂಬರ್ 16 ಕ್ಕೆ ಬರಬೇಕಿದ್ದ ಸಿನಿಮಾ ಡಿಸೆಂಬರ್ ಹೋಗುವುದಕ್ಕೆ ಕಾರಣ?
ಚಿತ್ರ ಡಿ.21ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಗೆ ಈಗಷ್ಟೆ ಚಾಲನೆ ಸಿಕ್ಕಿದೆ. ಅದಕ್ಕೆ ತಕ್ಕಂತೆ ಫರಾನ್ ಅಖ್ತರ್, ಅನಿಲ್ ಥಡಾನಿ, ರಿತೇಶ್ ಸಿದ್ವಾನಿ ಅವರು ಚಿತ್ರ ನೋಡಿ ವಿತರಣೆ ಮುಂದಾಗಿದ್ದಾರೆ. ಹೀಗಾಗಿ ಕಡಿಮೆ ಸಮಯದಲ್ಲಿ ಹಿಂದಿಯಲ್ಲಿ ಚಿತ್ರವನ್ನು ಮಾರುಕಟ್ಟೆ ಮಾಡಕ್ಕಾಗಲ್ಲ. ಬಿಡುಗಡೆ ದಿನಾಂಕ ಮುಂದೂಡಿ ಎಂದು ಹಿಂದಿ ವಿತರಕರು ಕೇಳಿದ್ದಕ್ಕೆ ನ.16ಕ್ಕೆ ಬರೇಬೇಕಿದ್ದ ಸಿನಿಮಾ ಡಿ.21ಕ್ಕೆ ಹೋಗಿದೆ ಅಷ್ಟೆ.

ಬೇರೆ ಭಾಷೆಯಲ್ಲೂ ಬಿಡುಗಡೆ ಮಾಡುವ ಪ್ಲಾನ್ ಮೊದಲೇ ಇತ್ತಲ್ಲ?
ಇತ್ತು. ಆದರೆ, ದೊಡ್ಡ ಮಟ್ಟದಲ್ಲಿ ವಿತರಕರು ಬರುತ್ತಾರೆ, ಸಿನಿಮಾ ನೋಡಿ ಮೊದಲೇ ಖರೀದಿ ಮಾಡುತ್ತಾರೆಂಬ ಯೋಚನೆ ಇರಲಿಲ್ಲ. ಸಿನಿಮಾ ಶುರು ಮಾಡಿದಾಗ ನಮಗೆ ಹಿಂದಿಯಿಂದ ಈ ಮಟ್ಟಿಗೆ ರೆಸ್ಪಾನ್ಸ್ ಬರುತ್ತದೆಂಬ ನಿರೀಕ್ಷೆ ಮಾಡಿರಲಿಲ್ಲ. ಜತೆಗೆ ಹಿಂದಿ ಭಾಷೆಗಾಗಿ ಚಿತ್ರದಲ್ಲಿ ಕೆಲ ಸಣ್ಣ ಪುಟ್ಟ ಬದಲಾವಣೆ ಹಾಗೂ ತಾಂತ್ರಿಕ ಕೆಲಸಗಳನ್ನು ಮಾಡಬೇಕಿದೆ. ಈ ಎಲ್ಲಾ ಕಾರಣಕ್ಕೆ ಬಿಡುಗಡೆ ದಿನಾಂಕವನ್ನು ಬದಲಾಯಿಸಿದ್ದೇವೆ.

ಹಿಂದಿ ಜತೆಗೆ ಬೇರೆ ಭಾಷೆಯಲ್ಲಿ ಬಿಡುಗಡೆಯ ತಯಾರಿಗಳು ಹೇಗಿವೆ?
ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಹೀಗೆ ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಹಿಂದಿ ಹೊರತಾಗಿ ದಕ್ಷಿಣ ಭಾರತದ ಭಾಷೆಗಳಲ್ಲಿ ನಮ್ಮ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಹುಟ್ಟಿಕೊಂಡಿದೆ. ಅದರಲ್ಲೂ ತಮಿಳು ಹಾಗೂ ತೆಲುಗಿನಲ್ಲಿ ಕೆಜಿಎಫ್ ಬಿಡುಗಡೆಗೆ ಕಾಯುತ್ತಿದ್ದಾರೆ. ಅಲ್ಲಿನ ಸಿನಿಮಾ ಮೇಕರ್‌ಗಳು, ಪ್ರೇಕ್ಷಕರು ನಮ್ಮ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಎಲ್ಲಾ ಕಡೆ ಏಕಕಾಲಕ್ಕೆ
ಬಿಡುಗಡೆ ಮಾಡುತ್ತೇವೆ.

ಕರ್ನಾಟಕದ ಒಂದು ಊರಿನ ಕತೆ ಐದು ಭಾಷೆಗಳಿಗೆ ಅನ್ವಯಿಸುವ ಸಿನಿಮಾ ಹೇಗಾಗುತ್ತದೆ?
ಕೆಜಿಎಫ್ ಎಂದರೆ ಚಿನ್ನದ ನಾಡು. ಚಿನ್ನದ ನಾಡು ಅಂದರೆ ಅದು ಕರ್ನಾಟಕ. ನಮ್ಮ ರಾಜ್ಯದ ಈ ಚಿನ್ನದ ನಾಡು ಇಡೀ ಭಾರತಕ್ಕೆ ಗೊತ್ತು. ಅಂಥ ಊರಿನ ಕತೆ ನಾವು ಸಿನಿಮಾ ಮಾಡುತ್ತಿದ್ದೇವೆ ಎಂದ ಮೇಲೆ ಅದು ಇಡೀ ಭಾರತದ ಸಿನಿಮಾ ಮಾಡುತ್ತಿದ್ದೇವೆ ಎಂಬುದರಲ್ಲಿ ಯಾವ ಅನುಮಾನವಿಲ್ಲ. ಆ ಕಾರಣಕ್ಕೆ ಕೆಜಿಎಫ್ ಕರ್ನಾಟಕ ಗಡಿ ದಾಟಿ ಬೇರೆ ಮಾರುಕಟ್ಟೆಯಲ್ಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಬೇಕೆಂಬುದು ನನ್ನ ಆಸೆ.

ಆದರೂ ಕೇವಲ ತಾಂತ್ರಿಕತೆಯಿಂದ ಮಾತ್ರ ಕೆಜಿಎಫ್ ದೊಡ್ಡ ಸಿನಿಮಾ ಎನಿಸಿಕೊಳ್ಳುತ್ತಿದೆಯಲ್ಲ?
ಅದ್ದೂರಿ ಮೇಕಿಂಗ್, ದೊಡ್ಡ ತಾರಾಗಣ, ತಾಂತ್ರಿಕತೆಯನೈಪುಣ್ಯತೆ ಇವೆಲ್ಲವೂ ಸಿನಿಮಾ ಬಗ್ಗೆ ಕುತೂಹಲ ಮೂಡಿ ಅದೊಂದು ದೊಡ್ಡ ಸಿನಿಮಾ ಅನಿಸಿಕೊಳ್ಳುವುದಕ್ಕೆ ಒಂದು ಕಾರಣ ಅಷ್ಟೆ. ಹಾಗಂತ ನಾವು ಇಷ್ಟನ್ನು ಮಾತ್ರ ನಂಬಿಕೊಂಡು
ನಾವು ಕೆಜಿಎಫ್ ಚಿತ್ರವನ್ನು ಕೈಯಲ್ಲಿಡಿದು ಎಲ್ಲಾ ಭಾಷೆಯ ಬಾಗಿಲು ತಟ್ಟುತ್ತಿಲ್ಲ. ಇಲ್ಲೊಂದು ಯೂನಿವರ್ಸಲ್ ಕತೆ ಇದೆ. ಹಸಿವು, ಬಡತನ, ಅಕ್ರೋಶ, ಸಿಟ್ಟು, ಪ್ರತಿಭಟನೆ, ತಾಯಿಯ ಪ್ರೀತಿ ಇದು ಎಲ್ಲಾ ಕಾಲಕ್ಕೆ ಎಲ್ಲಾ ಭಾಷೆಯ ನೆಲದಲ್ಲಿ ಇದೆ ಮತ್ತು ಇರುತ್ತದೆ. ಈ ತಿರುವುಗಳಲ್ಲಿ ಸಾಗುವ ಸಿನಿಮಾ ಎಲ್ಲರಿಗೂ ಮುಟ್ಟುತ್ತದೆ ಎಂಬ ನಂಬಿಕೆ ಇದೆ.

ಹಾಗಾದರೆ ದೇಶಕ್ಕೆ ಚಿನ್ನ ಕೊಟ್ಟವರ ಚಿಂದಿಯಾದ ಬದುಕಿನ ಕತೆ ಹೇಳುತ್ತಿದ್ದೀರಿ ಅನ್ನಿ?
ಹ್ಹಹ್ಹಹ್ಹ... ಯಾವ ಬದುಕಿನ ಕತೆ ಎಂಬುದನ್ನು ನೀವು ಸಿನಿಮಾ ನೋಡಿ ಹೇಳಬೇಕು. ಆದರೆ, ಈಗಾಗಲೇ ಅಲ್ಲಲ್ಲಿ ಸುದ್ದಿಯಾಗಿರುವಂತೆ ಇದು ಕಳ್ಳನ ಕತೆಯಲ್ಲ. ಅಥವಾ ಕೆಜಿಎಫ್ನಲ್ಲಿ ಇದ್ದಾರೆ ಎನ್ನಲಾದ ರೌಡಿಗಳ ಅಥವಾ ಗ್ಯಾಂಗ್‌ಗಳ
ಕತೆಯಲ್ಲ. ನಮಗೆ ಅಂತ ಯಾವ ರೌಡಿಗಳೂ ಗೊತ್ತಿಲ್ಲ. ಕೆಜಿಎಫ್ ಬೇರೆಯದ್ದೇ ಆದ ಕತೆ ಹೇಳುತ್ತದೆ.

ಇಡೀ ಕೆಜಿಎಫ್ ಸಿನಿಮಾ ನಟ ಯಶ್ ಮೇಲೆ ನಿಂತಿದೆಯೇ?
ನಿಮಗೆ ಯಾಕೆ ಈ ಪ್ರಶ್ನೆ ಬಂತು ಗೊತ್ತಿಲ್ಲ. ಆದರೆ, ಒಬ್ಬ ಹೀರೋನಿಂದ ಇಡೀ ಸಿನಿಮಾ ಆಗಲ್ಲ ಅಂತ ಸ್ವತಃ ನಾನೇ ನಂಬಿ ಕೊಂಡಿದ್ದೇನೆ. ಹಾಗಾಗಿ ಇಡೀ ಸಿನಿಮಾ ನನ್ನ ಮೇಲೆ ನಿಂತಿಲ್ಲ. ನಾನೂ ಕೂಡ ಕೆಜಿಎಫ್ ಚಿತ್ರದಲ್ಲಿ ಕಾಣುವ ಕಲಾವಿದ.

ಚಿತ್ರದ ಪೋಸ್ಟರ್‌ಗಳಲ್ಲಿ ನಿಮ್ಮನ್ನು ಬಿಟ್ಟು ಯಾರು ಯಾರು ಕಾಣುತ್ತಿಲ್ಲವಲ್ಲ?
ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕರು ಹೊಸಬರು. ನಾಯಕಿ ಶ್ರೀನಿಧಿ ಶೆಟ್ಟಿಗೂ ಇದು ಮೊದಲ ಸಿನಿಮಾ. ಹೀಗಾಗಿ ಮಾರುಕಟ್ಟೆಯ ದೃಷ್ಟಿಯಿಂದ ಪೋಸ್ಟರ್‌ಗಳಲ್ಲಿ ನನ್ನ ಫೋಟೋಗಳನ್ನೇ ಬಳಸಿದ್ದಾರೆ. ಮುಂದೆ ನಾಯಕಿ ಹಾಗೂ ಬೇರೆ ಬೇರೆ ಕಲಾವಿದರ ಲುಕ್ ರಿವಿಲ್ ಮಾಡುತ್ತೇವೆ. ನೀವು ಸಿನಿಮಾ ನೋಡಿದರೆ ಬೇರೆಯವರಿಗಿಂತ ಯಶ್ ಕಡಿಮೆ ಇದ್ದಾರೇನೋ ಅನಿಸುತ್ತದೆ. ಅಷ್ಟರ ಮಟ್ಟಿಗೆ ಚಿತ್ರದಲ್ಲಿ ಪ್ರತಿಯೊಂದು ಪಾತ್ರಕ್ಕೆ ನಿರ್ದೇಶಕರು ಮಹತ್ವ ಕೊಟ್ಟಿದ್ದಾರೆ.

ಚಿತ್ರದಲ್ಲಿ ಎಷ್ಟು ಮಂದಿ ಕಲಾವಿದರಿದ್ದಾರೆ? ಎಷ್ಟು ದಿನ, ಎಲ್ಲೆಲ್ಲಿ ಚಿತ್ರೀಕರಣ ಆಗಿದೆ?
ಎಷ್ಟು ಮಂದಿ ಇದ್ದಾರೆ ಎಂದು ಹೇಳದಷ್ಟು ತಾರಾಗಣ ಇದೆ. ಕರ್ನಾಟಕ, ಆಂಧ್ರ ಹಾಗೂ ತಮಿಳುನಾಡು ಹೀಗೆ ಮೂರು ರಾಜ್ಯಗಳ ಜೂನಿಯರ್ ಆರ್ಟಿಸ್ಟ್‌ಗಳಿದ್ದಾರೆ. ಹೀಗಾಗಿ ಲೆಕ್ಕ ಇಟ್ಟಿಲ್ಲ. ಒಟ್ಟು ೧೩೫ ದಿನಗಳ ಕೆಜಿಎಫ್, ಮೈಸೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ.

ಅಂದ್ರೆ ಚಾಪ್ಟರ್ 2 ಚಿತ್ರಕ್ಕೆ ಶೂಟಿಂಗ್ ಮುಗಿದಿದೆಯೇ? ಯಾವಾಗ ತೆರೆಗೆ ಬರುತ್ತೆ?
ಬಹುತೇಕ ಚಿತ್ರೀಕರಣ ಮುಗಿಸಿದ್ದೇವೆ. ಸಣ್ಣ ಪುಟ್ಟ ಪ್ಯಾಚಿಂಗ್ ಕೆಲಸಗಳು ಬಾಕಿ. ಯಾವಾಗ ಬರುತ್ತದೆ ಅಂತ ನಿರ್ದಿಷ್ಟವಾಗಿ ಹೇಳಲಾಗದು. ಆದರೆ, 2019 ರ ಮಧ್ಯದಲ್ಲಿ ತೆರೆಗೆ ಬರುವ ಸಾಧ್ಯತೆಗಳಿವೆ.

click me!