ಸಿನಿಮಾ ವಿಮರ್ಶೆ: ಕಾಣದ್ದನ್ನು ಕರುಣಿಸುವ ಬೆರಗು ಬಿನ್ನಾಣಗಳ ಬಾಹುಬಲಿ

By Suvarna Web DeskFirst Published Apr 29, 2017, 4:18 PM IST
Highlights

ಒಂದಾನೊಂದುಕಾಲದಲ್ಲಿಏನಾಯ್ತುಗೊತ್ತಾಅಂತಕತೆಹೇಳುತ್ತಾ, ನಿರ್ದೇಶಕಎಸ್ಎಸ್ರಾಜಮೌಳಿಹೊಸಜನರೇಶನ್ನಿನಅತ್ಯುತ್ತಮಅಜ್ಜಿಆಗುತ್ತಾರೆ. ಯಾವತ್ತೋನಡೆದಕತೆಯನ್ನುಮುಂದೇನಾಯ್ತುಮುಂದೇನಾಯ್ತುಅಂತಪ್ರಶ್ನೆಹಾಕಿಕೊಳ್ಳುತ್ತಾನಾವೆಲ್ಲಮುಗ್ಧಮಕ್ಕಳಾಗುತ್ತೇವೆ.

ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ?
ಇದು ಪ್ರಶ್ನೆಯಲ್ಲ, ‘ಬಾಹುಬಲಿ' ಮೊದಲ ಭಾಗದಲ್ಲಿ ನಿರ್ದೇಶಕರು ಪ್ರೇಕ್ಷಕರ ಮೂಗಿಗೆ ಸವರಿದ ತುಪ್ಪ! ವರ್ಷಾನುಗಟ್ಟಲೆ ಈ ಪ್ರಶ್ನೆಗೆ ಹತ್ತಾರು ಸಾಧ್ಯತೆ, ಕಲ್ಪನೆ ಇಟ್ಟುಕೊಂಡು ಪ್ರೇಕ್ಷಕರು ಮನಸ್ಸಲ್ಲೇ ಮಂಡಿಗೆ ತಿಂದಿದ್ದರು. ಆ ಪ್ರಶ್ನೆಯನ್ನು ಸರಿ ಸುಮಾರು 2 ವರ್ಷ ಜೀವಂತವಿಟ್ಟು, 2ನೇ ಭಾಗಕ್ಕೆ ಯಶಸ್ವಿಯಾಗಿ ಪ್ರೇಕ್ಷಕರನ್ನು ಎಳೆದುಕೊಂಡು ಬಂದ ನಿರ್ದೇಶಕರು, ಕಟ್ಟಪ್ಪ ಬಾಹುಬಲಿಯನ್ನು ಕೊಂದ ಕತೆಯನ್ನೇ ವಿವರಿಸಿದ್ದಾರೆ. ಆದರೆ ಅದೇ ಕಾಲಕ್ಕೆ ನೀವು ಕಟ್ಟಪ್ಪನ ಪ್ರಶ್ನೆಯನ್ನು ಮರೆತು, ಕತೆಯ ಜೊತೆ ಟ್ರಾವೆಲ್‌ ಮಾಡುವ ನೆಪದಲ್ಲಿ ಬಾಹುಬಲಿ, ಬಲ್ಲಾಳ, ಶಿವಗಾಮಿ, ದೇವಸೇನಾ, ಕಟ್ಟಪ್ಪ, ಬಿಜ್ಜಳದೇವರ ಪ್ರಪಂಚದೊಳಗೆ ಪ್ರವೇಶ ಮಾಡಿ, ಹೆಚ್ಚುಕಡಿಮೆ 3 ಗಂಟೆ ನೀವೇ ಕತೆ ಆಗುತ್ತೀರಿ.
ಒಂದಾನೊಂದು ಕಾಲದಲ್ಲಿ ಏನಾಯ್ತು ಗೊತ್ತಾ ಅಂತ ಕತೆ ಹೇಳುತ್ತಾ, ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಹೊಸ ಜನರೇಶನ್ನಿನ ಅತ್ಯುತ್ತಮ ಅಜ್ಜಿ ಆಗುತ್ತಾರೆ. ಯಾವತ್ತೋ ನಡೆದ ಕತೆಯನ್ನು ಮುಂದೇನಾಯ್ತು ಮುಂದೇನಾಯ್ತು ಅಂತ ಪ್ರಶ್ನೆ ಹಾಕಿಕೊಳ್ಳುತ್ತಾ ನಾವೆಲ್ಲ ಮುಗ್ಧ ಮಕ್ಕಳಾಗುತ್ತೇವೆ.
-ಬಹುನಿರೀಕ್ಷಿತ ‘ಬಾಹುಬಲಿ2' ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ ಒಂದು ಕಾಲ್ಪನಿಕ ಕತೆ. ಅಣ್ಣ-ತಮ್ಮರ ಮಧ್ಯೆ ದಾಯಾದಿ ಕಲಹ ಹೊಸತಲ್ಲ, ಅತ್ತೆ- ಸೊಸೆಯರ ಮಧ್ಯೆ ಕಲಹ ಹೊಸತಲ್ಲ, ರಾಜ ಪ್ರಜಾಪರಿಪಾಲಕ ಆಗಿರಬೇಕೆಂಬ ಕಲ್ಪನೆ ಹೊಸತಲ್ಲ, ರಾಜನಾಗುವ ಅರ್ಹತೆ ಇದ್ದರೂ ಆತನನ್ನು ಮೋಸದಿಂದ ದೂರ ಮಾಡುವ ಹುನ್ನಾರ ಹೊಸತಲ್ಲ. ನಾವು ಪುರಾಣದಲ್ಲಿ ಕೇಳಿದ ಕತೆಗಳ ಆತ್ಮವನ್ನೇ ನಿರ್ದೇಶಕರು ಹೊಸತಾಗಿ, ಸಮರ್ಥವಾಗಿ, ರೋಚಕವಾಗಿ, ವೀರಾವೇಶದಿಂದ ಕಟ್ಟುತ್ತಾ ಹೋಗುತ್ತಾರೆ. ಹಾಗಾಗಿ ಚಂದಮಾಮ ಕತೆಗಳಿಗೆ ಕೈಕಾಲು, ಕಣ್ಣು, ಮೂಗು, ಜೀವ ಬಂದು, ನಮ್ಮ ಕಲ್ಪನೆಯ ಜಗತ್ತು ಕಣ್ಮುಂದೆ ಮೈದಾಳಿ, ಗ್ರಾಫಿಕ್ಕಿನ ಹಂಗಲ್ಲಿದ್ದೇವೆ ಅಂತನ್ನುವುದನ್ನೂ ಮರೆತು ನಾವು ನೋಡುತ್ತಾ ಕಳೆದು ಹೋಗುವಂತೆ ಮಾಡುವ ಶಕ್ತಿಯನ್ನು ‘ಬಾಹುಬಲಿ2' ಪಡೆದುಕೊಳ್ಳುತ್ತದೆ. ಕೊಂಚವೂ ನಮಗೆ ಹೊಸತು ಅಂತ ತೋರದಂತೆ, ನಮ್ಮ ರಕ್ತ ಕುದಿಯುವಂತೆ, ನಮ್ಮ ಮೈ ಝುಮ್ಮೆನ್ನುವಂತೆ, ನಮ್ಮ ನರ ನಾಡಿಗಳು ಸೆಟೆದುಕೊಳ್ಳುವಂತೆ, ನಮ್ಮ ಎದೆ ಬಡಿದುಕೊಳ್ಳುವಂತೆ ಕತೆ ಹೇಳುವ ಕಲೆ, ಆ ಕಲೆಯನ್ನು ದೃಶ್ಯವಾಗಿ ಹೆಣೆಯುವ ಬಲೆ- ಎರಡೂ ಈ ಚಿತ್ರದಲ್ಲಿ ಅದ್ಭುತವಾಗಿ ಬೆಸೆದಿದೆ. ಹಾಗಾಗಿ ಇದಕ್ಕೊಂದು ಭಾಷೆಯ ಗಡಿ ಇದೆ ಅಂತ ಮರೆತು, ಭಾಷಾತೀತ ಸಂಭ್ರಮ­ದಿಂದ ಈ ಕತೆಯನ್ನು ಎದೆಗೆ ಹಾಕಿಕೊಳ್ಳಬಹುದು.
ಮೊದಲ ಭಾಗದಲ್ಲಿ ಕಟೆದು, ನಿಲ್ಲಿಸಿದ್ದ ಅಹಂಕಾರಿ ಬಲ್ಲಾಳನ ಸರ್ವಾಧಿಕಾರಿ ಪ್ರತಿಮೆಯನ್ನು ಎರಡನೇ ಭಾಗದಲ್ಲಿ ಹೇಗೆ ಛಿದ್ರ ಮಾಡುತ್ತಾನೆ ಅನ್ನುವುದು ಈ ಚಿತ್ರದ ಕತೆಗಾರಿಕೆಗೆ ಅತ್ಯುತ್ತಮ ಉದಾಹರಣೆ. ಹಾಗೇ ಪ್ರೇಮಿ ದೇವಸೇನಾಳನ್ನು ಹಡಗಲ್ಲಿ ಕರೆದುಕೊಂಡು ಮಾಹಿಶ್ಮತಿಗೆ ಕರೆದುಕೊಂಡು ಬರುವಾಗ ಆ ಹಡಗು ಆಕಾಶದಲ್ಲಿ ಹಾರಾಡುವ ಪುಷ್ಪಕವಿಮಾನವಾಗುವುದು ಇನ್ನೊಂದು ಅದ್ಭುತ ಉದಾಹರಣೆ. ಪ್ರತಿ ಬಾಣ ಪ್ರಯೋಗದ ಹಿಂದೆಯೂ ಒಂದು ವಿಜ್ಞಾನವಿದೆ, ಪುಟ್ಟಸಾಮಂತ ರಾಷ್ಟ್ರಕ್ಕೂ ದೊಡ್ಡ ಶತ್ರುಗಳನ್ನು ಎದುರಿಸಲು ಸಾಮರ್ಥ್ಯ ಇರುವುದು ಅದು ಬಳಸುವ ತಲೆಯಲ್ಲಿದೆ, ತನ್ನನ್ನು ಬಳಸಿಕೊಳ್ಳಲು ಅನುಮತಿ ಕೊಡುವ ಪ್ರಕೃತಿಯೇ, ಅವನನ್ನು ಹಣಿಯಬಹುದು- ಇಂಥದ್ದೆಲ್ಲಾ ಹಲವು ಸೂಕ್ಷ್ಮಗಳನ್ನು ನಿರ್ದೇಶಕರು ಕತೆಯ ಉದ್ದಕ್ಕೂ ಸೂಕ್ಷ್ಮವಾಗಿ ಹೆಣೆಯುತ್ತಾ ಹೋಗುತ್ತಾರೆ. ಎಲ್ಲೋ ಒಂದೆ­ರಡು ಕಡೆ ಚಿತ್ರಕತೆ ಕೊಂಚ ಪೇಲವವಾದಂತೆ ಕಂಡರೂ ಬಹುತೇಕ ಕಡೆಗಳಲ್ಲಿ ಕತೆ ಹೇಳುವಿಕೆಯ ತಂತ್ರ ಮತ್ತು ಅದಕ್ಕೆ ಬಳಸುವ ಬುದ್ಧಿವಂತಿಕೆ ಅದ್ಭುತವಾಗಿ ಒಂದಕ್ಕೊಂದು ಬೆಸೆದುಕೊಳ್ಳು­ತ್ತದೆ. ಒಂದು ಪಾತ್ರಕ್ಕೆ ರಕ್ತ, ಮಾಂಸ, ಎಲುಬು ಮಾತ್ರ ಇರುವುದಿಲ್ಲ, ಆತ್ಮವೂ ಇರುತ್ತದೆ ಅನ್ನು­ವು­­ದನ್ನು ಈ ಸಿನಿಮಾ ನೋಡಿಯೇ ಕಲಿಯ­ಬೇಕು. ರಾಜಕುಮಾರ­ನೊಬ್ಬ ಎತ್ತರದ ಮರದ ಮೇಲೆ ಮಲಗಿ, ಬೀಳುವ ಭಯವಿ­ಲ್ಲದೇ ನಿದ್ದೆ ಮಾಡಬಲ್ಲ ಅಂತ ತೋರಿ­ಸುವ ಮೂಲಕ ಆತ ಎಂಥ ಬಲಾಢ್ಯ, ಅಸಹಾಯ ಶೂರ, ಅಪ್ರತಿಮ ವೀರ ಅಂತ ನಿರ್ದೇಶಕ ಹೇಳಿಬಿಡುತ್ತಾನೆ.

- ವಿಕಾಸ ನೇಗಿಲೋಣಿ, ಕನ್ನಡಪ್ರಭ

click me!