
ಬೆಂಗಳೂರು: 1987ರಲ್ಲಿ ಡಾ.ರಾಜ್‌ಕುಮಾರ್ ಮತ್ತು ನಟಿ ಅರ್ಚನಾ ಅವರ ಅಭಿನಯದ, ಶಂಕರ್ ನಾಗ್ ನಿರ್ದೇಶನದ ಒಂದು ಮುತ್ತಿನ ಕಥೆ (Vandu Muttina Kathe) ಅದ್ಭುತ ಸಿನಿಮಾಗಳಲ್ಲಿ ಒಂದು ಎನ್ನಿಸಿತ್ತು. ಅಷ್ಟಕ್ಕೂ ಡಾ.ರಾಜ್ ಅವರ ಬಹುತೇಕ ಎಲ್ಲಾ ಸಿನಿಮಾಗಳು ಎಷ್ಟೇ ವರ್ಷವಾದರೂ, ಎಷ್ಟೇ ದಶಕ ಕಳೆದರೂ ಜನಮಾನಸದಲ್ಲಿ ಅಚ್ಚಳಿಯದೇ ಇರುವ ಸಿನಿಮಾಗಳೇ. ಅವುಗಳಲ್ಲಿ ಒಂದು "ಒಂದು ಮುತ್ತಿನ ಕಥೆ" ಅವತ್ತಿನ ಕಾಲಕ್ಕೆ ಹಾಲಿವುಡ್ ಶೈಲಿಯ ಸಿನಿಮಾ ಇದು. ಕುತೂಹಲ ಎಂದರೆ, ಈ ಸಿನಿಮಾದಲ್ಲಿ ತಮಿಳು ನಟಿ ಎಂದೇಗುರುತಿಸಿಕೊಂಡಿದ್ದ ನಟಿ ಅರ್ಚನಾ ಅವರು ನಾಯಕಿಯಾಗಿ ಪಾತ್ರ ಮಾಡಿದ್ದರು. 1984ರಲ್ಲಿ 'ಪ್ರೇಮಿಗಳ ಸವಾಲ್' ಸಿನಿಮಾ ಮೂಲಕ ಅರ್ಚನಾ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿ ಡಾ.ರಾಜ್‌ಕುಮಾರ್ ಜೊತೆಯಲ್ಲಿಯೂ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡರು.
ಇದೀಗ ನಟಿ ಅರ್ಚನಾ ಅವರು, ಒಂದು ಮುತ್ತಿನ ಕಥೆಯ ರೋಚಕ ಪಯಣವನ್ನು ಸ್ವ್ಯಾನ್ ಸ್ಟುಡಿಯೋ ಎನ್ನುವ ಚಾನೆಲ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಸಿನಿಮಾದ ಯಾರಿಗೂ ತಿಳಿಯದ ಕೆಲವೊಂದು ಇಂಟರೆಸ್ಟಿಂಗ್ ವಿಷಯವನ್ನೂ ನಟಿ ಹಂಚಿಕೊಂಡಿದ್ದಾರೆ. ಶಂಕರ್ ನಾಗ್ ಅದ್ಭುತ ತಂತ್ರಜ್ಞ. ಕನ್ನಡದಲ್ಲಿ ಅವರು ಬಹು ದೊಡ್ಡ ಕಲಾವಿದರು. ನೋಡಲು ತಮಿಳು ವ್ಯಕ್ತಿ ರೀತಿಯೇ ಕಾಣಿಸುತ್ತಿದ್ದರೂ, ಅವರಂಥ ಅದ್ಭುತ ನಟ ಅಪರೂಪ ಎಂದಿದ್ದಾರೆ ಅರ್ಚನಾ. 'ಒಂದು ಮುತ್ತಿನ ಕಥೆ' ಸಿನಿಮಾ ಸಂಪೂರ್ಣವಾಗಿ ಕರಾವಳಿ ಭಾಗದಲ್ಲಿ ನಡೆಯುವ ಕಥೆ. ಆ ಚಿತ್ರದಲ್ಲಿ ನನಗೆ ಬಹಳ ಒಳ್ಳೆ ಅನುಭವಗಳಿವೆ. ಡಾ. ರಾಜ್‌ಕುಮಾರ್ ಅವರೊಟ್ಟಿಗೆ ನಟಿಸಿದ್ದು ಮರೆಯೋಕೆ ಸಾಧ್ಯವಿಲ್ಲ. ಡಾ.ರಾಜ್ ಮತ್ತು ಶಂಕರ್ ನಾಗ್ ಇಬ್ಬರ ಜೊತೆ ಕೆಲಸ ಮಾಡುವ ಭಾಗ್ಯ ಸಿಕ್ಕಿದ್ದೇ ನನ್ನ ಪುಣ್ಯ ಎಂದಿದ್ದಾರೆ.
ಇದೇ ವೇಳೆ, ನಟಿ ಅರ್ಚನಾ ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್ ಅವರ ಕುರಿತು ಇಂಟರೆಸ್ಟಿಂಗ್ ವಿಷಯ ಒಂದನ್ನು ರಿವೀಲ್ ಮಾಡಿದ್ದಾರೆ. ಆ ಚಿತ್ರಕ್ಕೆ ಶಂಕರ್‌ನಾಗ್ ಪತ್ನಿ ಅರುಂಧತಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ದರು. ಆಗ ಮಹಿಳಾ ಕಾಸ್ಟ್ಯೂಮ್ ಡಿಸೈನರ್ ಬಹಳ ಕಮ್ಮಿ. ಚಿತ್ರದಲ್ಲಿ ಎಲ್ಲರಿಗೂ ಅವ್ರೇ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದರು. ಅವರು ಹಾರ್ಡ್ ವರ್ಕ್ ಹೇಳುವುದಕ್ಕೆ ಕಷ್ಟ, ನನ್ನನ್ನು ಇಡೀ ತಂಡ ಮಗು ರೀತಿ ನೋಡಿಕೊಂಡಿದ್ರು. ಅದ್ಭುತ ಅನುಭವ ಅದಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ ಅರ್ಚನಾ.
ಇದೇ ವೇಳೆ ಈ ಸಿನಿಮಾದ ಇನ್ನಷ್ಟು ಕುತೂಹಲವನ್ನು ತೆರೆದಿಟ್ಟ ಅವರು, ಒಂದು ಇಡೀ ಹಾಡನ್ನು ನೀರಿನ ಆಳದಲ್ಲಿ ಚಿತ್ರೀಕರಿಸಲಾಗಿತ್ತು. ಅದಕ್ಕಾಗಿ ನಾನು ಅಂಡರ್ ವಾಟರ್ ಸ್ವಿಮ್ಮಿಂಗ್ ಕಲಿತೆ ಎಂದು ಅರ್ಚನಾ ತಿಳಿಸಿದ್ದಾರೆ. "ಅವತ್ತಿನ ಕಾಲಕ್ಕೆ ಒಂದು ಇಂಗ್ಲೀಷ್ ಸಿನಿಮಾ ಟಚ್ ಆ ಚಿತ್ರಕ್ಕಿತ್ತು. ಅಂತಾದೊಂದು ಚಿತ್ರದಲ್ಲಿ ನನಗೆ ಅವಕಾಶ ಕೊಟ್ಟಿದ್ದು ವಿಶೇಷ. ನಾನು ಆ ವಿಚಾರದಲ್ಲಿ ಬಹಳ ಲಕ್ಕಿ ಎಂದಿದ್ದಾರೆ.
ಅಂದಹಾಗೆ ನಟಿ ಅರ್ಚನಾ ಅವರು, 'ಗುರಿ' ಸಿನಿಮಾದಲ್ಲಿ ಕೂಡ ಡಾ. ರಾಜ್ ಜೋಡಿಯಾಗಿ ನಟಿಸಿದ್ದರು. 'ಬೆಳ್ಳಿನಾಗ' ಹಾಗೂ 'ಹುಲಿಯಾ'ದಲ್ಲಿಯೂ ನಾಯಕಿಯಾಗಿ ಕಾಣಿಸಿಕೊಂಡರು. ತೆಲುಗಿನ 'ದಾಸಿ' ಹಾಗೂ ತಮಿಳಿನ 'ವೀಡು' ಚಿತ್ರಗಳ ನಟನೆಗಾಗಿ ಎರಡು ಬಾರಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಅರ್ಚನಾ ಅವರಿಗೆ ಲಭಿಸಿತ್ತು. 'ಒಂದು ಮುತ್ತಿನ ಕಥೆ' ಚಿತ್ರದಲ್ಲಿ ಐತು(ಡಾ. ರಾಜ್) ಜೋಡಿ ಕಾಕಿ ಪಾತ್ರದಲ್ಲಿ ಕಾಣಿಸಿಕೊಂಡರು.
ಇದೇ ವೇಳೆ ಇವರ ಬಗ್ಗೆ ಇನ್ನೊಂದು ಇಂಟರೆಸ್ಟಿಂಗ್ ವಿಷಯವೂ ಇದೆ. ಅದೇನೆಂದರೆ, ಇವರ ಮೂಲ ಹೆಸರು ಸುಧಾ. ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ನಟನೆಯ ಪಟ್ಟುಗಳನ್ನು ಕಲಿತ ಬಳಿಕ ಅರ್ಚನಾ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಆರಂಭದಲ್ಲಿ ಸಿನಿಮಾಗಳಲ್ಲಿ ತಮಗೆ ಅವಕಾಶ ನಿರಾಕರಿಸಲಾಗಿತ್ತು. ನೋಡೊಕೆ ನಟಿ ರೀತಿ ಕಾಣಲ್ಲ, ಬಹಳ ಸಿಂಪಲ್ ಆಗಿ ಕಾಣ್ತೀನಿ ಎನ್ನುವ ಕಾರಣಕ್ಕೆ ಬೇಡ ಎಂದಿದ್ದರಂತೆ. ಆದರೆ ಬಾಲು ಮಹೇಂದರ್ ನಾನು ನಟಿಸಬಹುದು ಎಂದು ಹೇಳಿ ಅವಕಾಶ ಕೊಟ್ಟರು ಎನ್ನುವುದನ್ನು ಅರ್ಚನಾ ನೆನಪಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.