
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮೂವರು ಮೊಮ್ಮಕ್ಕಳ ಪ್ರೀತಿಯ ತಾತ. ಒಬ್ಬ ಸೆಲೆಬ್ರಿಟಿಯಾಗಿಯೂ ತಮ್ಮ ಈ ಸ್ಥಾನವನ್ನು ಸರಿಯಾಗಿಯೇ ನಿಭಾಯಿಸುತ್ತಾ ಬಂದಿರುವ ಅಮಿತಾಬ್ ಬಚ್ಚನ್ ಅವರಿಗೆ ಹೆಣ್ಣು ಮಕ್ಕಳ ಮೇಲೆ ವಿಶೇಷವಾದ ಕಾಳಜಿ. ಈ ಕಾರಣಕ್ಕಾಗಿಯೇ ಅವರು ತಮ್ಮ ಇಬ್ಬರು ಮೊಮ್ಮಕ್ಕಳಾದ ನವ್ಯಾ ನವೇಲಿ ಹಾಗೂ ಆರಾಧ್ಯಗೆ ಪತ್ರವೊಂದನ್ನು ಬರೆದಿದ್ದಾರೆ.
ತಾವು ಪತ್ರವನ್ನು ಓದುತ್ತಿರುವ ವಿಡಿಯೋವನ್ನು ಬಿಗ್ ಬಿ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.
ನಮಸ್ತೆ ಆರಾಧ್ಯ ಬಹುಶಃ ನೀನು ಇದನ್ನು ಯಾವಾಗ ನೋಡುತ್ತಿಯೋ ನನಗೆ ಗೊತ್ತಿಲ್ಲ. ಆದರೆ ನಿನ್ನ ತಾತ 2016ರಲ್ಲಿ ಕಾಣಿಸುತಿದ್ದಿದ್ದು ಹೀಗೆ, ನಮಸ್ತೆ ನವ್ಯಾ ನವೇಲಿ, ನಾನು ನಿಮಗಿಬ್ಬರಿಗೆ ಒಂದು ಪತ್ರ ಬರೆಯುತ್ತಿದ್ದೇನೆ. ಇದನ್ನು ಇಂಟರ್‌ನೆಟ್‌ನಲ್ಲೂ ಹಾಕುತ್ತೇನೆ. ಏಕೆಂದರೆ ಈ ಪತ್ರ ಪ್ರತಿಯೊಬ್ಬ ಮೊಮ್ಮಗುವಿಗೂ ಅನ್ವಯಿಸುತ್ತದೆ ಎಂಬುದು ನನ್ನ ಭಾವನೆ.
ಪ್ರೀತಿಯ ನವ್ಯಾ, ಆರಾಧ್ಯಾ, ನೀವಿಬ್ಬರು ನಿಮ್ಮ ಹೆಗಲಿನ ಮೇಲೆ ಭಾರಿ ಬೆಲೆ ಬಾಳುವ ಆಸ್ತಿ ಹೊಂದಿದ್ದೀರಿ, ಆರಾಧ್ಯಾ ನಿನ್ನ ಆಸ್ತಿ ನಿನ್ನ ಮುತ್ತಾತ ಹರಿವಂಶರಾಯ್ ಬಚ್ಚನ್, ನವ್ಯ ನಿನ್ನ ಆಸ್ತಿ ನಿನ್ನ ಮುತ್ತಾತ ಶ್ರೀ ಹೆಚ್. ಪಿ ನಂದ. ನಿಮ್ಮಿಬ್ಬರ ಮುತ್ತಾತಂದಿರು ನಿಮ್ಮ ಇಂದಿನ ಹೆಸರಿನ ನಂತರದ ಸರ್‌ನೇಮ್‌ನ್ನು ಸೆಲೆಬ್ರಿಟಿ ಮಟ್ಟಕ್ಕೆ ಏರಿಸಿದವರು. ಇಬ್ಬರ ಸರ್‌ನೇಮ್ ನಿಮಗೆ ಅತ್ಯಂತ ಹೆಚ್ಚು ಖ್ಯಾತಿ, ಘನತೆಯನ್ನು ತಂದು ಕೊಟ್ಟಿದೆ.
ನೀವು ನಂದಾ ಅಥವಾ ಬಚ್ಚನ್ ಎಂಬ ಸರ್‌ನೇಮ್ ಹೊಂದಿರಬಹುದು ಆದರೂ ನೀವಿಬ್ಬರು ಹುಡುಗಿಯರು, ಹೆಣ್ಣು ಮಕ್ಕಳು. ನೀವು ಹೆಣ್ಣು ಮಕ್ಕಳಾಗಿರುವ ಕಾರಣಕ್ಕೆ ಈ ಸಮಾಜ ನಿಮಗೆ ಕಟ್ಟು ಕಟ್ಟಳೆಯನ್ನು ಹಾಕುತ್ತದೆ. ಜನ ನೀವು ಹೇಗೆ ಬಟ್ಟೆ ಧರಿಸಬೇಕು, ಹೇಗೆ ನಡೆದುಕೊಳ್ಳಬೇಕು, ಯಾರೊಂದಿಗೆ ಸಂಬಂಧ ಬೆಳೆಸಬೇಕು. ಎಲ್ಲಿಗೆ ನೀವು ಹೋಗಬೇಕು ಎಂಬುದನ್ನು ಹೇಳುತ್ತದೆ.
ಆದರೆ ಬೇಡ, ಈ ನೆರಳಿನಿಂದ ನೀವು ಹೊರಬನ್ನಿ. ನೀವು ಹೇಗಿರಬೇಕು ಎಂಬುದನ್ನು ನೀವೇ ನಿರ್ಧರಿಸಿ. ನಿಮ್ಮ ಲಂಗದ ಉದ್ದವೇ ನಿಮ್ಮ ನಡತೆಯ ಮಾಪನ ಎಂಬುದನ್ನು ಹೇಳುವುದಕ್ಕೆ ಯಾರಿಗೂ ಅವಕಾಶ ನೀಡದಿರಿ. ನಿಮಗೆ ಮದುವೆಯಾಗಬೇಕು ಎಂದು ಅನಿಸಿದರೆ ಮಾತ್ರ ಮದುವೆಯಾಗಿ ಬೇರೆ ಯಾವುದೇ ಕಾರಣಕ್ಕೂ ವಿವಾಹ ಬಂಧನಕ್ಕೊಳಗಾಗದಿರಿ. ಜನ ಏನು ಮಾತನಾಡುತ್ತಾರೆ ಎಂಬುದರ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳದಿರಿ. ದಿನದಾಂತ್ಯಕ್ಕೆ ನಿಮ್ಮ ಕಾರ್ಯದಿಂದ ಉಂಟಾಗುವ ಪರಿಣಾಮವನ್ನು ಎದುರಿಸಬೇಕಾಗಿರುವವರು ನೀವೇ ಆಗಿರುವುದರಿಂದ ಯಾರಿಗೂ ನಿಮ್ಮ ಜೀವನದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅವಕಾಶ ನೀಡಬೇಡಿ.
ನವ್ಯಾ ನಿನಗೆ ಘನತೆ ನೀಡುತ್ತಿರುವ ಈ ಸರ್‌ನೇಮ್‌ಗಳು ನಿನ್ನನ್ನು ಕಷ್ಟದಿಂದ ಪಾರು ಮಾಡಲು ಸಾಧ್ಯವಿಲ್ಲ. ಯಾಕೆಂದರೆ ನೀನೊಬ್ಬಳು ಹೆಣ್ಣು ಮಗಳು. ಆರಾಧ್ಯ, ನೀನು ಇದನ್ನು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ನಾನು ನಿನ್ನೊಂದಿಗೆ ಇಲ್ಲದಿರಬಹುದು. ಆದರೆ ನಾನು ಇವತ್ತು ಹೇಳಿದ ಈ ಮಾತು ನೀನು ಇದನ್ನು ತಿಳಿಯುವ ವೇಳೆಗೆ ಕೂಡ ಸಮಂಜಸವಾಗಿರುತ್ತದೆ.
ಮಹಿಳೆಯಾಗಿರುವುದು ಈ ಸಮಾಜದಲ್ಲಿ ತುಂಬಾ ಕಷ್ಟದ ಕೆಲಸ. ಆದರೆ ನೀವಿದನ್ನು ಸರಿಯಾಗಿ ನಿಭಾಯಿಸಬಹುದು ಈ ಸಮಾಜವನ್ನು ಬದಲಾಯಿಸಬಹುದು. ಆದರೆ ಇದು ಅಷ್ಟೊಂದು ಸುಲಭದ ಕೆಲಸವಲ್ಲ. ಅದಾಗ್ಯೂ ನೀವು ನಿಮ್ಮದೇ ಆದ ನಿರ್ಧಾರ, ನೀತಿ ನಿಯಮ ರೂಪಿಸಿಕೊಂಡು ಬೆಳೆಯುವುದರಿಂದ ಮಹಿಳಾ ಸಮಾಜಕ್ಕೆ ಮಾದರಿಯಾಗಿ ನಿಲ್ಲಬಹುದು. ಇದನ್ನು ನೀವು ಮಾಡಿ ಹಾಗೂ ನಾನು ಇದುವರೆಗೆ ಮಾಡಿದ ಸಾಧನೆಗಿಂತ ಹೆಚ್ಚು ಸಾಧನೆಯನ್ನು ನೀವು ಮಾಡಿ. ನಾನು ಅಮಿತಾಭ್ ಬಚ್ಚನ್ ಎಂದು ಗುರುತಿಸಿಕೊಳ್ಳುವುದಕ್ಕಿಂತ ನಿಮ್ಮ ತಾತನಾಗಿ ಗುರುತಿಸಿಕೊಳ್ಳುವುದಕ್ಕೆ ಬಯಸುತ್ತೇನೆ.
ಇಂತಿ ನಿಮ್ಮ ಪ್ರೀತಿಯ ದಾದಾಜಿ ಹಾಗೂ ನಾನಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.