ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ರೀತಿ ಕನ್ನಡದಲ್ಲಿ ಪ್ಲೇ ಫ್ಲಿಕ್ಸ್!

By Web DeskFirst Published Feb 19, 2019, 12:05 PM IST
Highlights

ಕನ್ನಡ ಸಿನಿಮಾಗಳ ಪ್ರಚಾರ, ಪ್ರದರ್ಶನ ಮತ್ತು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕನ್ನಡಕ್ಕಾಗಿಯೇ ಒಂದು ಡಿಜಿಟಲ್ ವೇದಿಕೆ ಸಿದ್ಧವಾಗುತ್ತಿದೆ. ಇದರ ಹೆಸರು ‘ಪ್ಲೇಫ್ಲಿಕ್ಸ್.ಟಿವಿ’.

ಇದು ಕೇವಲ ಕನ್ನಡ ಸಿನಿಮಾಗಳಿಗೆ ಬೆನ್ನೆಲುಬಾಗಿ ನಿಲ್ಲುವುದಕ್ಕೆ ಮಾತ್ರ ಶುರುವಾಗುತ್ತಿರುವ ಡಿಜಿಟಲ್ ಪೋರ್ಟಲ್. ಮೊನ್ನೆಯಷ್ಟೆ ಈ ಪ್ಲೇ ಫ್ಲಿಕ್ಸ್‌ಗೆ ಅಧಿಕೃತವಾಗಿ ಚಾಲನೆ ಕೊಟ್ಟಿದ್ದು ನಿರ್ದೇಶಕ ಟಿ ಎನ್ ಸೀತಾರಾಮ್ ಅವರು. ಕನ್ನಡದ ಮೇಲಿನ ಅಭಿಮಾನ ಬೆಳೆಸಿಕೊಂಡು ಬೇರೆ ಭಾಷೆಯ ಚಿತ್ರಗಳಂತೆ ಕನ್ನಡ ಚಿತ್ರಗಳ ಕುರಿತು ಒರಿಜಿನಲ್ ಕಂಟೆಂಟ್, ಮಾಹಿತಿ ಹಾಗೂ ಸಿನಿಮಾಗಳು ಡಿಜಿಟಲ್ ಮಾಧ್ಯಮದಲ್ಲಿ ದೊರೆಯಬೇಕು. ಆ ಮೂಲಕ ಕನ್ನಡದ ಮನರಂಜನೆ ಕ್ಷೇತ್ರದ ಮಾರುಕಟ್ಟೆಯನ್ನು ವಿಸ್ತರಿಸಬೇಕು ಎನ್ನುವ ಉದ್ದೇಶದಿಂದ ಈ ಪ್ಲೇ ಫ್ಲಿಕ್ಸ್ ಶುರು ಮಾಡಲಾಗಿದೆ. ಇದು ಅಮೆಜಾನ್, ನೆಟ್ ಫ್ಲಿಕ್ಸ್ ರೀತಿಯಲ್ಲಿ ಕನ್ನಡದ ಮನರಂಜನೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲಿದೆ. ಗುರುಪ್ರಸಾದ್ ಮುದ್ರಾಡಿ, ನಿತ್ಯಾನಂದ್ ಭಟ್, ಅಶ್ವಿನಿ ಗುರುಪ್ರಸಾದ್, ಪ್ರಶಾಂತ್ ರಂಗನಾಥ್ ಮುಂತಾದವರು ಈ ಪ್ಲೇ ಫ್ಲಿಕ್ಸ್ ವಾಹಿನಿಯ ಸೂತ್ರದಾರರು. 

ಇಂಥದ್ದೊಂದು ಸಾಹಕ್ಕೆ ನಿರ್ದೇಶಕರಾದ ಕೆಎಂ ಚೈತನ್ಯ, ಅರವಿಂದ್ ಕೌಶಿಕ್, ಸತ್ಯ ಪ್ರಕಾಶ್, ಕಿರುತೆರೆಯ ದಿಗ್ಗಜ ಸೇತುರಾಮ್, ಪಿ ಶೇಷಾದ್ರಿ, ರಮೇಶ್ ಇಂದಿರಾ, ವಿನು ಬಳಂಜ, ಪವನ್ ಒಡೆಯರ್, ಪ್ರವೀಣ್ ಡಿ ರಾವ್, ನಟಿ ಅಪೇಕ್ಷಾ ಪುರೋಹಿತ್ ಮುಂತಾದವರು ಸಾಥ್ ನೀಡಿದ್ದಾರೆ. 

ಕನ್ನಡದ ಕ್ಲಾಸಿಕ್ ಧಾರಾವಾಹಿಗಳಾದ ‘ಮಾಯಾಮೃಗ’, ‘ಮನ್ವಂತರ’ದಂತಹ ಕ್ಲಾಸಿಕ್ ಧಾರಾವಾಹಿಗಳನ್ನು ಮರು ನೋಡುವ ಅವಕಾಶದ ಜತೆಗೆ ಹಲವು ಸಿನಿಮಾಗಳ ಡಿಜಿಟಲ್ ಹಕ್ಕುಗಳನ್ನು ಖರೀದಿ ಮಾಡಲಾಗಿದೆ. ಹೀಗಾಗಿ ಸದ್ಯದಲ್ಲೇ ಪ್ಲೇ ಫ್ಲಿಕ್ಸ್‌ನಲ್ಲಿ ಆ ಸಿನಿಮಾಗಳು ಪ್ರಸಾರವಾಗಲಿವೆ. ಇದರ ಜತೆಗೆ ಕನ್ನಡ ಸಿನಿಮಾ, ಧಾರಾವಾಹಿಗಳಿಗೆ ಪ್ರಚಾರ ನೀಡುವುದಕ್ಕಾಗಿ ಚಿತ್ರಗಳ ಟ್ರೇಲರ್, ಪೋಸ್ಟರ್, ಟೀಸರ್, ಹಾಡುಗಳು, ಕೆಲವು ದೃಶ್ಯಗಳನ್ನು ಕೂಡ ಪ್ರಸಾರ ಮಾಡಲಾಗುವುದು. 

ವೈಟ್ ಪ್ಯಾಂಥರ್, ಭೂಮಿಕಾ ಕ್ರಿಯೇಷನ್ಸ್, ಟೆಂಟ್ ಸಿನಿಮಾ ಮುಂತಾದ ಸಂಸ್ಥೆಗಳ ಸಹಯೋಗದೊಂದಿಗೆ ಕಿರು ಚಿತ್ರಗಳು ಹಾಗೂ ಧಾರಾವಾಹಿಗಳನ್ನು ನಿರ್ಮಿಸುವ ಉದ್ದೇಶ ಪ್ಲೇ ಫ್ಲಿಕ್ಸ್ ಆಯೋಜಕರದ್ದು. ಕಂಟೆಂಟ್ ಬ್ರಹ್ಮ ಎಂಟರ್‌ಟೈನ್‌ಮೆಂಟ್ ಪ್ರೈ.ಲಿ ಸಂಸ್ಥೆಯ ಮೂಲಕ ಈ ಪ್ಲೇ ಫ್ಲಿಕ್ಸ್ ವಾಹಿನಿಯನ್ನು ಆರಂಭಿಸಲಾಗಿದೆ. 

 

 

click me!