ಮೊಡವೆ ಬರಬಾರದೆಂದು ಮುಖಕ್ಕೆ ಉಗುಳು ಹಚ್ಚುತ್ತಾರಂತೆ: ನಟಿಯ ವಿಚಿತ್ರ ಬ್ಯೂಟಿ ಸೀಕ್ರೆಟ್ ವೈರಲ್

Published : Oct 30, 2026, 06:12 PM IST
Tamannaah Bhatia

ಸಾರಾಂಶ

ಟಾಲಿವುಡ್ ನಟಿ ತಮನ್ನಾ ಭಾಟಿಯಾ ತಮ್ಮ ಸ್ಕಿನ್ ಕೇರ್ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ. ಮೊಡವೆ ಕಡಿಮೆ ಮಾಡಿಕೊಳ್ಳಲು ಅವರು ಅನುಸರಿಸುವ ವಿಚಿತ್ರ ವಿಧಾನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಿನಿಮಾ ನಟಿಯರ ಸೌಂದರ್ಯ, ತ್ವಚೆಯ ಆರೈಕೆ ಹಾಗೂ ಬ್ಯೂಟಿ ಸೀಕ್ರೆಟ್‌ಗಳ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಸದಾ ಕುತೂಹಲ ಹೊಂದಿರುತ್ತಾರೆ. ಅದರಲ್ಲೂ ತೆರೆಮೇಲೆ ಸದಾ ಸುಂದರವಾಗಿ ಕಾಣಿಸುವ ನಟಿಯರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಯಾವೆಲ್ಲಾ ವಿಧಾನಗಳನ್ನು ಅನುಸರಿಸುತ್ತಾರೆ ಎಂಬ ಪ್ರಶ್ನೆ ಹಲವರಲ್ಲಿದೆ. ಇದೀಗ ಟಾಲಿವುಡ್ ಹಾಗೂ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ಖ್ಯಾತ ನಟಿ ತಮನ್ನಾ ಭಾಟಿಯಾ ತಮ್ಮ ಸ್ಕಿನ್ ಕೇರ್ ವಿಚಾರವಾಗಿ ನೀಡಿರುವ ಹೇಳಿಕೆಯೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಮೊಡವೆಗಳನ್ನು ಕಡಿಮೆ ಮಾಡಿಕೊಳ್ಳಲು ಬೆಳಗ್ಗೆ ಎದ್ದ ತಕ್ಷಣ ಮುಖಕ್ಕೆ ಉಗುಳು ಹಚ್ಚಿಕೊಳ್ಳುತ್ತೇನೆ ಎಂದು ಅವರು ಹೇಳಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಮೊಡವೆ ನಿವಾರಣೆಗೆ ತಮನ್ನಾ ಹೇಳಿದ ವಿಚಿತ್ರ ಉಪಾಯ!

ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ತಮ್ಮ ಗ್ಲಾಮರ್ ಹಾಗೂ ಅಭಿನಯದ ಮೂಲಕ ವಿಶೇಷ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ತಮನ್ನಾ ಭಾಟಿಯಾ, ಹಲವು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈ ಸುಂದರಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಸೌಂದರ್ಯದ ಆರೈಕೆಗೆ ಸಂಬಂಧಿಸಿದ ವಿಚಾರವನ್ನು ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ತ್ವಚೆಯ ಆರೈಕೆಗಾಗಿ ದುಬಾರಿ ಕ್ರೀಮ್‌ಗಳು, ಸೀರಮ್‌ಗಳು ಹಾಗೂ ವಿಶೇಷ ಬ್ಯೂಟಿ ಪ್ರಾಡಕ್ಟ್‌ಗಳನ್ನು ಬಳಸುತ್ತಾರೆ ಎಂಬ ಅಭಿಪ್ರಾಯವಿದೆ. ಆದರೆ ಮೊಡವೆ ಸಮಸ್ಯೆ ನಟಿಯರಿಗೂ ಸಾಮಾನ್ಯವಾಗಿಯೇ ಇರುತ್ತದೆ ಎಂಬುದನ್ನು ತಮನ್ನಾ ಹೇಳಿದ್ದಾರೆ. ಇದೇ ವೇಳೆ ಮೊಡವೆಗಳನ್ನು ಕಡಿಮೆ ಮಾಡಿಕೊಳ್ಳಲು ತಾವು ಅನುಸರಿಸುವ ವಿಚಿತ್ರ ಉಪಾಯವೊಂದನ್ನು ಬಹಿರಂಗಪಡಿಸಿದ್ದಾರೆ.

ಮೊಡವೆ ನಿವಾರಣೆಗೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ತಮನ್ನಾ, ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜುವ ಮುನ್ನ ಬಾಯಿಯಲ್ಲಿರುವ ಲಾಲಾರಸವನ್ನು ಮೊಡವೆಗಳ ಮೇಲೆ ಹಚ್ಚಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ರಾತ್ರಿ ನಿದ್ರಿಸಿದ ನಂತರ ಬಾಯಿಯಲ್ಲಿ ಸಂಗ್ರಹವಾಗುವ ಲಾಲಾರಸದಲ್ಲಿರುವ ನೈಸರ್ಗಿಕ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಮೊಡವೆಗಳನ್ನು ಒಣಗಿಸಲು ಸಹಾಯ ಮಾಡುತ್ತವೆ ಎಂಬುದು ಅವರ ಅಭಿಪ್ರಾಯ. ನಟಿಯ ಈ ಉತ್ತರ ಕೇಳಿ ಸಂದರ್ಶನದ ನಿರೂಪಕರು ಮಾತ್ರವಲ್ಲದೆ ಪ್ರೇಕ್ಷಕರೂ ಅಚ್ಚರಿಗೊಂಡಿದ್ದಾರೆ.

ಉಗುಳು ಹಚ್ಚುವುದು ನಿಜಕ್ಕೂ ಮೊಡವೆ ಕಡಿಮೆ ಮಾಡುತ್ತಾ?

ತಮನ್ನಾ ಹೇಳಿರುವ ಈ ಬ್ಯೂಟಿ ಟಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ ಸೆಲೆಬ್ರಿಟಿಗಳು ಹೇಳುವ ಪ್ರತಿಯೊಂದು ಸ್ಕಿನ್ ಕೇರ್ ವಿಧಾನವೂ ಎಲ್ಲರಿಗೂ ಸೂಕ್ತವಾಗಿರುತ್ತದೆ ಎಂದರ್ಥವಲ್ಲ. ಚರ್ಮದ ತಜ್ಞರ ಪ್ರಕಾರ, ಲಾಲಾರಸದಲ್ಲಿ ಕೆಲವು ಕಿಣ್ವಗಳು (Enzymes) ಇದ್ದರೂ ಅದನ್ನು ಮೊಡವೆಗಳಿಗೆ ಹಚ್ಚುವುದರಿಂದ ಅವು ಕಡಿಮೆಯಾಗುತ್ತವೆ ಎಂಬುದಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ. ಬದಲಾಗಿ ಬಾಯಿಯಲ್ಲಿರುವ ಸೂಕ್ಷ್ಮಜೀವಿಗಳು ಚರ್ಮದ ಮೇಲೆ ಕಿರಿಕಿರಿ ಅಥವಾ ಸೋಂಕಿನ ಅಪಾಯವನ್ನು ಉಂಟುಮಾಡಬಹುದು. ಹೀಗಾಗಿ ಮೊಡವೆ ನಿವಾರಣೆಗೆ ಇಂತಹ ಪ್ರಯೋಗಗಳನ್ನು ಮಾಡುವ ಬದಲು ಚರ್ಮದ ಸ್ವಭಾವಕ್ಕೆ ಅನುಗುಣವಾದ ಆರೈಕೆ ಮಾಡುವುದು ಉತ್ತಮ. ಅಗತ್ಯವಿದ್ದರೆ ಚರ್ಮರೋಗ ತಜ್ಞರ ಸಲಹೆ ಪಡೆಯುವುದು ಸೂಕ್ತ.

ಮೊಡವೆ ಕಡಿಮೆ ಮಾಡಲು ತಜ್ಞರು ಸೂಚಿಸುವ ನೈಸರ್ಗಿಕ ವಿಧಾನಗಳೇನು?

ಮುಂಬೈ ಮೂಲದ ಚರ್ಮರೋಗ ತಜ್ಞೆ ಡಾ. ಮೀನಲ್ ಖರೆ ಅವರು ಮೊಡವೆ ಸಮಸ್ಯೆ ನಿವಾರಣೆಗೆ ಕೆಲವು ನೈಸರ್ಗಿಕ ವಿಧಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

1. ಅಲೋವೆರಾ ಜೆಲ್: ತಾಜಾ ಅಲೋವೆರಾ ಜೆಲ್ ಚರ್ಮದ ಉರಿಯೂತ ಮತ್ತು ಕೆಂಪಾಗುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಇದರಲ್ಲಿ ಸ್ಯಾಲಿಸಿಲಿಕ್ ಆಮ್ಲ ಮತ್ತು ಸಲ್ಫರ್‌ನಂತಹ ಮೊಡವೆ ಆರೈಕೆ ಉತ್ಪನ್ನಗಳಲ್ಲಿ ಕಂಡುಬರುವ ಅಂಶಗಳಿವೆ. ಚರ್ಮಕ್ಕೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ಪರೀಕ್ಷಿಸಿ ಬಳಸುವುದು ಉತ್ತಮ.

2. ಗ್ರೀನ್ ಟೀ: ಗ್ರೀನ್ ಟೀಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇದು ಚರ್ಮದಲ್ಲಿ ಅತಿಯಾದ ಎಣ್ಣೆಯಂಶ ಉತ್ಪತ್ತಿಯನ್ನು ನಿಯಂತ್ರಿಸಲು ಸಹಾಯ ಮಾಡಬಹುದು. ಗ್ರೀನ್ ಟೀ ಬ್ಯಾಗ್ ಅನ್ನು ಬಿಸಿ ನೀರಿನಲ್ಲಿ ನೆನೆಸಿ, ನಂತರ ತಣ್ಣಗಾಗಿಸಿ, ಅದರಲ್ಲಿ ಹತ್ತಿ ಉಂಡೆಯನ್ನು ಅದ್ದಿ ಮುಖಕ್ಕೆ ಹಚ್ಚುವ ವಿಧಾನವನ್ನೂ ಅವರು ಸೂಚಿಸಿದ್ದಾರೆ.

ಆದರೆ ಯಾವುದೇ ನೈಸರ್ಗಿಕ ವಿಧಾನ ಎಲ್ಲರ ಚರ್ಮಕ್ಕೂ ಒಂದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಹೊಸ ಉತ್ಪನ್ನ ಅಥವಾ ಮನೆಮದ್ದನ್ನು ಬಳಸುವ ಮೊದಲು ಸಣ್ಣ ಭಾಗದಲ್ಲಿ ಪರೀಕ್ಷಿಸುವುದು ಹಾಗೂ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು. ಇನ್ನು ತಮನ್ನಾ ಭಾಟಿಯಾ ಹಂಚಿಕೊಂಡಿರುವ ಈ ವಿಚಿತ್ರ ಸ್ಕಿನ್ ಕೇರ್ ಹ್ಯಾಕ್ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ. ನಟಿಯ ಸೌಂದರ್ಯದ ಹಿಂದಿರುವ ಈ ಸೀಕ್ರೆಟ್ ನಿಜಕ್ಕೂ ಕೆಲಸ ಮಾಡುತ್ತದೆಯೇ ಎಂಬ ಕುತೂಹಲ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಮುಂದುವರಿದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನು ಹೇಳಬೇಕೋ ತಿಳಿಯುತ್ತಿಲ್ಲ, ಮತ್ತೆ 'ಇಂಥ ಪಾತ್ರ'..: ನಟಿ ಜಾನ್ವಿ ಕಪೂರ್ ಹೇಳಿದ್ದೇನು?
ನಕಲಿ ಖಾತೆಗಳ ಕಾಟಕ್ಕೆ ಬೇಸತ್ತು ಹೈರಾಣು: ದಳಪತಿ ವಿಜಯ್ ಮಗ ಜೇಸನ್ ಸಂಜಯ್ ಅಭಿಮಾನಿಗಳಿಗೆ ಕೊಟ್ಟ ಖಡಕ್ ಎಚ್ಚರಿಕೆ ಏನು?