ನಾಯಕನ ಹೆಸರು ಆದಿ, ನಾಯಕಿ ಲಕ್ಷ್ಮಿ. ಇವರಿಬ್ಬರ ಪುರಾಣ ‘ಆದಿ ಲಕ್ಷ್ಮಿ ಪುರಾಣ’. ಇವತ್ತು ತೆರೆಗೆ ಬರುತ್ತಿರುವ ಚಿತ್ರದ ಬಗ್ಗೆ ಇಡೀ ತಂಡಕ್ಕೆ ತುಂಬಾ ನಿರೀಕ್ಷೆ ಇದೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಚಿತ್ರತಂಡದಲ್ಲಿ ಹೆಚ್ಚಾಗಿ ಮಹಿಳೆಯರನ್ನೇ ಒಟ್ಟಾಗಿಸಿ ಸಿನಿಮಾ ಮಾಡಿ ಮುಗಿಸಿದ್ದಾರೆ. ನಾಯಕ ನಿರೂಪ್ ಭಂಡಾರಿ, ನಾಯಕಿ ರಾಧಿಕಾ ಯಶ್ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರತಂಡ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿತ್ತು.
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೆ ಮೊದಲು ಚಿತ್ರದ ಸ್ಕಿ್ರಪ್ಟ್ ತೋರಿಸಿದ್ದೇ ನಟ ಯಶ್. ಪುಟ್ಟದಾಗಿ ಕತೆ ಹೇಳಿ, ಚೆನ್ನಾಗಿದೆ ಎಂದಕೂಡಲೇ ರಾಕ್‌ಲೈನ್ ಚಿತ್ರ ಮಾಡಿಯೇಬಿಡುವ ತೀರ್ಮಾನಕ್ಕೆ ಬಂದಿದ್ದಾರೆ. ಇದಕ್ಕೆ ಅವರು ಸಾರಥಿಯಾಗಿ ಆಯ್ಕೆ ಮಾಡಿಕೊಂಡದ್ದು ತಮಿಳು ಮೂಲದ ಪ್ರಿಯಾ ಅವರನ್ನು. ನಾಯಕನ ಪಾತ್ರಕ್ಕೆ ನಿರೂಪ್ ಸೂಟ್ ಆಗುತ್ತಾರೆ ಎಂದುಕೊಂಡು ಅವರನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಅವರ ಅಣ್ಣ ಅನೂಪ್ ಭಂಡಾರಿ ಚಿತ್ರಕ್ಕೆ ಸಂಗೀತ ಮತ್ತು ಸಾಹಿತ್ಯ ನೀಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಪೋಷಕ ಪಾತ್ರದಲ್ಲಿ ತಾರಾ, ಸುಚೇಂದ್ರ ಪ್ರಸಾದ್ ಫಿಕ್ಸ್. ಪ್ರೀತಾ ಅವದ್ದು ಕ್ಯಾಮರಾ ಕಣ್ಣು. ನಾಯಕಿ ರಾಧಿಕಾ ಯಶ್ ‘ಲೈಟ್ ಸಬ್ಜೆಕ್ಟ್, ಫ್ಯಾಮಿಲಿ ಕುಳಿತು ನೋಡುವ ಚಿತ್ರ ಇದು. ಸುಳ್ಳನ್ನು ಎಷ್ಟುಮಜವಾಗಿ ತೋರಿಸಬಹುದೋ ಅಷ್ಟುಮಜವಾಗಿ ತೋರಿಸಿದ್ದಾರೆ. ಈ ರೀತಿಯ ಚಿತ್ರ ಇದೇ ನನಗೆ ಮೊದಲು. ಯಶ್ ಅವರೇ ಇದರ ಟ್ರೈಲರ್ ಬಿಡುಗಡೆ ಮಾಡಿದ್ದರು’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು.
ರಾಧಿಕಾ ತುಂಬಾ ಟ್ಯಾಲೆಂಟೆಡ್ ನಟಿ: ಯಶ್
ಹಿಂದೆ ‘ರಂಗಿತರಂಗ’ ಚಿತ್ರದಲ್ಲಿ ನಿರೂಪ್ ನಟನೆ ನೋಡಿ ಮೆಚ್ಚಿದ್ದು ರಾಕ್‌ಲೈನ್ ಈ ಚಿತ್ರಕ್ಕೆ ಅವರನ್ನೇ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣ. ಇನ್ನು ತಾರಾ ಅನುರಾಧ ಮತ್ತು ಸುಚೇಂದ್ರ ಪ್ರಸಾದ್ ಜೋಡಿ ಚಿತ್ರದ ಮತ್ತೊಂದು ಹೈಲೈಟ್. ‘ಅಂಬರೀಷ್ ನಂತರ ಒಳ್ಳೆಯ ಮನಸ್ಸಿರುವ ಅಣ್ಣ ಎಂದರೆ ಅದು ರಾಕ್‌ಲೈನ್. ಅವರ ಸಿನಿಮಾ ಗೆಲ್ಲಬೇಕು. ಇಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಚಿತ್ರವನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಎಲ್ಲರೂ ತಮಗೆ ಕೊಟ್ಟಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದೇವೆ’ ಎಂದು ಹೇಳಿಕೊಂಡರು ತಾರಾ ಅನುರಾಧ.
ಕಡೆಯಲ್ಲಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ‘ಮೊದಲು ಕತೆ ಕೇಳಿ ಖುಷಿಯಾಗಿತ್ತು. ಇದರ ಬಗ್ಗೆ ರಾಕ್‌ಲೈನ್ ಅವರಿಗೆ ಹೇಳಿದೆ. ಅವರು ಒಪ್ಪಿ ಸಿನಿಮಾ ಮಾಡಿದ್ದಾರೆ. ಅವರೇ ನಾಯಕಿಯಾಗಿ ರಾಧಿಕಾ ಮಾಡಿದರೆ ಹೇಗೆ? ಎಂದು ಕೇಳಿದರು, ಕಡೆಗೆ ರಾಧಿಕಾ ಕೂಡ ಒಪ್ಪಿಕೊಂಡಳು. ಅವಳು ನನಗಿಂತಲೂ ಒಳ್ಳೆಯ ನಟಿ. ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದ್ದಾಳೆ. ಇಲ್ಲಿಯೂ ಒಳ್ಳೆಯ ನಟನೆ ಮಾಡಿದ್ದಾಳೆ. ಭಂಡಾರಿ ಸಹೋದರರ ಮೊದಲ ಪ್ರಯತ್ನ ‘ರಂಗಿತರಂಗ’ ನೋಡಿಯೇ ಖುಷಿಯಾಗಿತ್ತು. ಇಲ್ಲಿಯೂ ಅವರು ಚೆನ್ನಾಗಿ ಮಾಡಿದ್ದಾರೆ. ಸುಚೇಂದ್ರ ಪ್ರಸಾದ್ ಮತ್ತು ತಾರಾ ಇಲ್ಲಿ ಮತ್ತೊಬ್ಬ ನಾಯಕ ನಾಯಕಿಯರು’ ಎಂದು ಹೇಳಿಕೊಂಡರು.