
ಸಿನಿಮಾ ಸ್ಟಾರ್‌ಗಳು ಪಬ್ಲಿಕ್ ಕಾರ್ಯಕ್ರಮಗಳಿಗೆ ಹೋದಾಗ ಅವರಿಗೆ ಸೆಕ್ಯುರಿಟಿ ಕೊಡೋದು ದೊಡ್ಡ ತಲೆನೋವಿನ ಕೆಲಸ. ಯಾಕಂದ್ರೆ, ನೆಚ್ಚಿನ ನಟ-ನಟಿಯರನ್ನು ನೋಡೋಕೆ ಮುಗಿಬೀಳುವ ಅಭಿಮಾನಿಗಳ ಪ್ರೀತಿ ಯಾವ ಹಂತಕ್ಕೆ ಹೋಗುತ್ತೆ ಅಂತಾ ಹೇಳೋಕಾಗಲ್ಲ. ಬೆಳ್ಳಿತೆರೆ ಮೇಲೆ ನೋಡಿ ಮೆಚ್ಚಿದವರನ್ನು ನೇರವಾಗಿ ನೋಡಿದಾಗ ಕೆಲವರು ಹೇಗೆ ವರ್ತಿಸುತ್ತಾರೆ ಅಂತಾ ಊಹಿಸೋಕೂ ಸಾಧ್ಯವಿಲ್ಲ.
ಇದೇ ಕಾರಣಕ್ಕೆ, ಸಾರ್ವಜನಿಕ ಸ್ಥಳಗಳಲ್ಲಿ ನಟ-ನಟಿಯರಿಗೆ ಅಭಿಮಾನಿಗಳಿಂದ ಮುಜುಗರದ ಪ್ರಸಂಗಗಳು ಎದುರಾಗುತ್ತಲೇ ಇರುತ್ತವೆ. ಕೆಲವರು ಇದಕ್ಕೆ ಗರಂ ಆದ್ರೆ, ಇನ್ನು ಕೆಲವರು ಪರಿಸ್ಥಿತಿ ಹಾಳಾಗಬಾರದು ಅಂತಾ ಸುಮ್ಮನಾಗುತ್ತಾರೆ. ಇಂಥದ್ದೇ ಒಂದು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಲ್ಲಿ ನಟಿ ಮಂಜು ವಾರಿಯರ್ ಅವರಿಗೆ ಅಭಿಮಾನಿಯೊಬ್ಬರಿಂದ ವಿಚಿತ್ರ ಅನುಭವವಾಗಿದೆ.
ಮಾರ್ಚ್ 15ರಂದು ಪಾಲಕ್ಕಾಡ್‌ನಲ್ಲಿ ನಡೆದ ಒಂದು ಜ್ಯುವೆಲ್ಲರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಜನರೊಂದಿಗೆ ಮಾತಾಡಲು ಮಂಜು ವಾರಿಯರ್‌ಗಾಗಿ ಹೊರಗೆ ಒಂದು ಸ್ಟೇಜ್ ಹಾಕಲಾಗಿತ್ತು. ಅವರು ವೇದಿಕೆ ಮೇಲೆ ನಿಂತಿದ್ದಾಗ, ಅಭಿಮಾನಿಯೊಬ್ಬರು ದಿಢೀರ್ ಅಂತಾ ಸ್ಟೇಜ್ ಹತ್ತಿ ಬಂದು ಮಂಜು ವಾರಿಯರ್‌ಗೆ ಬಲವಂತವಾಗಿ ಮುತ್ತಿಟ್ಟಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಅಲ್ಲಿದ್ದ ಸೆಕ್ಯುರಿಟಿ ಸಿಬ್ಬಂದಿ ಸೇರಿದಂತೆ ಎಲ್ಲರೂ ಒಂದು ಕ್ಷಣ ದಂಗಾಗಿ ನಿಂತಿದ್ದು ವಿಡಿಯೋದಲ್ಲಿ ಕಾಣಿಸುತ್ತೆ. ತಕ್ಷಣವೇ ಆ ಮಹಿಳೆಯನ್ನು ವೇದಿಕೆಯಿಂದ ಕೆಳಗಿಳಿಸಿದ್ದಾರೆ.
ಈ ವೇಳೆ, ನಿರೂಪಕಿಯೊಬ್ಬರು 'ಇದು ಸರಿಯಾದ ವರ್ತನೆಯಲ್ಲ' ಎಂದು ಹೇಳುವುದೂ ಕೇಳಿಸುತ್ತದೆ. ಇನ್ನು ಮಂಜು ವಾರಿಯರ್ ಅವರ ಸಿನಿಮಾಗಳ ಬಗ್ಗೆ ಹೇಳುವುದಾದರೆ, 'ಎಂಬುರಾನ್' ನಂತರ ಅವರ ಯಾವುದೇ ಸಿನಿಮಾ ಥಿಯೇಟರ್‌ಗೆ ಬಂದಿಲ್ಲ. ಕಳೆದ ವರ್ಷ ಮಾರ್ಚ್‌ನಲ್ಲಿ ತೆರೆಕಂಡ ಈ ಚಿತ್ರದಲ್ಲಿ ಅವರು ಪ್ರಿಯದರ್ಶಿನಿ ರಾಮದಾಸ್ ಎಂಬ ಬೋಲ್ಡ್ ಪಾತ್ರ ಮಾಡಿದ್ದರು. ಇದಲ್ಲದೆ, ಕಳೆದ ವರ್ಷವೇ ಮಂಜು ವಾರಿಯರ್ ಒಂದು ಶಾರ್ಟ್ ಫಿಲ್ಮ್‌ನಲ್ಲೂ ನಟಿಸಿದ್ದರು. ಮಮ್ಮುಟ್ಟಿ ಕಂಪನಿ ನಿರ್ಮಿಸಿ, ರಂಜಿತ್ ನಿರ್ದೇಶಿಸಿದ 'ಆರೋ' ಎಂಬ ಕಿರುಚಿತ್ರ ಅದಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.