
2000ರ ದಶಕದ ಆರಂಭದಲ್ಲಿ ತಮಿಳು, ತೆಲುಗು ಮತ್ತು ಕನ್ನಟ ಚಿತ್ರರಂಗದಲ್ಲಿ ಜನಪ್ರಿಯ ನಾಯಕಿಯಾಗಿ ಗುರುತಿಸಿಕೊಂಡಿದ್ದ ನಟಿ ಲೈಲಾ, ಇದೀಗ ಸೂರ್ಯ ಮತ್ತು ಜ್ಯೋತಿಕಾ ಅವರ ಪ್ರೇಮಕಥೆಯ ಕುರಿತು ಹಳೆಯ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದ ವಿಚಾರದಿಂದ ಸುದ್ದಿಯಾಗಿದ್ದಾರೆ. ಸೂರ್ಯ ಮತ್ತು ಜ್ಯೋತಿಕಾ ಪ್ರೀತಿಸುತ್ತಿರುವುದು ತಮಗೆ ಯಾವಾಗ ತಿಳಿಯಿತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಲೈಲಾ, ತಮಿಳು, ಮಲಯಾಳಂ, ತೆಲುಗು, ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 1996ರಲ್ಲಿ ಬಿಡುಗಡೆಯಾದ ‘ದುಷ್ಮನ್ ದುನಿಯಾ ಕಾ’ ಎಂಬ ಹಿಂದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು, ಬಳಿಕ ಮಲಯಾಳಂ ಮತ್ತು ತೆಲುಗು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.
1999ರಲ್ಲಿ ಬಿಡುಗಡೆಯಾದ ವಿಜಯಕಾಂತ್ ಅಭಿನಯದ ‘ಕಳ್ಳಳಗರ್’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪ್ರವೇಶಿಸಿದರು. ಈ ಸಿನಿಮಾ ಬಳಿಕ ಅವರಿಗೆ ತಮಿಳಿನಲ್ಲಿ ಜನಪ್ರಿಯತೆ ಹೆಚ್ಚಾಯಿತು. ‘ಪಾರ್ಥೇನ್ ರಸಿತ್ತೇನ್’, ‘ದೀನಾ’, ‘ದಿಲ್’, ‘ನಂದಾ’ ಹಾಗೂ ‘ಉನ್ನೈ ನಿನೈತ್ತು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದರು. ಜೊತೆಗೆ ಕನ್ನಡದಲ್ಲಿ ದೇವರ ಮಗ, ರಾಮಕೃಷ್ಣ, ತಂದೆಗೆ ತಕ್ಕ ಮಗ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಇನ್ನು ನಟ ಸೂರ್ಯ ಜೊತೆಗೂ ಲೈಲಾ ಹಲವು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ಇವರಿಬ್ಬರ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಸೂರ್ಯ ಜೊತೆ ನಟಿಸಿದ ನಾಯಕಿಯರಲ್ಲಿ ಲೈಲಾ ಅವರೇ ಉತ್ತಮ ಜೋಡಿ ಎಂದು ಸ್ವತಃ ನಟಿ ಜ್ಯೋತಿಕಾ ಕೂಡ ಒಮ್ಮೆ ಹೇಳಿಕೊಂಡಿದ್ದರು ಎನ್ನಲಾಗಿದೆ. ಇದೀಗ ಸೂರ್ಯ ಮತ್ತು ಜ್ಯೋತಿಕಾ ಅವರ ಪ್ರೀತಿಯ ವಿಚಾರ ತಮಗೆ ಹೇಗೆ ತಿಳಿಯಿತು ಎಂಬುದನ್ನು ಲೈಲಾ ಹಂಚಿಕೊಂಡಿರುವುದು ಗಮನ ಸೆಳೆದಿದೆ.
ಸೂರ್ಯ-ಜ್ಯೋತಿಕಾ ಪ್ರೀತಿಯ ವಿಚಾರ ಲೈಲಾಗೆ ಗೊತ್ತಾಗಿದ್ದು ಹೇಗೆ?
ಹಿಂದಿನ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ್ದ ಲೈಲಾ, 'ನಾನು ಜ್ಯೋತಿಕಾ ಮತ್ತು ಸೂರ್ಯ ಅವರ ಆಪ್ತ ಸ್ನೇಹಿತೆ. ಹಾಗಾಗಿ ಅವರಿಬ್ಬರ ಪ್ರೀತಿಯ ವಿಚಾರ ನನಗೆ ಖಂಡಿತವಾಗಿಯೂ ತಿಳಿದಿತ್ತು. ನಾವು ‘3 ರೋಸಸ್’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಸಮಯದಲ್ಲೇ ಅವರಿಬ್ಬರೂ ಪ್ರೀತಿಸುತ್ತಿರುವುದು ನನಗೆ ಗೊತ್ತಾಯಿತು. ಆಗ ಜ್ಯೋತಿಕಾ ಅವರೇ ತಮ್ಮ ಪ್ರೀತಿಯ ವಿಚಾರವನ್ನು ನನ್ನ ಬಳಿ ಹೇಳಿಕೊಂಡಿದ್ದರು. ಅಲ್ಲದೆ, ಶೂಟಿಂಗ್ ನಡೆಯುವ ಸಮಯದಲ್ಲಿ ಸೂರ್ಯ ಕಾರಿನಲ್ಲಿ ಬಂದು ಜ್ಯೋತಿಕಾರನ್ನು ಪಿಕಪ್ ಮಾಡುತ್ತಿದ್ದರು' ಎಂದು ಹೇಳಿಕೊಂಡಿದ್ದರು.
ಸದ್ಯ ಲೈಲಾ ತಮಿಳು ಚಿತ್ರರಂಗದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2024ರಲ್ಲಿ ವಿಜಯ್ ಅಭಿನಯದ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ (ದಿ ಗೋಟ್) ಸಿನಿಮಾದಲ್ಲಿ ನಟ ಪ್ರಶಾಂತ್ ಅವರ ಪತ್ನಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. 2025ರಲ್ಲಿ ಬಿಡುಗಡೆಯಾದ ‘ಸಬ್ದಂ’ ಚಿತ್ರದಲ್ಲೂ ನಟಿಸಿದ್ದರು. ಸದ್ಯ ಸಿನಿಮಾಗಳ ಜೊತೆಗೆ ಕಿರುತೆರೆಯ ಕಾರ್ಯಕ್ರಮವೊಂದರಲ್ಲಿ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಸೂರ್ಯ ಮತ್ತು ಜ್ಯೋತಿಕಾ ಅವರ ಪ್ರೇಮಕಥೆಯ ಆರಂಭದ ದಿನಗಳ ಕುರಿತು ಲೈಲಾ ಹಂಚಿಕೊಂಡಿರುವ ಈ ಸ್ವಾರಸ್ಯಕರ ಸಂಗತಿ ಅಭಿಮಾನಿಗಳ ಗಮನ ಸೆಳೆದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.