ನಟಿ ಜ್ಯೋತಿ ರೈ ನಟನೆಯ ‘ಕಿಲ್ಲರ್’ ಸೈನ್ಸ್ ಫಿಕ್ಷನ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರತಂಡ ಘೋಷಿಸಿರುವ ‘1 ಕೋಟಿ ರೂಪಾಯಿ ಕಾಂಟೆಸ್ಟ್’ ಉಭಯ ತೆಲುಗು ರಾಜ್ಯಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಕುರಿತು ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಜ್ಯೋತಿ ರೈ, 1 ಕೋಟಿ ಬಹುಮಾನದ ಹಿಂದಿರುವ ಅಸಲಿ ರಹಸ್ಯ ಹಾಗೂ ತಮ್ಮ ವೈಯಕ್ತಿಕ ಬದುಕಿನ ಕಣ್ಣೀರ ಕಥೆಯನ್ನು ಹಂಚಿಕೊಂಡಿದ್ದಾರೆ.
"ಈ 1 ಕೋಟಿ ರೂ. ಸ್ಪರ್ಧೆ ಕೇವಲ ಪ್ರಚಾರದ ತಂತ್ರವಲ್ಲ. ನಮ್ಮ ಸಿನಿಮಾದ ಎರಡನೇ ಭಾಗದಲ್ಲಿ ಬರುವ ಟ್ವಿಸ್ಟ್ಗಳನ್ನು ನೋಡಿದ ಖ್ಯಾತ ತಂತ್ರಜ್ಞರೇ ಬೆರಗಾಗಿದ್ದರು. ಚಿತ್ರದ ಕಂಟೆಂಟ್ ಮೇಲಿರುವ ಅಪಾರ ನಂಬಿಕೆಯಿಂದಲೇ ಈ ಚಾಲೆಂಜ್ ಹಾಕಿದ್ದೇವೆ. ಪ್ರೀಮಿಯರ್ ಶೋ ವೇಳೆ, ಮೊದಲಾರ್ಧ ಮುಗಿದ ಕೇವಲ 5 ನಿಮಿಷಗಳ ಇಂಟರ್ವಲ್ನಲ್ಲಿ ಸರಿಯಾದ ಉತ್ತರವನ್ನು ಊಹಿಸಿ ಮೆಸೇಜ್ ಕಳುಹಿಸುವ ಒಬ್ಬ ಅದೃಷ್ಟವಂತ ಪ್ರೇಕ್ಷಕನಿಗೆ ಸಕ್ಸಸ್ ಮೀಟ್ನಲ್ಲಿ ಬರೋಬ್ಬರಿ 1 ಕೋಟಿ ರೂ. ಚೆಕ್ ನೀಡಲಾಗುವುದು. ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಬಾಂಡ್ ಪೇಪರ್ ಸಮೇತ ಪ್ರೀ-ರಿಲೀಸ್ ಇವೆಂಟ್ನಲ್ಲಿ ಪೂರ್ವಜ್ ವಿವರಿಸಲಿದ್ದಾರೆ" ಎಂದು ಸ್ಪಷ್ಟಪಡಿಸಿದರು.
ತಮ್ಮ ಬದುಕನ್ನು ಒಂದೇ ವಾಕ್ಯದಲ್ಲಿ ಹೇಳುವುದಾದರೆ ಯಾವ ಸಿನಿಮಾ ಟೈಟಲ್ ನೆನಪಾಗುತ್ತದೆ ಎಂಬ ಪ್ರಶ್ನೆಗೆ, ಕನ್ನಡದ ಖ್ಯಾತ ಚಿತ್ರ ‘ಬೆಂಕಿ ಅಲ್ಲಿ ಅರಳಿದ ಹೂವು’ ಹೆಸರನ್ನು ಜ್ಯೋತಿ ಕಣ್ಣೀರು ಹಾಕುತ್ತಾ ಸ್ಮರಿಸಿದರು. "ನನ್ನ ಜೀವನ ಎಂದಿಗೂ ಸುಲಭವಾಗಿರಲಿಲ್ಲ. ತಂದೆ-ತಾಯಿ ಇಲ್ಲದಿದ್ದರೂ ನನ್ನ ಮಾವ ನನ್ನನ್ನು ಸ್ವಂತ ಮಗಳಂತೆ ಸಾಕಿ ಬೆಳೆಸಿದರು. ನೋವು, ಹಿಂಸೆ, ಕಣ್ಣೀರು ಎಲ್ಲವನ್ನೂ ನುಂಗಿ ಬೆಂಕಿಯಲ್ಲೇ ಅರಳಿ ಇಂದು ಈ ಹಂತಕ್ಕೆ ಬಂದಿದ್ದೇನೆ. ನಟಿಯರ ಬದುಕು ಹೊರಗೆ ಕಾಣುವಷ್ಟು ಸುಂದರವಾಗಿರುವುದಿಲ್ಲ, ಮೇಕಪ್ ಹಿಂದೆ ಸಾಕಷ್ಟು ನೋವುಗಳು ಅಡಗಿರುತ್ತವೆ" ಎಂದು ಭಾವುಕರಾದರು.
ತಮಗೆ ಸ್ಫೂರ್ತಿಯಾದ ನಟರ ಬಗ್ಗೆ ಮಾತನಾಡಿದ ಜ್ಯೋತಿ, "ಕನ್ನಡ ಮತ್ತು ತೆಲುಗು ನನಗೆ ಎರಡು ಕಣ್ಣುಗಳಿದ್ದಂತೆ. ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ಅವರ ಸರಳ ವ್ಯಕ್ತಿತ್ವ ಹಾಗೂ ಕಿಚ್ಚ ಸುದೀಪ್ ಸರ್ ಅವರ ನಟನೆ, ಆ್ಯಟಿಟ್ಯೂಡ್ ನನಗೆ ತುಂಬಾ ಇಷ್ಟ. ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರ ವ್ಯಕ್ತಿತ್ವವೇ ಅದ್ಭುತ" ಎಂದರು. ಇದೇ ವೇಳೆ ತಾವು ಹಲವು ಬಾರಿ ಬಿಗ್ ಬಾಸ್ ಆಫರ್ಗಳನ್ನು ತಿರಸ್ಕರಿಸಿರುವುದಾಗಿಯೂ ಬಹಿರಂಗಪಡಿಸಿದರು.
ಚಿತ್ರದಲ್ಲಿ ಆ್ಯಕ್ಷನ್ ಪಾತ್ರಕ್ಕಾಗಿ ದೇಹ ಹುರಿಗೊಳಿಸಿದ್ದರ ಬಗ್ಗೆ ಮಾತನಾಡಿದ ಜ್ಯೋತಿ, "ನಾನು ಭಾನುವಾರ ಬಿಟ್ಟು ವಾರದ 6 ದಿನ ಜಿಮ್ ಮಾಡುತ್ತೇನೆ. ಫಿಟ್ನೆಸ್ನಲ್ಲಿ ವ್ಯಾಯಾಮ ಕೇವಲ 20% ಅಷ್ಟೇ, ನಾವು ಸೇವಿಸುವ ಆಹಾರವೇ 80% ಮುಖ್ಯ. ಸಕ್ಕರೆ, ಎಣ್ಣೆಯುಕ್ತ ಪದಾರ್ಥಗಳನ್ನು ಸಂಪೂರ್ಣ ತ್ಯಜಿಸಬೇಕು. ಬಿರಿಯಾನಿ ಮತ್ತು ಕರ್ನಾಟಕದ ಊಟವೆಂದರೆ ನನಗೆ ಪಂಚಪ್ರಾಣ, ಆದರೆ ಡಯಟ್ ವೇಳೆ ಪ್ರಮಾಣವನ್ನು ತೀರಾ ಕಡಿಮೆ ಮಾಡಿ ಕಂಟ್ರೋಲ್ ಮಾಡುತ್ತೇನೆ" ಎಂದು ಫಿಟ್ನೆಸ್ ಟಿಪ್ಸ್ ನೀಡಿದ್ದಾರೆ.
ಚಿತ್ರದ ಕ್ಯಾಮೆರಾಮನ್ (DOP) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜ್ಯೋತಿ, "ಶೂಟಿಂಗ್ ನಡೆಯುತ್ತಿದ್ದ ಸಮಯದಲ್ಲಿ ಅವರ ಪತ್ನಿ ಗರ್ಭಿಣಿಯಾಗಿದ್ದರು, ಮಗುವಿನ ಜನನದ ಸಮಯದಲ್ಲೂ ಅವರು ಚಿತ್ರದ ಕೆಲಸವನ್ನು ಬಿಡದೆ ಹಗಲಿರುಳು ನಮಗಾಗಿ ಶ್ರಮಿಸಿದ್ದಾರೆ. ಅವರ ಈ ಅರ್ಪಣಾ ಮನೋಭಾವವೇ ಸಿನಿಮಾವನ್ನು ಇಷ್ಟು ಸುಂದರವಾಗಿ ಮೂಡಿಬರಲು ಕಾರಣ" ಎಂದು ಸ್ಮರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.