
ಹುಲಿರಾಯನ ಹುಡುಗಿ ದಿವ್ಯಾ ಉರುಡಗ ಈಗ ‘ಫೇಸ್ ಟು ಫೇಸ್’ ಚಿತ್ರದ ಮೂಲಕ ತೆರೆ ಮೇಲೆ ಬರಲು ರೆಡಿ ಆಗಿದ್ದಾರೆ. ವಿಶೇಷ ಅಂದ್ರೆ ಅವರು ಇಲ್ಲಿಗೆ ಬಂದಿದ್ದು ಪ್ರೀತಿ ಅರಸಿಕೊಂಡು. ಅದು ಸಿಗುತ್ತಾ ಇಲ್ಲವಾ ಅನ್ನೋದು ಗೊತ್ತಾಗುವುದಕ್ಕೆ ಇನ್ನಷ್ಟು ದಿನ ಕಾಯಬೇಕಿದೆ.
ಯಾಕಂದ್ರೆ, ‘ಫೇಸ್ ಟು ಫೇಸ್’ ಜುಲೈ ಮೊದಲ ವಾರ ತೆರೆಗೆ ಬರುವ ಸಾಧ್ಯತೆಗಳಿವೆ. ಆದರ ಆಚೆ ದಿವ್ಯಾ ಕುತೂಹಲ ಹುಟ್ಟಿಸಿದ್ದು ಬಂದ ಹೊಸರತರಲ್ಲೇ ವೈರಟಿ ಪಾತ್ರಗಳಿಗೆ ಬಣ್ಣ ಹಚ್ಚುತ್ತಿರುವ ಕಾರಣಕ್ಕೆ. ನಟಿಯಾಗಿ ಗುರುತಿಸಿಕೊಳ್ಳಲು ಇದೊಂದು ಸುವರ್ಣಾವಕಾಶ ಎನ್ನುವ ಖುಷಿ ಅವರದು. ನಟ ಉಪೇಂದ್ರ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅನುಭವದಲ್ಲಿ ಸಂದೀಪ್ ಈ ಚಿತ್ರಕ್ಕೆ ನಿರ್ದೇಶಕರಾಗಿದ್ದು, ಆರಂಭದಲ್ಲೇ ಸೈಕಲಾಜಿಕಲ್ ಥ್ರಿಲ್ಲರ್ ಕತೆಯೊಂದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರಂತೆ.
‘ದೃಶ್ಯಂ’ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ರೋಹಿತ್ ಈ ಚಿತ್ರದ ಹೀರೋ. ಖಳನಾಯಕನಿಂದ ನಾಯಕನಾಗಿ ಬಡ್ತಿ ಪಡೆದಿರುವ ರೋಹಿತ್‌ಗೆ ಇಲ್ಲಿ ಇಬ್ಬರು ನಾಯಕಿಯರು. ದಿವ್ಯಾ ಜತೆಗೆ ಕಿರುತೆರೆ ನಟಿ ಪೂರ್ವಿ ಜೋಷಿ ಚಿತ್ರದ ನಾಯಕಿ. ಈಗಷ್ಟೇ ಚಿತ್ರೀಕರಣ ಮುಗಿಸಿ, ಬಾಲಿವುಡ್ ಗಾಯಕ ಅರ್ಮನ್ ಮಲ್ಲಿಕ್ ಹಾಡಿದ ಹಾಡೊಂದರ ವಿಡಿಯೋ ಲಾಂಚ್ ಮೂಲಕ ಸುದ್ದಿ ಮಾಡಿರುವ ಚಿತ್ರತಂಡ, ಜೂನ್ 24 ಕ್ಕೆ ಟ್ರೇಲರ್ ಹೊರ ತರಲು ಪ್ಲ್ಯಾನ್ ಹಾಕಿಕೊಂಡಿದೆ.
ದಿವ್ಯಾ ಉರುಡುಗ ಚಿತ್ರದ ಪ್ರಮುಖ ಆಕರ್ಷಣೆ ಆಗಿದ್ದು, ‘ಒಂದೇ ಪಾತ್ರ ಮೂರು ಶೇಡ್. ನಾನಿಲ್ಲಿ ನಿಭಾಯಿಸಿರುವ ಪಾತ್ರದ ಬಗ್ಗೆ ಹೇಳುತ್ತಾ ಹೋದ್ರೆ ಇಡೀ ಕತೆಯೇ ರಿವೀಲ್ ಆಗುತ್ತೆ. ಅಷ್ಟೊಂದು ಪ್ರಾಮುಖ್ಯತೆ ಆ ಪಾತ್ರಕ್ಕಿದೆ. ಆ ಕಾರಣಕ್ಕೆ ತುಂಬಾನೆ ಎಕ್ಸೈಟ್ ಆಗಿದ್ದೇನೆ. ಆರಂಭದಲ್ಲೇ ಇಂತಹದೊಂದು ಪಾತ್ರ ಸಿಕ್ಕಿದ್ದಕ್ಕೆ ನಿಜಕ್ಕೂ ಖುಷಿಯಿದೆ. ಪ್ರೇಕ್ಷಕರು ಅದನ್ನು ನೋಡಿ ಮೆಚ್ಚಿಕೊಂಡ್ರೆ, ಅದು ನಟಿಯೊಬ್ಬಳಿಗೆ ದೊಡ್ಡ ಗೌರವ ಸಿಕ್ಕ ಹಾಗೆಯೆ’ ಎನ್ನುತ್ತಾರೆ ದಿವ್ಯಾ.
ಒಬ್ಬ ಹೀರೋ, ಇಬ್ಬರು ಹುಡುಗಿಯರು. ಮೇಲ್ನೋಟಕ್ಕೆ ಇದೊಂದು ತ್ರಿಕೋನ ಪ್ರೇಮಕತೆಯ ಚಿತ್ರ ಎಂದುಕೊಳ್ಳುವುದು ಸಹಜ. ಆದ್ರೆ, ಅದು ಅಂತಹ ಕತೆಯೇ ಅಲ್ಲ ಎಂದು ಪ್ರತಿಪಾದಿಸುವ ನಿರ್ದೇಶಕ ಸಂದೀಪ್, ಎರಡು ಮುಖಗಳಲ್ಲಿ ಒಬ್ಬರೇ ಕಾಣಿಸಿಕೊಂಡರೂ, ಆ ಎರಡು ಮುಖಗಳು ಒಬ್ಬರಿಗೆ ಇದಿದ್ದು ಹೇಗೆ ಎನ್ನುವುದು ಚಿತ್ರದ ಸಸ್ಪೆನ್ಸ್ ಸಂಗತಿ.
ಆತ ಆ್ಯಕ್ಟರ್ ಆಗಲು ಬಂದ ಹುಡುಗ. ಆಕೆ ಆತನ ಪ್ರೀತಿಯ ಬೆನ್ನುಹತ್ತಿ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದ ಚೆಲುವೆ. ಅವರಿಬ್ಬರ ನಡುವೆ ನಿಗೂಢವಾಗಿ ಬಂದು ನಿಂತವಳು ಬೆಂಗಳೂರು ಬೆಡಗಿ. ಆ ಮೂವರ ಸುತ್ತಲ ರೋಚಕ ಕತೆಯ ಮುಖಾಮುಖಿ ಅದು. ಆ ಮೂವರಲ್ಲಿ ಎರಡು ಮುಖ ಯಾರದ್ದು ಎನ್ನುವುದೇ ಚಿತ್ರದ ಒನ್‌ಲೈನ್ ಸ್ಟೋರಿ. ಜುಲೈನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.