
ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ಉಪೇಂದ್ರ ಅವರ ಅಭಿನಯದ ಕಲ್ಟ್ ಕ್ಲಾಸಿಕ್ ‘ಎ’ ಚಿತ್ರದ ನಿರ್ಮಾಪಕರಾಗಿದ್ದ ಬಿ.ಜಿ.ಮಂಜುನಾಥ್ (ಸಿಲ್ಕ್ ಮಂಜುನಾಥ್) ಅವರು ಬೆಂಗಳೂರಿನ ಸೌತ್ ಎಂಡ್ ಸರ್ಕಲ್ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ನಗರದ ಬನಶಂಕರಿ ಚಿತಾಗಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವೃತ್ತಿಯಲ್ಲಿ ಮೂಲತಃ ರೇಷ್ಮೆ ಉದ್ಯಮಿಯಾಗಿದ್ದ ಇವರು, ಗಾಂಧಿನಗರದಲ್ಲಿ ಸಿಲ್ಕ್ ಮಂಜು ಎಂದೇ ಚಿರಪರಿಚಿತರಾಗಿದ್ದರು. ಅವರಿಗೆ ಸಿನಿಮಾ ರಂಗದ ಮೇಲೆ ಅಪಾರ ಆಸಕ್ತಿಯಿತ್ತು. ಜವಳಿ ಉದ್ಯಮದಲ್ಲಿ ಯಶಸ್ಸು ಕಂಡ ನಂತರ ಅವರು ಸ್ಯಾಂಡಲ್ವುಡ್ಗೆ ಕಾಲಿಟ್ಟರು. 1990ರ ದಶಕದ ಕೊನೆಯಲ್ಲಿ ಉಪೇಂದ್ರ ಅವರ ವಿಭಿನ್ನ ಆಲೋಚನೆಯ 'ಎ' ಸಿನಿಮಾಗೆ ಬಂಡವಾಳ ಹೂಡುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಆ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು.
1998 ರಲ್ಲಿ ತೆರೆಕಂಡ ಉಪೇಂದ್ರ ನಿರ್ದೇಶಿಸಿ, ನಟಿಸಿದ್ದ 'ಎ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತು. ಈ ಬಾಕ್ಸ್ ಆಫೀಸ್ ಹಿಟ್ ಸಿನಿಮಾವು ಬಿ. ಜಿ. ಮಂಜುನಾಥ್ ಅವರಿಗೆ 'ಸಿಲ್ಕ್ ಮಂಜು' ಎಂಬ ಹೆಸರಿನಿಂದ ಗಾಂಧಿನಗರದಲ್ಲಿ ಪ್ರಸಿದ್ಧಿ ತಂದುಕೊಟ್ಟಿತು. ಉಪೇಂದ್ರ ಅವರ ಮೂವಿ ಕನ್ನಡ ಚಿತ್ರರಂಗದ ಟ್ರೆಂಡ್ ಸೆಟ್ಟರ್ ಸಿನಿಮಾಗಳಲ್ಲಿ ಒಂದಾಗಿ ಇಂದಿಗೂ ಇದೆ.
ಇತ್ತೀಚಿನ ವರ್ಷಗಳಲ್ಲಿ ಸಿಲ್ಕ್ ಮಂಜು ಅವರು ತೀವ್ರ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಆರ್ಥಿಕ ಮುಗ್ಗಟ್ಟಿನ ನಡುವೆಯೂ ಸಿನಿಮಾದ ಮೇಲಿದ್ದ ಪ್ರೀತಿ ಕಡಿಮೆಯಾಗಿರಲಿಲ್ಲ. ಕಳೆದ ವರ್ಷ ಅವರು 'ಟೆರರ್' ಎಂಬ ಹೊಸ ಸಿನಿಮಾಗೆ ಬಂಡವಾಳ ಹೂಡಿದ್ದರು. ಇದೇ ಅವರ ಕೊನೆಯ ಚಿತ್ರ ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ 'ಪ್ರತ್ಯರ್ಥ' (1999) 'ಅಗ್ರಹಾರ' (2007), 'ಆರ್ಭಟ' (2010), ಮತ್ತು 'ಸೂರ್ಯಕಾಂತಿ' (2010) ಸೇರಿದಂತೆ 50 ಕ್ಕೂ ಹೆಚ್ಚು ಸಿನೆಮಾ ನಿರ್ಮಾಣ ಮಾಡಿದ್ದಾರೆ.
ದೀರ್ಘಕಾಲದ ಅನಾರೋಗ್ಯವು ಅವರನ್ನು ತೀವ್ರವಾಗಿ ಕಾಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮೃತರ ಪಾರ್ಥಿವ ಶರೀರವನ್ನು ಅಕ್ಟೋಬರ್ 28ರ ಬೆಳಿಗ್ಗೆ ಸಾರ್ವಜನಿಕ ಹಾಗೂ ಆಪ್ತರ ಅಂತಿಮ ದರ್ಶನಕ್ಕಾಗಿ ನಿವಾಸಕ್ಕೆ ತೆಗೆದುಕೊಂಡು ಬರಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಿಲ್ಕ್ ಮಂಜು ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.