ನಟ ಕೋಮಲ್ ತುಂಬಾ ವರ್ಷಗಳ ನಂತರ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಶಂಕರೇಗೌಡ ಮೊದಲ ಬಾರಿಗೆ ನಿರ್ದೇಶಿಸಿ, ವಿನೋದ್ ನಿರ್ಮಿಸಿ, ರಿಷಿಕಾ ಶರ್ಮಾ, ನವನೀತ್ ನಾಯಕಿರಾಗಿ ನಟಿಸಿರುವ ‘ಕೆಂಪೇಗೌಡ 2’ ಸಿನಿಮಾ ಮೂಲಕ ಎಂಬುದು ವಿಶೇಷ. ಈ ನಿಟ್ಟಿನಲ್ಲಿ ಕೋಮಲ್ ಹೇಳಿಕೊಂಡ ಮಾತುಗಳು ಇಲ್ಲಿವೆ.
ಆರ್ ಕೇಶವಮೂರ್ತಿ
ನಿಮ್ಮ ನಟನೆಯ ಚಿತ್ರಕ್ಕೂ ಮೂರು ವರ್ಷ ಬೇಕಿತ್ತಾ?
ಅದ್ಯಾಕೆ ಸಾರ್ ನಿಮ್ಮ ನಟನೆಯ ಚಿತ್ರಕ್ಕೂ ಅಂತಿದ್ದೀರಿ! ನಾನು ಮಾಡಿರೋದು ದೊಡ್ಡ ಸಿನಿಮಾನೇ. ಮೂರು ವರ್ಷ ಟೈಮ್ ತೆಗೆದುಕೊಂಡಿದ್ದು ಬೇರೆ ಯಾವುದೋ ಚಿತ್ರದ ಸ್ಫೂರ್ತಿಯಿಂದ ಅಲ್ಲ. ನನ್ನ ನಾನು ಹೊಸದಾಗಿ ತೋರಿಸಲು ಇಷ್ಟುಸಮಯ ಬೇಕಿತ್ತು. ಜತೆಗೆ ಕತೆ, ನಿರ್ಮಾಣ ಸೇರಿದಂತೆ ಎಲ್ಲವೂ ಸ್ನೇಹಿತರ ವಲಯವೇ ಆಗಿತ್ತು. ಎಲ್ಲದರಲ್ಲೂ ಎಲ್ಲರು ಜವಾಬ್ದಾರಿ ವಹಿಸಿಕೊಂಡಿದ್ವಿ. ಪದೇ ಪದೇ ಕತೆಯಲ್ಲಿ ಹೊಸತನದ ಹುಡುಕಾಟ, ಒಂದಿಷ್ಟುರೀಶೂಟ್... ಇದೂ ಕೂಡ ತಡವಾಗಲಿಕ್ಕೆ ಕಾರಣವಾಯಿತು.
ಮೂರು ವರ್ಷ ಕಾಯುವಂತಹ ಆತ್ಮವಿಶ್ವಾಸ ಈ ಚಿತ್ರ ತುಂಬಿದ್ದು ಹೇಗೆ?
ನೀವು ಟೀಸರ್, ಟ್ರೇಲರ್ ನೋಡಿದ್ದೀರಿ ಅಂದುಕೊಳ್ಳುತ್ತೇನೆ. ಕೋಮಲ್ ನಟನೆಯ ಚಿತ್ರದ ಟ್ರೇಲರ್ ಕೂಡ ಒಂದು ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ ಅಂದರೆ ಇಡೀ ಸಿನಿಮಾದಲ್ಲಿ ಏನಿರಬಹುದು ಅಂತ ನೀವೇ ಯೋಚಿಸಿ.
ಈ ಮೂರು ವರ್ಷದಲ್ಲಿ ನಿಮಗೆ ಒಂದೇ ಒಂದು ಅವಕಾಶವೂ ಬರಲಿಲ್ಲವೇ
ತುಂಬಾ ಪ್ರಾಮಾಣಿಕತೆಯಿಂದ ಹೇಳುತ್ತಿದ್ದೇನೆ, ಕನಿಷ್ಠ 10 ಸಿನಿಮಾಗಳು ನನ್ನ ಹುಡುಕಿಕೊಂಡು ಬಂದಿವೆ. ಅದರಲ್ಲಿ ನಾನೇ ಬೇಕು ಮತ್ತು ನನಗೂ ಇಷ್ಟವಾಗಿ ಮಾಡಬಹುದು ಅನಿಸಿದ ಆರು ಕತೆಗಳಿದ್ದವು. ನಿರ್ಮಾಪಕರು ಮುಂಗಡ ಹಣವನ್ನು ಕೈಯಲ್ಲಿ ಹಿಡಿದು ಬಂದಿದ್ದರು. ಅವರಲ್ಲಿ ನನ್ನ ಅಣ್ಣ ಜಗ್ಗೇಶ್ ಅವರು ಕಳುಹಿಸಿದ ನಿರ್ಮಾಪಕರೂ ಇದ್ದರು. ಆದರೆ, ನನಗೆ ‘ಕೆಂಪೇಗೌಡ 2’ ಮೇಲೆ ಇದ್ದ ನಂಬಿಕೆ ಮತ್ತು ಭರವಸೆ ಬೇರೆ ಚಿತ್ರದ ಕಡೆ ನೋಡಕ್ಕೂ ಬಿಡಲಿಲ್ಲ.
ವರ್ಷಗಳ ನಂತರ ಕೋಮಲ್ ವೆಲ್ ’ಕಮ್ ಬ್ಯಾಕ್’!
ಈ ಚಿತ್ರವನ್ನು ಶಂಕರೇಗೌಡ ಅವರೇ ನಿರ್ದೇಶಿಸಬೇಕಿತ್ತೇ?
ಅವರು ನಿರ್ಮಾಪಕರು, ನಿರ್ದೇಶನದ ಅನುಭವ ಇಲ್ಲ, ಅಲ್ಲದೆ ಒಂದು ಪವರ್ ಫುಲ್ ಟೈಟಲ್ ಬೇರೆ. ಹೀಗಾಗಿ ಯಾಕೆ ಶಂಕರೇ ಗೌಡರಿಗೆ ಅವಕಾಶ ಕೊಟ್ಟಿದ್ದು ಎನ್ನುವುದು ನಿಮ್ಮ ಪ್ರುಶ್ನೆ. ನಿಜ ಹೇಳಬೇಕು ಅಂದರೆ ‘ಕೆಂಪೇಗೌಡ 2’ ಸಿನಿಮಾ ಹೆಸರು ಹುಟ್ಟಿಕೊಂಡಿದ್ದೇ ಅವರಿಂದ. ಜತೆಗೆ ಈ ಸಿನಿಮಾ ಮಾಡಬೇಕು, ಕೋಮಲ್ ಅವರನ್ನು ಹೊಸದಾಗಿ ಜನರ ಮುಂದೆ ಕರೆದುಕೊಂಡ ಹೋಗಬೇಕು ಅನ್ನೋ ಕನಸು ಅವರದ್ದು. ಅವರ ಕನಸಿಗೆ ನನ್ನನ್ನು ನಾನು ಒಪ್ಪಿಸಿಕೊಂಡೆ. ಶಂಕರೇ ಗೌಡ ಅವರು ನಮ್ಮ ಕುಟುಂಬದ ಸದಸ್ಯರು ಇದ್ದಂತೆ. ಹೀಗಾಗಿ ನಾನು ಅವಕಾಶ ಕೊಟ್ಟೆಎನ್ನುವ ಪ್ರಶ್ನೆ ಇಲ್ಲಿ ಬರಲ್ಲ.
ಚಿತ್ರದ ಹೆಸರನ್ನು ನೀವು ಪ್ರತಿಷ್ಠೆ ಆಗಿ ತೆಗೆದುಕೊಂಡಿದ್ದೀರಿ ಎನ್ನುವ ಅಭಿಪ್ರಾಯ ಇದೆಯಲ್ಲ?
ಖಂಡಿತ ಇಲ್ಲ. ಯಾಕೆಂದರೆ ನಾನಾಗಲೀ, ಶಂಕರೇ ಗೌಡ ಅವರಿಗೆ ಈ ಹೆಸರನ್ನು ಮತ್ತ್ಯಾರೋ ಸ್ಟಾರ್ ನಟನಿಗೆ ಟಾಂಗ್ ಕೊಡಕ್ಕೆ ಅಂತೂ ಅಲ್ಲ. ಜತೆಗೆ ಜಾತಿ ಅಭಿಮಾನದಿಂದಲೂ ಗೌಡ ಎನ್ನುವ ಹೆಸರಿಗೆ ಅಂಟಿಕೊಂಡಿದ್ದಲ್ಲ. ಯಾಕೆಂದರೆ ಸ್ಕ್ರೀನ್ ಮೇಲೆ ನನ್ನ ಹೆಸರು ಕೋಮಲ್ ಗೌಡ ಅಂತ ಇಡಬೇಕು ಎಂದಾಗಲೂ ಬೇಡ ಎಂದವನು ನಾನು. ಹೀಗಾಗಿ ಇಲ್ಲಿ ಪ್ರತಿಷ್ಠೆ ವಿಷಯನೇ ಇಲ್ಲ. ಇದು ಬೇರೆ ಯಾರೋ ಹಬ್ಬಿಸಿರೋ ತಪ್ಪು ಅಭಿಪ್ರಾಯ.
ಈ ಸಿನಿಮಾ ಹುಟ್ಟಿಕೊಂಡ ಹಿನ್ನೆಲೆ ಏನು?
ನಿಜ ಹೇಳಬೇಕು ಎಂದರೆ ಚಿತ್ರದ ಟೀಸರ್ ಶೂಟ್ ಮಾಡಿ ಬಿಡುಗಡೆ ಮಾಡುವ ತನಕ ‘ಕೆಂಪೇಗೌಡ 2’ ಹೆಸರಿನ ಸಿನಿಮಾ ಆಗುತ್ತದೆ ಎಂದುಕೊಂಡಿರಲ್ಲ. ಯಾಕೆಂದರೆ ಟೀಸರ್ ಶೂಟ್ ಮಾಡುವಾಗ ನಮ್ಮ ಬಳಿ ಒಂದು ಸಾಲಿನ ಕತೆ ಇತ್ತಷ್ಟೆ. ಟೀಸರ್ ಹಿಟ್ ಆಯಿತು. ಎಲ್ಲರು ನಮ್ಮತ್ತ ನೋಡಕ್ಕೆ ಶುರು ಮಾಡಿದರು. ಆಗ ಚಿತ್ರದ ಹೆಸರು ಹುಟ್ಟಿಕೊಂಡಿತು. ಮೇಕಿಂಗ್ ಬದಲಾಯಿತು. ತಾರಾಗಣ ದೊಡ್ಡದಾಯಿತು. ಬಜೆಟ್ ಹೆಚ್ಚಾಯಿತು. ನಿರ್ಮಾಪಕ ವಿನೋದ್ ಅವರು ಬಂದರು. ನನ್ನಲ್ಲಿದ್ದ ಸಣ್ಣ ಕತೆ ದೊಡ್ಡದಾಗುತ್ತ ಹೋಯಿತು. ಅಂದಹಾಗೆ ಈ ಚಿತ್ರಕ್ಕೆ ಮೊದಲು ಇದ್ದ ಹೆಸರು ‘ರಣಭೈರೇಗೌಡ’.
‘ಮಣ್ಣಲ್ಲಿ ಹೂತಿಟ್ಟ ಸತ್ಯ ಹೊರ ತೆಗಿತೀನಿ’ ಎಂದ ಕಾಮಿಡಿ ಕಿಂಗ್!
ಚಿತ್ರ ಕತೆ ಏನು?
ಇಲ್ಲಿ ನನ್ನದು ಸರ್ಕಲ್ ಇನ್ಸ್‌ಪೆಕ್ಟರ್ ಪಾತ್ರ. ರಾಜ ಮತ್ತು ಸೈನಿಕನ ಕತೆ. ಅಂದರೆ ರಾಜನನ್ನು ಎದುರು ಹಾಕಿಕೊಳ್ಳುವುದಕ್ಕೆ ಸೈನಿಕನಿಗೆ ಅಧಿಕಾರ ಇರಲ್ಲ. ಆದರೆ, ಒಬ್ಬ ಸೈನಿಕ ಅಧಿಕಾರದ ಆಚೆಗೂ ಖಡಕ್ ಆಗಿದ್ದರೆ, ಪ್ರಾಮಾಣಿಕತೆಯಿಂದ ಇದ್ದರೆ ಯಾರನ್ನು ಬೇಕಾದರೂ ಎದುರು ನಿಲ್ಲಿಸಿ ತಿದ್ದಬಹುದು. ಹಾಗೆ ಸೈನಿಕ ರಾಜನನ್ನು ತಿದ್ದಲು ಹೋದಾಗ ಏನಾಗುತ್ತದೆ ಎಂಬುದು ಚಿತ್ರದ ಕತೆ. ಇಲ್ಲಿ ರಾಜ ಮತ್ತು ಸೈನಿಕ ಚಿತ್ರದಲ್ಲಿ ಯಾವ ರೂಪದಲ್ಲಿ ಬರುತ್ತಾರೆ ಎಂಬುದು ಕುತೂಹಲ. ನನಗೆ ಗೊತ್ತಿರುವಂತೆ ಭಾರತೀಯ ಸಿನಿಮಾ ಪರದೆಗೆ ಇದು ಹೊಸ ಕತೆ. ಜತೆಗೆ ಯಾರೂ ಕೂಡ ಮುಟ್ಟದ ಕತೆ ಇಲ್ಲಿದೆ. ಇದು ನೈಜ ಕತೆ. ದೇಶದಲ್ಲೇ ಸಂಚಲನ ಮೂಡಿಸಿದ ಘಟನೆ. ಆ ಘಟನೆಯ ಜೀವಂತ ಸಾಕ್ಷಿ ನಮ್ಮೊಂದಿಗೆ ಇದ್ದಾರೆ. ಈ ಸಿನಿಮಾ ಬಂದ ಮೇಲೆ ನನಗೆ ಹಲವರಿಂದ ಪ್ರಾಣ ಬೆದರಿಕೆ ಕರೆ ಬರಬಹುದು. ಸೆನ್ಸಾರ್ ಮುಗಿದ ಕೂಡಲೇ ಆ ಬಗ್ಗೆ ಮಾತನಾಡುತ್ತೇನೆ.
ನೀವು ಮಾಡಿಕೊಂಡ ಕತೆ ಸಿನಿಮಾ ರೂಪ ಪಡೆಯುವ ಹಂತದಲ್ಲಿ ನಿಮ್ಮೊಂದಿಗೆ ನಿಂತವರು ಯಾರು?
ಕೆವಿ ರಾಜು ಹಾಗೂ ಬರಹಗಾರ ನಂಜುಂಡ ಅವರು. ಕತೆ ಬರೆದು, ಚಿತ್ರಕತೆ ಹಾಗೂ ಸಂಭಾಷಣೆ ಮುಗಿಸಿಕೊಂಡು ಇನ್ನೇನು ಚಿತ್ರೀಕರಣಕ್ಕೆ ಹೋಗಬೇಕು ಎಂದಾಗ ನಂಜುಂಡ ಅವರಿಗೆ ಈ ಸಿನಿಮಾ ಕತೆ ಹೇಳಿದೆ. ಅವರು ‘ಏನ್ ಬಾಸ್ ಡಬ್ಬಾ ಥರಾ ಇದೆ’ ಅಂದುಬಿಟ್ಟರು. ನನಗೆ ಶಾಕ್ ಆಯಿತು. ಮುಂದೆ ನನ್ನ ಮತ್ತು ಅವರ ನಡುವೆ ಮಾತುಕತೆ ಶುರುವಾಯಿತು. ಅವರು ಕೇಳುವ ಪ್ರಶ್ನೆಗಳಿಗೆ ನಾನು ಉತ್ತರ ಹುಡುಕುತ್ತ ಹೋದೆ. ಕತೆಗೆ ಒಂದು ಖಡಕ್ ಲುಕ್ ಬಂತು. ಮತ್ತೆ ಕೆವಿ ರಾಜು ಅವರಿಗೆ ಹೇಳಿದ್ವಿ. ಮತ್ತೊಂದು ಸುತ್ತಿನ ರಿಪೇರಿ ಆಯಿತು. ಮತ್ತೆ ಕತೆ ಹೇಳಿದ್ವಿ. ಕತೆ ಕೇಳಿ ‘ಈಗ ನೋಡು ನೀನು ನಿಜವಾಗಲೂ ಕೆಂಪೇಗೌಡ ಆಗಿಬಿಟ್ಟೆ’ ಅಂದ್ರು ಕೆವಿ ರಾಜು. ಈ ಇಬ್ಬರ ನೆರವು ಮರೆಯಲಾಗದು. ಇವರಲ್ಲಿ ನಂಜುಂಡ ಇಲ್ಲ ಎನ್ನುವುದು ನೋವಿನ ಸಂಗತಿ.
ಮುಂದೆ ‘ಕೆಂಪೇಗೌಡ 3’ ಬರುತ್ತೆ ಅನ್ನೋ ಸುದ್ದಿ ಇದೆಯಲ್ಲ?
ಆ ಬಗ್ಗೆ ಈಗಲೇ ಹೇಳಲಾರೆ. ಆದರೆ, ಶಂಕರೇ ಗೌಡ ಅವರು ಈ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ‘ಕೆಂಪೇಗೌಡ 2’ ನಂತರ ನಾನು ಮತ್ತೊಂದು ಹೊಸ ರೀತಿಯ ಸಿನಿಮಾ ಮೂಲಕ ಬರುತ್ತಿದ್ದೇನೆ. ಈಗಾಗಲೇ ಅದರ ಟೀಸರ್‌ಗೇ 25 ಲಕ್ಷ ವೆಚ್ಚ ಮಾಡಿ ಲಂಡನ್‌ನಲ್ಲಿ ಚಿತ್ರೀಕರಣ ಮಾಡಿದ್ದೇನೆ. ಈ ಸಿನಿಮಾ ನಂತರ ಅದನ್ನು ತೋರಿಸುತ್ತೇನೆ. ಕೋಮಲ್ ಇಂಥ ಪಾತ್ರವೂ ಮಾಡಕ್ಕೆ ಸಾಧ್ಯನಾ ಎಂದು ಅಚ್ಚರಿಯಾಗಬೇಕು. ಅಂಥದ್ದೊಂದು ಪಾತ್ರದ ಮೂಲಕ ಬರುತ್ತೇನೆ.