
ನೀರ್ ದೋಸೆ ಹಾಕಿದ ಮೇಲೆ ಜಗ್ಗೇಶ್ ಕಾಮಿಡಿ ದೋಸೆ ಹಾಕಿದ್ದಾರೆ. ನೀರ್ ದೋಸೆಯಲ್ಲಿ ಮಸಾಲೆ ಹೆಚ್ಚಿದ್ದರೆ, ಇಲ್ಲಿ ಕಾಮಿಡಿ ಜಾಸ್ತಿ. ಹೀಗಾಗಿ ‘ನಗುವವರಿಗೆ ಮಾತ್ರ’ ಎನ್ನುವ ಟ್ಯಾಗ್‌ಲೈನ್‌ನೊಂದಿಗೆ ಶುಕ್ರವಾರ ಪ್ರೇಕ್ಷಕರ ಮುಂದೆ ‘ಮೇಲುಕೋಟೆ ಮಂಜ’ನ ಅವತಾರದಲ್ಲಿ ದರ್ಶನ ಕೊಡುತ್ತಿರುವ ಹೊತ್ತಿನಲ್ಲಿ ಜಗ್ಗೇಶ್ ಸಂದರ್ಶನ ಇಲ್ಲಿದೆ.
1) ಮೇಲುಕೋಟೆ ಮಂಜ ಹುಟ್ಟಿಕೊಂಡಿದ್ದು ಹೇಗೆ?
ನಿಜ ಹೇಳಬೇಕು ಅಂದ್ರೆ ಈ ಕತೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರದ್ದು. ಅವರೇ ಕತೆಯ ಒಂದು ಸಾಲು ಹೇಳಿ ತಮಗೆ ಈ ಸಿನಿಮಾ ಮಾಡಿಕೊಡುವಂತೆ ಕೇಳಿದ್ದರು. ರಾಕ್‌ಲೈನ್ ಅಭಿನಯದಲ್ಲಿ ಈ ಚಿತ್ರವನ್ನು ನಾನು ನಿರ್ದೇಶನ ಮಾಡುವುದು ತಡವಾಯಿತು. ಆಗಲೇ ನನಗೆ ನನ್ನ ಅಭಿಮಾನಿ ಮತ್ತು ದೂರದ ಸಂಬಂ ಕೃಷ್ಣ ಭೇಟಿಯಾಗಿದ್ದು. ಅವರು ತಾವು ಗಾಂನಗರದಲ್ಲಿ ಮೋಸ ಹೋದ ಕತೆ ಹೇಳಿಕೊಂಡ ಮೇಲೆ ಅವರ ನಿಜ ಕತೆಗೂ ರಾಕ್‌ಲೈನ್ ಕೊಟ್ಟ ರೀಲ್ ಕತೆಗೂ ಅಂತ ವ್ಯತ್ಯಾಸಗಳು ಕಾಣಲಿಲ್ಲ. ಆಗ ನಾನು ಈ ಚಿತ್ರವನ್ನು ನನ್ನದೇ ನಟನೆ ಮತ್ತು ನಿರ್ದೇಶನದಲ್ಲಿ ಬೇರೆಯವರಿಗೆ ಮಾಡುತ್ತೇನೆ ಎಂದಾಗ ರಾಕ್‌ಲೈನ್ ಒಪ್ಪಿಕೊಂಡರು. ಅವರ ಕತೆಗೆ ನನ್ನ ಅನುಭವಗಳನ್ನು ಸೇರಿಸಿದಾಗ ‘ಮೇಲುಕೋಟೆ ಮಂಜ’ ಜನ್ಮತಾಳಿದ.
2)ಅಂದ್ರೆ ಕೇವಲ ಅಭಿಮಾನಿಗೆ ಮಾಡಿಕೊಟ್ಟ ಚಿತ್ರವಾ?
ಹೌದು. ನೀವು ಈ ಚಿತ್ರದ ನಿರ್ಮಾಪಕ ಕೃಷ್ಣ ಅವರ ವ್ಯಥೆ ಕೇಳಿದರೆ ನನ್ನ ನಿರ್ಧಾರ ಸರಿ ಅನ್ನುತ್ತೀರಿ. ಹಾಗಂತ ಅಭಿಮಾನಿ ಚಿತ್ರ ಎಂದುಕೊಂಡು ಯಾವುದ್ಯಾವುದೋ ಕತೆಯನ್ನು ಸಿನಿಮಾ ಮಾಡಿಲ್ಲ. ಈ ಚಿತ್ರದಿಂದ ಪ್ರೇಕ್ಷಕನಿಗೆ ಮನರಂಜನೆ ಸಿಗಬೇಕು. ನಿರ್ಮಾಪಕರಿಗೂ ಜೇಬು ತುಂಬ ಬೇಕು. ಅದನ್ನು ಗಮನದಲ್ಲಿಟ್ಟುಕೊಂಡೇ ‘ಮೇಲುಕೋಟೆ ಮಂಜ’ನನ್ನು ರೂಪಿಸಿದ್ದೇನೆ.
3)ಹೌದು, ಈ ಮಂಜ ಯಾಕೆ ನಿಮ್ಮನ್ನು ಬಿಟ್ಟು ಹೋಗ್ತಿಲ್ಲ?
ಏನಾಯಿತು ಗೊತ್ತಾ, ‘ಎದ್ದೇಳು ಮಂಜುನಾಥ’ ಸಿನಿಮಾ ಮಾಡಿದ ಮೇಲೆ ನನ್ನ ಸುತ್ತಲೂ ತುಂಬಾ ಮಂಜುನಾಥಗಳು ಕಾಣಿಸಿಕೊಂಡರು. ಪ್ರತಿ ಊರು, ಪ್ರತಿ ಮನೆಯಲ್ಲೂ ಒಬ್ಬ ಮಂಜ ಇರ್ತಾನಲ್ಲ ಅನಿಸಿತು. ಜತೆಗೆ ಈ ಚಿತ್ರದ ಯಶಸ್ಸಿನ ನಂತರ ಮಂಜುನಾಥ ಎನ್ನುವುದು ನನ್ನ ಟ್ರಂಪ್ ಕಾರ್ಡ್ ಆಯಿತು. ಹೀಗಾಗಿ ಮೇಲುಕೋಟೆ ಎನ್ನುವ ಹೆಸರಿಗೆ ಮಂಜ ಸೇರಿಕೊಂಡರೆ ಹೇಗಿರುತ್ತದೆ ಎಂದು ಯೋಚಿಸಿದ್ದರ ಲವಿದು. ಈಗ ಮಂಜು ನನ್ನ ಬೆಸ್ಟು ಫ್ರೆಂಡ್ ಆಗಿದ್ದೇನೆ. ಅವನನ್ನ ಬಿಟ್ಟು ಕೊಡುವುದು ಹೇಗೆ?
4) ಅದ್ಸೆರಿ, ಆ ನಿಮ್ಮ ಸ್ನೇಹಿತ ಕಮ್ ಅಭಿಮಾನಿಯ ವ್ಯಥೆ ಏನು?
ಕೃಷ್ಣ ಅವರು ಒಂದು ಸಿನಿಮಾ ಮಾಡಬೇಕೆಂದು ಗಾಂನಗರಕ್ಕೆ ಬಂದಾಗ ಅವರನ್ನು ನಂಬಿಸಿ ಒಬ್ಬ ವ್ಯಕ್ತಿ 80 ಲಕ್ಷ ರುಪಾಯಿ ಖರ್ಚು ಮಾಡಿಸಿದ್ದಾರೆ. ತಮ್ಮ ನಿರ್ಮಾಣದ ಸಿನಿಮಾ ಈಗ ಸೆಟ್ಟೇರುತ್ತೆ, ಆಗ ಸೆಟ್ಟೇರುತ್ತದೆಂದು ಕಾದು ಕಾದು ಸುಸ್ತಾದ ಮೇಲೆ ತಾವು ಮೋಸ ಹೋಗಿದ್ದು ತಡವಾಗಿ ಕೃಷ್ಣನಿಗೆ ಗೊತ್ತಾಗಿದೆ. ಆ ಮೇಲೆ ನನ್ನ ಬಳಿ ಬಂದು ನ್ಯಾಯ ಕೊಡಿಸುವಂತೆ ಕೇಳಿಕೊಂಡರು. ನಾನು ಇದನ್ನು ಸರಿ ಪಡಿಸುವುದಕ್ಕೆ ತುಂಬಾ ಪ್ರಯತ್ನ ಮಾಡಿದೆ. ಅದು ನನ್ನಿಂದ ಆಗಲಿಲ್ಲ. ಈ ನಡುವೆ ಈತ ನನ್ನ ಅಭಿಮಾನಿ ಮತ್ತು ದೂರದ ಸಂಬಂ ಅಂತ ಗೊತ್ತಾಯಿತು. 80 ಲಕ್ಷ ಕಳೆದುಕೊಂಡವನನ್ನು ಹೇಗೆ ನಡು ಬೀದಿಯಲ್ಲಿ ಬಿಡುವುದು? ಕೃಷ್ಣನನ್ನು ಹಾಗೆ ಕಳುಹಿಸಿದರೆ ಮತ್ತೆ ಮೋಸ ಹೋಗುತ್ತಾನೆಂದುಕೊಂಡು ನಾನು ಒಂದೇ ಒಂದು ರುಪಾಯಿ ಸಂಭಾವನೆ ಪಡೆಯದೆ ಈ ಚಿತ್ರವನ್ನು ಮಾಡಿಕೊಟ್ಟೆ.
5) ಸರಿ, ಸಿನಿಮಾ ತಡವಾಗಿ ಬರುತ್ತಿರುವುದು ಯಾಕೆ?
47 ದಿನಗಳ ಕಾಲ ಚಿತ್ರೀಕರಣ ಮಾಡಿ ಮುಗಿಸಿದ ಈ ಚಿತ್ರವನ್ನು ತೆರೆಗೆ ತರಬೇಕೆಂದುಕೊಂಡಾಗ ‘ನೀರ್‌ದೋಸೆ’ ಸಿದ್ಧವಾಗಿತ್ತು. ಇದರ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದ್ದು ಮೊದಲ ಕಾರಣವಾದರೆ, ನನ್ನದೇ ವೈಯಕ್ತಿಕ ಕೆಲಸಗಳು, ಚಿತ್ರಕ್ಕೆ ಬಾಕಿದ್ದ ತಾಂತ್ರಿಕ ಕೆಲಸಗಳಿಂದ ಸಿನಿಮಾ ತಡವಾಯಿತು.
6) ಈ ಚಿತ್ರದ ಕತೆ ಏನು?
ಸಾಲ ಮಾಡಿಯೇ ಜೀವನ ಮಾಡುವ ಒಬ್ಬ ವ್ಯಕ್ತಿ ತೆಗೆದುಕೊಂಡ ಸಾಲವನ್ನು ವಾಪಸ್ಸು ಕೊಡದೆ ಹೇಗೆ ಮೋಸ ಮಾಡುತ್ತಾನೆ ಎಂಬುದೇ ಚಿತ್ರಕತೆ. ಇಲ್ಲಿ ಮೋಸ ಮಾಡುವವನ ಪಾತ್ರ ನನ್ನದು. ಮೋಸಕ್ಕೆ ಒಳಗಾಗುವ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. ಒಬ್ಬ ತಿರುಬೋಕಿ ಸಾಲಗಾರನ ಕತೆ ರಂಗಾಯಣ ರಘು ಅವರ ನಿರೂಪಣೆಯಲ್ಲಿ ಸಾಗುತ್ತದೆ. ಈ ಚಿತ್ರದ ಮತ್ತೊಂದು ಹೈಲೈಟ್ ಅಂದರೆ ನನ್ನ ಅಕ್ಕನ ಪುತ್ರ ಜೀವನ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾನೆ. ರವಿಶಂಕರ್ ಅವರಂತೆ ಅವನನ್ನು ಈ ಚಿತ್ರದಲ್ಲಿ ತೋರಿಸಿರುವೆ. ಮಾಧ್ಯಮಗಳಲ್ಲಿ ಬರುವ ವಂಚಿತರ ಪ್ರಕರಣಗಳು, ಸಾಲಗಾರರ ಮೈಂಡ್ ಗೇಮ್‌ಗಳೇ ಚಿತ್ರದ ಪ್ರಧಾನ ಅಂಶಗಳು. ಇದೆಲ್ಲವನ್ನೂ ಹಾಸ್ಯದ ನೆರಳಿನಲ್ಲಿ ನಿರೂಪಿಸಿದ್ದೇನೆ.
7) ನಿಮ್ಮನ್ನು ಈಗಾಗಲೇ ಕಾಮಿಡಿ ಕಿಂಗ್ ಅಂತ ನೋಡಿ ಆಗಿದೆ. ಆದರೂ ಹೊಸ ಕಾಮಿಡಿ ಚಿತ್ರವಿದು ಎನ್ನುತ್ತಿದ್ದೀರಿ. ಅದ್ಹೇಗೆ?
ಮ್ಯಾನರಿಸಂ ಹಾಗೂ ಡೈಲಾಗ್‌ಗಳಲ್ಲಿ ಪಂಚ್ ಮಾಡಿ ಕಾಮಿಡಿ ಮಾಡುವುದನ್ನು ನೋಡಿದ್ದೇವೆ. ಆದರೆ, ಡಾ ರಾಜ್‌ಕುಮಾರ್, ಅಂಬರೀಶ್, ಧೀರೇಂದ್ರ ಗೋಪಾಲ್, ದೊಡ್ಡಣ್ಣ, ಟೆನ್ನೀಸ್ ಕೃಷ್ಣ ಅವರಿಂದ ಆರಂಭಗೊಂಡು ಕನ್ನಡದ ಬಹುತೇಕ ಕಲಾವಿದರನ್ನು ಮಿಮಿಕ್ರಿ ಮಾಡುತ್ತೇನೆ. ಮಿಮಿಕ್ರಿಯನ್ನೂ ಕೂಡ ಹಾಸ್ಯವಾಗಿ ಬಳಸಬಹುದು ಎಂಬುದನ್ನು ಈ ಚಿತ್ರದ ಮೂಲಕ ಹೇಳಿರುವೆ. ಸಾಲ ಮಾಡಿ ತಪ್ಪಿಸಿಕೊಳ್ಳುವಾಗ ಈ ಎಲ್ಲರ ನಟರ ಮೊರೆ ಹೋಗುತ್ತೇನೆ. ಅದು ಪ್ರೇಕ್ಷಕನಿಗೆ ಹೊಸ ಕಾಮಿಡಿ ದೋಸೆಯಾಗಿ ಕಾಣುತ್ತದೆ.
8) ನಿಮ್ಮನ್ನು ಹೀಗೆ ಸಾಲಗಾರರು ನಿಜ ಜೀವನದಲ್ಲಿ ಮೋಸ ಮಾಡಿದುಂಟೆ?
ಅಯ್ಯೋ ತುಂಬಾ ಸಲ ಮೋಸ ಹೋಗಿದ್ದೇನೆ. ಆ ಪೈಕಿ ಈಗಲೂ ನೆನಪಿಟ್ಟುಕೊಳ್ಳುವಂತೆ ನಿರ್ಮಾಪಕರೊಬ್ಬರು ನನಗೆ ಟೋಪಿ ಹಾಕಿದ್ದಾರೆ. ದೊಡ್ಡ ನಿರ್ಮಾಪಕರು. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೂ ಕೆಲಸ ಮಾಡಿದವರು. ಅವರ ಮಾತುಗಳನ್ನು ನಂಬಿ ಅವರಿಗೆ ನಾನು ದುಡ್ಡು ಕೊಟ್ಟೆ. ಈಗಲೂ ಫೋನ್ ಮಾಡುತ್ತಿದ್ದೇನೆ. ಏನೋ ಒಂದು ಕತೆ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಫೋನ್ ಮಾಡಿ ಸಾಲ ವಾಪಸ್ಸು ಕೊಡುವಂತೆ ಕೇಳಿದಾಗ ಅವರ ಮನೆಯವರು ೆನ್ ತೆಗೆದುಕೊಂಡು ‘ಪ್ಯಾರಲಿಸಸ್ ಆಗಿದೆ. ಬೆಡ್ ರೆಸ್ಟು... ಕೊನೇ ಸ್ಟೇಜು. ಏನಾದ್ರು ಹೇಳಬೇಕಿತ್ತಾ?’ ಕೇಳಿದ್ರು. ಕೊನೇ ಸ್ಟೇಜು ಅದ್ಮೇಲೆ ಇನ್ನೇನು ಹೇಳೋಣ ಸ್ವಾಮಿ? ಇಂಥ ಹಲವು ಅನುಭವಗಳು ಈ ಚಿತ್ರಕ್ಕೆ ಪೂರಕವಾಗಿ ಬಳಸಿಕೊಂಡಿದ್ದೇನೆ.
9) ಮುಂದಿನ ನಿಮ್ಮ ಸಿನಿಮಾ ಯಾವುದು? ಅಂದುಕೊಂಡಂತೆ ರಾಕ್‌ಲೈನ್ ವೆಂಕಟೇಶ್ ಅವರಿಗೆ ಸಿನಿಮಾ ಮಾಡಿಕೊಡುತ್ತೀರಾ?
ಮತ್ತೆ ನಾನು, ಯೋಗರಾಜ್ ಭಟ್ ಅವರ ಚಿತ್ರದಲ್ಲಿ ನಟಿಸುವ ಆಸೆ ಇದೆ. ಈಗಾಗಲೇ ಆ ಬಗ್ಗೆ ಮಾತುಕತೆ ಮಾಡಿದ್ದೇನೆ. ಭಟ್ರು ಕೂಡ ಮೂರು ತಲೆಮಾರಿನ ಕತೆಯೊಂದನ್ನು ಕೊಟ್ಟಿದ್ದಾರೆ. ನೀವೇ ನಿರ್ದೇಶನ ಮಾಡಿಕೊಳ್ಳಿ, ನಾನು ಕತೆ ಕೊಡುತ್ತೇನೆ ಅಂದಿದ್ದಾರೆ. ಆದರೆ, ನನ್ನ ಚಿತ್ರಕ್ಕೆ ಭಟ್ರೆ ನಿರ್ದೇಶಕರಾದರೆ ಒಳ್ಳೆಯದು. ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ಅವರು ನಿರ್ಮಿಸುವ ಸಾಧ್ಯತೆಗಳಿವೆ. ಇನ್ನು ರಾಕ್‌ಲೈನ್ ಅವರಿಗಾಗಿ ನಾನೊಂದು ಸಿನಿಮಾ ಮಾಡುವ ಪ್ಲಾನ್ ಇದ್ದೇ ಇದೆ. ಅದು ಭಟ್ಟರ ಜತೆಗಿನ ಚಿತ್ರ ಮುಗಿದ ಮೇಲೆ.
- ಆರ್. ಕೇಶವ ಮೂರ್ತಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.