
ಬೆಂಗಳೂರು(ಆ.01): ಪ್ರೇಕ್ಷಕರಿಗೆ ಹತ್ತಿರವಾಗಲು ‘ನನ್ ಮಗಳೇ ಹೀರೋಯಿನ್’ ಚಿತ್ರ ಹೊಸ ಐಡಿಯಾ ಮಾಡಿದೆ. ಸದ್ಯದಲ್ಲೇ ತೆರೆಗೆ ಬರಲಿರುವ ಈ ಚಿತ್ರದ ಪ್ರಮೋಷನ್'ಗೋಸ್ಕರ ನಿರ್ದೇಶಕ ಬಾಹುಬಲಿ ಅಪ್ಪ- ಮಗಳ ಫೋಟೋ ಕಾಂಟೆಸ್ಟ್ ಮಾಡುತ್ತಿದ್ದಾರೆ.
ಚಿತ್ರದ ಟೈಟಲ್‌ನಂತೇ ನಿಮ್ಮ ಪಾಲಿಗೂ ನಿಮ್ಮ ಮಗಳೇ ಹೀರೋಯಿನ್ನಾ ಅಂತ ಕೇಳಿ, ಮಗಳ ಜೊತೆ ಇರೋ ಅಪ್ಪನ ಫೋಟೋ ವಾಟ್ಸ್‌ಅಪ್ ಮಾಡಿ ಅಂತ ಜಾಹೀರಾತು ಕೊಟ್ಟಿದ್ದಾರೆ. ಹಾಗೆ ಕಳುಹಿಸಿದ ಫೋಟೋಗಳನ್ನು ಚಿತ್ರದ ತೆರೆ ಮೇಲೆ ತೋರಿಸಲಿದೆ ಚಿತ್ರತಂಡ. ರಾಜ್ಯದ ನಾನಾ ಕಡೆಗಳಿಂದ 25 ಸಾವಿರಕ್ಕೂ ಹೆಚ್ಚು ಅಪ್ಪ-ಮಗಳ ಫೋಟೋಗಳು ಬಂದಿವೆಯಂತೆ. ಕೆಲವು ನಾಯಕಿಯರೂ ತಮ್ಮ ತಂದೆ ಜತೆ ಇರೋ ಫೋಟೋವನ್ನು ಕಳುಹಿಸಿದ್ದಾರೆ. ಇನ್ನೂ ಬರುತ್ತಲೇ ಇವೆ. ಇನ್ನೊಂದು ವಾರದಲ್ಲಿ ಸ್ಪರ್ಧೆ ಮುಕ್ತಾಯ.
‘ಬಂದ ಫೋಟೋಗಳಷ್ಟನ್ನೂ ತೆರೆ ಮೇಲೆ ತೋರಿಸಲಿದ್ದೇವೆ. ಅದಕ್ಕಾಗಿ ಕಳೆದ ಎರಡ್ಮೂರು ವಾರಗಳಿಂದ ಸಿಜಿ ವರ್ಕ್ ನಡೀತಿದೆ. ಚಿತ್ರದ ಆರಂಭ ಮತ್ತು ಕೊನೆಯ ಟೈಟಲ್ ಕಾರ್ಡ್‌ನಲ್ಲಿ ಈ ಫೋಟೋಗಳನ್ನು ನೋಡಬಹುದು. ಸಾಮಾನ್ಯ ಜನರನ್ನು ಒಂದು ಸಿನಿಮಾದಲ್ಲಿ ನೋಡುವಂತಹ ಈ ಪ್ರಯೋಗವನ್ನು ಕನ್ನಡದಲ್ಲಿ ಮಾತ್ರವಲ್ಲ ಬೇರೆ ಭಾಷೆಯಲ್ಲೂ ಇದುವರೆಗೂ ಮಾಡಿಲ್ಲ. ನಮಗೆ ಫೋಟೋ ತಲುಪಿಸಿರುವ ಅಷ್ಟೂ ಜನ ತಮ್ಮ ಫೋಟೋ ನೋಡಿಕೊಳ್ಳುವುದಕ್ಕಾಗಿ ಥಿಯೇಟರ್‌ಗೆ ಬರುತ್ತಾರೆ. ಇದು ಒಂದು ರೀತಿಯಲ್ಲಿ ಪ್ರೇಕ್ಷಕರನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳುವ ಐಡಿಯಾ’ ಎನ್ನುತ್ತಾರೆ ನಿರ್ದೇಶಕ ಬಾಹುಬಲಿ.
ಇನ್ನೂ ಸೆಲೆಬ್ರಿಟಿ ಅಪ್ಪ- ಮಗಳ ಫೋಟೋಗಳನ್ನು ಚಿತ್ರದ ಜಾಹೀರಾತುಗಳಿಗಾಗಿ ಬಳಸಿಕೊಳ್ಳುವ ಯೋಚನೆ ನಿರ್ದೇಶಕರದ್ದು. ಅಂದಹಾಗೆ ಈ ಚಿತ್ರದ ನಾಯಕ ಸಂಚಾರಿ ವಿಜಯ್. ಬಿ ಸಿ ಪಾಟೀಲ್, ತಬಲನಾಣಿ, ಬುಲೆಟ್ ಪ್ರಕಾಶ್, ಮಜಾಟಾಕೀಸ್ ಪವನ್ ಮುಂತಾದವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎನ್ ಜಿ ಮೋಹನ್ ಕುಮಾರ, ಪಟೇಲ್ ಆರ್ ಅನ್ನದಾನಪ್ಪ ನಿರ್ಮಾಣದ ಚಿತ್ರವಿದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.