'3 ಘಂಟೆ 30 ದಿನ 30 ಸೆಕೆಂಡ್' ಸಿನಿಮಾ ನಿರ್ದೇಶಕನ ಮಾತುಗಳಿವು

By Suvarna Web DeskFirst Published Jan 19, 2018, 11:51 AM IST
Highlights

ನಿರ್ದೇಶಕ ಮಧುಸೂದನ್ ಅವರದ್ದು ಜಾಹೀರಾತು  ಕ್ಷೇತ್ರದಲ್ಲಿ ದೊಡ್ಡ ಹೆಸರು. ಇವರ ಚೊಚ್ಛಲ ನಿರ್ದೇಶನದ ‘3 ಘಂಟೆ 30 ದಿನ 30 ಸೆಕೆಂಡ್’ ಇಂದು ಬಿಡುಗಡೆ. ಅರುಣ್ ಗೌಡ, ಕಾವ್ಯ ಶೆಟ್ಟಿ ನಟಿಸಿರುವ, ಚಂದ್ರಶೇಖರ್ ಪದ್ಮಸಾಲಿ ನಿರ್ಮಾಣದ ಈ ಚಿತ್ರದ  ಕುರಿತು ಮಧುಸೂದನ್ ಮಾತನಾಡಿದ್ದಾರೆ.

ಬೆಂಗಳೂರು (ಜ.19): ನಿರ್ದೇಶಕ ಮಧುಸೂದನ್ ಅವರದ್ದು ಜಾಹೀರಾತು  ಕ್ಷೇತ್ರದಲ್ಲಿ ದೊಡ್ಡ ಹೆಸರು. ಇವರ ಚೊಚ್ಛಲ ನಿರ್ದೇಶನದ ‘3 ಘಂಟೆ 30 ದಿನ 30 ಸೆಕೆಂಡ್’ ಇಂದು ಬಿಡುಗಡೆ. ಅರುಣ್ ಗೌಡ, ಕಾವ್ಯ ಶೆಟ್ಟಿ ನಟಿಸಿರುವ, ಚಂದ್ರಶೇಖರ್ ಪದ್ಮಸಾಲಿ ನಿರ್ಮಾಣದ ಈ ಚಿತ್ರದ  ಕುರಿತು ಮಧುಸೂದನ್ ಮಾತನಾಡಿದ್ದಾರೆ.

1. ನಿಮಗೆ ಸಿನಿಮಾಗಳ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ?

ನಾನು ಹುಟ್ಟಿದ್ದು ಬೆಂಗಳೂರು. ನಮ್ಮ ತಾತ ಬ್ರಿಟಿಷರ ಕಾಲದಲ್ಲೇ ಬೆಂಗಳೂರಿನಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ರು. ಇನ್ನೂ ನಮ್ಮ ತಂದೆ ಕೆಲಕಾಲ ಸಿನೆಮಾ ಆಪರೇಟರ್ ಆಗಿದ್ರು. ಆಗಿನ ಕಾಲದಲ್ಲಿ ಸಿನೆಮಾ ಆಪರೇಟರ್‌ಗೆ ತುಂಬಾ ಗೌರವ ಇತ್ತು. ಬಹುಶಃ ಇದೇ ನನ್ನಲ್ಲಿ ಸಿನಿಮಾ ಕುತೂಹಲ ಹುಟ್ಟುವುದಕ್ಕೆ ಕಾರಣವಾಯಿತು. ಅಲ್ಲದೆ ನನಗೆ ತಂತ್ರಜ್ಞಾನಕ್ಕಿಂತಲೂ ಕಂಟೆಂಟ್ ಬಗ್ಗೆ ಪ್ರೀತಿ. ಹೀಗಾಗಿ ದಾದಾ ಸಾಹೇಬ್ ಫಾಲ್ಕೆಗಿಂತಲೂ ಸತ್ಯಜಿತ್ ರೇ ಇಷ್ಟವಾಗಿದ್ದು.

2. ಸಿನಿಮಾ ಬರವಣಿಗೆಯ ಸೃಜನಶೀಲತೆ ಹುಟ್ಟಿಕೊಂಡಿದ್ದು ಹೇಗೆ?

ಕತೆ, ಕವನ, ನಾಟಕ ಬರಿಯೋದರ ಜತೆಗೆ ನನಗಿದ್ದ ಇನ್ನೊಂದು ಹವ್ಯಾಸ ಸಾಹಸ ಕ್ರೀಡೆಗಳು. ಕಾಲೇಜಿನ ಸಮಯದಲ್ಲಿ ಕರ್ನಾಟಕದ ಪಶ್ಚಿಮಘಟ್ಟಗಳಲ್ಲಿ ಟ್ರೆಕ್ಕಿಂಗ್ ಮಾಡಿದ್ದೆ. ಭಾರತದಾದ್ಯಂತ ಸೈಕಲ್ ಪ್ರವಾಸ ಮಾಡಿದ್ದೇನೆ. ಹಿಮಾಲಯ ಪರ್ವತಾರೋಹಣ ಮಾಡಿದ್ದೇನೆ. ನನ್ನ ಈ ಪ್ರವಾಸ ಅನುಭವವನ್ನು ಹಂಚಿಕೊಂಡ ಹಾಡು, ಲೇಖನಗಳು ಸ್ನೇಹಿತರಿಗೆ ಇಷ್ಟವಾಯಿತು ಬೆನ್ನು ತಟ್ಟಿದರು. ನನಗರಿವಿಲ್ಲದಂತೆ ನನ್ನಲ್ಲಿ ಒಬ್ಬ ಲೇಖಕ ಹುಟ್ಟಿಕೊಂಡ. ಯಂಡಮೂರಿ ವೀರೇಂದ್ರನಾಥ್, ನಾಗೇಶ್ ಹೆಗಡೆ, ಎಸ್‌ಎಲ್ ಭೈರಪ್ಪ, ತರಾಸು, ಪೂರ್ಣಚಂದ್ರ ತೇಜಸ್ವಿ ಇವರ ಸಾಹಿತ್ಯ ಓದು ನನ್ನಲ್ಲಿ ಸೃಜನಶೀಲತೆ ಹುಟ್ಟಿಸಿತು.

3. ಜಾಹೀರಾತು ಸಂಸ್ಥೆ ಕಟ್ಟಿದ್ದರ ಹಿನ್ನೆಲೆ ಬಗ್ಗೆ ಹೇಳುವುದಾದರೆ?

ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಕಲೆ ಬಲವಾಗಿ  ಸೆಳೆಯಿತು. ಸರ್ಕಾರಿ ಕೆಲಸ ತ್ಯಜಿಸಿ ೧೯೯೬ರಲ್ಲಿ ‘ಸಾಗರ ಪರ್ವತ’ ಧಾರಾವಾಹಿಗೆ ಸಹ ನಿರ್ಮಾಣ ಮತ್ತು ನಿರ್ದೇಶನ ಮಾಡಿದೆ. ಆಗ ಧಾರಾವಾಹಿಗಳ ಯಶಸ್ಸು ಜಾಹೀರಾತುದಾರರ ಮೇಲೆ ನಿಂತಿತ್ತು. ಆಗಲೇ ನನ್ನಲ್ಲಿ ಜಾಹೀರಾತು ಸಂಸ್ಥೆಯ ಮಹತ್ವ ಗೊತ್ತಾಯಿತು. 20 ವರ್ಷಗಳ ಹಿಂದೆಯೇ ನನ್ನದೇ ತಂಡ ಕಟ್ಟಿಕೊಂಡು ಜಾಹೀರಾತು ಸಂಸ್ಥೆ ಕಟ್ಟಿದೆ.

4. 3 ಘಂಟೆ 30 ದಿನ 30 ಸೆಕೆಂಡ್ ಸಿನಿಮಾ ಕತೆಯ ಹುಟ್ಟು ಹೇಗೆ?

ಒಂದು ನೈಜ ಘಟನೆ ನನ್ನ ಒಳಗೇ ಕೊರೆಯುತ್ತಿತ್ತು. ಅದು ಪ್ರೇಮ ಪ್ರಕರಣ. ಪ್ರೀತಿಸಿದ ಹುಡುಗನ ಮನೆಯಲ್ಲಿ ಜಾತಿ ಅಡ್ಡ ಬಂತು. ಹುಡುಗಿ ಮನೆಯಿಂದ ಅಂತಸ್ತಿನ ಸಮಸ್ಯೆ ಉಂಟಾಯಿತು. ಇದರಿಂದ ನೊಂದು ಆತ ಆತ್ಮಹತ್ಯೆ ಮಾಡಿಕೊಂಡ. ಹೆತ್ತವರನ್ನು ಎದುರಿಸಲಾಗದೆ ಸಾವಿನ ಮನೆಗೆ ಹೋದವನ ಸ್ಥಿತಿ ಕಂಡು ಒಂದಿಷ್ಟು ದಿನ ಎಲ್ಲರು ಕಣ್ಣೀರು ಹಾಕಿದರು. ಮುಂದೆ ಸಾವನ್ನು ಮರೆತರು. ಇದರಿಂದ ಆತ ಸಾಧಿಸಿದ್ದೇನು? ಯೌವ್ವನದಲ್ಲಿ ಹುಟ್ಟಿಕೊಳ್ಳುವ ಭಾವನೆಗಳಿಗೆ ಪ್ರೀತಿ ಎನ್ನುವ ಮುದ್ರೆ ಹಾಕುತ್ತಿದ್ದೇವೆಯೇ? ಹಾಗೆ ಮುದ್ರೆ ಹಾಕಿದ್ದನ್ನು ಉಳಿಸಿಕೊಳ್ಳದೆ ಹೋದಾಗ ಸಾವು ಒಂದೇ ಪರಿಹಾರವೇ? ಎನ್ನುವ ಪ್ರಶ್ನೆಗಳ ಜತೆಗೆ ಪ್ರೀತಿ ಪ್ರೇಮಕ್ಕೆ ಅಂಟಿಕೊಂಡು ರಾಜಕೀಯ, ವ್ಯವಹಾರಿಕತೆ ಕಂಡಿತು. ಇದನ್ನೇ ಸಿನಿಮಾ ಮಾಡಿದರೆ ಹೇಗಿರುತ್ತದೆ? ಎಂದಾಗ ‘3 ಘಂಟೆ 30 ದಿನ 30 ಸೆಕೆಂಡ್’ ಸಿನಿಮಾಗೆ ಕತೆ ಸಿದ್ದವಾಯಿತು.

5. ಈ ಚಿತ್ರವನ್ನು ನಿಮ್ಮ ಪ್ರಕಾರ ಯಾಕೆ ನೋಡಬೇಕು?

ಸಿನಿಮಾ ನೋಡುವಾಗ ನಿಮಗೆ ಬೇರೆ ಸಿನಿಮಾಗಳನ್ನು ನೆನಪಿಸುವುದಿಲ್ಲ. ಪಕ್ಕ ಕನ್ನಡದ ಸಿನಿಮಾ. ಸ್ವಮೇಕ್ ಚಿತ್ರ. ಎಂಟರ್‌ಟೈನ್'ಮೆಂಟ್ ಜತೆಗೆ ಈ ಜನರೇಷನ್ ಪ್ರೀತಿ- ಪ್ರೇಮದ ಕತೆಯನ್ನು ಹೇಗೆ ತೋರಿಸಿದ್ದೇವೆ. ಜತೆಗೆ ಹೀರೋ ಲಾಯರ್, ನಾಯಕಿ ಟಿವಿ ಆ್ಯಂಕರ್ ಈ ಕಾಂಬಿನೇಷನ್ ಸೂಪರ್ ಆಗಿರುತ್ತದೆ. ದೇವರಾಜ್, ಸುಧಾರಾಣಿ, ಎಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್ ಮುಂತಾದ ಹಿರಿಯ ಕಲಾವಿದರು ನಟಿಸಿದ್ದಾರೆ. ಮನರಂಜನೆ ಜತೆಗೆ ಸಾಮಾಜಿಕ ಬದ್ಧತೆಯಿಂದ ಮಾಡಿರುವ ಸಿನಿಮಾ ಆಗಿದೆ. ಎಲ್ಲರೂ ನೋಡಬಹುದು.

6. ಮೊದಲ ನಿರ್ದೇಶನ ಕಷ್ಟ ಆಗಲಿಲ್ಲವೇ?

ಇದು ನನ್ನ ಒಬ್ಬನ ಸಿನಿಮಾ ಅಲ್ಲ. ಕಲಾವಿದರ ನೆರವಿನ ಜತೆಗೆ ತಂತ್ರಜ್ಞರು ನನ್ನ ಹೊಸಬ ಅಂತ ನೋಡಲಿಲ್ಲ. ಜತೆಗೆ ನನ್ನ ಗೆಳೆಯರು ಹಾಗೂ ಬ್ಯುಸಿನೆಸ್ ಪಾರ್ಟನರ್ ಚಂದ್ರಶೇಖರ್ ಆರ್ ಪದ್ಮಸಾಲಿ ಅವರ ನಿರ್ಮಾಣದ ಸಾಥ್ ನನಗೆ ಅರ್ಧ ಭಾರ ಕಮ್ಮಿ ಮಾಡಿತು. ಎಲ್ಲಕ್ಕಿಂತ ಮುಖ್ಯವಾಗಿ ನಾನು ಅಂದುಕೊಂಡಿದ್ದ ಕತೆ ಬಗ್ಗೆ ಸ್ಪಷ್ಟತೆ ಇತ್ತು. ಹೀಗಾಗಿ  ಸುಲಭವಾಗಿ ಸಿನಿಮಾ ಮುಗಿಸಿದೆ.

-ಸಂದರ್ಶನ: ಆರ್. ಕೇಶವಮೂರ್ತಿ

 

click me!