
ಬೆಂಗಳೂರು : ‘ಪಕ್ಷ ನಿರೀಕ್ಷಿಸಿದಂತೆ ನಾನು ನಡೆದುಕೊಳ್ಳುವೆ’ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿದ್ದ ತೇಜಸ್ವಿನಿ ಅನಂತ ಕುಮಾರ್ ಹೇಳುವ ಮೂಲಕ ತಾವು ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದನ್ನು ಖಚಿತಪಡಿಸಿದ್ದಾರೆ. ಈ ಮೂಲಕ ತೇಜಸ್ವಿನಿ ಪ್ರಚಾರಕ್ಕೆ ಬರುವರೇ ಇಲ್ಲವೇ ಎಂಬ ಚರ್ಚೆಗೆ ತೆರೆ ಎಳೆಯುವ ಸ್ಪಷ್ಟ ಸೂಚನೆ ನೀಡಿದ್ದಾರೆ.
‘ಸದ್ಯಕ್ಕೆ ಉದ್ಭವಿಸಿರುವ ಗೊಂದಲಗಳ ಮೋಡ ವನ್ನು ನಾನೇ ತಿಳಿಗೊಳಿಸುತ್ತೇನೆ. ಪಕ್ಷದ ರಾಷ್ಟ್ರೀಯ ನಾಯಕತ್ವ ನನ್ನಿಂದ ಏನನ್ನು ನಿರೀಕ್ಷಿಸುತ್ತದೆಯೊ ಅದನ್ನು ಈಡೇರಿಸುತ್ತೇನೆ’ ಎಂದು ಅವರು ಟ್ವೀಟರ್‌ನಲ್ಲಿ ಭಾನುವಾರ ರಾತ್ರಿ ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ, ‘ರಾಷ್ಟ್ರ ಮೊದಲು-ಮತ್ತೊಮ್ಮೆ ಮೋದಿ ಎಂಬ ನಿಲುವು ಅಚಲ’ ಎಂದು ಅವರು ಟ್ವೀಟರ್‌ನಲ್ಲಿ ಹೇಳಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ ಅವರು ತಮ್ಮ ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾಗಿರುವ ‘ಹಸಿರು ಭಾನುವಾರ’ದ ಅಂಗವಾಗಿ ಸಸಿ ನೆಡುವ ಕಾರ್ಯ ಕ್ರಮವನ್ನೂ ನಡೆಸುವ ಮೂಲಕ ಬೇಸರ ಕೈಬಿಟ್ಟು ಮುಂದಿನ ಚಟುಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮುನ್ಸೂಚನೆಯನ್ನೂ ನೀಡಿದ್ದಾರೆ.
ಇತ್ತೀಚೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತಾವೇ ಅಭ್ಯರ್ಥಿ ಎಂಬ ಸೂಚನೆ ಇದ್ದ ಕಾರಣ ಪ್ರಚಾರ ಆರಂಭಿಸಿದ್ದ ತೇಜಸ್ವಿನಿ ಅವರಿಗೆ ಪಕ್ಷದ ಹೈಕಮಾಂಡ್, ‘ಟಿಕೆಟ್ ನಿರಾಕರಣೆ’ಯ ಶಾಕ್ ನೀಡಿತ್ತು. ಕೊನೇ ಕ್ಷಣದಲ್ಲಿ ಯುವ ಮುಖಂಡ ತೇ ಜಸ್ವಿ ಸೂರ್ಯಗೆ ಟಿಕೆಟ್ ಸಿಕ್ಕ ಕಾರಣ ತೇಜಸ್ವಿನಿ ಬೇಸರಗೊಂಡಿದ್ದರು. ಪಕ್ಷದ ರಾಜ್ಯ ಮುಖಂಡ ರಲ್ಲೂ ಇದು ಅಸಮಾಧಾನಕ್ಕೆ ಕಾರಣವಾಗಿತ್ತು.
ಸೋಮಣ್ಣ ಆದಿಯಾಗಿ ಬೆಂ.ದಕ್ಷಿಣ ಭಾಗದ ಕೆಲವು ಶಾಸಕರು ಪ್ರಚಾರದಿಂದ ದೂರ ಉಳಿವಂಥ ಮಾತುಗಳನ್ನಾಡಿದ್ದರು. ತೇಜಸ್ವಿನಿ ಕೂಡ ಪ್ರಚಾರಕ್ಕೆ ಧುಮುಕುವ ಬಗ್ಗೆ ಹಿಂದೇಟು ಹಾಕಿದ್ದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...