
ಎಎಂಗಳೂರು[ಏ.01]: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಲೋಕಸಭಾ ಚುನಾವಣೆ ಕಾವು ಏರುತ್ತಿದ್ದು, ಏಪ್ರಿಲ್ 18 ಹಾಗೂ 23ರಂದು ನಡೆವ ಮತದಾನಕ್ಕೆ ಪ್ರಮುಖ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಸರ್ಕಸ್ ಆರಂಭಿಸಿವೆ. ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಉದ್ದೇಶದಿಂದ ಉದ್ಯೋಗ ನಿಮಿತ್ತ ರಾಜಧಾನಿ ಬೆಂಗಳೂರು ನಗರದಲ್ಲಿ ನೆಲೆಸಿರುವ ತಮ್ಮ ಕ್ಷೇತ್ರಗಳ ಮತದಾರರನ್ನು ಸಂಪರ್ಕಿಸುವಲ್ಲಿ ನಿರತವಾಗಿವೆ.
ಬೆಂಗಳೂರಿನಲ್ಲಿ ಇರುವ ವಿವಿಧ ಜಿಲ್ಲೆಗಳ ಜನರ ಸಂಘ-ಸಂಸ್ಥೆಗಳ ಮೂಲಕ ಸೇರಿದಂತೆ ವಾಟ್ಸ್‌ಅಪ್ ಗ್ರೂಪ್, ಫೇಸ್‌ಬುಕ್ ಮುಂತಾದವುಗಳ ಮೂಲಕ ಸ್ಥಳೀಯ ಮುಖಂಡರು ರಾಜಧಾನಿಯಲ್ಲಿರುವ ಮತದಾರರನ್ನು ಸಂಪರ್ಕಿಸಿ ಮತದಾನ ಮಾಡಲು ಊರಿಗೆ ಬರಲು ‘ಎಲ್ಲ ವ್ಯವಸ್ಥೆ’ ಮಾಡುವುದಾಗಿ ಹೇಳತೊಡಗಿವೆ.
ಸಂಘ-ಸಂಸ್ಥೆಗಳ ಜೊತೆಗೆ ಜಾತಿ, ಸಮುದಾಯ, ಹುಟ್ಟಿದ ಊರುಗಳ ಜೊತೆ ಗುರುತಿಸಿಕೊಂಡಿರುವ ಮತದಾರರಿಗೂ ಸಹ ಮತದಾನಕ್ಕೆ ಬರುವಂತೆ ವಿವಿಧ ರಾಜಕೀಯ ಮುಖಂಡರು ಮನವಿ ಮಾಡತೊಡಗಿ ದ್ದಾರೆ.ಊರುಗಳಲ್ಲಿ ಈ ಮನೆಯವರು ಇಂತಹ ಪಕ್ಷದ ಬೆಂಬಲಿಗರು ಎಂಬುದು ಸಾಮಾನ್ಯವಾಗಿ ಮುಖಂಡರಿಗೆ ಗೊತ್ತಿರುತ್ತದೆ. ಅದರ ಆಧಾರದ ಮೇಲೆ ಬೆಂಗಳೂರಿನಲ್ಲಿರುವ ತಮ್ಮೂರಿನ ಮತದಾರರನ್ನು ಸಂಪರ್ಕಿಸಿ, ಮತದಾನಕ್ಕೆ ಬರುವಂತೆ ಮನವಿ ಮಾಡುತ್ತಿದ್ದಾರೆ.
ಸಾರಿಗೆ-ಸೌಕರ್ಯ:
ಮತದಾರರು ಬೆಂಗಳೂರಿನಿಂದ ಊರಿಗೆ ಬಂದು ಮತಚಲಾಯಿಸಿ ನಂತರ ಬೆಂಗಳೂರಿಗೆ ವಾಪಸಾಗುವವರೆಗೂ ಅವರಿಗೆ ಸಾರಿಗೆ ವ್ಯವಸ್ಥೆ ಹಾಗೂ ಇತರೆ ಖರ್ಚುಗಳನ್ನು ಮುಖಂಡರೇ ನೋಡಿಕೊಳ್ಳುತ್ತಾರೆ. ಉದಾಹರಣೆಗೆ ಅಕ್ಕಪಕ್ಕದ ಹಳ್ಳಿಯ ೧೫ ಮಂದಿಗೆ ಬೆಂಗಳೂರಿನಲ್ಲಿ ಇದ್ದರೆ, ಒಂದು ಟೆಂಪೋ ಟ್ರಾವೆಲರ್ ಬುಕ್ ಮಾಡಿ, ಅವರನ್ನು ಕರೆಸಿಕೊಳ್ಳುತ್ತಾರೆ. ಐದಾರು ಮಂದಿ ಇದ್ದರೆ ಕಾರುಗಳು, ೨೦ಕ್ಕೂ ಹೆಚ್ಚು ಮಂದಿ ಇದ್ದರೆ ಮಿನಿ ಬಸ್ ಬುಕ್ ಮಾಡಿ ಕರೆಸಿಕೊಳ್ಳಲಾಗುತ್ತದೆ. ಪ್ರಯಾಣದ ವೇಳೆ ತಿಂಡಿ-ಊಟ, ಕಾಫಿ-ಟೀ, ಪಾನಪ್ರಿಯರಾಗಿದ್ದರೆ ಅವರಿಗೆ ಮದ್ಯ ಎಲ್ಲವನ್ನೂ ಪೂರೈಸುತ್ತಾರೆ. ಮತದಾನದ ಬಳಿಕ ಕೊಂಚ ಹಣವನ್ನೂ ನೀಡಿ ಕಳುಹಿಸುತ್ತಾರೆ.
ಪಕ್ಷದ ಹೆಸರಿನಲ್ಲಿ ಬುಕ್ ಮಾಡಲ್ಲ:
ರಾಜಕೀಯ ಪಕ್ಷದವರು ಮತದಾರರನ್ನು ಕರೆದೊಯ್ಯುವಾಗ ಪಕ್ಷದ ಅಥವಾ ರಾಜಕೀಯ ಮುಖಂಡನ ಹೆಸರಿನಲ್ಲಿ ವಾಹನ ಬುಕ್ ಮಾಡುವುದಿಲ್ಲ. ಏಕೆಂದರೆ, ಈ ಬಾಡಿಗೆ ಮೊತ್ತವೂ ಅಭ್ಯರ್ಥಿಯ ಚುನಾವಣಾ ವೆಚ್ಚದ ಲೆಕ್ಕಕ್ಕೆ ಸೇರುತ್ತದೆ ನಗರದಿಂದ ತೆರಳುವ ಮಂದಿಯಲ್ಲಿ ಪ್ರಮುಖರೊಬ್ಬರಿಗೆ ವಾಹನ ಬುಕ್ ಮಾಡಿ ಇತರರನ್ನು ಕರೆದುಕೊಂಡು ಬರುವ ಜವಾಬ್ದಾರಿ ವಹಿಸಿರುತ್ತಾರೆ. ಊರಿಗೆ ಹೋದ ಬಳಿಕ ಮುಖಂಡರು ವಾಹನದ ಬಾಡಿಗೆ ಹಾಗೂ ಇತರೆ ಖರ್ಚು ವೆಚ್ಚಕ್ಕೆ ತಗುಲುವ ಹಣವನ್ನು ಆ ವ್ಯಕ್ತಿಗೆ ನೀಡುತ್ತಾರೆ. ಪ್ರತಿ ಚುನಾವಣೆಯಲ್ಲೂ ಇದೇ ರೀತಿ ನಡೆಯುತ್ತದೆ ಎನ್ನುತ್ತಾರೆ ಬಸವನಗುಡಿಯ ಟ್ರಾವೆಲ್ ಏಜೆನ್ಸಿಯ ಮಾಲೀಕರೊಬ್ಬರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...