
ತಿರುವನಂತಪುರಂ[ಮಾ.31]: ತಿರುವನಂತಪುರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಂಸದ ಶಶಿ ತರೂರ್ ಅವರು ಮತ್ತೆ ವಿವಾದದಲ್ಲಿ ಸಿಲುಕಿದ್ದಾರೆ. ಈ ಬಾರಿ ಅವರು ಮೀನುಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇತ್ತೀಚೆಗೆ ತಿರುವನಂತಪುರದ ಮೀನು ಮಾರುಕಟ್ಟೆಗೆ ಹೋಗಿ ಅವರು ಮೀನು ಮಾರಾಟಗಾರರನ್ನು ಭೇಟಿ ಮಾಡಿ ಮತಯಾಚಿಸಿದರು. ಬಳಿಕ ಟ್ವೀಟರ್‌ನಲ್ಲಿ ಫೋಟೋ ಹಾಕಿಕೊಂಡ ಅವರು, ‘ನನ್ನಂಥ ಸೂಕ್ಷ್ಮ ಸಸ್ಯಾಹಾರಿ ವ್ಯಕ್ತಿಯ ಬಗ್ಗೆ ಮೀನು ಮಾರುಕಟ್ಟೆಯಂತಹ ಸ್ಥಳದಲ್ಲೂ ಭಾರಿ ಉತ್ಸಾಹ ಕಂಡುಬಂತು’ ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಸ್ಥಳೀಯ ಬಿಜೆಪಿ ಅಭ್ಯರ್ಥಿ ಕುಮ್ಮನಂ ರಾಜಶೇಖರ್, ಸಿಪಿಎಂ ಮುಖಂಡರು ಹಾಗೂ ಮೀನುಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ತಮ್ಮನ್ನು ತಾವು ಶಾಕಾಹಾರಿಗಳು ಎಂದು ಬಿಂಬಿಸಿಕೊಳ್ಳುವ ಮೂಲಕ ಮಾಂಸಾಹಾರಿಗಳಾದ ಮೀನುಗಾರರ ಬಗ್ಗೆ ತರೂರ್ ಭೇದ-ಭಾವದ ಮಾತುಗಳನ್ನು ಆಡಿದ್ದಾರೆ. ತಾವು ಸವರ್ಣೀಯರು ಹಾಗೂ ಮೀನುಗಾರರು ಕೆಳಜಾತಿಯವರು ಎಂಬ ದೃಷ್ಟಿಯಲ್ಲಿ ಮಾತನಾಡಿದ್ದಾರೆ. ಸದಾ ಸುಗಂಧ ದ್ರವ್ಯದಲ್ಲೇ ಮುಳುಗೇಳುವ ತರೂರ್‌ಗೆ ಮೀನಿನ ವಾಸನೆಯಲ್ಲೇ ಜೀವನ ನಡೆಯುವ ಮೀನು ಮಾರಾಟಗಾರರ ಕಷ್ಟವೇನು ಗೊತ್ತು?’ ಎಂದು ಟೀಕಿಸಿದ್ದಾರೆ.
‘ಆದರೆ ತಾವು ಭೇದ-ಭಾವದ ಮಾತು ಆಡಿಲ್ಲ. ಸಸ್ಯಾಹಾರ ಎಂಬುದು ನನ್ನ ಆಯ್ಕೆ. ಮೀನು ತಿನ್ನುವವರ ಬಗ್ಗೆ ನನಗೆ ಆಕ್ಷೇಪವಿಲ್ಲ. ನನ್ನ ಹೇಳಿಕೆ ತಿರುಚಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಈ ಟ್ವೀಟ್ ವಿರುದ್ಧ ಮೀನುಗಾರರ ಪ್ರತಿಭಟನೆಗಳು ಆರಂಭವಾಗಿವೆ. ಇದರಿಂದ ಕಳೆದ ಬಾರಿ ಕೇವಲ 15 ಸಾವಿರ ಮತದ ಅಂತರದಿಂದ ಬಿಜೆಪಿ ವಿರುದ್ಧ ಗೆದ್ದಿದ್ದ ತರೂರ್‌ಗೆ ತಲೆಬಿಸಿ ಆರಂಭವಾಗಿದೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...