ತಂದೆ ಪರವಾಗಿ ಮತಯಾಚನೆ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯ ಬಿಜೆಪಿ ನಾಯಕರ ಮೇಲೆ ವಾಗ್ದಾಳಿ ಮಾಡಿದ್ದಾರೆ.
ಯಾದಗಿರಿ[ಏ. 12] ಜಿಲ್ಲೆಯ ಗುರುಮಿಠಕಲ್ ನ ಅಲ್ಲಿಪೂರ ಗ್ರಾಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ತಂದೆ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಮತಯಾಚಿಸಿದ್ದಾರೆ. ನಿನ್ನೆ ಮೊನ್ನೆ ಬಂದ ಬಿಜೆಪಿ, ಆರ್ ಎಸ್ ಎಸ್ ನವರು ನಮಗೆ ಪಾಠ ಮಾಡಲು ಬರುತ್ತಾರೆ. ನಾವು ದೇಶಕ್ಕಾಗಿ ರಕ್ತ ಕೊಟ್ಟಿದ್ದೇವೆ. ಬೆವರು ಹರಿಸಿದ್ದೇವೆ. ಬಿಜೆಪಿಯವರು ಏನು ಮಾಡಿದ್ದಾರೆ? ಎಂದು ಖರ್ಗೆ ಈ ಸಂದರ್ಭದಲ್ಲಿ ಪ್ರಶ್ನೆ ಮಾಡಿದರು.
ಸಂವಿಧಾನ ರಚನೆಯಾದಾಗ ಇವರೆಲ್ಲ ಎಲ್ಲಿದ್ದರು ? ಪುಲ್ವಾಮಾ ದಾಳಿಯಾದಾಗ ಪ್ರಧಾನಿ ಮೋದಿ ಫೋಟೋ ತೆಗೆದುಕೊಳ್ಳುತ್ತಿದ್ದರು. ಈಗ ಸೈನಿಕರ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ನಾವು ಪ್ರಧಾನಿಯನ್ನು ಆಯ್ಕೆ ಮಾಡಿದ್ದೇವೆಯೋ ? ಅಥವಾ ಪ್ರಚಾರಕ ಚೌಕಿದಾರ, ಶೋಕಿದಾರನನ್ನು ಆಯ್ಕೆ ಮಾಡಿದ್ದೇವೆಯೋ ? ಎಂದು ವ್ಯಂಗ್ಯಭರಿತ ಪ್ರಶ್ನೆ ಕೇಳಿದರು.
ಸುಮಲತಾಗೆ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲ ಸುದ್ದಿಗೆ ಸಿಕ್ಕ ಸ್ಪಷ್ಟನೆ
ಹಿಂದುಳಿದವರ, ದಲಿತರ ಹಾಗೂ ಅಲ್ಪಸಂಖ್ಯಾತರ ಮೇಲೆ ಹಲ್ಲೆ, ದರೋಡೆ ನಡೆಯುತ್ತಿದೆ. ಇದೇನಾ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್..” ? ಇಂತಹವರು ನಮಗೆ ಪ್ರಧಾನಿಯಾಗಬೇಕೆ ? ರಾಜ್ಯದ ರೈತರು ಸಾಲದಿಂದ ಸಾಯುತ್ತಿದ್ದರೆ, ಸಾಲಮನ್ನಾ ಮಾಡೋಕೆ ನಾನೇನು ಪ್ರಿಂಟಿಂಗ್ ಮಷಿನ್ ಇಟ್ಟಿದ್ದೆನೆಯೇ ಎಂಬ ಯಡಿಯೂರಪ್ಪ ಹೇಳಿಕೆ ಅವರ ನಿಜವಾದ ಕಾಳಜಿ ತೋರಿಸುತ್ತದೆ ಎಂದು ದೂರಿದರು.
ಮೋದಿ ಬಂಡವಾಳಶಾಹಿಗರ 3 ಲಕ್ಷ ಕೋಟಿ ರು.ಗಳ ಸಾಲಮನ್ನಾ ಮಾಡಿದ್ದಾರೆ, ರೈತರ ಸಾಲಮನ್ನಾ ಮಾಡೋದಕ್ಕೆ ದುಡ್ಡಿಲ್ಲವೇ? ಮೋದಿಯೆದುರು ಮಾತನಾಡಲು ರಾಜ್ಯದ ಬಿಜೆಪಿಯವರಿಗೆ ಧೈರ್ಯವಿಲ್ಲ, ಬರೀ ಜೀ ಸರ್.. ಜೀ ಸರ್.. ಎನ್ನುತ್ತಾರೆ ಎಮದು ರಾಜ್ಯ ಬಿಜೆಪಿ ನಾಯಕರನ್ನು ಟೀಕಿಸಿದರು.
ತೊಗರಿ ಬೆಲೆ ಹೆಚ್ಚಿಸುವುದರ ಬಗ್ಗೆ ನಾವು ಕೇಂದ್ರದ ಗಮನಕ್ಕೆ ತಂದರೆ, ರಾಜ್ಯದ ಬಿಜೆಪಿ ನಾಯಕರು ಮಾತೇ ಆಡಿಲ್ಲ. ಬರಗಾಲದ ಪರಿಹಾರ ಕೇಳಿದರೆ, ಬರೀ 800 ಕೋಟಿ ರೂ. ಭಿಕ್ಷೆ ಕಾಸು ನೀಡಿದಂತಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ 4 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ. ‘ನಮೋ’ ಅಂದರೆ ‘ನಮಗೆ ಮೋಸ’ ಎಂದರ್ಥ ಎಂದು ಹರಿಹಾಯ್ದರು.