ಚುನಾವಣೆ ಆಯ್ತು, ಕೇರಳದಲ್ಲೀಗ ಅಭ್ಯರ್ಥಿಗಳಿಂದಲೇ ಸ್ವಚ್ಛತಾ ಅಭಿಯಾನ!

By Web DeskFirst Published Apr 26, 2019, 8:27 AM IST
Highlights

ಚುನಾವಣೆ ಮುಗಿದ ಕೇರಳದಲ್ಲಿ ಈಗ ಸ್ವಚ್ಛತಾ ಅಭಿಯಾನ ಶುರು| ಪೋಸ್ಟರ್‌, ಬ್ಯಾನರ್‌ ತೆರವುಗೊಳಿಸುತ್ತಿರುವ ಅಭ್ಯರ್ಥಿಗಳು| ಅಭ್ಯರ್ಥಿಗಳ ಜೊತೆ ಕಾರ್ಯಕರ್ತರು, ಬೆಂಬಲಿಗರ ಸಾಥ್‌

ತಿರುವನಂತಪುರಂ[ಏ.26]: ಕೇರಳದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದ ಲೋಕಸಭಾ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಿದೆ. ಆದರೆ, ಕೆಲವು ಅಭ್ಯರ್ಥಿಗಳು ವಿಶ್ರಾಂತಿಯ ಮೊರೆ ಹೋಗುವ ಬದಲು ತಮ್ಮ ಪಕ್ಷದ ಕಾರ್ಯಕರ್ತರ ಜೊತೆ ಸೇರಿ ಚುನಾವಣೆಗೆ ಬಳಸಿದ ಪೋಸ್ಟರ್‌, ಬ್ಯಾನರ್‌ಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಎರ್ನಾಕುಲಂ ಕ್ಷೇತ್ರದ ಎಲ್‌ಡಿಎಫ್‌ ಅಭ್ಯರ್ಥಿ ಪಿ. ರಾಜೀವ್‌ ಚುನಾವಣೆಯಲ್ಲಿ ಬಳಕೆಯಾದ ತ್ಯಾಜ್ಯಗಳನ್ನು ಎರಡು ದಿನಗಳ ಒಳಗಾಗಿ ತೆರವುಗೊಳಿಸುವಂತೆ ತಮ್ಮ ಬೆಂಬಲಿಗರಿಗೆ ಕೇಳಿಕೊಂಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಎರ್ನಾಕುಲಂ ಸ್ವಚ್ಛಗೊಳಿಸೋಣ ಎಂಬ ಅಭಿಯಾನ ಆರಂಭಿಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಹುಲ್ ಗಾಂಧಿ ಸ್ಪರ್ಧಿಸಿದ ವಯನಾಡಿನಲ್ಲಿ ಮರು ಚುನಾವಣೆ?

ಎರ್ನಾಕುಲಂನ ಎನ್‌ಡಿಎ ಅಭ್ಯರ್ಥಿ ಅಲ್ಫೋನ್ಸ್‌ ಕಣ್ಣಂತಾನಂ ಅವರು ಸಹ ತಮ್ಮ ಬೆಂಬಲಿಗರೊಂದಿಗೆ ನಗರವನ್ನು ಚುನಾವಣಾ ತ್ಯಾಜ್ಯದಿಂದ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ತಿರುವನಂತಪುರಂ ಎನ್‌ಡಿಎ ಅಭ್ಯರ್ಥಿ ಹಾಗೂ ಮಿಜೋರಂ ಮಾಜಿ ರಾಜ್ಯಪಾಲ ಕುಮ್ಮನಮ್‌ ರಾಜಶೇಖರನ್‌ ಅವರು ತಮಗೆ ಚುನಾವಣೆಯ ಸಂದರ್ಭದಲ್ಲಿ ಬಂದ ಉಡುಗೊರೆಗಳನ್ನು ಒಂದು ಲಕ್ಷಕ್ಕೂ ಅಧಿಕ ಬಟ್ಟೆಹಾಗೂ ಉಡುಗೊರೆಗಳನ್ನು ಮರುಬಳಕೆ ಮಾಡಿ ಬ್ಯಾಗ್‌ ಹಾಗೂ ತಲೆದಿಂಬು ಹಾಗೂ ಇತರ ಉಪಯುಕ್ತ ವಸ್ತುಗಳನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಈ ಬಾರಿ ಕೇರಳದಲ್ಲಿ ಚುನಾವಣೆ ಪ್ರಚಾರ ಕೂಡ ಪರಸರ ಸ್ನೇಹಿಯಾಗಿದ್ದು, ಗೋಡೆ ಚಿತ್ರ, ಭಿತ್ತಿ ಫಲಕಗಳು ಮತ್ತು ಬಟ್ಟೆಯ ಬ್ಯಾನರ್‌ಗಳು ಪ್ರಮುಖ ಚುನಾವಣ ಸಾಮಗ್ರಿಗಳಾಗಿವೆ. ಪ್ಲಾಸ್ಟಿಕ್‌ ಬಳಕೆಯಾಗಿದ್ದು ತೀರಾ ಕಡಿಮೆ.

click me!