ವರದಿ: ಜಿ.ಡಿ. ಹೆಗಡೆ
ಕಾರವಾರ (ಆ.1) : ರಾಜ್ಯ ಸರ್ಕಾರ 95 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ ಪ್ರೌಢಶಾಲೆಗಳನ್ನಾಗಿಸಿದ್ದು, ಉತ್ತರ ಕನ್ನಡದಲ್ಲಿ ಕೇವಲ ಒಂದು ಶಾಲೆ ಮೇಲ್ದರ್ಜೆಗೇರಿದೆ. ಕುಗ್ರಾಮಗಳನ್ನು ಹೊಂದಿದ, ಮೂಲಭೂತ ಸೌಲಭ್ಯವೇ ಇಲ್ಲದ ಹಲವು ಹಳ್ಳಿಗಳಿರುವ ಜಿಲ್ಲೆಯಾದ ಉತ್ತರ ಕನ್ನಡವನ್ನು ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಗಳೆಂದು ವಿಂಗಡಿಸಲಾಗಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿರಸಿ ನಗರದ ಸಹಿಪ್ರಾ ಮಾರಿಗುಡಿ ಶಾಲೆಯನ್ನು ಮಾತ್ರ ಮೇಲ್ದರ್ಜೆಗೇರಿಸಲಾಗಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಯವುದೇ ಶಾಲೆಗೆ ಈ ಭಾಗ್ಯ ದೊರೆತಿಲ್ಲ.
ಉ.ಕ ಕರಾವಳಿ(Uttara khannada), ಅರೆಬಯಲು ಸೀಮೆ, ಮಲೆನಾಡನ್ನು ಒಳಗೊಂಡ ವಿಸ್ತಾರವಾದ ಜಿಲ್ಲೆಯಾಗಿದೆ. ಗ್ರಾಮೀಣ ಪ್ರದೇಶವನ್ನು ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆ ಹೊಂದಿದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಹತ್ತಾರು ಮೈಲಿ ನಡೆದುಕೊಂಡು ಹೋಗುವ ಅನಿವಾರ್ಯತೆಯಿದೆ.
Uttara Kannada: ಶಾಲೆಗೆ ತೆರಳಲು ವಿದ್ಯಾರ್ಥಿಗಳ 18 ಕಿಮೀ ಕಾಲ್ನಡಿಗೆ..!
ಕೆಲವು ಕುಗ್ರಾಮಗಳಿಗೆ ಬಸ್ ಒಳಗೊಂಡು ಸಾರಿಗೆ ವ್ಯವಸ್ಥೆ ವೇಳೆಗೆ ಸರಿಯಿಲ್ಲದೇ ಇರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟುತೊಂದರೆ ಆಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಈ ಜಿಲ್ಲೆ ಸಾಕಷ್ಟುನಿರ್ಲಕ್ಷ್ಯಕ್ಕೆ ಒಳಗಾಗಿ, ಯಾವುದೇ ಸೌಲಭ್ಯಗಳನ್ನು ಸರ್ಕಾರಗಳು ನೀಡುತ್ತಿಲ್ಲ ಎನ್ನುವ ಕೂಗು ಪದೇಪದೇ ಕೇಳಿಬರುತ್ತಿದೆ. ಸುಸಜ್ಜಿತ ಆಸ್ಪತ್ರೆ, ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಗಳು ಒಳಗೊಂಡು ಅತ್ಯಗತ್ಯ ವ್ಯವಸ್ಥೆಗಳು ಮರೀಚಿಕೆಯಾಗಿದೆ.
ರಾಜ್ಯ ಸರ್ಕಾರ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್ ನೀಡುವ ಯೋಜನೆ ಜಾರಿಗೆ ತಂದಿದ್ದರೂ ಶೈಕ್ಷಣಿಕ ವರ್ಷ ಅರ್ಧ ಮುಗಿದ ಮೇಲೆ ವಿತರಣೆ ಆಗುತ್ತಿರುವ ಕಾರಣ ಪ್ರಯೋಜನಕ್ಕೆ ಬಾರದಾಗಿದೆ. ಬಸ್ ವ್ಯವಸ್ಥೆ ಸರಿಯಾಗಿ ಇಲ್ಲದೇ ಬಿರು ಬಿಸಿಲು, ಧೋ ಎನ್ನುವ ಮಳೆಯಲ್ಲಿ ಮಕ್ಕಳು ನಡೆದುಕೊಂಡು, ಹಳ್ಳ-ಕೊಳ್ಳ ದಾಟಿ ಪ್ರೌಢಶಾಲೆಗೆ ಹೋಗುವ ಹಲವು ಊರುಗಳು ಇಂದಿಗೂ ಇವೆ.
ಶಿಕ್ಷಣ ಇಲಾಖೆಗೇ ತಲೆನೋವು ಈ ಶಿಕ್ಷಕಿ! ಶಿಕ್ಷಕರ ನೆಮ್ಮದಿ ಭಕ್ಷಕಿ
ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿ ಪ್ರೌಢ ಶಿಕ್ಷಣಕ್ಕೆ ಹೋಗಬೇಕಾದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ರಾಜ್ಯ ಸರ್ಕಾರ ಉನ್ನತೀಕರಿಸಿದರೆ ಅನುಕೂಲ ಆಗುತ್ತಿತ್ತು. ಆದರೆ ಕಾರವಾರ, ಶಿರಸಿ ಶೈಕ್ಷಣಿಕ ಜಿಲ್ಲೆಗಳನ್ನು ನಿರ್ಲಕ್ಷ್ಯ ಮಾಡಿದ ಕಾರಣ ವಿದ್ಯಾರ್ಥಿಗಳು ಸಾಕಷ್ಟುತೊಂದರೆ ಅನುಭವಿಸುವಂತೆ ಆಗಿದೆ.
ಎಸ್‌ಡಿಎಂಸಿ ಹಾಗೂ ಸ್ಥಳೀಯರಿಂದ 9, 10ನೇ ತರಗತಿ ಆರಂಭಿಸುವಂತೆ ಬೇಡಿಕೆಯಿತ್ತು. ಸ್ಥಳೀಯ ಶಾಸಕರ ಸೂಚನೆಯ ಮೇರೆಗೆ ಶಿರಸಿ ಶೈಕ್ಷಣಿಕ ಜಿಲ್ಲೆಯಿಂದ ಒಂದು ಶಾಲೆಯನ್ನು ಉನ್ನತೀಕರಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತವನೆ ಸಲ್ಲಿಸಲಾಗಿತ್ತು. ಅನುಮತಿ ದೊರೆತಿದೆ. ಮಾರಿಗುಡಿ ಶಾಲೆಯಲ್ಲಿ 8ನೇ ತರಗತಿಯವರೆಗೆ ಇತ್ತು. ಈಗ 9, 10ನೇ ಆರಂಭವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ.
ಪಿ.ಬಸವರಾಜ, ಡಿಡಿಪಿಐ ಶಿರಸಿ ಶೈಕ್ಷಣಿಕ ಜಿಲ್ಲೆ
ಇಷ್ಟುದೊಡ್ಡ ಜಿಲ್ಲೆಗೆ ರಾಜ್ಯ ಸರ್ಕಾರ ಕೇವಲ ಒಂದು ಶಾಲೆಯನ್ನು ಉನ್ನತೀಕರಿಸಿರುವುದು ಖಂಡನೀಯ. ಎಲ್ಲ ರಂಗದಲ್ಲೂ ಉತ್ತರ ಕನ್ನಡಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತದೆ. ಹತ್ತಾರು ಯೋಜನೆಗಳನ್ನು ಹೊಂದಿರುವ ಈ ಜಿಲ್ಲೆಗೆ ಮೊದಲ ಆದ್ಯತೆಯಲ್ಲಿ ಮೂಲಸೌಕರ್ಯ ಒದಗಿಸಬೇಕು.
- ರಾಘು ನಾಯ್ಕ, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ