ಪಠ್ಯಪುಸ್ತಕ ಪರಿಷ್ಕರಣೆ ವಿವಾದ, ರೋಹಿತ್ ಚಕ್ರತೀರ್ಥ ಸಮಿತಿ ವಜಾ, ಸರ್ಕಾರ ಮಹತ್ವದ ಆದೇಶ

By Suvarna News  |  First Published Jun 3, 2022, 11:50 PM IST

* ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿವಾದ
* ರೋಹಿತ್ ಚಕ್ರತೀರ್ಥ ಸಮಿತಿ ವಜಾ
* ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಮಹತ್ವದ ನಿರ್ಣಯಗಳನ್ನ ಕೈಗೊಂಡ ಸರ್ಕಾರ


ಬೆಂಗಳೂರು, (ಜೂನ್.03): ಭಾರೀ ಪರ-ವಿರೋಧಕ್ಕೆ ಕಾರಣವಾಗಿದ್ದ ಶಾಲಾ ಪಠ್ಯ ಪರಿಷ್ಕರಣಾ ಸಮಿತಿಯನ್ನು ಈ ಕೂಡಲೇ ವಿಸರ್ಜಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಾಲಾ ಪಠ್ಯ ಪರಿಷ್ಕರಣೆ  ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರು ಪಠ್ಯ ಪರಿಷ್ಕರಣೆ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಿದ್ದಾರೆ.

ಶಾಲಾ ಪಠ್ಯಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ವಿಶೇಷ ಸಭೆ ಕರೆದು ಚರ್ಚಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸದ್ಯದ ಪಠ್ಯ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿದ್ದಾರೆ. ಮಾತ್ರವಲ್ಲ, ಪಠ್ಯ ವಿವಾದ ವಿಚಾರವಾಗಿ ಸರ್ಕಾರ ಒಂದಷ್ಟು ಮಹತ್ವದ ನಿರ್ಣಯಗಳನ್ನೂ ಕೈಗೊಂಡಿದೆ.

Tap to resize

Latest Videos

ವಿವಾದಗಳ ಸುಳಿಯಲ್ಲಿ Rohith Chakrathirtha, 2016ರ ಟ್ವೀಟ್ ಬಗ್ಗೆ ಭಾರೀ ಚರ್ಚೆ!

ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಸಿಎಂ, ಶಾಲಾ ಶಿಕ್ಷಣದಲ್ಲಿ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳನ್ನು ಕಾಲ ಕಾಲಕ್ಕೆ ತಕ್ಕಂತೆ ಪರಿಷ್ಕರಿಸಲಾಗುತ್ತದೆ. ರಾಜ್ಯದಲ್ಲಿ ಹಲವು ಬಾರಿ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಈ ಹಿಂದೆ ಜಾರಿಯಲ್ಲಿದ್ದ ಕೆಲವು ಪಠ್ಯಪುಸ್ತಕಗಳಲ್ಲಿ ಹಲವು ಆಕ್ಷೇಪಾರ್ಹ ಅಂಶಗಳು ಇದ್ದ ಕಾರಣ ಸಮಾಜ ವಿಜ್ಞಾನ ಹಾಗೂ ಕನ್ನಡ ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಪಠ್ಯ ಪುಸ್ತಕಗಳ ಅಲ್ಪ ಪರಿಷ್ಕರಣೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಶ್ರೀ ಪಂಡಿತಾರಾಧ್ಯ ಸ್ವಾಮೀಜಿಗಳು ಹಾಗೂ ನಾಡಿನ ಇತರೆ ಸ್ವಾಮೀಜಿಗಳು ಪ್ರಸ್ತುತ ಪಠ್ಯ ಪುಸ್ತಕದಲ್ಲಿರುವ ಬಸವಣ್ಣನವರ ವಿಷಯಾಂಶಕ್ಕೆ ಸಂಬಂಧಿಸಿದಂತೆ ಕೆಲವು ಆಕ್ಷೇಪಣೆಗಳನ್ನು ಮಾಡಿರುತ್ತಾರೆ. ಬಸವಣ್ಣನವರ ಇದೇ ವಿಷಯಾಂಶಕ್ಕೆ ಸಂಬಂಧಿಸಿದಂತೆ ಈ ಹಿಂದೆ ಜಾರಿಯಲ್ಲಿದ್ದ ಪ್ರೊ.ಬರಗೂರು ರಾಮಚಂದ್ರಪ್ಪ ಇವರ ಸಮಿತಿಯಿಂದ ರಚಿತವಾದ ಪಠ್ಯಪುಸ್ತಕ ಹಾಗೂ ಪ್ರಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಸಾಮಾನ್ಯವಾದ ಅಂಶಗಳಿವೆ. ಪ್ರಸ್ತುತ ಪಠ್ಯಪುಸ್ತಕದಲ್ಲಿರುವ ಬಸವಣ್ಣನವರ ವಿಷಯಾಂಶವನ್ನು ಯಾರ ಭಾವನೆಗೂ ಧಕ್ಕೆ ಆಗದಂತ ಪರಿಷ್ಕರಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.

ಆದಿಚುಂಚನಗಿರಿ ಪೀಠದ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಹಾಗೂ ಇತರರ ಆಶಯದಂತೆ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಯನ್ನು ವಿಕೃತಗೊಳಿಸುವ ರೀತಿಯಲ್ಲಿ ನಾಡಗೀತೆಯ ಧಾಟಿಯಲ್ಲಿ ಮೂಲ ಕವನವನ್ನು ಬರೆದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸೈಬರ್ ಕ್ರೈಮ್ ಬೆಂಗಳೂರು ಇವರಿಗೆ ತನಿಖೆಯನ್ನು ನಡೆಸಲು ಸಿಎಂ ಸೂಚಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧಿಸಿದಂತೆ ಬಂದಿರುವ ಆರೋಪ/ ಆಕ್ಷೇಪಣೆಗಳಿಗೆ ಸ್ಪಷ್ಟೀಕರಣಗಳನ್ನು ಒಳಗೊಂಡ ಟಿಪ್ಪಣಿ ಲಗತ್ತಿಸಿದೆ. ಹಲವಾರು ಅಂಶಗಳಿಗೆ ವಾಸ್ತವ ಅಂಶಗಳಿಂದ ಸ್ಪಷ್ಟೀಕರಣವನ್ನು ಕೊಡಲಾಗಿದೆ. ಪ್ರಸ್ತುತ ಆಕ್ಷೇಪ ಮಾಡಿರುವಂತೆ ಮಹಾನ್ ವ್ಯಕ್ತಿಗಳ ಯಾವುದೇ ಪಾಠವನ್ನು ಕೈಬಿಡಲಾಗಿಲ್ಲ ಎಂದು ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಸರ್ಕಾರದ ನಿರ್ಣಯಗಳು
* ಪಠ್ಯಪುಸ್ತಕ ಸಮಿತಿ ಕಾರ್ಯ ಮುಗಿದಿರುವುದರಿಂದ ಸಮಿತಿ ವಿಸರ್ಜನೆ.
* ಪ್ರಸ್ತುತ ಪಠ್ಯದಲ್ಲಿ ಮತ್ತೆ ಪರಿಷ್ಕರಣೆ ಇದ್ದರೆ ಮುಕ್ತ ಮನಸ್ಸನ್ನು ಸರ್ಕಾರ ಹೊಂದಿದೆ. ಬಸವಣ್ಣ ಪಠ್ಯ ಪರಿಷ್ಕರಣೆ ನಿರ್ಧಾರ.
* ಕುವೆಂಪು ನಾಡಗೀತೆ ಆಕ್ಷೇಪಾರ್ಹ ವಿಕೃತಗೊಳಿಸಿದ ಪಠ್ಯ ಉಲ್ಲೇಖವಾಗಿಲ್ಲ. ಇದರ ಮೂಲ ಕವನ ಬರೆದ ವ್ಯಕ್ತಿಗಳ ಬಗ್ಗೆ ಸರ್ಕಾರ ಕ್ರಮ.
* ಬರಗೂರು ಸಮಿತಿಗಿಂತ ಈಗಿನ ಸಮಿತಿ ಕುವೆಂಪು ಅವರ ಗದ್ಯ, ಪದ್ಯವನ್ನು ಇನ್ನೂ ಮೂರು ಏರಿಕೆ ಮಾಡಿದೆ. ಮೊದಲು ಏಳು ಇತ್ತು. ಈಗ 10ಕ್ಕೆ ಏರಿಕೆ.
* ನಾಡಪ್ರಭು ಕೆಂಪೇಗೌಡ ಪಠ್ಯವನ್ನು ಸೇರ್ಪಡೆ
* ಇಸ್ಲಾಂ, ಕ್ರೈಸ್ತ ಧರ್ಮದ ಪರಿಚಯದ ಜೊತೆ ಹಿಂದೂ ಧರ್ಮ ವಿಷಯ ಸೇರ್ಪಡೆ
* ಉಳಿದಂತೆ ನಾಡಗೀತೆಯನ್ನ ಅವಹೇಳಕಾರಿಯಾಗಿ ಬರೆದವರ ಬಗ್ಗೆ ತನಿಖೆಗಾಗಿ ಸೈಬರ್ ಕ್ರೈಂಗೆ ಸೂಚನೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ಸಂಬಂಧಿಸಿದಂತೆ ಹಲವು ಮಠಾಧೀಶರು, ಹಿರಿಯ ಸಾಹಿತಿಗಳು ಹಾಗೂ ಚಿಂತಕರು ಅಸಮಾಧಾನ ಹೊರ ಹಾಕಿದ್ದರು. ಇದೀಗ ಕೆಲವು ಆದೇಶ ಮಾಡುವ ಮೂಲಕ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಲು ಸರ್ಕಾರ ಮುಂದಾಗಿದೆ.

click me!