ಜೂನ್‌ ಬಂದರೂ ಮಕ್ಕಳ ಕೈ ಸೇರದ ಪಠ್ಯಪುಸ್ತಕ..!

By Kannadaprabha News  |  First Published Jun 4, 2022, 4:12 AM IST

*  ಮೇ 16ರಿಂದ ಶಾಲೆ ಪ್ರಾರಂಭಗೊಂಡರೂ ಈ ವರೆಗೆ ಶೇ. 48ರಷ್ಟು ಮಾತ್ರ ಪೂರೈಕೆ
*  ಪಠ್ಯ ಪರಿಷ್ಕರಣೆ ಗೊಂದಲ, ಕಾಗದ ಸಮಸ್ಯೆ, ಮುದ್ರಣ ವಿಳಂಬವೇ ಕಾರಣ
*  ವಾರದೊಳಗೆ ಪೂರ್ಣ ಪ್ರಮಾಣದಲ್ಲಿ ಪುಸ್ತಕಗಳು ಬರುವ ಸಾಧ್ಯತೆ
 


ಬಸವರಾಜ ಹಿರೇಮಠ

ಧಾರವಾಡ(ಜೂ.04):  ಒಂದೆಡೆ ಪಠ್ಯಕ್ರಮ ಪರಿಷ್ಕರಣೆ ಕುರಿತು ರಾಜ್ಯದಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಇನ್ನೊಂದೆಡೆ ಶಾಲೆ ಪ್ರಾರಂಭವಾಗಿ ಮೂರು ವಾರಗಳು ಕಳೆದರೂ ಪುಸ್ತಕ ವಿತರಣೆಯಾಗಿಲ್ಲ. ನೂತನ ಪಠ್ಯಕ್ರಮ ಜಾರಿಯಾಗಿದ್ದರಿಂದ ಹಳೆಯ ಪುಸ್ತಕ ಓದುವಂತಿಲ್ಲ, ಇತ್ತ ಹೊಸ ಪುಸ್ತಕಗಳು ಲಭ್ಯವಾಗುತ್ತಿಲ್ಲ. ಹೀಗಾಗಿ ಮಕ್ಕಳು ಪಠ್ಯಪುಸ್ತಕಕ್ಕಾಗಿ ಪರದಾಡುವಂತಾಗಿದೆ. ಮೇ 16ರಿಂದ 2022-23ರ ಶೈಕ್ಷಣಿಕ ವರ್ಷ ಶುರುವಾಗಿದ್ದರೂ ಈ ವರೆಗೆ ಜಿಲ್ಲೆಯಲ್ಲಿ ಶೇ. 48ರಷ್ಟು ಮಾತ್ರ ಪುಸ್ತಕಗಳ ವಿತರಣೆಯಾಗಿದೆ.

Tap to resize

Latest Videos

ಕಾಗದ ಕೊರತೆ:

ಮುದ್ರಣಕ್ಕೆ ಈ ಬಾರಿ ಕಾಗದ ಕೊರತೆ ಮತ್ತು ಮುದ್ರಣದ ವಿಳಂಬದಿಂದಾಗಿ ಪಠ್ಯಪುಸ್ತಕಗಳ ವಿತರಣೆಯಲ್ಲಿ ತಡವಾಗಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು. ಪ್ರತಿ ಬಾರಿಯೂ ಪಠ್ಯಪುಸ್ತಕ ಪೂರೈಕೆಗೆ ಒಂದಿಲ್ಲೊಂದು ಆತಂಕಗಳಿದ್ದು, ಪ್ರಸಕ್ತ ಸಾಲಿನಲ್ಲೂ ಮಕ್ಕಳಿಗೆ ಈ ಚಿಂತೆ ಕಾಡುವಂತಾಗಿದೆ.

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ಸಚಿವ ನಾಗೇಶ್‌ ಮನೆಗೆ ಮುತ್ತಿಗೆ

ಮೇ 1ರ ಮಾಹಿತಿಯಂತೆ ಜಿಲ್ಲೆಯಲ್ಲಿ 1ರಿಂದ 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲು 19,37,887 ಪುಸ್ತಕಗಳು ಬೇಕಾಗಿದ್ದು, ಸದ್ಯ 7,98,890 ಪೂರೈಸಲಾಗಿದೆ. ಮಾರಾಟಕ್ಕಾಗಿ 4,53,826 ಬೇಕಾಗಿದ್ದು, 2,06,021 ಪುಸ್ತಕಗಳು ಮಾತ್ರ ಬಂದಿವೆ. ಒಟ್ಟು ಬರಬೇಕಿರುವ 2,391,713 ಪುಸ್ತಕಗಳಲ್ಲಿ 10,04,911 ಮಾತ್ರ ಬಂದಿವೆ. ಪಠ್ಯ ಪೂರೈಕೆಯಲ್ಲಿ ಇಲಾಖೆ ಮೊದಲೇ ವಿಳಂಬ ಮಾಡುತ್ತಿದೆ. ಇದರ ಮಧ್ಯೆ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಪಠ್ಯ ಪರಿಷ್ಕರಣೆ ಹಾಗೂ ಉಕ್ರೇನ್‌ ಯದ್ಧದಿಂದ ಮುದ್ರಣ ಕಾಗದದ ಅಲಭ್ಯತೆಯಿಂದ ಈ ಬಾರಿ ಪಠ್ಯಪುಸ್ತಕಗಳ ವಿತರಣೆಯಲ್ಲಿ ಮತ್ತಷ್ಟುವಿಳಂಬ ಆಗಲಿದೆ ಎಂಬ ಆತಂಕವೂ ಇದೆ. ಹೀಗಾಗಿ ಇನ್ನು ಕೆಲವು ದಿನಗಳ ವರೆಗೆ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು ಪುಸ್ತಕಕ್ಕಾಗಿ ಕಾಯಬೇಕಾದ ಅನಿವಾರ‍್ಯತೆ ಇದೆ.

ಹೀಗಿದೆ ಬೇಡಿಕೆ, ಪೂರೈಕೆ:

ಧಾರವಾಡ ನಗರಕ್ಕೆ ಉಚಿತ ಹಾಗೂ ಮಾರಾಟ ಸೇರಿ ಒಟ್ಟು 2,99,620 ಬೇಡಿಕೆ ಇದೆ. ಸದ್ಯ 1,07,610 ಪೂರೈಕೆ ಮಾಡಲಾಗಿದೆ. ಧಾರವಾಡ ಗ್ರಾಮೀಣ ಭಾಗಕ್ಕೆ 4,83,352 ಬೇಡಿಕೆ ಇದ್ದರೆ 1,84,000, ಹುಬ್ಬಳ್ಳಿ ನಗರಕ್ಕೆ 5,62,629 ಬೇಡಿಕೆ ಇದ್ದರೆ 3,07,080, ಹುಬ್ಬಳ್ಳಿ ಗ್ರಾಮೀಣಕ್ಕೆ 2,87,036 ಬೇಡಿಕೆ ಇದ್ದರೆ, 1,12,422, ಕಲಘಟಗಿ ತಾಲೂಕಿಗೆ 2,12,457 ಬೇಡಿಕೆ ಇದ್ದರೆ 95,588, ಕುಂದಗೋಳ ತಾಲೂಕಿಗೆ 2,58,897 ಬೇಡಿಕೆ ಇದ್ದರೆ 94,649 ಹಾಗೂ ನವಲಗುಂದ ತಾಲೂಕಿಗೆ 2,87,722 ಬೇಡಿಕೆ ಇದ್ದರೆ 1,03,562 ಪುಸ್ತಕ ಮಾತ್ರ ಪೂರೈಕೆ ಮಾಡಲಾಗಿದೆ.

ಪ್ರಸಕ್ತ ಸಾಲಿನ ಪಠ್ಯಪುಸ್ತಕಗಳು ಇನ್ನೂ ಸಂಪೂರ್ಣವಾಗಿ ಬಂದಿಲ್ಲ. ವಾರದೊಳಗೆ ಪೂರ್ಣ ಪ್ರಮಾಣದಲ್ಲಿ ಪುಸ್ತಕಗಳು ಬರುವ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಎಸ್‌. ಕೆಳದಿಮಠ ಮಾಹಿತಿ ನೀಡುತ್ತಾರೆ.

ಈ ಬಾರಿ ಪಠ್ಯಕ್ರಮ ಪರಿಷ್ಕರಣೆಯಿಂದ ಪುಸ್ತಕಗಳ ಪೂರೈಕೆಯಲ್ಲಿ ತಡವಾಗಿರಬಹುದು. ಆದರೆ, ಪ್ರತಿ ವರ್ಷ ಸರ್ಕಾರ ಉಚಿತವಾಗಿ ಪಠ್ಯಪುಸ್ತಕ ನೀಡುವ ಕ್ರಮ ಕೈಬಿಡಬೇಕು. ಇದರಿಂದ ಮಕ್ಕಳು ಹೊಸ ಪುಸ್ತಕಗಳಿಗಾಗಿ ಕಾಯುತ್ತಾರೆಯೇ ಹೊರತು ಹಳೆಯ ಪುಸ್ತಕಗಳನ್ನು ಬಳಸುವ ಗುಣ ಬೆಳೆಸಿಕೊಳ್ಳುವುದಿಲ್ಲ. ಹೀಗಾಗಿಯೇ ಕಾಗದದ ಕೊರತೆ ಉಂಟಾಗುತ್ತಿದೆ. ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಮೂಲಕ ತರಬೇತಿ ದೊರೆತರೂ ಪಠ್ಯಪುಸ್ತಕ ಇಲ್ಲದೇ ಇರುವುದು ಶಿಕ್ಷಕರು, ಮಕ್ಕಳು ಹಾಗೂ ಪಾಲಕರಿಗೂ ತೊಂದರೆಯೇ ಸರಿ ಅಂತ ನಿವೃತ್ತ ಶಿಕ್ಷಕ ಕೆ.ಎಚ್‌. ನಾಯಕ ತಿಳಿಸಿದ್ದಾರೆ. 
 

click me!