ಶಾಲೆ ಶುರುವಾಗುತ್ತಿದ್ದರೂ ಪುಸ್ತಕಗಳೇ ಬಂದಿಲ್ಲ..!

By Girish Goudar  |  First Published May 11, 2022, 4:11 AM IST

*  ಈ ಬಾರಿಯೂ ಪಠ್ಯಪುಸ್ತಕ ವಿಳಂಬ
*  ಶಾಲೆ ಪ್ರಾರಂಭಕ್ಕೆ ಕ್ಷಣಗಣನೆ, ಪುಸ್ತಕ ಮಾತ್ರ ಇನ್ನೂ ಬಂದಿಲ್ಲ
*  ಈ ವರೆಗೆ ಬಂದಿರುವುದು ಬರೀ ಶೇ. 34.19 ಪುಸ್ತಕ ಮಾತ್ರ
 


ಶಿವಾನಂದ ಗೊಂಬಿ

ಹುಬ್ಬಳ್ಳಿ(ಮೇ.11):  ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 16ಕ್ಕೆ ಪ್ರಾರಂಭವಾಗಲಿವೆ. ಆದರೆ ಈ ವರೆಗೂ ಪೂರ್ಣ ಪ್ರಮಾಣದಲ್ಲಿ ಪಠ್ಯ ಪುಸ್ತಕ(Textbook) ಮಾತ್ರ ಬಂದಿಲ್ಲ. ಬಂದಿರುವುದು ಬರೀ ಶೇ. 34.19 ಮಾತ್ರ. ಹೀಗಾಗಿ ಈ ಸಲವೂ ಪಠ್ಯ ಪುಸ್ತಕ ಬರುವುದು ವಿಳಂಬವಾಗಲಿವೆ. ಪುಸ್ತಕವಿಲ್ಲದೇ ಅದ್ಹೇಗೆ ಪಾಠ ಮಾಡುವುದು ಎಂಬ ಚಿಂತೆ ಶಿಕ್ಷಕರನ್ನು ಕಾಡುತ್ತಲಿದೆ.

Tap to resize

Latest Videos

ಈ ಬಾರಿ ಪ್ರತಿ ವರ್ಷಕ್ಕಿಂತ 15 ದಿನ ಮುಂಚಿತವಾಗಿ ಶಾಲೆಗಳು(Schools) ಆರಂಭವಾಗುತ್ತಿವೆ. ಕೊರೋನಾದಿಂದ(Coronavirus) ಎರಡು ವರ್ಷ ಸರಿಯಾಗಿ ಶಾಲೆಗಳು ನಡೆದಿಲ್ಲ. ಈ ವರ್ಷವಾದರೂ ಬೇಗ ತರಗತಿ ಪ್ರಾರಂಭಿಸಿ ಮಕ್ಕಳ ಶೈಕ್ಷಣಿಕ ಪ್ರಗತಿ ಹೆಚ್ಚಿನ ರೀತಿಯಲ್ಲಿ ಸಾಧಿಸಬೇಕೆಂಬ ಇಚ್ಛೆ ಸರ್ಕಾರದ್ದು. ಶಾಲೆಯನ್ನೇನೋ 15 ದಿನ ಮೊದಲು ಪ್ರಾರಂಭಿಸುತ್ತಿದೆ. ಆದರೆ ಪಠ್ಯ ಪುಸ್ತಕಗಳ ವ್ಯವಸ್ಥೆ ಮಾತ್ರ ಮಾಡಿಲ್ಲ. ಹಾಗೆ ನೋಡಿದರೆ ಶಾಲೆಗಳು ಪ್ರಾರಂಭವಾದ ದಿನವೇ ಮಕ್ಕಳಿಗೆ ಪುಸ್ತಕ ಕೊಡುವುದು ರೂಢಿ. ಇದು ಮಕ್ಕಳ ಅಪೇಕ್ಷೆ ಕೂಡ ಆಗಿರುತ್ತದೆ. ಶಾಲೆ ಆರಂಭಕ್ಕೂ ಮುನ್ನವೇ ಎಲ್ಲರಿಗೂ ಪುಸ್ತಕಗಳನ್ನು ಸರಬರಾಜು ಮಾಡಲಾಗುತ್ತಿದೆ.

ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಮೇಲೆ ಹದ್ದಿನ ಕಣ್ಣು

ಪುಸ್ತಕಗಳ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಸರ್ಕಾರ(Government of Karnataka) ಬುಕ್‌ ಬ್ಯಾಂಕ್‌(Book Bank) ಕೂಡ ಕಳೆದ ವರ್ಷ ಮಾಡಿದೆ. ಕೆಲವೊಂದಿಷ್ಟು ಪುಸ್ತಕಗಳ ದಾಸ್ತಾನು ಕೂಡ ಇದೆ. ಆ ಪುಸ್ತಕಗಳನ್ನೆಲ್ಲ ಬಳಸಿದ ಮೇಲೂ ಧಾರವಾಡ ಜಿಲ್ಲೆಗೆ 1ರಿಂದ 10 ತರಗತಿ ಓದುವ ಮಕ್ಕಳಿಗೆ 19,62, 264 ಪುಸ್ತಕಗಳು ಬೇಕಿವೆ. ಇದರಲ್ಲಿ 16,06,431 ಉಚಿತವಾಗಿ ಹಂಚುವ ಪುಸ್ತಕವಾದರೆ, 3,55,833 ಪುಸ್ತಕಗಳ ಮಾರಾಟ ಮಾಡುವಂತಹವು (ಖಾಸಗಿ ಶಾಲೆಗಳಿಗೆ ಸರಬರಾಜು ಮಾಡಬೇಕಾದ ಪುಸ್ತಕಗಳ ಸಂಖ್ಯೆ). ಈ ವರೆಗೆ ಜಿಲ್ಲೆಯಲ್ಲಿನ ಬ್ಲಾಕ್‌ಗಳು 5,78,555 ಪುಸ್ತಕಗಳನ್ನು ಮಾತ್ರ ಪಡೆದಂತಾಗಿದೆ. ಅಂದರೆ ಶೇ.34.19ರಷ್ಟುಪುಸ್ತಕಗಳ ಸರಬರಾಜು ಆದಂತಾಗಿದೆ. ಜಿಲ್ಲೆಗೆ 19,62,264 ಪುಸ್ತಕ ಪೈಕಿ ಇನ್ನೂ 13,83,709 ಪುಸ್ತಕಗಳು ಬರಬೇಕಿದೆ. ಜತೆಗೆ ಕೆಲವೊಂದಿಷ್ಟುವಿಷಯಗಳ ಪುಸ್ತಕಗಳು ಬಂದಿಯೇ ಇಲ್ಲ. ಈ ಸಲವೂ ಪುಸ್ತಕ ವಿಳಂಬವಾಗುವ ಸಾಧ್ಯತೆಯುಂಟು.

ಶಿಕ್ಷಕರು ಇಕ್ಕಟ್ಟಿಗೆ:

ಶಾಲೆಯ ಪ್ರಾರಂಭದ ದಿನವೇ ಮಕ್ಕಳಿಗೆ ಪುಸ್ತಕ ನೀಡುವುದು ವಾಡಿಕೆ. ಇದೀಗ ಬಂದಿರುವ ಪುಸ್ತಕಗಳನ್ನು ಕೆಲವೇ ಮಕ್ಕಳಿಗೆ ಕೊಡಲಾಗಬಹುದು. ಕೆಲ ಮಕ್ಕಳಿಗೆ ಕೊಟ್ಟು ಕೆಲವರಿಗೆ ಹಾಗೆ ಕಳುಹಿಸುವುದು ಕೂಡ ಕಷ್ಟ. ಮಕ್ಕಳು ನಮಗೆ ಸಾರ್‌ ಪುಸ್ತಕ ಎಂಬ ಪ್ರಶ್ನೆಯನ್ನೂ ಕೇಳುತ್ತಾರೆ. ಆಗ ಏನು ಮಾಡಬೇಕು. ಪೂರ್ಣ ಪ್ರಮಾಣದಲ್ಲಿ ಪುಸ್ತಕ ಬಾರದೇ ಇರುವುದರಿಂದ ಎಲ್ಲ ಮಕ್ಕಳಿಗೆ(Children) ಪುಸ್ತಕ ಸಿಗುವುದಿಲ್ಲ. ಆಗ ಪಾಠ ಕೂಡ ಮಾಡಲು ಸಾಧ್ಯವಾಗಲ್ಲ ಎಂಬುದು ಶಿಕ್ಷಕರ ಗೋಳು.

ಇನ್ನು ಎಂಬಿಬಿಎಸ್ ಕೋರ್ಸ್‌ನಲ್ಲಿ ಯೋಗ ತರಬೇತಿ ಕಡ್ಡಾಯ

ಶಾಲೆ ಆರಂಭಕ್ಕೂ ಮುನ್ನವೇ ಸರ್ಕಾರ ಪುಸ್ತಕದ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು. ಆದರೆ ಪ್ರತಿ ವರ್ಷವೂ ಇದೇ ಗೋಳಾಗಿದೆ. ಪುಸ್ತಕಕ್ಕಾಗಿ ಪರದಾಡುವುದು ತಪ್ಪುವುದೇ ಇಲ್ಲ. ಯಾವ ತಾರೀಖಿಗೆ ತರಗತಿ ಪ್ರಾರಂಭಿಸಬೇಕು ಎಂಬುದನ್ನು ನಿರ್ಧರಿಸುವ ಸರ್ಕಾರ, ಅಷ್ಟರೊಳಗೆ ಪಠ್ಯ ಪುಸ್ತಕದ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕೆಂಬ ಇಚ್ಛೆಯನ್ನು ತೋರದೇ ಇರುವುದು ಬೇಸರದ ಸಂಗತಿ ಎಂದು ಶಿಕ್ಷಣ ಪ್ರೇಮಿಗಳ ಆರೋಪ. ಇನ್ನಾದರೂ ಆದಷ್ಟುಬೇಗನೆ ಮಕ್ಕಳಿಗೆ ಪಠ್ಯ ಪುಸ್ತಕ ಸಿಗುವಂತೆ ಸರ್ಕಾರ ಕ್ರಮ ಕೈಗೊಳ್ಲಬೇಕೆಂಬುದು ಒಕ್ಕೊರಲಿನ ಆಗ್ರಹ.

ಈ ವರೆಗೆ ಶೇ. 34ರಷ್ಟು ಪಠ್ಯ ಪುಸ್ತಕಗಳು ಬಂದಿವೆ. ಶೀಘ್ರವೇ ಪೂರ್ಣ ಪ್ರಮಾಣದ ಪುಸ್ತಕಗಳು ಬರಲಿವೆ. ಅಷ್ಟೇನು ಸಮಸ್ಯೆಯಾಗದು ಅಂತ ಡಿಡಿಪಿಐ ಎಸ್‌.ಎಸ್‌. ಕೆಳದಿಮಠ ತಿಳಿಸಿದ್ದಾರೆ.
 

click me!