SSLC ವಿದ್ಯಾರ್ಥಿಗಳಿಗೆ ರಾತ್ರಿ ಕ್ಲಾಸ್, ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರಿಂದ ಹಗಲಿರುಳು ಶ್ರಮ

By Suvarna News  |  First Published Mar 23, 2022, 12:08 AM IST

* SSLC ವಿದ್ಯಾರ್ಥಿಗಳಿಗೆ ರಾತ್ರಿ ಪಾಳಿ ತರಗತಿಗಳು
* ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರಿಂದ  ಹಗಲಿರುಳು ಶ್ರಮ
* ಚಾಮರಾಜನಗರ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗು ಶಿಕ್ಷಕರು ಪಣ


ವರದಿ - ಪುಟ್ಟರಾಜು. ಆರ್.ಸಿ.  ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ


ಚಾಮರಾಜನಗರ, (ಮಾ.22): ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳ ಪರದಾಟ....ಶಿಕ್ಷಕರಿದ್ರೂ ಕೆಲವೆಡೆ ಪಾಠ ಹೇಳಿಲ್ಲ ಎನ್ನುವ ಸುದ್ದಿ ಕೇಳಿದ್ದೇವೆ. ಇನ್ನೂ ಕೆಲವರು ಗಂಟೆಯಾವಾಗ ಹೊಡೆಯುತ್ತೋ? ಯಾವಾಗ ಮನೆಗೆ ಹೋದೆವೋ ಎನ್ನುವ ಶಿಕ್ಷಕರು ಉಂಟು...ಟೈಮ್‌ ಟು ಟೈಮ್‌ ಕೆಲಸ ಎನ್ನುವ ಸರ್ಕಾರಿ ನೌಕರರ ಮಧ್ಯೆ ಚಾಮರಾಜನಗರ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ರಾತ್ರಿ ಪಾಳಿ ತರಗತಿಗಳನ್ನು ನಡೆಸುತ್ತಿದ್ದಾರೆ.

Tap to resize

Latest Videos

undefined

ಹೌದು.....ಅಚ್ಚರಿ ಅನ್ನಿಸಿದರೂ ಸತ್ಯ...ರಾತ್ರಿ ವೇಳೆಯು ಪಾಠ.. ಭಾನುವಾರವೂ ತರಗತಿ.. ಹಗಲಿರುಳು ಶಾಲೆಗಳಲ್ಲೇ  ಉಳಿಯುವ ವಿದ್ಯಾರ್ಥಿಗಳು... ದಿನಕ್ಕೊಬ್ಬರು ಶಿಕ್ಷಕರಂತೆ ಶಾಲೆಯಲ್ಲೇ ವಾಸ್ತವ್ಯ... ಕೆಲವೆಡೆ ಮನೆಮನೆಗೆ ಶಿಕ್ಷಕರ ಭೇಟಿ. ಈ ವರ್ಷ ಫಲಿತಾಂಶವನ್ನು ಇನ್ನೂ ಉತ್ತಮಗೊಳಿಸಲು ಚಾಮರಾಜನಗರ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗು ಶಿಕ್ಷಕರು ಪಣತೊಟ್ಟಿದ್ದಾರೆ.  

SSLC Time Table: ಎಸ್ಎಸ್ಎಲ್‌ಸಿ ಮುಖ್ಯಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ಚಾಮರಾಜನಗರ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ. ಇದಕ್ಕೆ ಕಾರಣ ಅನೇಕ. ಆದರೆ ಇತ್ತೀಚೆಗೆ ಶೈಕ್ಷಣಿಕ ಸ್ಥಿತಿಗತಿ ನಿಧಾನವಾಗಿ ಸುಧಾರಿಸತೊಡಗಿದೆ. ಕೆಲವು ವರ್ಷಗಳ ಹಿಂದೆ ರಾಜ್ಯದ ಇತರ ಜಿಲ್ಲೆಗೆ ಹೋಲಿಸಿದರೆ ಚಾಮರಾಜನಗರ ಜಿಲ್ಲೆಯಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶ  ಬಹಳ ಕಡಿಮೆ ಇತ್ತು. 

2018 ರಲ್ಲಿ 24ನೇ ಸ್ಥಾನ, 2019 ರಲ್ಲಿ 15, 2020ರಲ್ಲಿ 11, 2021 ರಲ್ಲಿ 9 ನೇ ಸ್ಥಾನ ಹೀಗೆ ಶಿಕ್ಷಣ ಇಲಾಖೆಯ ಪರಿಶ್ರಮದ ಫಲವಾಗಿ ಕ್ರಮೇಣವಾಗಿ ಫಲಿತಾಂಶ ದಲ್ಲಿ ಸುಧಾರಣೆ ಕಂಡು ಬರುತ್ತಿದೆ. ಈ ವರ್ಷ ಫಲಿತಾಂಶವನ್ನು ಇನ್ನೂ ಉತ್ತಮಗೊಳಿಸಲು ಚಾಮರಾಜನಗರ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗು ಶಿಕ್ಷಕರು ಶಪಥ ಮಾಡಿದ್ದಾರೆ.

ಎಸ್ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ನೀಡಿದ KSRTC

ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ತರಗತಿಗಳು ಸರಿಯಾಗಿ ನಡೆದಿಲ್ಲ. ಇದು ಮಕ್ಕಳ ಕಲಿಕೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದು ಎಸ್‌ಎಸ್ಎಲ್‌ಸಿ ಫಲಿತಾಂಶದ ಮೇಲು ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ ಈ ಬಾರಿ ವಿಶೇಷ ಮುತುವರ್ಜಿ ವಹಿಸಿರುವ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು ಉತ್ತಮ ಫಲಿತಾಂಶಕ್ಕಾಗಿ ಹತ್ತು ಹಲವು ರೀತಿಯ ಪ್ರಯತ್ನ ನಡೆಸಿದ್ದಾರೆ. 

ವಿದ್ಯಾರ್ಥಿ ಗಳಿಗೆ ಮಾಮೂಲಿ  ತರಗತಿಗಳ ಜೊತೆಗೆ  ಪ್ರತಿ ದಿನ ರಾತ್ರಿ ವೇಳೆಯ ಪಾಠ ಮಾಡಲಾಗುತ್ತಿದೆ ಶನಿವಾರ, ಭಾನುವಾರ ಪೂರ್ಣ ತರಗತಿ ನಡೆಸಲಾಗುತ್ತಿದೆ. ಮಕ್ಕಳನ್ನು ಶಾಲೆಯಲ್ಲೇ ಉಳಿಸಿಕೊಂಡು ಅಭ್ಯಾಸ ಮಾಡಿಸಲಾಗುತ್ತಿದೆ. ಸಂಜೆ 7 ರಿಂದ ರಾತ್ರಿ10.30 ಹಾಗು ಬೆಳಿಗ್ಗೆ 5.30 ರಿಂದ  8 ಗಂಟೆಯವರೆಗೆ ವಿಶೇಷ ಬೋಧನೆ ಮಾಡಲಾಗುತ್ತಿದೆ.ರಾತ್ರಿ ಉಳಿದುಕೊಳ್ಳುವ ಮಕ್ಕಳಿಗೆ ಊಟ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ..

 ಶಾಲೆ ಮುಗಿಸಿ ಮನೆಗೆ ಹೋದರೆ ಸರಿಯಾಗಿ ಓದಲು ಆಗಲ್ಲ, ಸಂದೇಹಗಳ ಪರಿಹಾರಕ್ಕೆ ಮೊಬೈಲ್ ನಲ್ಲಿ ಶಿಕ್ಷಕರನ್ನು ಸಂಪರ್ಕಿಸಿದರೆ ಸರಿಯಾಗಿ ಅರ್ಥ ಆಗಲ್ಲ, ಮನೆಗೆಲಸ ಅದು ಇದು ಅಂತ ಓದಿನ ಕೊಡಲು ಸಾಧ್ಯವಾಗಲ್ಲ. ಈಗ ಶಾಲೆಗಳಲ್ಲೇ ಉಳಿಸಿಕೊಂಡು  ವಿಶೇಷ ಅಭ್ಯಾಸ ಮಾಡಿಸುವುದರಿಂದ ಹೆಚ್ಚಿನ ಅನುಕೂಲವಾಗಿದೆ. ಸಂದೇಹಗಳಿದ್ದರೆ ಶಿಕ್ಷಕರಿಂದ ಸ್ಥಳದಲ್ಲೇ ಪರಿಹರಿಸಿಕೊಳ್ಳಬಹುದಾಗಿದೆ ಎನ್ನುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ  ಹೆಚ್ಚಾಗಿದೆ..

 ರಾತ್ರಿ ಪಾಠ ಹಾಗು ಶನಿವಾರ ಭಾನುವಾರ ಪೂರ್ಣ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳ ಮನೆಗಳಿಗೆ  ಶಿಕ್ಷಕರು ಎಸ್‌ಎಸ್ಎಲ್‌ಸಿ ವಿದ್ಯಾರ್ಥಿಗಳ ಮನೆಮನೆಗು ಭೇಟಿ ನೀಡಿ ವಿದ್ಯಾರ್ಥಿಗಳ ಮನೆಗಳಲ್ಲೇ ಅವರ ಸಂದೇಹಗಳನ್ನು ನಿವಾರಿಸುತ್ತಾ ಅವರ ಓದಿನ ಬಗ್ಗೆ ನಿಗಾ ವಹಿಸದ್ದಾರೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ 12,271 ಮಕ್ಕಳು ಪರೀಕ್ಷೆಗೆ ಹಾಜರಾಗುತ್ತಿದ್ದು  ಪರೀಕ್ಷೆಗೆ ಕೇವಲ ಐದು ದಿನ ಬಾಕಿ ಇದ್ದು ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಲು ಸಕಲ ರೀತಿಯಲ್ಲು ಅವರನ್ನು ಸಜ್ಜುಗೊಳಿಸಲಾಗುತ್ತಿದೆ.

click me!