SSLC Result: ಮೇ 15ಕ್ಕಲ್ಲ, 19ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ?

By Girish Goudar  |  First Published May 10, 2022, 7:03 AM IST

*   ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ 10 ಸಾವಿರ ಶಿಕ್ಷಕರು ಗೈರು
*  ಸರ್ಕಾರಿ ಶಿಕ್ಷಕರಿಗೆ ನೋಟಿಸ್‌ ನೀಡಿ ಕ್ರಮ
*  ಕಾನೂನಾತ್ಮಕ ಕ್ರಮ ಕೈಗೊಳ್ಳಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧಾರ
 


ಬೆಂಗಳೂರು(ಮೇ.10):  ಮೇ 15ರ ವೇಳೆಗೆ ನಿರೀಕ್ಷಿಸಿದ್ದ ಎಸ್ಸೆಸ್ಸೆಲ್ಸಿ(SSLC) ಫಲಿತಾಂಶ ಮೌಲ್ಯಮಾಪನದಲ್ಲಿ ಸಣ್ಣಪುಟ್ಟದೋಷ ಸರಿಪಡಿಸುವುದು ಸೇರಿದಂತೆ ವಿವಿಧ ಕಾರಣಗಳಿಂದ ಮೂರ್ನಾಲ್ಕು ದಿನ ತಡವಾಗಲಿದ್ದು, ಮೇ 19ಕ್ಕೆ ಪ್ರಕಟವಾಗುವ ಸಾಧ್ಯತೆ ಇದೆ. 

ಮೌಲ್ಯಮಾಪನ ಕಾರ್ಯ ನಿರೀಕ್ಷೆಗಿಂತ ತಡವಾಗಿ ಪೂರ್ಣಗೊಂಡಿದೆ. ಬಳಿಕ ಮೌಲ್ಯಮಾಪನದಲ್ಲಿ ಸಣ್ಣ ಪುಟ್ಟ ದೋಷಗಳು, ಕಣ್ತಪ್ಪುಗಳಿದ್ದಲ್ಲಿ ಅವುಗಳನ್ನು ಸರಿಪಡಿಸುವ ಕಾರ್ಯ ನಡೆಸಲಾಗುತ್ತಿದೆ. ಇದಾದ ನಂತರ ಅಂಕಗಳ ದಾಖಲೀಕರಣ ಸೇರಿದಂತೆ ಫಲಿತಾಂಶ(Result) ಪ್ರಕಟಿಸಲು ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಇದಕ್ಕೆ ಇನ್ನೂ ಒಂದು ವಾರ ಸಮಯಾವಕಾಶ ಬೇಕಾಗುತ್ತದೆ. ಹಾಗಾಗಿ ಮೇ 19ರ ಹೊತ್ತಿಗೆ ಫಲಿತಾಂಶ ನೀಡಲು ಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

Tap to resize

Latest Videos

SSLC ಪತ್ರಿಕೆ ಕಂಡು ಮೌಲ್ಯಮಾಪಕರೇ ಶಾಕ್, ವಿಚಿತ್ರ ಬೇಡಿಕೆ ಇಟ್ಟ ಪರೀಕ್ಷಾರ್ಥಿ..!

ಫಲಿತಾಂಶ ಪ್ರಕಟಿಸುವ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ಅವರೊಂದಿಗೆ ಚರ್ಚಿಸಿ ದಿನಾಂಕ ಪ್ರಕಟಿಸಲು ಮಂಡಳಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಬಾರಿ ರಾಜ್ಯದ(Karnataka) ಒಟ್ಟು 15,387 ಶಾಲೆಗಳ 8.73ಲಕ್ಷ ವಿದ್ಯಾರ್ಥಿಗಳು(Students) ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ರಾಜ್ಯಾದ್ಯಂತ 3,446 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಸುಮಾರು 234 ಕೇಂದ್ರಗಳಲ್ಲಿ ನಡೆದ ಮೌಲ್ಯಪಾಪನ ಪ್ರಕ್ರಿಯೆಯಲ್ಲಿ 63,796 ಶಿಕ್ಷಕರು ಭಾಗಿಯಾಗಿದ್ದಾರೆ.

ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ 10 ಸಾವಿರ ಶಿಕ್ಷಕರು ಗೈರು!

ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಗೈರು ಹಾಜರಾಗಿರುವ ಶಿಕ್ಷಕರಿಗೆ ನೋಟಿಸ್‌ ನೀಡಿ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ. 

ಎಸ್ಸೆಸ್ಸೆಲ್ಸಿ, ಪಿಯುಸಿಗೆ ಈ ಬಾರಿ ಪಠ್ಯ ಕಡಿತ ಇಲ್ಲ: ಸಚಿವ ನಾಗೇಶ್‌

ಈ ಬಾರಿ ಸುಮಾರು 10 ಸಾವಿರ ಶಿಕ್ಷಕರು ಮೌಲ್ಯಮಾಪನ ಕಾರ್ಯಕ್ಕೆ ಗೈರು ಹಾಜರಾಗಿದ್ದಾರೆ. ಅವರಲ್ಲಿ ಖಾಸಗಿ ಶಾಲಾ ಶಿಕ್ಷಕರೇ ಹೆಚ್ಚು. ಖಾಸಗಿ ಶಾಲಾ ಶಿಕ್ಷಕರ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ, ಸರ್ಕಾರಿ ಶಾಲಾ ಶಿಕ್ಷಕರ ಮೇಲೆ ಕ್ರಮ ಜರುಗಿಸಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಆ ಎಲ್ಲಾ ಶಿಕ್ಷಕರಿಗೂ ಕಾರಣ ಕೇಳಿ ನೋಟಿಸ್‌ ನೀಡುವಂತೆ ಎಲ್ಲ ಜಿಲ್ಲಾ ಉಪನಿರ್ದೇಶಕರುಗಳಿಗೆ ಸೂಚನೆ ನೀಡಲಾಗಿದೆ. ಗರ್ಭಿಣಿ, ಬಾಣಂತಿ ಹಾಗೂ ಗಂಭೀರ ಆರೋಗ್ಯ ಸಮಸ್ಯೆ ಇರುವವರನ್ನು ಹೊರತುಪಡಿಸಿ ಸಕಾರಣವಿಲ್ಲದೆ, ಉದ್ದೇಶಪೂರ್ವಕವಾಗಿ ಗೈರು ಹಾಜರಾಗಿರುವ ಉಳಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಂಡಳಿ ನಿರ್ದೇಶನ ನೀಡಲಾಗಿದೆ.

ಈ ಬಾರಿ 73,236 ಶಿಕ್ಷಕರು ಮೌಲ್ಯಮಾಪನ ಕಾರ್ಯಕ್ಕೆ ನೋಂದಣಿ ಮಾಡಿಕೊಂಡಿದ್ದರು. ಗೈರು ಹಾಜರಾದವರಲ್ಲಿ ಶೇ.50ರಷ್ಟುಶಿಕ್ಷಕರು ಖಾಸಗಿ ಶಿಕ್ಷಕರೇ ಆಗಿದ್ದರು. ಸರ್ಕಾರಿ ಶಾಲೆ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವಂತೆ ಡಿಡಿಪಿಐಗಳಿಗೆ ಸೂಚನೆ ನೀಡಲಾಗಿದೆ. ಗೈರು ಹಾಜರಾದ ಶಿಕ್ಷಕರ ಮೇಲೆ ದಂಡ ವಿಧಿಸುವುದು ಅಥವಾ ಮುಂದಿನ ವರ್ಷದ ಮೌಲ್ಯಮಾಪನ ಕಾರ್ಯಕ್ಕೆ ಕಪ್ಪು ಪಟ್ಟಿಗೆ ಸೇರಿಸಲು ಕಾನೂನಿನಲ್ಲಿ ಅವಕಾಶವಿದ್ದು, ಅದರಂತೆ ಕ್ರಮ ವಹಿಸಲಾಗುವುದು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಎಚ್‌.ಎನ್‌. ಗೋಪಾಲಕೃಷ್ಣ ತಿಳಿಸಿದ್ದಾರೆ.
 

click me!