ಕೆಲ ಕನ್ನಡ ಶಾಲೆಗಳು ಕನ್ನಡ ಕಲಿಸುತ್ತಿಲ್ಲ: ಟಿ.ಎಸ್‌.ನಾಗಾಭರಣ

Kannadaprabha News   | Asianet News
Published : Aug 21, 2021, 08:31 AM IST
ಕೆಲ ಕನ್ನಡ ಶಾಲೆಗಳು ಕನ್ನಡ ಕಲಿಸುತ್ತಿಲ್ಲ: ಟಿ.ಎಸ್‌.ನಾಗಾಭರಣ

ಸಾರಾಂಶ

*   ಶಿಕ್ಷಣ ಸಚಿವರನ್ನು ಭೇಟಿ ಮಾಡಿದ ಮನವಿ ಪತ್ರ ಸಲ್ಲಿಸಿದ ಟಿ.ಎಸ್‌.ನಾಗಾಭರಣ  *   ಕೆಲ ಶಾಲೆಗಳು ಕನ್ನಡ ಭಾಷಾ ಕಲಿಕಾ ಅಧಿನಿಯಮ-2015 ಅನ್ನು ಸರಿಯಾಗಿ ಪಾಲಿಸುತ್ತಿಲ್ಲ *   ಕನ್ನಡ ಪಠ್ಯಪುಸ್ತಕ ಖರೀದಿಸಲು ಅಧಿಕೃತ ಪಟ್ಟಿ ಸಲ್ಲಿಸದ 823 ಶಾಲೆಗಳು 

ಬೆಂಗಳೂರು(ಆ.21):  2021-22ನೇ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ಅನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರನ್ನು ಆಗ್ರಹಿಸಿದೆ.

ಈ ಕುರಿತು ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅವರು ಸಚಿವರನ್ನು ಭೇಟಿ ಮಾಡಿದ ಮನವಿ ಪತ್ರ ಸಲ್ಲಿಸಿದರು. ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ರ ಅನ್ವಯ 2017-18ನೇ ಸಾಲಿನಿಂದ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಕಡ್ಡಾಯಗೊಳಿಸಲಾಗಿದೆ. 2017-18ನೇ ಶೈಕ್ಷಣಿಕ ವರ್ಷದಿಂದ ಈವರೆಗೆ 4ನೇ ತರಗತಿ ಮಕ್ಕಳಿಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಿರಬೇಕಿತ್ತು. ಆದರೆ ರಾಜ್ಯದಲ್ಲಿರುವ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಈ ನಿಯಮವನ್ನು ಉಲ್ಲಂಘಿಸುತ್ತಿರುವ ಬಗ್ಗೆ ಪ್ರಾಧಿಕಾರಕ್ಕೆ ನಿರಂತರವಾಗಿ ದೂರುಗಳು ಸಲ್ಲಿಕೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮದರಸಾ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಕ್ರಮ: ನಾಗಾಭರಣ

ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರ ಕೊಠಡಿಗೆ ಭೇಟಿ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅವರು ಮನವಿ ಪತ್ರ ಸಲ್ಲಿಸಿದರು.

ರಾಜ್ಯ ಪಠ್ಯಪುಸ್ತಕ ಸಂಘದಿಂದ ಪ್ರಾಧಿಕಾರಕ್ಕೆ ಬಂದಿರುವ ಅಧಿಕೃತ ಮಾಹಿತಿ ಅನ್ವಯ 2021-22ನೇ ಶೈಕ್ಷಣಿಕ ವರ್ಷಕ್ಕೆ ರಾಜ್ಯದ ಸುಮಾರು 823 ಶಾಲೆಗಳು ಸರ್ಕಾರ ನಿಗದಿಪಡಿಸಿರುವ ಕನ್ನಡ ಪಠ್ಯಪುಸ್ತಕಗಳನ್ನು ಖರೀದಿಸಲು ಅಧಿಕೃತ ಪಟ್ಟಿಸಲ್ಲಿಸಿಲ್ಲ. ಹೀಗಾಗಿ ಈ ಶಾಲೆಗಳು ಕನ್ನಡ ಭಾಷಾ ಕಲಿಕಾ ಅಧಿನಿಯಮ-2015 ಅನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಅನುಮಾನವಿದೆ. ಹೀಗಾಗಿ ಶಿಕ್ಷಣ ಇಲಾಖೆಯಲ್ಲಿ ಎಲ್ಲ ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಹಾಜರಿದ್ದರು.
 

PREV
click me!

Recommended Stories

ಸಿಎಂ ಯೋಗಿ ಆದಿತ್ಯನಾಥ್ ರೀತಿ ಮಾತನಾಡಿ ಸರ್ಕಾರಿ ಶಾಲಾ ಶಿಕ್ಷಕಿ ಅಳುವಂತೆ ಮಾಡಿದ ಯುವಕ: ವೀಡಿಯೋ
20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಧಾನ, ಇಬ್ಬರು ಮಕ್ಕಳಿಗೆ ಮರಣೋತ್ತರ ಪ್ರಶಸ್ತಿ ಕೊಟ್ಟಿದ್ಯಾಕೆ?